
ಉದ್ಯೋಗಸ್ಥ ತಾಯಂದಿರಿಗೆ ಕೆಲಸ ಮಾಡುವ ಕಚೇರಿ ಮತ್ತು ಮನೆಯ ನಡುವೆ ಸಮತೋಲನ ಕಾಯ್ದುಕೊಳ್ಳುವುದು ತುಂಬಾ ಕಷ್ಟದ ಕೆಲಸ. ಇದರಿಂದಾಗಿ ಕೆಲವು ಮಹಿಳೆಯರು ಕೆಲಸವನ್ನೇ ಬಿಟ್ಟುಬಿಡುತ್ತಾರೆ. ಕೆಲಸ ಮಾಡುವವರು ತಾವು ಒಳ್ಳೆಯ ತಾಯಂದಿರಲ್ಲ, ಮಕ್ಕಳಿಗೆ ಸಮಯ ಕೊಡುತ್ತಿಲ್ಲ ಎಂಬ ತಪ್ಪಿತಸ್ಥ ಭಾವನೆಯಲ್ಲಿರುತ್ತಾರೆ. ತಮ್ಮ ಮೇಲೆ ಗಮನ ಹರಿಸುವುದನ್ನೇ ಮರೆತುಬಿಡುತ್ತಾರೆ. ಶಿಶುವೈದ್ಯೆ ಮತ್ತು ಆರೋಗ್ಯ ತಜ್ಞೆ ಡಾ. ಮಿಚೆಲ್ ಶಾ, ತಾಯಂದಿರು ಈ ತಪ್ಪಿತಸ್ಥ ಭಾವನೆಯಿಂದ ಹೊರಬರಲು ಕೆಲವು ಸಲಹೆಗಳನ್ನು ನೀಡಿದ್ದಾರೆ.
ಡಾ. ಮಿಚೆಲ್ ಶಾ ಹೇಳುವಂತೆ, ಮಹಿಳೆಯರು ಎಲ್ಲವನ್ನೂ ಮಾಡಬಲ್ಲರು, ಎಲ್ಲವನ್ನೂ ಪಡೆಯಬಲ್ಲರು ಎಂದು ಹೇಳುವ ವ್ಯವಸ್ಥೆಯನ್ನು ನಾವು ನಿರ್ಮಿಸಿದ್ದೇವೆ. ಆದರೆ ಅವರಿಗೆ ಬೇಕಾದ ಬೆಂಬಲವನ್ನು ನೀಡುತ್ತಿಲ್ಲ. ಮನೆಯಲ್ಲಿ ಮಕ್ಕಳಿಗೆಲ್ಲಾ ತಾಯಿಯಾಗಬೇಕು, ಆಫೀಸಿನಲ್ಲಿ ಡೆಡ್‌ಲೈನ್ ಇಲ್ಲದ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಅವರಿಂದ ನಿರೀಕ್ಷಿಸಲಾಗುತ್ತದೆ. ಈ ದ್ವಿಮುಖ ಜವಾಬ್ದಾರಿ ಅವರನ್ನು ತುಂಬಾ ದಣಿಸುತ್ತದೆ. ಅಷ್ಟೇ ಅಲ್ಲ, ಪ್ರತಿಯೊಂದು ಸಂಬಂಧ ಮತ್ತು ಪಾತ್ರದಲ್ಲೂ ತಾವು ವಿಫಲರಾಗಿದ್ದೇವೆ ಎಂದು ಭಾವಿಸಲು ಪ್ರಾರಂಭಿಸುತ್ತಾರೆ.
ತಪ್ಪಿತಸ್ಥ ಭಾವನೆ ಬೇಡ, ಈ 4 ಸಲಹೆ ಪಾಲಿಸಿ
1. ನಿಮ್ಮ ದೃಷ್ಟಿಕೋನ ಬದಲಿಸಿ
'ನಾನು ಮಲಗುವ ಮುನ್ನ ಮಗುವಿನ ಬಳಿ ಹೋಗಲು ಸಾಧ್ಯವಾಗಲಿಲ್ಲ' ಎಂದು ಹೇಳುವ ಬದಲು, 'ನಮ್ಮ ಕುಟುಂಬದ ಭವಿಷ್ಯಕ್ಕೆ ಮುಖ್ಯವಾದ ಒಂದು ಗಡುವನ್ನು ನಾನು ಪೂರ್ಣಗೊಳಿಸಿದೆ' ಎಂದು ಹೇಳಿಕೊಳ್ಳಿ. ನಿಮ್ಮ ನಿರ್ಧಾರಗಳ ಹಿಂದಿನ ಉದ್ದೇಶವನ್ನು ಅರ್ಥಮಾಡಿಕೊಳ್ಳಿ, ಆಗ ಮಾತ್ರ ನಾಚಿಕೆ ಮತ್ತು ತಪ್ಪಿತಸ್ಥ ಭಾವನೆಯ ಪರಿಣಾಮ ಕಡಿಮೆಯಾಗುತ್ತದೆ.
