ಪ್ರತಿಯೊಂದು ಜನ್ಮರಾಶಿಗೂ ತನ್ನದೇ ಆದ ಸ್ವಭಾವ ಮತ್ತು ರಹಸ್ಯಗಳಿರುತ್ತವೆ. ನಿಮ್ಮ ರಾಶಿಯು ನಿಮ್ಮ ವ್ಯಕ್ತಿತ್ವದ ಯಾವ ಗುಟ್ಟನ್ನು (Zodiac Secrets) ಮುಚ್ಚಿಡುತ್ತದೆ ಮತ್ತು ನಿಮ್ಮ ಆಪ್ತರು ತಮ್ಮ ನೋವು, ಅಸಮಾಧಾನ, ಅಥವಾ ಅಸೂಯೆಯನ್ನು ಹೇಗೆ ಬಚ್ಚಿಡುತ್ತಾರೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಜನ್ಮರಾಶಿ ಇರುವಂತೆ ತನ್ನದೇ ಆದ ರಹಸ್ಯಗಳೂ ಇರುತ್ತವೆ. ಮುಚ್ಚಿಟ್ಟ ಸಂಗತಿಗಳಲ್ಲಿ ಆಸಕ್ತಿ ಹೆಚ್ಚು. ನೀವೇನನ್ನು ಮುಚ್ಚಿಡುತ್ತಿದ್ದೀರಿ ಎಂಬುದು ನಿಮ್ಮ ಜನ್ಮರಾಶಿಗೆ ಸಂಬಂಧಿಸಿಯೂ ಇರುತ್ತದೆ ಎಂದರೆ ಆಶ್ಚರ್ಯಪಡಬೇಡಿ. ಪ್ರತಿ ಜನ್ಮರಾಶಿ ಚಿಹ್ನೆಯ ಜನಗಳಿಗೂ ಅವರದೇ ಸ್ವಭಾವ ಇರುವುದರಿಂದ, ಅವರದೇ ಆದ ಗುಟ್ಟುಗಳೂ ಇರುವುದು ಸಹಜ. ಹಾಗೇ ನಿಮ್ಮದು, ನಿಮ್ಮ ಸಂಗಾತಿ- ಸ್ನೇಹಿತ- ಸ್ನೇಹಿತೆಯರ ಗುಟ್ಟುಗಳ ರಹಸ್ಯ ಯಾವುದು ಅಂತ ಅವರ ಜನ್ಮರಾಶಿಯ ಪ್ರಕಾರ ನೋಡಿ, ಇಲ್ಲಿದೆ.

ಮೇಷ ರಾಶಿ

ತಮ್ಮ ಜೀವನದ ಮೇಲೆ ಸಂಪೂರ್ಣ ಹಿಡಿತ ಹೊಂದಿರುವವರಂತೆ ಕಾಣಿಸಿಕೊಳ್ಳುತ್ತಾರೆ, ವರ್ತಿಸುತ್ತಾರೆ. ಆದರೆ ವಸ್ತುಸ್ಥಿತಿ ಹಾಗಿರುವುದಿಲ್ಲ. ಬದುಕು ಎಲ್ಲಿಯೋ ಹೋಗುತ್ತಿರುತ್ತದೆ, ಇವರೆಲ್ಲೋ ಹೋಗುತ್ತಿರುತ್ತಾರೆ. ಗಟ್ಟಿ ಬದುಕು ತಮ್ಮದು ಎಂದು ನಟಿಸುತ್ತಾರೆ. ಒಳಗೇ ಪೊಳ್ಳಾಗಿರುತ್ತಾರೆ.

ವೃಷಭ ರಾಶಿ

ಎದೆಯಲ್ಲಿ ನೋವನ್ನು ಅಡಗಿಸಿ ಇಟ್ಟುಕೊಂಡು ಮೇಲಿನಿಂದ ನಗುನಗುತ್ತಾ ಇರುವುದರಲ್ಲಿ ಇವರು ನಿಷ್ಣಾತರು. ತಮ್ಮ ಬೇಸರವನ್ನು ಹೃದಯದಲ್ಲಿ ಹುದುಗಿಸಿಟ್ಟುಕೊಂಡು ಅದರ ಮೇಲೆ ಆತ್ಮವಿಶ್ವಾಸದ ನಗೆಯ ಮಾಸ್ಕ್‌ ಹಾಕುವುದರಲ್ಲಿ ಇವರು ಕಿಂಗ್‌ ಅಥವಾ ಕ್ವೀನ್.‌

ಮಿಥುನ ರಾಶಿ

ಇವರ ಹೃದಯ ಸಂಗಾತಿಯಿಂದ ಒಡೆದು ಚೂರು ಚೂರಾಗಿರಬಹುದು. ಆದರೆ ಅದನ್ನು ತೋರಿಸಿಕೊಳ್ಳುವುದಿಲ್ಲ. ಅವರ ಹೃದಯದಲ್ಲಿ ಏನಾಗುತ್ತಿದೆ ಎಂಬುದೇ ನಿಮ್ಮ ಅರಿವಿಗೆ ಬಾರದಂತೆ ಇವರು ವರ್ತಿಸುತ್ತಿರುತ್ತಾರೆ.

