
ಅದು ಗುಡ್ಡಕ್ಕೆ ಹೊಂದಿಕೊಂಡಿದ್ದ ಜಮೀನು (Land), ಅದರಲ್ಲಿ ಎಲ್ಲಿ ನೋಡಿದರೂ ಬರೀ ಬಂಡೆಗಲ್ಲು, ಇಂತಹ ಬಂಡೆಗಲ್ಲುಗಳಿದ್ದ ಜಮೀನನ್ನು ಹೇಗಾದರೂ ಮಾಡಿ ಫಲವತ್ತಾದ ಜಮೀನು ಮಾಡಬೇಕೆನ್ನುವ ಛಲದಿಂದ ಮಹಿಳೆ (Women)ಯೊಬ್ಬಳು ತಮ್ಮ ಕುಟುಂಬ ಸಮೇತ ಸಿದ್ದವಾಗಿದ್ದರು, ಆದರೆ ಬಹುತೇಕರು ಮಾತ್ರ ಇವರ ನಿರ್ಧಾರಕ್ಕೆ ಅಚ್ಚರಿಗೊಂಡು ಇದು ಆಗದಿರೋ ಕೆಲಸ ಅಂತ ಮೂಗು ಮುರಿದಿದ್ದರು, ಆದರೆ ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಎಂಬ ಮಾತನ್ನು ನಂಬಿರುವ ಮಹಿಳೆ ಅದ್ಭುತ ಸಾಧನೆಯನ್ನೇ ಮಾಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ನೀರಲಕೇರಿ ಗ್ರಾಮದ ಕಾಖಂಡಕಿ ಅವರ ಹೊಲದಲ್ಲಿ ಈ ಸಾಧನೆಯನ್ನು ಮಾಡಲಾಗಿದೆ. ಈ ಕೆಚ್ಚೆದೆಯ ಈ ಸಾಧಕಿ ಮಹಿಳೆಯ ಹೆಸರು ಅನಸೂಯಾ ಕಾಖಂಡಕಿ. ಓದಿದ್ದು ಎಸ್ಎಸ್ಎಲ್ಸಿ ಆಗಿದ್ರೂ ಬಾಲ್ಯದಿಂದಲೇ ಕೃಷಿ ಬಗ್ಗೆ ಇನ್ನಿಲ್ಲದ ಪ್ರೇಮ ಬೆಳೆಸಿಕೊಂಡು ಬಂದವರು. ಪತಿ ಶ್ರೀಶೈಲ ವೃತ್ತಿಯಲ್ಲಿ ಪೋಲಿಸ್. ಆದರೆ ಪತ್ನಿ ಅನುಸೂಯ ಮಾತ್ರ ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಬಂದವರು. ಹೀಗಿರುವಾಗ ಇವರ ಕಣ್ಣಿಗೆ ಬಿದ್ದಿದ್ದ ಗುಡ್ಡಕ್ಕೆ ಹೊಂದಿಕೊಂಡು ಇದ್ದ 4 ಎಕರೆ ಬಂಡೆಗಲ್ಲುಗಳು ಇದ್ದ ಜಮೀನು.
ಹೆಚ್ಚಿದ ಬಿಸಿಲ ಧಗೆ : ಕಾರ್ ಬಾನೆಟ್ ಮೇಲೆಯೇ ಚಪಾತಿ ಕಾಯಿಸಿದ ಮಹಿಳೆ, ವಿಡಿಯೋ
ಹಸಿರು ಸಿರಿಯಿಂದ ಕಂಗೊಳಿಸುತ್ತಿದೆ ಬಂಡೆಗಲ್ಲಗಳಿದ್ದ ಜಮೀನು
ರೈತ ಮಹಿಳೆ ಅನುಸುಯಾ ಹೇಗಾದರೂ ಮಾಡಿ ಈ ಜಮೀನು ಉಳುಮೆ ಮಾಡುವಂತಾಗಬೇಕೆಂಬ ಹಠತೊಟ್ಟರು. ಆದರೆ ಇವರ ಸಾಹಸಕ್ಕೆ ಮುಂದಾಗಿದ್ದನ್ನ ಕಂಡ ಕೆಲವರು ಇದು ಆಗದಿರೋ ಕೆಲಸ ಅಂತ ವ್ಯಂಗ್ಯವಾಡಿದ್ರು. ಆದ್ರೆ ಅನಸೂಯಾ ಬರೋಬ್ಬರಿ 4 ವರ್ಷಗಳ ಕಾಲ 3 ಲಕ್ಷ ರೂಪಾಯಿ ಖರ್ಚು ಮಾಡಿ ಜೆಸಿಬಿ ಮೂಲಕ ಎಲ್ಲ ಬಂಡೆಗಲ್ಲನ ಒಡೆಸೋಕೆ ಮುಂದಾದರು. ಹೀಗೆ ಒಡೆದ ಕಲ್ಲನ್ನ ಸಾಗಿಸಿ ಪಕ್ಕದಲ್ಲಿದ್ದ ಕೆರೆಯ ಮಣ್ಣನ್ನ ಈ ಜಮೀನಿಗೆ ಟ್ರ್ಯಾಕ್ಟರ್ ಮೂಲಕ ಹಾಕಿಸುವ ಕೆಲಸ ಮಾಡಿದರು. ಇದರ ಫಲವಾಗಿ ಇಂದು 4 ಎಕರೆ ಜಮೀನು ಸಂಪೂರ್ಣ ಫಲವತ್ತತೆಯಿಂದ ಕೂಡಿದ್ದು, ಎಲ್ಲವೂ ನೀರಾವರಿಯಾಗಿ ನೂರಾರು ಗಿಡ ಮರಗಳು ಸೇರಿದಂತೆ ಬಂಡೆಗಲ್ಲಗಳಿದ್ದ ಜಮೀನು ಈಗ ಹಸಿರು ಸಿರಿಯಿಂದ ಕಂಗೊಳಿಸುತ್ತಿದೆ.
