ಬೆಂಗಳೂರು ಮೆಟ್ರೋ ನಿಲ್ದಾಣಗಳ ನಾಮಕರಣ ವಿಚಾರದಲ್ಲಿ ಕಿರಣ್ ಮಜುಂದಾರ್ ಶಾ ಮತ್ತು ಕವಿತಾ ರೆಡ್ಡಿ ನಡುವೆ ಟ್ವಿಟರ್‌ನಲ್ಲಿ ವಾಗ್ಯುದ್ಧ ನಡೆದಿದೆ. ಕಂಪನಿಗಳ ಹೆಸರಿಡುವ ಬದಲು ಐತಿಹಾಸಿಕ ವ್ಯಕ್ತಿಗಳ ಹೆಸರಿಡಬೇಕೆಂದು ಕವಿತಾ ರೆಡ್ಡಿ ವಾದಿಸಿದ್ದಾರೆ.
ಬೆಂಗಳೂರು (ಆ.30): ಬೆಂಗಳೂರಿನ ಮೆಟ್ರೋ ನಿರ್ಮಾಣದಲ್ಲಿ ಸರ್ಕಾರದ ಎಷ್ಟು ಪಾತ್ರವಿದೆಯೋ ಕೆಲವೊಂದು ಕಂಪನಿಗಳು ಕೂಡ ಮೆಟ್ರೋ ನಿರ್ಮಾಣಕ್ಕೆ ತಮ್ಮ ಸಹಾಯ ಮಾಡಿವೆ. ಇನ್ಫೋಸಿಸ್ ಫೌಂಡೇಷನ್ ಸ್ಟೇಷನ್ ನಿರ್ಮಾಣಕ್ಕೂ ಹಣ ಸಹಾಯ ಮಾಡಿದ್ದರಿಂದ ಹಳದಿ ಮಾರ್ಗದಲ್ಲಿರುವ ಒಂದು ಸ್ಟೇಷನ್‌ಗೆ ಇನ್ಫೋಸಿಸ್ ಫೌಂಡೇಷನ್‌ನ ಹೆಸರು ಇಟ್ಟಿರೋದು ಮಾತ್ರವಲ್ಲ, ಇನ್ಫೋಸಿಸ್ ಕಂಪನಿಯ ಆವರಣದಿಂದಲೇ ಮೆಟ್ರೋಗೆ ಎಂಟ್ರಿಯಾಗಲು ಟಿಕೆಟ್ ಬೂತ್ ಕೂಡ ಸ್ಥಾಪಿಸಲಾಗಿದೆ. ಅದರೊಂದಿಗೆ ಹೆಬ್ಬಗೋಡಿಯ ಸ್ಟೇಷನ್‌ನ ನೇಮಿಂಗ್ ರೈಟ್ಸ್‌ಅನ್ನು ಬಯೋಕಾನ್ ಸಂಸ್ಥೆ ಪಡೆದುಕೊಂಡಿದ್ದರೆ, ನಂತರದ ಸ್ಟೇಷನ್‌ನ ನೇಮಿಂಗ್ ರೈಟ್‌ಅನ್ನು ಡೆಲ್ಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆ ಪಡೆದುಕೊಂಡಿದೆ. ಈಗ ಇದೇ ವಿಚಾರವೀಗ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಹಾಗೂ ಕಾಂಗ್ರೆಸ್‌ನ ಮಾಜಿ ನಾಯಕಿ ಕವಿತಾ ರೆಡ್ಡಿ ಟ್ವೀಟ್ ಜಟಾಪಟಿಗೆ ಕಾರಣವಾಗಿದೆ.
ಜನರ ಹೆಸರಿಡಬೇಕು ಎಂದ ಕವಿತಾ ರೆಡ್ಡಿ
'ಬೆಂಗಳೂರು ಮೆಟ್ರೋ ನಿಲ್ದಾಣಗಳಿಗೆ ಹಣ ನೀಡುವ ಕಂಪನಿಗಳ ಹೆಸರಿಡುವುದು ಬೇಸರ ತರಿಸಿದೆ. ಬೆಂಗಳೂರು ತನ್ನ ಜನರಿಗೆ ಸೇರಿದ್ದು, ಅದಕ್ಕೆ ಅದ್ಭುತವಾದ ಇತಿಹಾಸವಿದೆ ಮತ್ತು ಎಲ್ಲಾ ಮೆಟ್ರೋ ನಿಲ್ದಾಣಗಳಿಗೆ ಕರ್ನಾಟಕ ಮತ್ತು ಬೆಂಗಳೂರಿನ ಜನರ ಹೆಸರಿಡಬೇಕು. ಡಿಕೆ ಶಿವಕುಮಾರ್ ಅವರು ಇತಿಹಾಸ, ಸಂಶೋಧನೆ, ಆಚಾರ-ವಿಚಾರ, ಸಂಸ್ಕೃತಿ ಇತ್ಯಾದಿಗಳ ಬಗ್ಗೆ ಮಾತನಾಡುತ್ತಾರೆ, ಮೆಟ್ರೋ ನಿಲ್ದಾಣಗಳಿಗೆ ಹೆಸರಿಡುವಾಗ ಬೆಂಗಳೂರು ಗುರುತನ್ನು ಎಲ್ಲಿ ಮರೆತಿದ್ದೀರಿ' ಎಂದು ಕವಿತಾ ರೆಡ್ಡಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಪ್ರಶ್ನೆ ಮಾಡಿದ್ದರು.
