ಬೆಂಗಳೂರಿನಲ್ಲಿ ಮುಂಬೈ ಮೂಲದ ವ್ಯಕ್ತಿ ತನಗೆ ಕನ್ನಡ ಬರುತ್ತೆ ನಾನು ಕನ್ನಡ ಕಲಿತಿದ್ದೀನಿ ಎಂದಾಗ ಅಲ್ಲಿ ಸೇರಿದ ಕನ್ನಡಿಗರು ಏನು ಮಾಡಿದರು ಎಂಬುದನ್ನು ಆ ವ್ಯಕ್ತಿಯ ಕನ್ನಡ ಸ್ನೇಹಿತನೋರ್ವ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಭಾರಿ ವೈರಲ್ ಆಗಿದೆ

ಕನ್ನಡ ಕಲಿಯುತ್ತಿದ್ದೇನೆ ಎಂದವನಿಗೆ ಕನ್ನಡಿಗರ ರಾಜಾತಿಥ್ಯ:

ನಾವು ಕನ್ನಡಿಗರು ವಿಶಾಲ ಹೃದಯದವರು. ಹೊರಗಿನವರು ಎನಿಸಿಕೊಂಡವರು ಒಂದೇ ಒಂದು ಕನ್ನಡ ಪದ ಮಾತನಾಡಿದರು ನಾವು ಅವರನ್ನು ತಲೆಯ ಮೇಲೆ ಹೊತ್ತು ಮೆರವಣಿಗೆ ಮಾಡುತ್ತೇವೆ. ಅದೇ ರೀತಿ ಇಲ್ಲೊಬ್ಬರು ಮುಂಬೈ ಮೂಲದ ವ್ಯಕ್ತಿ ತನಗೆ ಕನ್ನಡ ಬರುತ್ತೆ ನಾನು ಕನ್ನಡ ಕಲಿತಿದ್ದೀನಿ ಎಂದಾಗ ಅಲ್ಲಿ ಸೇರಿದ ಕನ್ನಡಿಗರು ಏನು ಮಾಡಿದರು ಎಂಬುದನ್ನು ಆ ವ್ಯಕ್ತಿಯ ಕನ್ನಡ ಸ್ನೇಹಿತನೋರ್ವ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಭಾರಿ ವೈರಲ್ ಆಗಿದೆ.@nihilismpro ಎಂಬ ಖಾತೆಯನ್ನು ಹೊಂದಿರುವ ನಿಹಾಲ್ ಎಂಬುವವರು ಈ ವಿಚಾರವನ್ನು ಪೋಸ್ಟ್ ಮಾಡಿದ್ದು, ಭಾರಿ ವೈರಲ್ ಆಗಿದೆ. ಅದರಲ್ಲಿ ಒಬ್ಬ ಹೊರಗಿನ ಕನ್ನಡ ಕಲಿಯುತ್ತಿದ್ದಾನೆ ಎಂದು ಅರಿತಾಗ ಕನ್ನಡಿಗರು ಖುಷಿಪಟ್ಟು ಅಲ್ಲಿ ಆತನಿಗೆ ಬಾರೊಂದರಲ್ಲಿ ಒಳ್ಳೆಯ ಕಂಪನಿ ನೀಡಿ ಹಲವು ವಿಚಾರಗಳ ಬಗ್ಗೆ ಚರ್ಚಿಸಿ ಆತನನ್ನು ಖುಷಿಪಡಿಸಿದ್ದಾಗಿ ನಿಹಾಲ್ ಹೇಳಿಕೊಂಡಿದ್ದಾರೆ. ಅವರ ಪೋಸ್ಟ್‌ನಲ್ಲಿ ಏನಿದೆ ನೋಡೋಣ...

ಬಾರ್ ಬಿಲ್ ಪಾವತಿಸಿದರು, ಕೆಟ್ಟ ಕೆಟ್ಟ ಪದಗಳನ್ನೂ ಹೇಳಿಕೊಟ್ಟರು..!

