Darshan Thoogudeepa jail facilities ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌, ತಮಗೆ ಸೂಕ್ತ ಸೌಲಭ್ಯ ನೀಡುತ್ತಿಲ್ಲವೆಂದು ಆರೋಪಿಸಿದ್ದಾರೆ. ಈ ಸಂಬಂಧ ನಡೆದ ಕೋರ್ಟ್ ವಿಚಾರಣೆಯಲ್ಲಿ, ಜೈಲು ಅಧಿಕಾರಿಗಳು ನಿಯಮ ಪಾಲಿಸುತ್ತಿರುವುದಾಗಿ ಹೇಳಿದ್ದಾರೆ.

ಬೆಂಗಳೂರು (ಸೆ.30): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪರಪ್ಪನ ಅಗ್ರಹಾರದ ಪುಟ್ಟ ಬ್ಯಾರಕ್‌ನಲ್ಲಿ ದಿನದೂಡುತ್ತಿರುವ ಕಿಲ್ಲಿಂಗ್‌ ಸ್ಟಾರ್‌ ದರ್ಶನ್‌ ತೂಗುದೀಪ, ಜೈಲು ಅಧಿಕಾರಿಗಳ ವಿರುದ್ಧವೇ ದೊಡ್ಡ ಆರೋಪ ಮಾಡಿದ್ದರು. ಕೋರ್ಟ್‌ ಆದೇಶ ಇದ್ದರೂ, ಜೈಲಿನಲ್ಲಿ ನನಗೆ ಸರಿಯಾದ ಸೌಲಭ್ಯ ನೀಡುತ್ತಿಲ್ಲ ಎಂದು ಹೇಳಿದ್ರು. ಇದರ ಬೆನ್ನಲ್ಲಿಯೇ ಕೋರ್ಟ್‌ ಜೈಲು ಅಧೀಕ್ಷಕರಿಂದ ವರದಿಯನ್ನು ಕೇಳಿತ್ತು. ಆರೋಪಗಳ ಸಂಬಂಧ ಗೆ ಸ್ಪಷ್ಟನೆ ನೀಡಿ, 64 ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಜೈಲಿನ ಅಧಿಕಾರಿಗಳು ರಿಪೋರ್ಟ್‌ ನೀಡಿದ್ದರು. ಮುಚ್ಚಿದ ಲಕೋಟೆಯಲ್ಲಿ ಮಂಗಳವಾರ ರಿಪೋರ್ಟ್‌ ಸಲ್ಲಿಕೆಯಾಗಿತ್ತು.

ಜೈಲಿನ ಮುಖ್ಯ ಅಧೀಕ್ಷಕ ಸುರೇಶ್‌ ಇಂದು ವಿಚಾರಣೆಗೆ ಹಾಜರಾಗಿದ್ದರು. ಕೋರ್ಟ್‌ ಕಲಾಪದಲ್ಲಿ ಎಸ್‌ಎಸ್‌ಪಿ ಪ್ರಸನ್ನಕುಮಾರ್‌ ಹಾಗೂ ದರ್ಶನ್‌ಪರ ವಕೀಲ ಸುನೀಲ್‌ ಕುಮಾರ್‌ ನಡುವೆ ಭಾರೀ ಮಾತಿನ ಪ್ರಹಾರ ನಡೆದಿದೆ. ಅದರೊಂದಿಗೆ ಆರೋಪಮುಕ್ತಗೊಳಿಸುವಂತೆ ಲಕ್ಷ್ಮಣ್ ಸಲ್ಲಿಸಿರುವ ಅರ್ಜಿ ಕೂಡ ವಿಚಾರಣೆಗೆ ಬಂದಿತ್ತು.

57ನೇ ಸೆಷನ್ಸ್ ಕೋರ್ಟ್ ನ ಇಂಜಾರ್ಜ್ ಕೋರ್ಟ್ ನಲ್ಲಿ ನ್ಯಾ.ಐ.ಪಿ.ನಾಯ್ಕ್ ಅವರಿಂದ ವಿಚಾರಣೆ ನಡೆಯಿತು. ಕೋರ್ಟ್ ಆದೇಶ ಪಾಲನೆ ಮಾಡ್ತಾ ಇದ್ದೀರಾ? ಎಂದು ಕೋರ್ಟ್‌, ಮುಖ್ಯ ಅಧೀಕ್ಷಕ ಸುರೇಶ್‌ಗೆ ಪ್ರಶ್ನೆ ಮಾಡಿತು. ಇದಕ್ಕೆ ಅವರು ಕೋರ್ಟ್‌ ಆದೇಶ ಪಾಲನೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಆ ಬಳಿಕ, ಸೌಲಭ್ಯ ಕೋರಿ ದರ್ಶನ್‌ ಸಲ್ಲಿಸಿದ್ದ ಅರ್ಜಿಗೆ ಎಸ್‌ಎಸ್‌ಪಿ ತೀವ್ರ ವಿರೋಧ ವ್ಯಕ್ತಪಡಿಸಿದರು.

