ಕೇಂದ್ರ ಸರ್ಕಾರ, ಹಳೆ ವಾಹನಗಳ ಜೀವಿತಾವಧಿ ಹೆಚ್ಚಿಸಿದೆ. ಆದ್ರೆ ಮರು ನೋಂದಣಿ ಶುಲ್ಕವನ್ನು ಏರಿಸಿದೆ. ಇನ್ಮುಂದೆ ಎಷ್ಟು ವರ್ಷಕ್ಕೆ ವಾಹನ ಮರುನೋಂದಣಿ ಮಾಡ್ಬೇಕು, ಎಷ್ಟು ಶುಲ್ಕ ಪಾವತಿಸಬೇಕು ಎಂಬ ಮಾಹಿತಿ ಇಲ್ಲಿದೆ.
ದೇಶದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ದೊಡ್ಡ ಪ್ರಮಾಣದಲ್ಲಿ ಇಂಗಾಲ ಪರಿಸರ ಸೇರ್ತಿದೆ. ಇದ್ರ ನಿಯಂತ್ರಣಕ್ಕೆ ಸರ್ಕಾರ ನಾನಾ ಪ್ರಯತ್ನ ನಡೆಸ್ತಿದೆ. ಈ ಮಧ್ಯೆ ಸರ್ಕಾರ, ಚಾಲಕರಿಗೆ ಖುಷಿ ಸುದ್ದಿ ಜೊತೆ ಬರೆ ಎಳೆದಿದೆ. ಕೇಂದ್ರ ಸರ್ಕಾರ (central government), ಮೋಟಾರು ವಾಹನ ಕಾಯ್ದೆಯ (Motor Vehicle Act) ನಿಯಮಗಳನ್ನು ಬದಲಾಯಿಸಿದೆ. ಈ ಮೂಲಕ ಹಳೆಯ ವಾಹನಗಳ ವಯಸ್ಸನ್ನು ಹೆಚ್ಚಿಸುವ ನಿರ್ಧಾರಕ್ಕೆ ಬಂದಿದೆ.
ವಾಹನ ಸವಾರರಿಗೆ ನೆಮ್ಮದಿ ಸುದ್ದಿ : ಮೋಟಾರು ವಾಹನ ಕಾಯ್ದೆಯ ನಿಯಮದ ಪ್ರಕಾರ, ಇನ್ಮುಂದೆ ಹಳೆ ವಾಹನಗಳ ಜೀವಿತಾವದಿ 15 ವರ್ಷಗಳಿಂದ 20 ವರ್ಷಕ್ಕೆ ಏರಿದೆ. ಇಲ್ಲಿಯವರೆಗೆ 15 ವರ್ಷ ಹಳೆಯ ವಾಹನಗಳ ನೋಂದಣಿಯನ್ನು ಮಾತ್ರ ನವೀಕರಿಸಲು ಸಾಧ್ಯವಿತ್ತು. ಆದರೆ ಹೊಸ ನಿಯಮದ ಪ್ರಕಾರ, ಈ ಸೌಲಭ್ಯವು 20 ವರ್ಷ ಹಳೆಯ ವಾಹನಗಳಿಗೂ ಲಭ್ಯವಾಗಲಿದೆ. ಸರ್ಕಾರದ ಪ್ರಕಾರ, ವಾಹನಗಳ ವಯಸ್ಸನ್ನು ಹೆಚ್ಚಿಸಿರೋದು ವಾಹನ ಮಾಲೀಕರಿಗೆ ನೆಮ್ಮದಿ ನೀಡಲಿದೆ. ಹಳೆಯ ವಾಹನಗಳ ಬಳಕೆ ಕಾನೂನುಬದ್ಧವಾಗಲಿದೆ.
20 ವರ್ಷಕ್ಕಿಂತ ಹಳೆಯ ವಾಹನಗಳ ನೋಂದಣಿ ಶುಲ್ಕ : 20 ವರ್ಷಕ್ಕಿಂತ ಹಳೆಯ ವಾಹನಗಳನ್ನು ನೋಂದಾಯಿಸಲು ವಿವಿಧ ಶ್ರೇಣಿಯಲ್ಲಿ ಶುಲ್ಕವನ್ನು ಪಾವತಿಸಬೇಕು. ಕೇಂದ್ರ ಮೋಟಾರು ವಾಹನ ನಿಯಮಗಳು, 2025 ರ ಅಡಿಯಲ್ಲಿ ಇದು ಜಾರಿಗೆ ಬಂದಿದೆ.