ಮುಂಬೈನಿಂದ ಬೆಂಗಳೂರಿಗೆ ಸ್ಥಳಾಂತರಗೊಂಡ ನನ್ನ ಕಾಲೇಜು ಸ್ನೇಹಿತನನ್ನು ಇತ್ತೀಚೆಗೆ ಮೊದಲ ಬಾರಿಗೆ ನಾನು ಇಲ್ಲಿನ ಬಾಬ್ಸ್ ಬಾರ್‌ಗೆ ಕರೆದೊಯ್ದೆ. ಅಲ್ಲಿ ನಾವು ಕನ್ನಡಿಗರ ಗುಂಪೊಂದನ್ನು ಭೇಟಿಯಾದೆವು. ಕೇವಲ ಒಂದು ತಿಂಗಳಿನಿಂದ ನನ್ನ ಸ್ನೇಹಿತ ಇಲ್ಲಿ ಕನ್ನಡವನ್ನು ಬಹಳ ವೇಗವಾಗಿ ಕಲಿಯುತ್ತಿದ್ದಾನೆ ಮತ್ತು ಅವನು ಅಲ್ಲಿದ್ದ ಕನ್ನಡಿಗರಿಗೆ ನಾನು ಕನ್ನಡ ಕಲಿತಾ ಇದ್ದೀನಿ ಎಂದು ಕನ್ನಡದಲ್ಲೇ ಹೇಳಿದನು. ಇದನ್ನು ಕೇಳಿ ಅಲ್ಲಿದ್ದವರೆಲ್ಲಾ ಅವನನ್ನು ಪ್ರೋತ್ಸಾಹಿಸಿದರು. ಬರೀ ಅಷ್ಟೇ ಅಲ್ಲ, ನಮ್ಮನ್ನು ಅವರ ಟೇಬಲ್‌ಗೆ ಆಹ್ವಾನಿಸಿದರು, ನಮಗಾಗಿ ಶಾಟ್‌ಗಳನ್ನು ಆರ್ಡರ್ ಮಾಡಿದರು ಮತ್ತು ನಾವು ಆರ್ಡರ್ ಮಾಡಿದ್ದಕ್ಕೂ ಅವರೇ ಹಣ ಪಾವತಿಸಿದರು. ಜೀವನ, ಪ್ರೀತಿ, ಎಫ್‌1 ರೇಸ್ ಮತ್ತು ಕ್ರಿಕೆಟ್ ಬಗ್ಗೆ ಮತ್ತು ನಮ್ಮ ಸುತ್ತಲಿದ್ದ ಕೆಲವು ಟೇಬಲ್‌ಗಳ ಬಗ್ಗೆ ಮೋಜಿನ ಸಂಭಾಷಣೆಗಳನ್ನು ನಡೆಸಿದರು. ಬರೀ ಇಷ್ಟೇ ಅಲ್ಲ ಆತನಿಗೆ ಖುಷಿ ಆಗಲಿ ಎಂದೂ ಅವರು ಕೂಡ ಸಾಂದರ್ಭಿಕವಾಗಿ ಕೆಲ ವಾಕ್ಯಗಳನ್ನು ಹಿಂದಿಯಲ್ಲಿ ಮಾತನಾಡಿದರು. ಅವರಲ್ಲಿ ಉದ್ಯಮಿಗಳಿಂದ ಹಿಡಿದು ಮೆರಿನ್ ಎಂಜಿನಿಯರ್‌ಗಳವರೆಗೆ ಇದ್ದರು. ಅವರಲ್ಲಿ ಒಬ್ಬರು ಕೆಂಗೇರಿಯಲ್ಲಿ ಸಲೂನ್ ಹೊಂದಿದ್ದರು ಮತ್ತು ಅವರು ನನ್ನ ಸ್ನೇಹಿತನನ್ನು ಉಚಿತ ಹೇರ್‌ಕಟ್ ಮತ್ತು ಫೋಟೋಶೂಟ್‌ ಮಾಡಿಕೊಡುವೆ ಬನ್ನಿ ಎಂದು ಕರೆದರು ಬರೀ ಇಷ್ಟೇ ಅಲ್ಲ ಅವನಿಗೆ ಕನ್ನಡದಲ್ಲಿ ಕೆಲವು ಕೆಟ್ಟ ಪದಗಳನ್ನೂ ಸಹ ಕಲಿಸಿದರು.

ಗೆಳೆಯ ಬೆಂಗಳೂರನ್ನು ಇಷ್ಟಪಡಬೇಕು ಎಂದು ಬಯಸಿದ್ದೆ ಎಂದ ನಿಹಾಲ್:

