ನಟ್ಟ ನಡು ಮಧ್ಯಾಹ್ನವೇ ಓಲಾ ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಭಯಾನಕ ಅನುಭವವಾಗಿದೆ.
ನಟ್ಟ ನಡು ಮಧ್ಯಾಹ್ನವೇ ಓಲಾ ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಭಯಾನಕ ಅನುಭವವಾಗಿದ್ದು, ಅವರು ತಮಗಾದ ಕರಾಳ ಅನುಭವವನ್ನು ಸಾಮಾಜಿಕ ಜಾಲತಾಣ ಲಿಂಕ್ಡಿನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಮಹಿಳೆಯರ ಸುರಕ್ಷತೆಯ ಬಗ್ಗೆ ಚಿಂತೆಯುಂಟು ಮಾಡುವಂತೆ ಮಾಡಿದೆ. ರಾಷ್ಟ್ರ ರಾಜಧಾನಿಗೆ ಸಮೀಪದ ಗುರುಗ್ರಾಮದಲ್ಲೇ ಈ ಘಟನೆ ಡಿಸೆಂಬರ್ 20ರ ಮಧ್ಯಾಹ್ನ 1.30ರ ಸುಮಾರಿಗೆ ನಡೆದಿದೆ.
ಮಹಿಳೆಯೊಬ್ಬರು ಓಲಾ ಕ್ಯಾಬ್ ಬುಕ್ ಮಾಡಿ ಗುರುಗ್ರಾಮದತ್ತ ಪ್ರಯಾಣಿಸುತ್ತಿದ್ದ ವೇಳೆ ಗುರ್ಗಾಂವ್ ಮಾರ್ಗದಲ್ಲಿರುವ ಟೋಲ್ ಪ್ಲಾಜಾದ ಬಳಿ ಕಾರು ಚಾಲಕ ವಾಹನವನ್ನು ಕಾರಣವಿಲ್ಲದೇ ನಿಧಾನಗೊಳಿಸಿದ್ದಾನೆ. ಈ ವೇಳೆ ಕ್ಯಾಬ್‌ನಲ್ಲಿದ್ದ ಮಹಿಳೆಗೆ ಸಂಶಯ ಬಂದಿದ್ದು, ಕ್ಯಾಬ್ ಚಾಲಕನ ಬಳಿ ಏಕೆ ವಾಹನವನ್ನು ನಿಧಾನಿಸುತ್ತಿದ್ದೀರಿ ಎಂದು ಕೇಳಿದ್ದಾರೆ. ಆದರೆ ಚಾಲಕ ಮಾತ್ರ ಆಕೆಯ ಪ್ರಶ್ನೆಗೆ ಉತ್ತರ ನೀಡಿಲ್ಲ, ಇದಾದ ನಂತರ ಕ್ಯಾಬ್‌ನ ಮುಂದೆ ನಿಂತಿದ್ದ ಇಬ್ಬರು ಅಪರಿಚಿತರು ಕ್ಯಾಬ್ ಚಾಲಕನ ಬಳಿ ಕಾರಿನಿಂದ ದೂರ ಸರಿಯುವಂತೆ ಸೂಚಿಸಿದ್ದಾರೆ. ಈ ವೇಳೆ ಕ್ಯಾಬ್ ಚಾಲಕ ಆ ಅಪರಿಚಿತರು ಹೇಳಿದಂತೆ ಮಾಡಿದ್ದು, ಮಹಿಳೆ ಇದ್ದಾಳೆ ಎಂಬುದನ್ನು ನಿರ್ಲಕ್ಷಿಸಿ ಯಾವುದೇ ಹಿಂಜರಿಕೆ ಇಲ್ಲದೇ ಕ್ಯಾಬನ್ನು ರಸ್ತೆ ಪಕ್ಕದಲ್ಲೇ ಪಾರ್ಕ್ ಮಾಡಿದ್ದಾನೆ.
