ಕಾರ್ಪೋರೇಟ್ ಕೆಲಸ ಬಿಟ್ಟು ಉಬರ್ ಡ್ರೈವರ್ ಆದ ಬೆಂಗಳೂರಿಗ, ನಿಮ್ಮನ್ನೂ ಕಾಡಲಿದೆ ಕಾರಣ, ಈತನಿಗೆ ತಿಂಗಳಿಗೆ 40 ಸಾವಿರ ರೂ ವೇತನ, ಖಾಯಂ ಕೆಲಸವಿದ್ದರೂ ಅದೆಲ್ಲಾ ಬಿಟ್ಟು ಉಬರ್ ಚಾಲಕನಾಗಿ ಕೆಲಸ ಮಾಡುತ್ತಿರುವುದೇಕೆ?
ಬೆಂಗಳೂರು (ಅ.13) ಬೆಂಗಳೂರಿನ ಚಾಲಕರು, ಡೆಲಿವರಿ ಎಜೆಂಟ್ ಸೇರಿದಂತೆ ಹಲವರ ಜೀವನದ ಘಟನೆಗಳು ಸ್ಪೂರ್ತಿಯ ಚಿಲುಮೆಯಾದ ಊದಾಹರಣೆಗಳಿವೆ. ಇದೀಗ ಬೆಂಗಳೂರಿನಲ್ಲಿ ಕಾರ್ಪೋರೇಟ್ ಕೆಲಸ ಮಾಡಿಕೊಂಡು, ಉತ್ತಮ ವೇತನ ಪಡೆಯುತ್ತಿದ್ದ ಉದ್ಯೋಗಿಯೊಬ್ಬ 8 ವರ್ಷದ ಬಳಿಕ ಕೆಲಸ ತೊರೆದಿದ್ದಾನೆ. ಬಳಿಕ ಉಬರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ. ಬೆಂಗಳೂರಿನ ಉದ್ಯಮಿಯೊಬ್ಬರು ಕ್ಯಾಬ್‌ನಲ್ಲಿ ಪ್ರಯಾಣ ಮಾಡುವಾಗ ಸಿಕ್ಕ ಈ ಉಬರ್ ಡ್ರೈವರ್ ರೋಚಕ ಘಟನೆಯನ್ನು ತೆರೆದಿಟ್ಟಿದ್ದಾರೆ. ಅಷ್ಟಕ್ಕೂ ಈತ ಕಾರ್ಪೋರೇಟ್ ಉದ್ಯೋಗ ಬಿಟ್ಟು ಉಬರ್ ಚಾಲಕನಾಗಿದ್ದ ಕಾರಣ ನಿಮ್ಮನ್ನೂ ಕಾಡಿದರೂ ಅಚ್ಚರಿಯಿಲ್ಲ.
ಉಬರ್ ಚಾಲಕ ದೀಪೇಶ್ ರೋಚಕ ಕತೆ
ಬೆಂಗಳೂರಿನ ಉದ್ಯಮಿ ವರುಣ್ ಅಗರ್ವಾಲ್ ಕಚೇರಿಗೆ ತೆರಳಲು ಉಬರ್ ಕ್ಯಾಬ್ ಬುಕ್ ಮಾಡಿದ್ದಾರೆ. ಕೆಲ ಹೊತ್ತಲ್ಲೇ ಕ್ಯಾಬ್ ಮನೆ ಮುಂದೆ ಬಂದು ನಿಂತಿದೆ. ಕಾರು ಹತ್ತಿ ಪ್ರಯಾಣ ಆರಂಭಿಸಿದ ವರುಣ್ ಅಗರ್ವಾಲ್, ಉಬರ್ ಚಾಲಕನ ಮಾತನಾಡಿಸಿದ್ದಾರೆ. ಬೆಂಗಳೂರಿನ ಟ್ರಾಫಿಕ್ ರಸ್ತೆಯಲ್ಲಿ ಸಾಗುವ ಕಾರಣ, ಕೆಲ ಹೊತ್ತು ಮಾತನಾಡುವ ಅವಕಾಶ ಸಿಕ್ಕಿತ್ತು. ಈ ವೇಳೆ ಉಬರ್ ಚಾಲಕನ ರೋಚಕ ಕತೆ ಅನಾವರಣ ಮಾಡಿದ್ದಾರೆ.