2. ಸಹಾಯ ಪಡೆಯಿರಿ ಮತ್ತು ಸ್ವೀಕರಿಸಿ
ಪ್ರತಿಯೊಂದು ಕೆಲಸವನ್ನು ಒಬ್ಬರೇ ಮಾಡುವುದು ಶಕ್ತಿಯ ಸಂಕೇತವಲ್ಲ. ಸಂಗಾತಿ, ಅಜ್ಜ-ಅಜ್ಜಿ ಅಥವಾ ಸ್ನೇಹಿತರಿಂದ ಸಹಾಯ ಪಡೆಯುವುದರಲ್ಲಿ ಯಾವುದೇ ನಾಚಿಕೆ ಪಡಬೇಡಿ. ಪರಸ್ಪರ ಸಹಕಾರವೇ ನಿಜವಾದ ಶಕ್ತಿ.
3. ಡಿಜಿಟಲ್ ಜಾಗವನ್ನು ಸ್ವಚ್ಛಗೊಳಿಸಿ
ಸಾಮಾಜಿಕ ಮಾಧ್ಯಮವನ್ನು ನೋಡಿ ನೀವು ಇತರ ತಾಯಂದಿರಿಗಿಂತ ಹಿಂದುಳಿದಿದ್ದೀರಿ ಅಥವಾ ಕಡಿಮೆ ಎಂದು ನಿಮಗೆ ಅನಿಸಿದರೆ, ಆ ಪುಟಗಳನ್ನು ಮ್ಯೂಟ್ ಮಾಡಿ ಅಥವಾ ಅನ್‌ಫಾಲೋ ಮಾಡಿ. ನಿಮ್ಮ ಡಿಜಿಟಲ್ ವಾತಾವರಣವು ನಿಮಗೆ ಸ್ಫೂರ್ತಿ ನೀಡಬೇಕು, ಹೊರತು ಹೋಲಿಕೆ ಮಾಡಿ ನೀವು ದುರ್ಬಲರು ಎಂಬುದನ್ನು ತೋರಿಸುವುದಲ್ಲ.
4. ಇತರರ ಮೇಲೆ ತೋರಿಸುವಷ್ಟೇ ದಯೆ ನಿಮ್ಮ ಮೇಲೂ ತೋರಿಸಿ
ತಪ್ಪಿತಸ್ಥ ಭಾವನೆ ಎಂದರೆ ತಪ್ಪು ಸ್ಥಳದಲ್ಲಿ ಬಳಸಿದ ಸಹಾನುಭೂತಿಯೂ ಆಗಿರುತ್ತದೆ. ನಿಮ್ಮ ಮಕ್ಕಳು, ಕೆಲಸ ಮತ್ತು ಸಂಬಂಧಗಳ ಬಗ್ಗೆ ನೀವು ಕಾಳಜಿ ವಹಿಸುತ್ತೀರಿ ಎಂಬುದು ನಿಮ್ಮ ಶಕ್ತಿ. ಆದರೆ ಪ್ರತಿಯೊಂದು ಹೊರೆಯನ್ನೂ ನೀವೊಬ್ಬರೇ ಹೊತ್ತುಕೊಳ್ಳುವ ಅಗತ್ಯವಿಲ್ಲ. ನಿಮ್ಮ ದೇಹ ಮತ್ತು ಮಾನಸಿಕ ಒತ್ತಡದ ಮೇಲೂ ಸ್ವಲ್ಪ ಕರುಣೆ ತೋರಿಸಬೇಕು. ಆಗ ನೂವು ಮಕ್ಕಳಿಗೆ ಸಮಯ ನೀಡಲಾಗುತ್ತಿಲ್ಲ ಎಂಬ ತಪ್ಪಿತಸ್ಥ ಭಾವನೆಯಿಂದ ಹೊರಗೆ ಬರಲು ಸಾಧ್ಯವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.