undefined
ಈ ವೇಳೆ ಭಯಗೊಂಡ ಮಹಿಳೆ ಕ್ಯಾಬ್ ಚಾಲಕನ ಬಳಿ ಯಾಕೆ ಅಪರಿಚಿತರು ಹೇಳಿದಂತೆ ಕೇಳುತ್ತಿದ್ದೀರಿ? ಕ್ಯಾಬ್ ಏಕೆ ನಿಲ್ಲಿಸುತ್ತಿದ್ದೀರಿ ಎಂದು ಕೇಳಿದರು ಆತ ಮಹಿಳೆಯ ಪ್ರಶ್ನೆಗೆ ಉತ್ತರಿಸದೇ ಮೌನವಾಗಿ ನಿಂತಿದ್ದಾನೆ . ಇದಾದ ನಂತರ ಇನ್ನು ಇಬ್ಬರು ಯುವಕರು ಬೈಕ್‌ನಲ್ಲಿ ಅಲ್ಲಿಗೆ ಬಂದು ಸೇರಿದ್ದಾರೆ. ಈ ವೇಳೆ ಚಾಲಕ ಸೇರಿದಂತೆ ಅಲ್ಲಿ ಒಟ್ಟು ಐದು ಪುರುಷರು ಸೇರಿಕೊಂಡಿದ್ದಾರೆ. ಗುರುಗ್ರಾಮ್‌ನ ರಾಷ್ಟ್ರೀಯ ಮಾಧ್ಯಮ ಕೇಂದ್ರದ ಬಳಿಯೇ ಈ ಘಟನೆ ಸಂಭವಿಸಿದ್ದು, ಸಂಚಾರ ಕಡಿಮೆ ಇರುವ ಸ್ಥಳ ಇದಾಗಿದೆ.
ಈ ವೇಳೆ ಮಹಿಳೆ ಮತ್ತೆ ಪ್ರಶ್ನೆ ಮಾಡಿದಾಗ ಕಾರು ಚಾಲಕ ತನ್ನ ಇನ್ಸ್ಟಾಲ್‌ಮೆಂಟ್ ಬಾಕಿ ಇತ್ತು ಎಂದಿದ್ದಾನೆ. ಹೀಗಾಗಿ ಅಲ್ಲಿದ್ದ ವ್ಯಕ್ತಿಗಳ ಜೊತೆ ಆತನ ಹಣಕಾಸು ವ್ಯವಹಾರವಿರುವುದು ಗಮನಕ್ಕೆ ಬಂದಿದೆ. ಇದರಿಂದ ಮತ್ತಷ್ಟು ಭಯಭಿತರಾದ ಮಹಿಳೆ ತಮನ್ನು ಕೂಡಲೇ ಗುರಿ ತಲುಪಿಸುವಂತೆ ಕ್ಯಾಬ್ ಚಾಲಕನ ಬಳಿ ಒತ್ತಾಯಿಸಿದ್ದಾರೆ. ಆದರೆ ಆತ ಸ್ವಲ್ಪವೂ ಮಹಿಳೆಯ ಬಗ್ಗೆ ಯೋಚಿಸದೇ ಸುಮ್ಮನಾಗಿದ್ದಾನೆ. ಆದರೆ ಮತ್ತೊಂದೆಡೆ ಅಪರಿಚಿತ ಪುರುಷರು ಕಾರಿನ ಬಳಿ ಬರಲಾರಂಭಿಸಿದ್ದಾರೆ. ಇದರಿಂದ ಬೇರೆ ದಾರಿ ಕಾಣದ ಮಹಿಳೆ ಕ್ಯಾಬ್‌ನ ಬಲ ಬದಿಯ ಬಾಗಿಲನ್ನು ತೆರೆದು ಸುರಕ್ಷಿತ ಸ್ಥಳದತ್ತ ಓಡಲು ಶುರು ಮಾಡಿದ್ದಾಗಿ ಮಹಿಳೆ ಹೇಳಿಕೊಂಡಿದ್ದಾರೆ.
ಈ ಭಯಾನಕ ಘಟನೆಯ ನಡುವೆಯೇ ಅವರು ಓಲಾ ಆಪ್‌ನ ಎಸ್‌ಒಎಸ್ ಬಟನ್ ಒತ್ತಿದ್ದಾರೆ. ಆದರೆ ಆ ಸಂದರ್ಭದಲ್ಲಿ ಅದು ಕೂಡ ಕೆಲಸ ಮಾಡದೇ ಇನ್ನಷ್ಟು ಆತಂಕ ಸೃಷ್ಟಿಸಿತು ಎಂದು ಅವರು ಲಿಂಕ್ಡಿನ್‌ನಲ್ಲಿ ಬರೆದುಕೊಂಡಿದ್ದು, ತಮಗಾದ ಭಯಾನಕ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಇದು ಮಹಿಳೆಯರು ಒಬ್ಬೊಬ್ಬರೇ ಕ್ಯಾಬ್‌ನಲ್ಲಿ ಪ್ರಯಾಣಿಸುವುದು ಎಷ್ಟು ಸುರಕ್ಷಿತ ಎಂಬುದರ ಬಗ್ಗೆ ಯೋಚನೆ ಮಾಡುವಂತೆ ಮಾಡಿದೆ.