ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ವೇಳೆ ಮಹಿಳೆಯೊಬ್ಬರ ಕೈಗಡಿಯಾರ ಕಳುವಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಮತ್ತೊಬ್ಬ ಮಹಿಳೆ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು (ಆ.27): ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಇತ್ತೀಚೆಗೆ ಭದ್ರತಾ ತಪಾಸಣೆಯ ಸಮಯದಲ್ಲಿ 26 ವರ್ಷದ ಮಹಿಳೆಯ ಕೈಗಡಿಯಾರವನ್ನು ಮತ್ತೊಬ್ಬ ಮಹಿಳಾ ಪ್ರಯಾಣಿಕರೊಬ್ಬರು ಕದ್ದಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ನಿಟ್ಟಿನಲ್ಲಿ ಎಫ್‌ಐಆರ್ ದಾಖಲಾಗಿದೆ.ದೂರಿನ ಪ್ರಕಾರ, ಗ್ವಾಲಿಯರ್ ಮೂಲದ ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಮಹಿಳೆಯೊಬ್ಬರು ಆಗಸ್ಟ್ 15 ರಂದು ಬೆಂಗಳೂರಿನಿಂದ ಗ್ವಾಲಿಯರ್‌ಗೆ ಪ್ರಯಾಣಿಸುತ್ತಿದ್ದರು. ಬೆಳಿಗ್ಗೆ 8.30 ರ ಸುಮಾರಿಗೆ ಟರ್ಮಿನಲ್ 2 ರಲ್ಲಿ ಭದ್ರತಾ ಸಿಬ್ಬಂದಿಯ ಬಳಿ ಸೆಕ್ಯುರಿಟಿ ಚೆಕ್‌ಗೆ ಬರುವಾಗ, ತನ್ನ ಕೈಗಡಿಯಾರವನ್ನು ಇತರ ವಸ್ತುಗಳ ಜೊತೆಗೆ ಟ್ರೇನಲ್ಲಿ ಇರಿಸಿದಳು. ಸ್ಕ್ಯಾನ್ ಮಾಡಿದ ಬಳಿಕ, ಅಜಾಗರೂಕತೆಯಿಂದ ತಮ್ಮ ದುಬಾರಿ ಕೈಗಡಿಯಾರವನ್ನು ಅಲ್ಲೇ ಬಿಟ್ಟು ಹೋಗಿದ್ದರು.
ಕೆಲ ಹೊತ್ತಿನ ಬಳಿಕ ಆಕೆಗೆ ತಮ್ಮ ವಾಚ್‌ನ ನೆನಪಾಗಿದೆ. ತಕ್ಷಣವೇ ಸೆಕ್ಯುರಿಟಿ ಚೆಕ್‌ನಲ್ಲಿದ್ದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಅಧಿಕಾರಿಗಳಿಗೆ ಇದರ ಮಾಹಿತಿ ನೀಡಿದ್ದರು. CISF ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ಮುಂದಾದರೆ, ಮಹಿಳೆ ತನ್ನ ವಿಮಾನ ಹತ್ತಲು ಮುಂದಾದಳು.
ಆ ದೃಶ್ಯಾವಳಿಯಲ್ಲಿ ಉಷಾ ಗಂಗಾಧರ್ ಎಂದು ಗುರುತಿಸಲ್ಪಟ್ಟ ಮತ್ತೊಬ್ಬ ಮಹಿಳೆ ಗಡಿಯಾರವನ್ನು ಎತ್ತಿಕೊಂಡು ತನ್ನ ಚೀಲಕ್ಕೆ ಹಾಕಿಕೊಳ್ಳುವುದನ್ನು ತೋರಿಸಲಾಗಿದೆ. ಉಷಾ ಕೆಐಎಯಿಂದ ಮತ್ತೊಂದು ವಿಮಾನದಲ್ಲಿ ಹೋಗಿ ಒಂದೆರಡು ದಿನಗಳ ನಂತರ ಬೆಂಗಳೂರಿಗೆ ಮರಳಿದ್ದರು, ಆದರೆ ಅವರು ಗಡಿಯಾರವನ್ನು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಹಸ್ತಾಂತರಿಸಲಿಲ್ಲ ಎಂದು ತನಿಖಾಧಿಕಾರಿಗಳು ಕಂಡುಕೊಂಡಿದ್ದಾರೆ.
ನಂತರ ಸಂತ್ರಸ್ಥ ಮಹಿಳೆ ಭಾನುವಾರ ಇಮೇಲ್ ಮೂಲಕ ವಿವರವಾದ ದೂರು ದಾಖಲಿಸಿದ್ದಾರೆ. ಇದರ ಆಧಾರದ ಮೇಲೆ, ಕೆಐಎ ಪೊಲೀಸರು ಬಿಎನ್‌ಎಸ್ ಸೆಕ್ಷನ್ 303 (ಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
