ವಚನದ ಕಟ್ಟುಗಳಿದ್ದ ಪಲ್ಲಕ್ಕಿ ಹೊತ್ತ ಮಹಿಳೆಯರು: ಮೆರವಣಿಗೆಗೆ ಶ್ರೀಗಳಿಂದ ಚಾಲನೆ

By Kannadaprabha News  |  First Published Jul 16, 2023, 12:25 PM IST

ಪಟ್ಟ​ಣ​ದ ತೋಂಟದಾರ್ಯ ಮಠದಲ್ಲಿ ತಿಂಗಳ ಪರ್ಯಂತ ಜರುಗಿದ ವಿಶ್ವಧರ್ಮ ಪ್ರವಚನ ಮಂಗಲದ ಅಂಗವಾಗಿ ಶನಿವಾರ ಬಸವಣ್ಣ, ಎಡೆಯೂರು ಸಿದ್ಧಲಿಂಗೇಶ್ವರ ಹಾಗೂ ಬಸವಾದಿ ಶಿವಶರಣರ ವಚನದ ಕಟ್ಟುಗಳನ್ನು ಇಟ್ಟಿರುವ ಪಲ್ಲಕ್ಕಿಯನ್ನು ಮಹಿಳೆಯರೇ ಹೊತ್ತು ಮೆರವಣಿಗೆ ನಡೆಸಿದರು. 


ಮುಂಡರಗಿ (ಜು.16): ಪಟ್ಟ​ಣ​ದ ತೋಂಟದಾರ್ಯ ಮಠದಲ್ಲಿ ತಿಂಗಳ ಪರ್ಯಂತ ಜರುಗಿದ ವಿಶ್ವಧರ್ಮ ಪ್ರವಚನ ಮಂಗಲದ ಅಂಗವಾಗಿ ಶನಿವಾರ ಬಸವಣ್ಣ, ಎಡೆಯೂರು ಸಿದ್ಧಲಿಂಗೇಶ್ವರ ಹಾಗೂ ಬಸವಾದಿ ಶಿವಶರಣರ ವಚನದ ಕಟ್ಟುಗಳನ್ನು ಇಟ್ಟಿರುವ ಪಲ್ಲಕ್ಕಿಯನ್ನು ಮಹಿಳೆಯರೇ ಹೊತ್ತು ಮೆರವಣಿಗೆ ನಡೆಸಿದರು. ಈ ಬಾರಿ ಶ್ರೀಮಠದ ಪೀಠಾಧಿಪತಿ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮಹಿಳೆಯರಿಗೆ ಪಲ್ಲಕ್ಕಿ ಹೊರಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಸ್ವಾಮೀಜಿ ಮಾತನಾಡಿ, ಬಸವಾದಿ ಶಿವಶರಣರ ತತ್ವಸಿದ್ಧಾಂತದ ಪ್ರಕಾರ, ತೋಂಟದ ಎಡೆಯೂರು ಸಿದ್ಧಲಿಂಗೇಶ್ವರರ ಪರಂಪರೆಯಲ್ಲಿ ಮುಂಡರಗಿ ತೋಂಟದಾರ್ಯ ಮಠದಲ್ಲಿ ಮಹಿಳೆಯರಿಗೂ ಸಹ ಪಲ್ಲಕ್ಕಿ ಹೊತ್ತುಕೊಂಡು ಮೆರವಣಿಗೆ ಮಾಡಲು ಮೊಟ್ಟಮೊದಲು ಅವಕಾಶ ಕಲ್ಪಿಸಲಾಗಿದೆ. ನಮ್ಮ ಮಠದಲ್ಲಿ ಹೆಣ್ಣು -ಗಂಡೆಂಬ ಭೇದ ಭಾವವಿಲ್ಲ. ಪಲ್ಲಕ್ಕಿಯನ್ನು ಎಲ್ಲ ಶಿವಶರಣೆಯರು ತಮ್ಮ ಹೆಗಲ ಮೇಲೆ ಹೊತ್ತು ಮೆರೆಸಿದ್ದಾರೆ. ಪುರುಷರಷ್ಟೇ ಪಲ್ಲಕ್ಕಿ ಹೊರಬೇಕೆ? ಮಹಿಳೆಯರಿಗೂ ಆ ಅವಕಾಶ ನೀಡಬೇಕು ಎನ್ನುವುದು ಬಹುದಿನಗಳಿಂದ ನನ್ನ ಮನಸ್ಸಿನಲ್ಲಿತ್ತು. 

