ಡಿಜೆ ಹಳ್ಳಿಯಲ್ಲಿ ಪತ್ನಿಯ ಉಬ್ಬುಹಲ್ಲಿನ ಬಗ್ಗೆ ಹಾಸ್ಯ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಪತಿಯ ಮೇಲೆ ಮೂವರು ಯುವಕರು ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಪತ್ನಿಯ ಸಹೋದರರು ಮಧ್ಯಪ್ರವೇಶಿಸಿದಾಗ ಅವರ ಮೇಲೂ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು (ಆ.28): ಪತ್ನಿಯ ಉಬ್ಬುಹಲ್ಲಿನ ಬಗ್ಗೆ ಹಾಸ್ಯ ಮಾಡಿದ ಕಿರಾತಕರನ್ನು ಪ್ರಶ್ನೆ ಮಾಡಿದ್ದಕ್ಕೆ ಪತಿ ಹಾಗೂ ಆಕೆಯ ಸಹೋದರರು ಗಂಭೀರವಾಗಿ ಏಟು ತಿಂದಿರುವ ಘಟನೆ ಕಳೆದ ಶುಕ್ರವಾರ ರಾತ್ರಿ ಡಿಜೆ ಹಳ್ಳಿಯ ಶಾಮ್‌ಪುರದಲ್ಲಿ ನಡೆದಿದೆ. ಮೂವರ ಮೇಲೆ ಪಾಲಿಗಳು ಮಚ್ಚಿನಿಂದ ಹಲ್ಲೆ ಮಾಡಿದ್ದು ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗೃಹಿಣಿಯೊಬ್ಬಳು ರಾತ್ರಿ 10 ಗಂಟೆಯ ವೇಳೆ ಗಂಡ ಹಾಗೂ ತನ್ನ ಪುಟ್ಟ ಮಗುವಿನ ಜೊತೆ ಹಾಲು ತರಲು ಹಾಲಿನ ಬೂತ್‌ನತ್ತ ಹೋಗುತ್ತಿದ್ದಾಗ ಮೂವರು ಯುವಕರು ಆಕೆಯ ಉಬ್ಬುಹಲ್ಲಿನ ಬಗ್ಗೆ ಅಪಹಾಸ್ಯ ಮಾಡಿದ್ದರು. ಕೊನೆಗೆ ಈ ವಿಚಾರ ರಕ್ತ ಹರಿಯುವ ಮೂಲಕ ಕೊನೆಯಾಗಿದೆ.
ದೂರುದಾರರಾದ 29 ವರ್ಷದ ಶೋಭಾ, ಆಗಸ್ಟ್ 22 ರಂದು ರಾತ್ರಿ 10 ಗಂಟೆ ಸುಮಾರಿಗೆ ತನ್ನ ಪತಿ ಮೋಹನ್ ಮತ್ತು ಅವರ ಎರಡು ವರ್ಷದ ಮಗನೊಂದಿಗೆ ಹಾಲಿನ ಬೂತ್‌ಗೆ ಹೋಗುತ್ತಿದ್ದರು. ಮಗು ಅಸ್ವಸ್ಥಗೊಂಡಿದ್ದರಿಂದ ಆಕೆಯ ಸಹೋದರರಾದ ಪ್ರಭು ಮತ್ತು ಮದನ್ ಆ ದಿನ ಸಂಜೆಯ ವೇಳೆಗೆ ಮನೆಗೆ ಭೇಟಿ ನೀಡಿದ್ದರು. ಮನೆಯಲ್ಲಿ ಹಾಲು ಖಾಲಿಯಾಗಿದ್ದು ಗೊತ್ತಾದಾಗ, ತನ್ನ ಸಹೋದರರಿಗೆ ಚಹಾ ತಯಾರಿಸಲು ಮತ್ತು ಮಗನಿಗೆ ಆಹಾರ ನೀಡುವ ಸಲುವಾಗಿ ಹಾಲಿ ಖರೀದಿ ಮಾಡಲು ಹತ್ತಿರದ ಅಂಗಡಿಗೆ ತನ್ನೊಂದಿಗೆ ಬರುವಂತೆ ಪತಿ ಮೋಹನ್‌ರನ್ನು ಕೇಳಿಕೊಂಡಿದ್ದರು.
ದಾರಿಯಲ್ಲಿ ಹೋಗುವಾಗ, ದಂಪತಿಗಳು ರಸ್ತೆಬದಿಯಲ್ಲಿ ಓಡಾಡುತ್ತಿರುವ ಮೂವರು ಯುವಕರನ್ನು ಗಮನಿಸಿದ್ದರು. ಅವರು ಶೋಭಾಲ ಹಲ್ಲುಗಳನ್ನು ನೋಡಿ 'ಹಲ್ಲು, ಹಲ್ಲು..' ಎಂದು ಕಿಂಡಲ್ ಮಾಡಲು ಆಂಭಿಸಿದರು. ತೊಂದರೆ ಎಂದು ಅನಿಸಿದರೂ, ಅವರ ಕಾಮೆಂಟ್‌ಗಳನ್ನು ನಿರ್ಲಕ್ಷ್ಯ ಮಾಡಿ ಹಾಲು ಖರೀದಿಗೆ ಮುಂದಾದರು.