ಬೆಂಗಳೂರು ಅಭಿವೃದ್ಧಿಯಲ್ಲಿ ಕಂಪನಿಗಳ ಪಾತ್ರವಿಲ್ಲವೇ ಎಂದ ಕಿರಣ್
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕಿರಣ್ ಮಜುಂದಾರ್ ಶಾ, 'ನಮ್ಮ ನಗರದ ಅಭಿವೃದ್ಧಿಗೆ ನಾವು ಕೊಡುಗೆ ನೀಡುತ್ತಿಲ್ಲ ಎಂದು ನೀವು ಹೇಳುತ್ತಿದ್ದೀರಾ? ನಾವು ಕಂಪನಿಗಳು ಬೆಂಗಳೂರು ಮತ್ತು ಕರ್ನಾಟಕದ ಇತಿಹಾಸದ ಅವಿಭಾಜ್ಯ ಅಂಗ. ಪ್ರಧಾನಿ ಮೋದಿ ಕೂಡ ಪಿಪಿಪಿಯ ಬಿಎಂಆರ್‌ಸಿಎಲ್ ಮಾದರಿಯನ್ನು ಮೆಚ್ಚಿಕೊಂಡರು. ನಿಮ್ಮಿಂದ ಇಂತಹ ಅಜ್ಞಾನದ ಕಾಮೆಂಟ್‌ಗಳನ್ನು ನಿರೀಕ್ಷಿಸಿರಲಿಲ್ಲ' ಎಂದು ಬರೆದಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಒಬ್ಬರು, 'ಮೇಡಂ ನಿಮ್ಮ ತರ್ಕವೇ ದೋಷಪೂರಿತ. ಕಂಪನಿಗಳ ಆಯುಷ್ಯ 100 ವರ್ಷಗಳಿಗಿಂತ ಹೆಚ್ಚಿಲ್ಲ... ಮೆಟ್ರೋ ನಿಲ್ದಾಣಗಳು ಮತ್ತು ನಗರದ ಹೆಗ್ಗುರುತುಗಳಿಗೆ ಜನರು ಮತ್ತು ವಸ್ತುಗಳ ಹೆಸರನ್ನು ಇಡಬೇಕು. ಆದರೆ, ಕಂಪನಿಗಳ ಹೆಸರು ಸೂಕ್ತ ಅನಿಸೋದಿಲ್ಲ' ಎಂದಿದ್ದಾರೆ. ಇದಕ್ಕೂ ಉತ್ತರ ನೀಡಿರುವ ಕಿರಣ್ ಮಜುಂದಾರ್ ಶಾ, 'ಇತಿಹಾಸವು ಅವರನ್ನು ನೆನಪಿಸಿಕೊಳ್ಳುತ್ತದೆ ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ಐಟಿಐ ಮತ್ತು ಎಚ್‌ಎಂಟಿ ಸೇರಿದಂತೆ' ಎಂದು ಬರೆದಿದ್ದಾರೆ. 'ವೈಯಕ್ತಿಕವಾಗಿ ನನಗೆ ಬಯೋಕಾನ್ ಮೆಟ್ರೋ ನಿಲ್ದಾಣ ಎನ್ನುವುದಕ್ಕಿಂದ ಕಿರಣ್ ಎಂ ಶಾ ಮೆಟ್ರೋ ನಿಲ್ದಾಣ ಅಂತಿದ್ದರೆ ಸೂಕ್ತ. ನನಗೆ ಅಕ್ಸೆಂಚರ್ ಅಥವಾ ಮೈಕ್ರೋಸಾಫ್ಟ್ ಮೆಟ್ರೋ ನಿಲ್ದಾಣ...ಅಥವಾ ಬಾಷ್ ಮೆಟ್ರೋ...ಇರುವುದು ಇಷ್ಟವಿಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ.
ನಾಳೆ ಸತ್ಯಂ, ಬೈಜು ಹೆಸರಲ್ಲೂ ಸ್ಟೇಷನ್‌ಗಳು ಆಗಬಹುದು
ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಕವಿತಾ ರೆಡ್ಡಿ, 'ನಮ್ಮ ಪ್ರಧಾನಿ ಒಬ್ಬ ಉದ್ಯಮಿ, ರಾಜಕಾರಣಿ ಅಲ್ಲ ಮೇಡಂ, ಆದರೆ ನೀವು ಇನ್ನೂ ಒಂದು ಮೆಟ್ರೋ ನಿಲ್ದಾಣಕ್ಕೆ ಪ್ರಧಾನಿ ಹೆಸರು ಇಟ್ಟರೆ ಅದು ಕೆಟ್ಟದ್ದಲ್ಲ. ನಾಳೆ ಸತ್ಯಂ ಅಥವಾ ಬೈಜು ಕಂಪನಿಗಳು ಬಂದರೆ ಏನಾಗಬಹುದು? ಆ ನಿಲ್ದಾಣವನ್ನು ವಂಚನೆ ಅಥವಾ ದಿವಾಳಿ ನಿಲ್ದಾಣ ಎಂದು ಕರೆಯಲಾಗುತ್ತದೆಯೇ' ಎಂದು ಪ್ರಶ್ನೆ ಮಾಡಿದ್ದಾರೆ.