8 ವರ್ಷದ ಕಾರ್ಪೋರೇಟ್ ಕೆಲಸ ಬಿಟ್ಟು ನೆಮ್ಮದಿ
ದೀಪೇಶ್ ರಿಲಯನ್ಸ್ ರಿಟೇಲ್ ಕಂಪನಿಯಲ್ಲಿ ಉತ್ತಮ ಕೆಲಸದಲ್ಲಿದ್ದ. 8 ವರ್ಷ ಇದೇ ಕಂಪನಿಯಲ್ಲಿ ಕೆಲಸ ಮಾಡಿದ್ದಾನೆ. ತಿಂಗಳಿಗೆ 40,000 ರೂಪಾಯಿ ವೇತನ ಪಡೆಯುತ್ತಿದ್ದ. ವೇತನದಲ್ಲಿ ಪತ್ನಿ, ಮಕ್ಕಳು ಸೇರಿ ಕುಟುಂಬ ನಿರ್ವಹಣೆ ಮಾಡುತ್ತಿದ್ದ. ಆದರೆ ಕುಟುಂಬದ ಜೊತೆ ಸಮಯ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಕೆಲಸದ ಒತ್ತಡ, ಸಮಯ ಮೀರಿದ ಕೆಲಸ, ಮರುದಿನಕ್ಕಾಗಿ ತಯಾರಿ, ಮೀಟಿಂಗ್ ಹೀಗೆ ಬಹುತೇಕ ಸಮಯ ಕಚೇರಿಗಾಗಿ ವ್ಯಯಿಸಬೇಕಾದ ಅನಿವಾರ್ಯತೆ. ವಾರದ ರಜಾ ದಿನದಲ್ಲೂ ತಯಾರಿಗಳು ಸೇರಿದಂತೆ ಹಲವು ಕಾರಣಗಳಿಂದ ಕುಟುಂಬಸ್ಥರ ಜೊತೆ ಸಮಯ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಕುಟುಂಬಕ್ಕೆ ಸಮಯ ಕೊಡಲು ಕಾರ್ಪೋರೇಟ್ ಕೆಲಸ ಬಿಟ್ಟ ದೀಪೇಶ್ ಉಬರ್ ಚಾಲಕನಾಗಿ ಕೆಲಸಕ್ಕೆ ಸೇರಿಕೊಂಡ.
ಕಾರು ಖರೀದಿಸಿ ಉಬರ್ ಚಾಲಕನಾದ ದೀಪೇಶ್
ಕಾರು ಖರೀದಿಸಿದ ದೀಪೇಶ್ ಉಬರ್ ಚಾಲಕನಾಗಿ ಕೆಲಸಕ್ಕೆ ಸೇರಿದ. ಪ್ರತಿ ದಿನ ಮನೆಗೆ ಬಂದು ನೆಮ್ಮದಿಯಾಗಿ ಪತ್ನಿ, ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದಾನೆ.ತಿಂಗಳಿಗೆ ಅಂದರೆ 21 ದಿನ ಕೆಲಸ ಮಾಡಿ 56,000 ರೂಪಾಯಿ ಸಂಪಾದಿಸುತ್ತಿದ್ದಾನೆ. ಇಷ್ಟೇ ಅಲ್ಲ ಮತ್ತೊಂದು ಕಾರು ಖರೀದಿಸಿ ಚಾಲಕನ ನೇಮಕ ಮಾಡಿ ಉದ್ಯಮ ನಡೆಸುತ್ತಿದ್ದಾನೆ. ಇದೀಗ ಪ್ರತಿ ತಿಂಗಳು ಲಕ್ಷಕ್ಕೂ ಮೇಲೆ ದುಡಿಯುತ್ತಿದ್ದಾನೆ. ತಿಂಗಳಲ್ಲ 28 ರಿಂದ 21 ದಿನ ದುಡಿದು ಇನ್ನುಳಿದ ದಿನ ಕುಟುಂಬದ ಜೊತೆ ಹಾಯಾಗಿ ಕಳೆಯುತ್ತಿದ್ದಾನೆ ಎಂದು ಉದ್ಯಮಿ ವರುಣ್ ಅಗರ್ವಾಲ್ ಹೇಳಿದ್ದಾರೆ.