ನಾನು ಬಾಬ್ಸ್‌ಗೆ ಹೋಗುವ ಮೊದಲು ನಾನು ಹೆದರುತ್ತಿದ್ದೆ ಏಕೆಂದರೆ ಅವನು ಬೆಂಗಳೂರನ್ನು ಇಷ್ಟಪಡಬೇಕೆಂದು ಮತ್ತು ಇಲ್ಲಿ ಉತ್ತಮ ಸಮಯವನ್ನು ಕಳೆಯಬೇಕೆಂದು ನಾನು ನಿಜವಾಗಿಯೂ ಬಯಸಿದ್ದೆ. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇಲ್ಲಿಯವರೆಗೆ ನಾನು ಆತನಿಗಾಗಿ ಹೆಚ್ಚುವರಿಯಾಗಿ ಏನನ್ನೂ ಮಾಡಬೇಕಾಗಿಲ್ಲ. ಏಕೆಂದರೆ ಕನ್ನಡ ಕಲಿಯುವುದಕ್ಕೆ ಅವನೇ ಶ್ರಮಿಸುತ್ತಿದ್ದಾನೆ ಮತ್ತು ಈ ನಗರವು ಅವನನ್ನು ತುಂಬಾ ಪ್ರೀತಿಸುತ್ತಿದೆ. ಏಕೆಂದರೆ ಅಂತಹ ಫುಲ್ ಎಂಜಾಯ್ ಮಾಡುವ ಜನರ ಗುಂಪು ಆತನಿಗೆ ಸಿಕ್ಕಿತು. ಆತ ಪ್ರತಿದಿನ ಸ್ವಂತ ಇಚ್ಛೆಯಿಂದ 2-3 ಹೊಸ ಕನ್ನಡ ಪದಗಳನ್ನು ಕಲಿಯುತ್ತಾನೆ ಮತ್ತು ಅದನ್ನು ಸರಿಯಾದ ಸಮಯದಲ್ಲಿಯೂ ಬಳಸುತ್ತಾನೆ. ಅಲ್ಲದೇ ನನ್ನ ಬಳಿ ಕೆಲ ವಿಷಯಗಳಿಗೆ ಹೇಗೆ ಹೇಳಬೇಕು ಎಂದು ನನ್ನಲ್ಲಿ ಆಗಾಗ ಕೇಳುತ್ತಾನೆ ಮತ್ತು ನಾನು ಅದನ್ನು ಅವನಿಗೆ ಹೇಳುತ್ತೇನೆ ಹೀಗಾಗಿ ಆತನೂ ಸಮಾಧಾನವಾಗಿದ್ದು, ನಾನೂ ತುಂಬಾ ಸಂತೋಷವಾಗಿದ್ದೇನೆ ಎಂದು ಅವರು ಹೇಳಿದ್ದಾರೆ.

ನಾನು ಚಿಕ್ಕವನಿದ್ದಾಗ ಟ್ವಿಟರ್‌ನಲ್ಲಿ ಜನರಿಗೆ ಸಂಸ್ಕೃತಿಯೊಂದಿಗೆ ಬೆರೆಯಲು ಹೇಳುತ್ತಿದ್ದೆ. ಆದರೆ ಸ್ಥಳೀಯರೊಂದಿಗೆ ಬೇರೆಯಲು ಇಚ್ಚಿಸದವರು ಹಾಗೆಯೇ ಇರುತ್ತಾರೆ ಎಂದು ನಾನು ಅರಿತುಕೊಂಡೆ. ಮತ್ತು ಇದು ಯಾರ ಮೇಲೂ ಪರಿಣಾಮ ಬೀರುವುದಿಲ್ಲ ಆದರೆ ಒಂದು ಸಂಸ್ಕೃತಿಯೊಂದಿಗೆ ಬೆರೆಯಲು ಪ್ರಯತ್ನ ಮಾಡುವ ಜನರಿಗೆ ಅದು ಅವರ ಜೀವನವನ್ನು ಶ್ರೀಮಂತಗೊಳಿಸುತ್ತದೆ. ಮತ್ತು ನನ್ನ ಎಲ್ಲಾ ಸ್ನೇಹಿತರು ಬದಲಾಗುತ್ತಿರುವುದನ್ನು ನಾನು ಚೆನ್ನಾಗಿ ನೋಡುತ್ತಿದ್ದೇನೆ. ಆದರೆ ಇತ್ತೀಚೆಗೆ ಕೆಲ ಅಸಹನೀಯ ಟ್ವೀಟ್‌ಗಳನ್ನು ನೋಡುವುದು ತುಂಬಾ ದುಃಖಕರವಾಗಿದೆ ಮತ್ತು ನಾನು ಜನರ ಅಭಿಪ್ರಾಯಗಳನ್ನು ಬದಲಿಸಲು ಬಯಸುತ್ತಿದ್ದೇನೆ ಎಂದು ನಿಹಾಲ್ ಅವರು ಬರೆದುಕೊಂಡಿದ್ದಾರೆ.

ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಟೇಕಾಫ್‌ಗೆ ಸಿದ್ಧಗೊಳ್ಳುತ್ತಿದ್ದಾಗ ಬಡಿದ ಹಕ್ಕಿ: ವಿಜಯವಾಡದಿಂದ ಬೆಂಗಳೂರಿಗೆ ಹೊರಟಿದ್ದ ವಿಮಾನ ರದ್ದು

ಇದನ್ನೂ ಓದಿ: ಚೊಚ್ಚಲ ಪ್ರಯಾಣ ಆರಂಭಿಸಿದ ಕೆಲ ನಿಮಿಷದಲ್ಲೇ ಮುಳುಗಿದ ಐಷಾರಾಮಿ ಹಡಗು

Scroll to load tweet…