ಕಟಕ ರಾಶಿ

ಇವರು ನಿರ್ಧಾರಗಳನ್ನು ತೆಗೆದುಕೊಳ್ಳುವ ವಿಚಾರಕ್ಕೆ ಬಂದಾಗ ದುರ್ಬಲರು. ಆದರೆ ತಾವು ಕಠಿಣ ಎಂದು ತೋರಿಸಿಕೊಳ್ಳುತ್ತಿರುತ್ತಾರೆ. ಇವರು ಕಠಿಣವಾದ ಗ್ಲಾಸ್‌ನಂತೆ ಇರಬಹುದು. ಒಂದು ಹಂತದವರೆಗೂ ಕಠಿಣವಾಗಿದ್ದು, ಪ್ರೆಶರ್‌ ಜಾಸ್ತಿಯಾದಾಗ ಠಳ್‌ ಎಂದು ಮುರಿದುಹೋಗಬಹುದು.

ಸಿಂಹ ರಾಶಿ

ಇವರು ಮಹಾ ಆತ್ಮವಿಶ್ವಾಸಿಗಳಂತೆ ತೋರಿಸಿಕೊಳ್ಳುತ್ತಿರುತ್ತಾರೆ. ಆದರೆ ಕೆಲವೊಮ್ಮೆ ಅಷ್ಟೇ ಅಳ್ಳೆದೆಯವರೂ ಆಗಿರುತ್ತಾರೆ. ಕೆಲವು ಸಂದರ್ಭಗಳಲ್ಲಿ ಇವರು ಎಷ್ಟು ಕಂಪಿಸುತ್ತಾರೆ ಎಂಬುದನ್ನು ನೀವು ಊಹಿಸಲಾರಿರಿ. ಇವರ ನಗೆಯಲ್ಲಿ ನಿಮಗೆ ಆತ್ಮವಿಶ್ವಾಸ ಕಂಡರೂ ಅದು ಅವರ ಪುಕ್ಕಲನ್ನು ಅಡಗಿಸುವ ನಗೆ.

ಕನ್ಯಾ ರಾಶಿ

ಇವರಿಗೆ ಇನ್ನೊಬ್ಬರಿಂದ ತಿರಸ್ಕಾರಕ್ಕೆ ಒಳಗಾಗುವುದು ಎಂದರೆ ಅಲರ್ಜಿ. ಅದನ್ನು ತಡೆಯಲು ಏನು ಬೇಕಿದ್ದರೂ ಮಾಡುತ್ತಾರೆ. ಕೆಲವೊಮ್ಮೆ ಇವರು ನಿಮ್ಮನ್ನೇ ತಿರಸ್ಕರಿಸುತ್ತಿದ್ದಾರೆ ಎಂದು ನಿಮಗೆ ಅನಿಸುವಂತೆ ವರ್ತಿಸಲೂಬಹುದು.

ತುಲಾ ರಾಶಿ

ನೀವು ಇವರನ್ನು ಯಾವುದೋ ಕಾರಣಕ್ಕೆ ನೋಯಿಸುತ್ತೀರಿ ಅಥವಾ ಅವಮಾನ ಮಾಡುತ್ತೀರಿ ಎಂದಿಟ್ಟುಕೊಳ್ಳಿ. ಒಂದು ಕ್ಷಣ ಹರ್ಟ್‌ ಆದರೂ ಅದನ್ನು ತೋರಿಸಿಕೊಳ್ಳದಂತೆ ಮುಚ್ಚಿಟ್ಟುಕೊಳ್ಳುತ್ತಾರೆ. ತಾವು ಅವಮಾನಿತರಾದೆವು ಎಂದು ಭಾವ ಇತರರ ಕಣ್ಣಲ್ಲಿ ಮೂಡುವುದು ಅವರಿಗೆ ಬೇಕಿರುವುದಿಲ್ಲ.