ವಾಪಾಸ್ ಬರುವಾಗ ಮತ್ತೊಮ್ಮೆ ಇದೇ ರೀತಿ ಆದಾಗ ಸಮಸ್ಯೆ ಎದುರಾಗಿದೆ. "ಮನೆಗೆ ಹಿಂತಿರುಗುವಾಗ ನನಗೆ ಅವರ ಮಾತು ಕೇಳಲಿಲ್ಲ, ಆದರೆ ನನ್ನ ಪತಿಗೆ ಕೇಳಿಸಿತು. ಅವರು ಹಾಸ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಪ್ರಶ್ನೆ ಮಾಡಿದ್ದಾರೆ. ಆಗ ವಾದ ಪ್ರಾರಂಭವಾಯಿತು' ಎಂದು ಶೋಭಾ ಹೇಳಿದ್ದಾರೆ.
ವಾದದ ಬಳಿಕ ಗುಂಪು ಆಕ್ರಮಣಕಾರಿಯಾಯಿತು. ಮೋಹನ್ ಅಲ್ಲಿಂದ ಹೊರನಡೆಯಲು ಮುಂದಾದಾಗ ಆ ಮೂವರು ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದಲ್ಲದೆ, ಮನೆ ಬಾಗಲಿನ ಬಳಿ ಮೋಹನ್ ಮೇಲೆ ಹಲ್ಲೆ ಮಾಡಿದ್ದಾರೆ. ಗದ್ದಲ ಕೇಳಿ, ಶೋಭಾಳ ಸಹೋದರರಾದ ಪ್ರಭು ಮತ್ತು ಮದನ್ ಹೊರಗೆ ಓಡಿ ಬಂದು ಮಧ್ಯಪ್ರವೇಶಿಸಿದರು. ಈ ವೇಳೆ ಅವಾಚ್ಯ ಶಬ್ದಗಳಿಂದ ಯುವಕರು ನಿಂದಿಸಿದ್ದು ಬಳಿಕ ಈ ಗಲಾಟೆ ಹಿಂಸಾತ್ಮಕವಾಯಿತು.
"ಅವರು ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಅವರಲ್ಲಿ ಒಬ್ಬ ಮೋಹನ್ ಕಡೆಗೆ ಮಚ್ಚು ಬೀಸಿದ. ಪ್ರಭು ಅವನನ್ನು ತಡೆಯಲು ಪ್ರಯತ್ನಿಸಿದಾಗ, ಅವರು ಅವನ ಎರಡೂ ಕೈಗಳ ಮೇಲೆ ದಾಳಿ ಮಾಡಿದ್ದಾರೆ. ಅವನ ಬಲಗೈಯ ಒಂದು ಬೆರಳು ತುಂಡಾಗುವ ಹಂತ ತಲುಪಿತ್ತು" ಎಂದು ಶೋಭಾ ಘಟನೆಯ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.
ಆ ಗ್ಯಾಂಗ್ ಅಲ್ಲಿಗೆ ನಿಲ್ಲಲಿಲ್ಲ. ಮದನ್ ಅವರ ಬಲಗೈಗೆ ಪೆಟ್ಟು ಬಿದ್ದಿದ್ದರೆ, ಮೋಹನ್ ಅವರ ಮುಖ ಮತ್ತು ಎಡಗೈಗೆ ಗಾಯಗಳಾಗಿವೆ. ನೆರೆಹೊರೆಯವರು ಗಾಬರಿಯಿಂದ ಜಮಾಯಿಸುತ್ತಿದ್ದಂತೆ, ದಾಳಿಕೋರರು ಮತ್ತಷ್ಟು ಹಾನಿ ಮಾಡುವ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಾಳುಗಳನ್ನು ಶೋಭಾ ಮತ್ತು ಅವರ ಪೋಷಕರು ಡಾ. ಬಿ.ಆರ್. ಅಂಬೇಡ್ಕರ್ ಆಸ್ಪತ್ರೆಗೆ ಕರೆದೊಯ್ದರು. ಮೂವರೂ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಮರುದಿನ ಬೆಳಿಗ್ಗೆ, ಶೋಭಾ ಡಿಜೆ ಹಳ್ಳಿ ಪೊಲೀಸರನ್ನು ಸಂಪರ್ಕಿಸಿ ಔಪಚಾರಿಕ ದೂರು ದಾಖಲಿಸಿದ್ದಾರೆ.
ದಾಳಿಕೋರರು 18 ರಿಂದ 22 ವರ್ಷ ವಯಸ್ಸಿನವರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 118 (ಅಪಾಯಕಾರಿ ಆಯುಧಗಳು ಅಥವಾ ವಿಧಾನಗಳಿಂದ ಸ್ವಯಂಪ್ರೇರಣೆಯಿಂದ ಗಾಯ ಅಥವಾ ಗಂಭೀರ ಗಾಯವನ್ನುಂಟುಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ, ಆದರೆ ನಮಗೆ ಸುಳಿವುಗಳು ದೊರೆತಿದ್ದು, ಶೀಘ್ರದಲ್ಲೇ ಅವರನ್ನು ಬಂಧಿಸುತ್ತೇವೆ" ಎಂದು ಅಧಿಕಾರಿ ತಿಳಿಸಿದ್ದಾರೆ.