Tap to resize

Latest Videos

ಜನವರಿಗೆ ಕಾಂಗ್ರೆಸ್‌ ಸರ್ಕಾರ ಬೀಳುವುದು ಖಚಿತ: ಸಂಸದ ಮುನಿಸ್ವಾಮಿ ಭವಿಷ್ಯ

ಇಂದು ಮಹಿಳೆಯರಿಗೆ ಪಲ್ಲಕ್ಕಿ ಹೊರಿಸಿ ಮೆರವಣಿಗೆ ಮಾಡಿಸಲಾಗಿದೆ ಎಂದರು. ಶ್ರೀಮಠದ ಭಕ್ತರಾದ ಮಂಗಲಾ ಶೀರಿ, ಮಂಗಳಾ ಕರ್ಜಗಿ ಮಾತನಾಡಿ, ನಾವು ನಮಗೆ ತಿಳಿವಳಿಕೆ ಬಂದಾಗಿನಿಂದಲೂ ವಿವಿಧ ಕಡೆಗಳಲ್ಲಿ ಜರುಗುವ ಜಾತ್ರೆ, ಉತ್ಸವಗಳಲ್ಲಿ ಪಲ್ಲಕ್ಕಿ ಮೆರವಣಿಗೆಯನ್ನು ನೋಡುತ್ತಾ ಬಂದಿದ್ದು, ಎಲ್ಲಿಯೂ ಸಹ ಮಹಿಳೆಯರಿಗೆ ಪಲ್ಲಕ್ಕಿ ಹೊತ್ತು ಮೆರವಣಿಗೆ ಮಾಡಲು ಅವಕಾಶ ಕೊಟ್ಟಿದ್ದನ್ನು ನೋಡಿರಲಿಲ್ಲ. ನಾವೂ ಒಮ್ಮೆಯಾದರೂ ಪಲ್ಲಕ್ಕಿ ಹೊರಬೇಕು ಎನ್ನುವ ಆಸೆ ನಮ್ಮ ಮನಸ್ಸಿನಲ್ಲಿ ಇದ್ದೇ ಇತ್ತು. 

ಇಂದು ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮಹಿಳೆಯರೆಲ್ಲರಿಗೂ ಅವಕಾಶ ನೀಡುವ ಮೂಲಕ ಹೊಸದೊಂದು ಪರಂಪರೆಗೆ ನಾಂದಿ ಹಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಶ್ರೀಮಠದಿಂದ ಹೊರಟ ಪಲ್ಲಕ್ಕಿ ಮೆರವಣಿಗೆಯು ಪಟ್ಟಣದ ಕಚೇರಿ ಓಣಿ, ಬಜಾರ, ಜಾಗೃತ ವೃತ್ತ, ಕೋಟೆ ಭಾಗವೂ ಸೇರಿದಂತೆ ವಿವಿಧೆಡೆಗಳಲ್ಲಿ ಸಂಚರಿಸಿತು. ಈ ಸಂದರ್ಭದಲ್ಲಿ ಭಕ್ತರು ಪೂಜೆ ಸಲ್ಲಿಸಿದರು. ನಂತರ ಅಲ್ಲಿಂದ ಶ್ರೀಮಠಕ್ಕೆ ತಲುಪಿತು. ನಂತರ ಮಠದಲ್ಲಿ ಮಹಾಪ್ರಸಾದ ಜರುಗಿತು.

ಕೇಂದ್ರ ಸರ್ಕಾರ ಬಡವರ ಹೊಟ್ಟೆ ನೋಡಲಿಲ್ಲ: ಸಚಿವ ಮುನಿಯಪ್ಪ

ಈ ಸಂದರ್ಭದಲ್ಲಿ ಸುಕನ್ಯಾ ಕಬ್ಬೂರಮಠ, ಶೋಭಾ ಅಂಗಡಿ, ನಿಲಮ್ಮ ಗಿಂಡಿಮಠ, ಪುಷ್ಪಾ ಶೀರಿ, ಶಿವಗಂಗಾ ನವಲಗುಂದ, ರಂಜಿತಾ ಲಿಂಗಶೆಟ್ಟರ ಸೇರಿದಂತೆ ಅನೇಕ ಮಹಿಳೆಯರು ಪಲ್ಲಕ್ಕಿ ಹೊತ್ತು ಮೆರವಣಿಗೆ ಮಾಡಿದರು. ಗೋಣಿರುದ್ರ ಸ್ವಾಮೀಜಿ, ಪ್ರವಚನ ಸಮಿತಿ ಅಧ್ಯಕ್ಷ ಪವನ್‌ ಚೋಪ್ರಾ, ಓಂಪ್ರಕಾಶ ಲಿಂಗಶೆಟ್ಟರ, ದೇವು ಹಡಪದ, ಶಿವಕುಮಾರ ಬೆಟಗೇರಿ, ವೀರೇಂದ್ರ ಅಂಗಡಿ, ವಿಶ್ವನಾಥ ಉಳ್ಳಾಗಡ್ಡಿ, ಸೇವಾ ಸಮಿತಿ ಅಧ್ಯಕ್ಷ ಎಚ್‌.ವಿರೂಪಾಕ್ಷಪ್ಪ, ಕೊಟ್ರೇಶ ಅಂಗಡಿ, ದೇವಪ್ಪ ರಾಮೇನಹಳ್ಳಿ, ಬಸಯ್ಯ ಗಿಂಡಿಮಠ, ಈಶಣ್ಣ ಬೆಟಗೇರಿ, ಪಾಲಾಕ್ಷಿ ಗಣದಿನ್ನಿ ಉಪಸ್ಥಿತರಿದ್ದರು.

click me!