ಬೆಂಗಳೂರಲ್ಲಿ ಸ್ಯಾಂಡಲ್‌ವುಡ್ ಪಂದ್ಯ ನೋಡಿ ಮರಳ್ತಿದ್ದ ಯುವತಿ ಮೇಲೆ ಬಿದ್ದ ಮರ, ಸ್ಥಳದಲ್ಲೆ ಸಾವು, 24ರ ಹರೆಯದ ಕೀರ್ತನ ಸ್ಕೂಟರ್ ಮೂಲಕ ಮರಳುತ್ತಿದ್ದ ವೇಳೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದ್ದ ಬೃಹತ್ ಮರ ಬಿದ್ದಿದೆ.
ಬೆಂಗಳೂರು (ಅ.05) ಬೆಂಗಳೂರಿನಲ್ಲಿ ಮರ ಬಿದ್ದು, ಮರದ ಕೊಂಬೆ ಬಿದ್ದು ದುರಂತ ಸಂಭವಿಸುತ್ತಿರುವ ಘಟನೆ ಹೆಚ್ಚುತ್ತಿದೆ. ಕೆಲ ತಿಂಗಳ ಹಿಂದೆ ಮರದ ಕೊಂಬೆ ಬಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿತ್ತು. ಇದೀಗ ಸೋಲದೇವನಹಳ್ಳಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಬೃಹತ್ ಮರ ಬಿದ್ದ ಪರಿಣಾಮ ಸ್ಥಳದಲ್ಲೇ 24ರ ಹರೆಯದ ಯುವತಿ ಮೃತಪಟ್ಟ ಘಟನೆ ನಡೆದಿದೆ. ಈ ಘಟನೆಯಲ್ಲಿ ಮತ್ತೊಬ್ಬ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಆಸ್ಪತ್ರೆ ಯುವತಿ ಪೊಷಕರು, ಕುಟುಂಬಸ್ಥರು ದೌಡಾಯಿಸಿದ್ದಾರೆ. ಪೋಷಕರು ಆಕ್ರಂದನ ಮುಗಿಲು ಮುಟ್ಟಿದೆ.
ಸ್ಯಾಂಡಲ್‌ವುಡ್ ಪ್ರೀಮಿಯರ್ ಪಂದ್ಯ ನೋಡಿ ಮರಳುತ್ತಿದ್ದ ಯುವತಿ
ಹೆಬ್ಬಾಳ ವಲಯದ ನಿವಾಸಿ 24 ವರ್ಷದ ಕೀರ್ತನಾ ಸ್ಯಾಂಡಲ್‌ವುಡ್ ಪ್ರೀಮಿಯರ್ ಲೀಗ್ ಮ್ಯಾಚ್ ವೀಕ್ಷಿಸಲು ತೆರಳಿದ್ದರು. ಭಾನುವಾರ ರಜಾ ದಿನವಾಗಿದ್ದ ಕಾರಣ ಪಂದ್ಯ ವೀಕ್ಷಣೆಗೆ ತೆರಳಿದ್ದರು. ಸ್ನೇಹಿತೆಯೊಂದಿಗೆ ಪಂದ್ಯ ವೀಕ್ಷಿಸಿದ್ದ ಕೀರ್ತನಾ ಬಳಿಕ ಸ್ಕೂಟರ್ ಮೂಲಕ ಮನೆಗೆ ಮರಳುತ್ತಿದ್ದ ವೇಳೆ ದುರಂತ ನಡೆದಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯ ಕೂಗಳೆತೆ ದೂರದಲ್ಲಿ ಈ ಘಟನೆ ನಡೆದಿದೆ. ಯುವತಿ ಸಾಗುತ್ತಿದ್ದಂತೆ ಬೃಹತ್ ಮರ ಉರುಳಿ ಬಿದ್ದಿದೆ.
ಮತ್ತೊರ್ವ ಬೈಕ್ ಸವಾರ ಬಾಸ್ಕರ್ ಗಂಭೀರ
ಕೀರ್ತನಾ ಸ್ಥಳದಲ್ಲೆ ಮೃತಪಟ್ಟರೆ, ಇದೇ ರಸ್ತೆಯಲ್ಲಿ ಸಾಗುತ್ತಿದ್ದ ಮತ್ತೋರ್ವ ಬೈಕ್ ಸವಾರ ಭಾಸ್ಕರ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಸ್ಥಳೀಯರು ತಕ್ಷಣವೇ ಮರದ ಕೊಂಬೆಗಳನ್ನು ತೆರವು ಮಾಡಿ ಇಬ್ಬರು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಬಾಸ್ಕರ್‌ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಯುವತಿ ಮೃತದೇಹ ಸಪ್ತಹಿರಿ ಆಸ್ಪತ್ರೆಗೆ ರವಾನೆ
ಸೋಲದೇವನಹಳ್ಳಿಯಲ್ಲಿ ಮರ ಬಿದ್ದು ಮೃತಪಟ್ ಕೀರ್ತನಾ ಮೃತದೇಹವನ್ನು ಸಪ್ತಗಿರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಆಗಮಿಸಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಿದ್ದಾರೆ. ಸಂಜೆ 7 ಗಂಟೆ ಹೊತ್ತಿಗೆ ಈ ಘಟನೆ ನಡೆದಿದೆ. ಭಾರಿ ಗಾತ್ರದ ಮರ ಬಿದ್ದ ಪರಿಣಾಮ ರಸ್ತೆ ಸಂಚಾರ ಬಂದ್ ಆಗಿತ್ತು. ಇದೀಗ ಅಧಿಕಾರಿಗಳು, ಸಿಬ್ಬಂದಿಗಳು ಮರ ತೆರವು ಮಾಡುತ್ತಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ
ಮರಗಳ ನಿರ್ವಹಣೆಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಮರಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಇದರಿಂದ ಅವಘಡಗಳು ಸಂಭವಿಸುತ್ತಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