ಇನ್ ವಾಲಿಡ್ ಕ್ಯಾರೀಜ್ (Invalid carriage ) ಅಂಗವಿಕಲರ ವಾಹನ – 100 ರೂ.
ಮೋಟಾರ್ ಸೈಕಲ್ - 2,000 ರೂ.
ತ್ರಿಚಕ್ರ ವಾಹನ / ಕ್ವಾಡ್ರಿ ಸೈಕಲ್ - 5,000 ರೂ.
ಲಘು ಮೋಟಾರು ವಾಹನ (ಕಾರು ಇತ್ಯಾದಿ) - 10,000 ರೂ.
ಆಮದು ಮಾಡಿದ ಮೋಟಾರು ವಾಹನ (2 ಅಥವಾ 3 ಚಕ್ರ) - 20,000 ರೂ.
ಆಮದು ಮಾಡಿದ ಮೋಟಾರು ವಾಹನ (4 ಅಥವಾ ಹೆಚ್ಚಿನ ಚಕ್ರ) - 80,000 ರೂ.
ಇತರ ವಾಹನಗಳು - 12,000 ರೂ.
ಇಲ್ಲಿ ಶುಲ್ಕಕ್ಕೆ ಜಿಎಸ್ಟಿ ಸೇರಿಲ್ಲ. ಚಾಲಕರು, ಜಿಎಸ್ಟಿ ಸಮೇತ ನೋಂದಣಿ ಶುಲ್ಕವನ್ನು ಪಾವತಿಸಬೇಕು.
ಹಳೆಯ ವಾಹನಗಳನ್ನು ಯಾವಾಗ ಮರು ನೋಂದಣಿ ಮಾಡಿಸಬೇಕು? : ಹೊಸ ನಿಯಮಗಳ ಪ್ರಕಾರ, ಯಾವುದೇ ವಾಹನವನ್ನು ಮೊದಲ ನೋಂದಣಿ ಮಾಡಿದ ದಿನಾಂಕದಿಂದ ಗರಿಷ್ಠ 20 ವರ್ಷಗಳವರೆಗೆ ಓಡಿಸಬಹುದು. ಇದಕ್ಕೆ ಹಳೆ ರಿಜಿಸ್ಟ್ರೇಷನ್ ಸರ್ಟಿಫಿಕೆಟ್ ಅಗತ್ಯ. 20 ವರ್ಷಗಳು ಪೂರ್ಣಗೊಂಡ ನಂತ್ರ ನಿಮ್ಮ ವಾಹನವನ್ನು ಮರು ನೋಂದಣಿ ಮಾಡಬೇಕು. ಈ ಹಿಂದೆ ಮರು ನೋಂದಣಿಯನ್ನು 15 ವರ್ಷಕ್ಕೆ ಮಾಡ್ಬೇಕಾಗಿತ್ತು. 20 ವರ್ಷಕ್ಕೆ ನೀವು ಮರು ನೋಂದಣಿ ಮಾಡಿದ ನಂತ್ರ ಪ್ರತಿ ಐದು ವರ್ಷಕ್ಕೆ ನೋಂದಣಿ ಮಾಡ್ತಿರಬೇಕು.
ದೆಹಲಿ – ಎನ್ ಸಿಆರ್ ನಲ್ಲಿ ಜಾರಿಯಾಗೋದಿಲ್ಲ ಈ ನಿಯಮ : ದೇಶದಾದ್ಯಂತ ತಕ್ಷಣಕ್ಕೆ ಈ ನಿಯಮ ಜಾರಿಗೆ ಬರ್ತಿದೆ. ಆದ್ರೆ ದೆಹಲಿ ಹಾಗೂ ಎನ್ ಸಿಆರ್ ನಲ್ಲಿ ಈ ನಿಯಮ ಜಾರಿಗೆ ಬರ್ತಿಲ್ಲ. ದೆಹಲಿ-ಎನ್ಸಿಆರ್ನಲ್ಲಿ 10 ವರ್ಷ ಹಳೆಯ ಡೀಸೆಲ್ ಮತ್ತು 15 ವರ್ಷ ಹಳೆಯ ಪೆಟ್ರೋಲ್ ವಾಹನಗಳ ಮೇಲೆ ಈಗಾಗಲೇ ನಿಷೇಧವಿದೆ. ಮಾಲಿನ್ಯದ ದೃಷ್ಟಿಯಿಂದ, ಕೇಂದ್ರ ಸರ್ಕಾರ ಇಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರದಿರಲು ನಿರ್ಧರಿಸಿದೆ.