ವೃಶ್ಚಿಕ ರಾಶಿ

ಇವರು ಇತರರ ಸಾಧನೆಗಳ ಬಗ್ಗೆ ಹೊಟ್ಟೆಕಿಚ್ಚು ಪಟ್ಟುಕೊಳ್ಳುತ್ತಾರೆ. ತಮ್ಮಿಂದ ಸಾಧಿಸಲು ಆಗಲಿಲ್ಲ ಎಂದು ಕೊರಗಬಹುದು. ಆದರೆ ಅದನ್ನು ತೋರಿಸಿಕೊಳ್ಳುವುದಿಲ್ಲ. ಮತ್ಸರವನ್ನು ಹೊಟ್ಟೆಯೊಳಗೆ ಇಟ್ಟುಕೊಂಡು ನಿಮ್ಮನ್ನು ಗಮನಿಸುತ್ತಾ ಇರುತ್ತಾರೆ. ಕೆಟ್ಟದು ಮಾಡುತ್ತಾರೆಂದಲ್ಲ, ಎಚ್ಚರವಾಗಿರಿ ಅಷ್ಟೆ.

ಧನು ರಾಶಿ

ಇವರು ಸಿಟ್ಟು ಹಾಗೂ ಅಸಮಾಧಾನವನ್ನು ಹೊಟ್ಟೆಯೊಳಗೆ ಇಟ್ಟುಕೊಂಡು ಮೇಲೆ ನಗುತ್ತ ಇರುತ್ತಾರೆ. ಆದರೆ ಹೊಟ್ಟೆಯೊಳಗೆ ರಾಶಿಯಾಗುತ್ತಾ ಹೋದ ಸಿಟ್ಟು ಎಂದಾದರೂ ಹೊರಗೆ ಬರಲೇಬೇಕಲ್ಲವೆ? ಹಾಗೆ ಇದ್ದಕ್ಕಿದ್ದಂತೆ ಅದು ಮೇಲೆದ್ದು ಬರುವಾಗ ನೀವು ಗಾಬರಿಯಾಗಬಹುದು.

ಮಕರ ರಾಶಿ

ತಮ್ಮ ನೆಗೆಟಿವ್‌ ಭಾವನೆಗಳನ್ನು ಇವರು ಹೊರಗೆ ತೋರಿಸಿಕೊಳ್ಳುವುದಿಲ್ಲ. ಅದರಿಂದ ಉಂಟಾಗಬಹುದಾದ ಸಮಸ್ಯೆಗಳನ್ನು ಎದುರಿಸಲು ಅವರು ಸಿದ್ಧರಾಗಿರುವುದಿಲ್ಲ. ತಮ್ಮ ವ್ಯಕ್ತಿತ್ವವೇ ನೆಗೆಟಿವ್‌ ಎನಿಸಿಕೊಳ್ಳಬಹುದು ಎಂಬ ಆತಂಕ ಅವರಲ್ಲಿ ಇರುತ್ತದೆ.

ಕುಂಭ ರಾಶಿ

ಇವರು ಕೆಲವರನ್ನು ಶತಾಯಗತಾಯ ದ್ವೇಷಿಸಬಹುದು. ಆದರೆ ಎಂದೆಂದೂ ಈ ದ್ವೇಷಭಾವನೆ ಸಂಬಂಧಪಟ್ಟವರ ಗಮನಕ್ಕೆ ಬಾರದೇ ಇರುವಂತೆಯೇ ವರ್ತಿಸಬಹುದು. ಹೀಗಾಗಿ ಅವರಲ್ಲಿ ನಿಮ್ಮ ಬಗ್ಗೆ ಪ್ರೀತಿಯಿದೆಯೋ, ದ್ವೇಷವಿದೆಯೋ ಎಂದು ಅರ್ಥ ಮಾಡಿಕೊಳ್ಳುವುದೇ ಕಷ್ಟ.

ಮೀನ ರಾಶಿ

ತಮ್ಮ ಶೋಕವನ್ನು ಇವರು ಸದಾ ಮುಚ್ಚಿಟ್ಟುಕೊಂಡಿರುತ್ತಾರೆ. ಶೋಕವನ್ನು ಮೂಟೆಕಟ್ಟಿ ತಮ್ಮ ಮನದ ಕತ್ತಲೆ ಕೋಣೆಗಳೊಳಕ್ಕೆ ಎಸೆದು ಬೀಗ ಜಡಿದು ಬಿಟ್ಟಿರುತ್ತಾರೆ. ಏಕಾಂತದಲ್ಲಿ, ಏಕಾಂಗಿಯಾಗಿರುವಾಗ ಮಾತ್ರ ಆ ಶೋಕದ ಭೂತಗಳು ಅವರನ್ನು ಕಾಡುತ್ತವೆ.