ಮಹಿಳೆಯೊಬ್ಬರು ಮದುವೆಯಾದರು ಎಂಬುದು ಅವರನ್ನು ಕೆಲಸದಿಂದ ತೆಗೆಯಲು ಕಾರಣವಾಗದು ಎಂದಿರುವ ಸುಪ್ರೀಂಕೋರ್ಟ್, ಹೀಗೆ ಕೆಲಸ ಕಳೆದುಕೊಂಡ ಸೇನಾಪಡೆಯ ದಾದಿಯೊಬ್ಬರಿಗೆ 60 ಲಕ್ಷ ರು. ಪರಿಹಾರ ನೀಡುವಂತೆ ಸರ್ಕಾರಕ್ಕೆ ಸೂಚಿಸಿದೆ.
ನವದೆಹಲಿ: ಮಹಿಳೆಯೊಬ್ಬರು ಮದುವೆಯಾದರು ಎಂಬುದು ಅವರನ್ನು ಕೆಲಸದಿಂದ ತೆಗೆಯಲು ಕಾರಣವಾಗದು ಎಂದಿರುವ ಸುಪ್ರೀಂಕೋರ್ಟ್, ಹೀಗೆ ಕೆಲಸ ಕಳೆದುಕೊಂಡ ಸೇನಾಪಡೆಯ ದಾದಿಯೊಬ್ಬರಿಗೆ 60 ಲಕ್ಷ ರು. ಪರಿಹಾರ ನೀಡುವಂತೆ ಸರ್ಕಾರಕ್ಕೆ ಸೂಚಿಸಿದೆ. ಮದುವೆಯಾದ ಕಾರಣಕ್ಕೆ ಕೆಲಸ ಕಳೆದುಕೊಂಡ ಸೇನಾಪಡೆಯ ನರ್ಸೊಬ್ಬರ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ನ್ಯಾ। ಸಂಜೀವ್ ಖನ್ನಾ ಮತ್ತು ನ್ಯಾ।ದೀಪಂಕರ್ ದತ್ತಾ ಅವರಿದ್ದ ಪೀಠ ಈ ಆದೇಶ ನೀಡಿದೆ.
ಏನಿದು ಪ್ರಕರಣ?:
ಸೇನಾಪಡೆಯಲ್ಲಿ ನರ್ಸ್ ಆಗಿದ್ದ ಲೆ.ಸೆಲಿನಾ ಜಾನ್ ಅವರನ್ನು ಮದುವೆಯಾದ ಕಾರಣಕ್ಕೆ 1988ರಲ್ಲಿ ಉದ್ಯೋಗದಿಂದ ವಜಾ ಮಾಡಲಾಗಿತ್ತು. ಅವರು ಇದನ್ನು ಸೇನಾಪಡೆಯ ನ್ಯಾಯಾಧೀಕರಣದಲ್ಲಿ ಪ್ರಶ್ನಿಸಿದ್ದರು. ನ್ಯಾಯಾಧೀಕರಣವು ಸೆಲಿನಾ ಅವರ ಕೆಲಸದ ಅವಧಿಯ ವೇತನ ನೀಡಲು ಸೂಚಿಸಿತ್ತು. ಆದರೆ 1977ರ ಕಾಯ್ದೆಯ ಪ್ರಕಾರ ಮದುವೆಯಾದ ಮಹಿಳೆಯರನ್ನು ಕೆಲಸದಿಂದ ತೆಗೆಯಬಹುದಿತ್ತು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
ವಿಚಾರಣೆ ನಡೆಸಿದ ನ್ಯಾಯಾಲಯ ಈ ಕಾರಣಕ್ಕೆ ಮಹಿಳೆಯನ್ನು ಕೆಲಸದಿಂದ ವಜಾ ಮಾಡುವುದು ತಪ್ಪು. ಇದು ಮನುಷ್ಯರ ಗೌರವಕ್ಕೆ ಧಕ್ಕೆ ಉಂಟು ಮಾಡುತ್ತದೆ. ಹೀಗಾಗಿ ಇಲ್ಲಿಯವರೆಗೆ ಸೆಲಿನಾ ಎಷ್ಟು ದುಡಿಯುತ್ತಿದ್ದರು ಎಂಬುದನ್ನು ಅಂದಾಜಿಸಿ 60 ಲಕ್ಷ ರು. ಪಾವತಿ ಮಾಡುವಂತೆ ಸರ್ಕಾರಕ್ಕೆ ಆದೇಶಿಸಿದೆ.