ಜಮೀನು ಹದಗೊಳಿಸಿ ನೀರಾವರಿ ಮಾಡಿದ್ದೇ ತಡ 4 ಎಕರೆ ಪ್ರದೇಶದಲ್ಲಿ ಜನರು ಮೂಗಿನ ಮೇಲೆ ಬೆರೆಳಿಟ್ಟು ನೋಡಿಕೊಳ್ಳಬೇಕು ಅಂತಹ ಮಟ್ಟಿಗೆ ತಂದು ನಿಲ್ಲಿಸಿದ್ದಾರೆ. ಈ ಜಮೀನಿನಲ್ಲಿ ಈಗ 250 ಚಿಕ್ಕೂ, 50 ಪೇರಲ, 200 ತೆಂಗು, 800 ಹೆಬ್ಬೇವು, 800 ಸಾಗವಾಣಿ ಮರಗಳು, 60 ಕರಿಮೇವು ಗಿಡ , ನಾನಾ ನಮೂನೆಯ ಕಾಯಿಪಲ್ಯೆ ಸಹಿತ ಕಬ್ಬು ಸೇರಿದಂತೆ ಎಲ್ಲಿ ನೋಡಿದರೂ ಹಸಿರು ಕಾಣುವ ರೀತಿಯಲ್ಲಿ ಬೆಳೆಗಳು, ಹೂ ಹಣ್ಣಿನ ಗಿಡಗಳು ಬೆಳೆದು ನಿಂತಿವೆ.
ಮೂರನೇ ವಯಸ್ಸಿನಲ್ಲೇ ಮದುವೆ, ಹದಿನೆಂಟರಲ್ಲಿ ಗರ್ಭಕೋಶದ ಕ್ಯಾನ್ಸರ್, ಆ ದಿಟ್ಟ ಮಹಿಳೆಯೀಗ ಪೊಲೀಸ್
ಸಾಧಕಿ ರೈತ ಮಹಿಳೆ ಅನುಸೂಯಾಗೆ ಒಲಿದ ಬಂದ ಪ್ರಶಸ್ತಿಗಳು
ಮಾದರಿ ರೈತ ಮಹಿಳೆಯಾಗಿ ಹೊರ ಹೊಮ್ಮಿದ ಅನಸೂಯಾಗೆ ವಿವಿಧ ಸಂಘ ಸಂಸ್ಥೆಗಳು ಸನ್ಮಾನಿಸಿ, ವಿವಿಧ ಪುರಸ್ಕಾರ, ಪ್ರಶಸ್ತಿ ನೀಡಿದ್ದು ಅವುಗಳಲ್ಲಿ ವಿಜಯಪುರ-ಬಾಗಲಕೋಟೆ ಜಿಲ್ಲೆಯಿಂದ ಕೊಡಮಾಡುವ ಕೃಷ್ಣಾ ಒಡಲಿನ ಸಾಧಕಿ ಪ್ರಶಸ್ತಿ, ಧಾರವಾಡ ಕೃಷಿ ವಿವಿಯಿಂದ ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿ, ಸೂಪರ್ ಸ್ಟಾರ್ ಮಹಿಳೆ ಪ್ರಶಸ್ತಿ, ಕೃಷಿ ಇಲಾಖೆಯಿಂದ ಜಿಲ್ಲಾ ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿಗಳು ಅರಸಿ ಬಂದಿವೆ. ಇವರ ಸಾಧನೆ ಈಗ ಇತರರಿಗೆ ಮಾದರಿಯಾಗಿದೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.