ಜೈಲಿನ ನಿಯಮಗಳ ಪ್ರಕಾರ ಇರೋ ಎಲ್ಲಾ ಸೌಲಭ್ಯ ನೀಡ್ತಿದ್ದೇವೆ. ಪಲ್ಲಂಗ ಕೊಡಿ ಅಂದರೆ ಪಲ್ಲಂಗ ಕೊಡಲು ಅವಕಾಶ ಇಲ್ಲ. ಇದೇ ಬ್ಯಾರಕ್‌ನಲ್ಲೇ ಇಡಬೇಕು, ಅಲ್ಲೇ ಇಡಬೇಕು ಅಂತಾ ಕೇಳುವ ಅಧಿಕಾರಿ ಕೈದಿಗೆ ಇರೋದಿಲ್ಲ. ಜೈಲಲ್ಲಿ ಎಲ್ಲಾ ಮೂಲಭೂತ ಹಕ್ಕುಗಳು ಸಿಗೋದಿಲ್ಲ. ಸೂರ್ಯನ ಬೆಳಕು ಸಿಗೋದಿಲ್ಲ ಬೇರೆ ಬ್ಯಾರಕ್‌ಗೆ ಹಾಕಿ ಎಂದು ಕೇಳಲು ಸಾಧ್ಯವಿಲ್ಲ ಎಂದು ಹೇಳಿದರು.

ದರ್ಶನ್ ಪರ ವಕೀಲ ಸುನಿಲ್ ಕುಮಾರ್ ವಾದ ಆರಂಭಿಸಿ, ಸೌಲಭ್ಯ ನೀಡುವಂತೆ ಕೋರ್ಟ್ ನೀಡಿರುವ ಆದೇಶ ಪಾಲನೆ ಮಾಡಿಲ್ಲ. ಕೋರ್ಟ್ ಆದೇಶದ ಇಂಗ್ಲಿಷ್ ನನ್ನ ಜೈಲು ಅಧಿಕಾರಿಗಳು ಅರ್ಥ ಮಾಡಿಕೊಂಡಿಲ್ಲ ಎಂದರು. ಈ ವೇಳೆ, ಭಾಷೆ ಅರ್ಥ ಮಾಡಿಕೊಂಡಿಲ್ಲ ಎಂಬ ವಾದಕ್ಕೆ ಎಸ್ಪಿಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಜಡ್ಜ್‌ ಕೋರ್ಟ್ ಮುಂದೆ ಸರಿಯಾದ ಅಂಶಗಳ ಕುರಿತು ವಾದ ಮಂಡಿಸಿ ಎಂದು ಸುನೀಲ್‌ ಕುಮಾರ್‌ಗೆ ಸೂಚನೆ ನಿಡಿದರು.

ದರ್ಶನ್‌ಗೆ ತುಂಬಾ ಟಾರ್ಚರ್‌ ನೀಡುತ್ತಿದ್ದಾರೆ

ದರ್ಶನ್ ತುಂಬಾ ಟಾರ್ಚರ್ ಅನುಭವಿಸುತ್ತಿದ್ದಾರೆ. ಖುದ್ದು ಆರೋಪಿ ದರ್ಶನ್ ಕೋರ್ಟ್ ಮುಂದೆ ಹೇಳಿಕೊಂಡಿದ್ದಾರೆ. ಜೈಲು ಅಧಿಕಾರಿಗಳಿಗೆ ಜೈಲು ನಿಯಮಗಳನ್ನು ಕೂಡ ಕೊಟ್ಟಿದ್ದೇನೆ. ಕೋರ್ಟ್ ಆದೇಶವನ್ನ ಜೈಲು ಅಧಿಕಾರಿಗಳು ಬಿಸಾಡಿದ್ದಾರೆ. ಜೈಲು ಆದೇಶದ ಬಗ್ಗೆ ಜೈಲು ಅಧಿಕಾರಿಗಳಿಗೆ ಗೌರವವಿಲ್ಲ ಎಂದರು. ಈ ವೇಳೆ ಎಸ್‌ಪಿಪಿ ಯಾವ ನಿರ್ದೇಶನ ಉಲ್ಲಂಘನೆ ಮಾಡಿದ್ದಾರೆ ಎಂದು ಹೇಳಲಿ ಎಂದು ಪ್ರಶ್ನಿಸಿದರು. 'ಸುಮ್ಮನೆ ಪಲ್ಲಂಗ ಎಂದು ಹೇಳಿದರೆ ಹೇಗೆ ?' ಎಂದು ಸುನೀಲ್‌ ಕುಮಾರ್‌ ಹೇಳಿದ್ದು, ನಾವು ಪಲ್ಲಂಗ, ಮಂಚ ಕೇಳಿದ್ದೇವೆಯೇ? ಎಂದು ಪ್ರಶ್ನೆ ಮಾಡಿದರು.