ತನ್ನ 97ನೇ ವಯಸ್ಸಿನಲ್ಲೂ ಗಾಗಲ್ಸ್ ಧರಿಸಿ ಪ್ಯಾರಾಗ್ಲೈಡಿಂಗ್ ಮಾಡಿ, ಆಸೆ ಈಡೇರಿಸಿಕೊಳ್ಳಲು ವಯಸ್ಸು ಅಡ್ಡಿಯಾಗದು ಎಂದು ಸಾಬೀತು ಮಾಡಿರುವ ಈ ಅಜ್ಜಿ ನಮಗೆಲ್ಲ ಮಾದರಿ. ಯಾರು ಈ ಫ್ಲೈಯಿಂಗ್ ಅಜ್ಜಿ?
ನಾವು ಯಾವುದಾದರೂ ಕೆಲಸ ಮಾಡದೇ ಹೋದಾಗ ಅದಕ್ಕೆ ಸುಸ್ತು, ಕೈ ಕಾಲು ನೋವು, ವಯಸ್ಸು, ಆರೋಗ್ಯ ಹೀಗೆ ನೆಪ ಹುಡುಕಿ ಹೇಳುತ್ತೇವೆ. ಪ್ರತಿಯೊಂದು ಮಾಡದ ವಿಷಯಕ್ಕೂ ನಮ್ಮಲ್ಲಿ ನೆಪಗಳು ಸಿಗುತ್ತವೆ. ಆದರೆ, ನಮ್ಮ ಹಾಗೆಯೇ ನೆಪ ಹೇಳುತ್ತಾ ಕೂತಿದ್ದರೆ ಈ ಅಜ್ಜಿ ಈ ಜನ್ಮದಲ್ಲಿ ಹಾರುವ ತಮ್ಮ ಕನಸನ್ನು ಈಡೇರಿಸಿಕೊಳ್ಳಲು ಆಗುತ್ತಿರಲಿಲ್ಲ.
ಪುಣೆ-ನಿವಾಸಿ ಉಷಾ ಥೂಸೆ ಅವರು ತಮ್ಮ 97 ನೇ ವಯಸ್ಸಿನಲ್ಲಿ ಪ್ಯಾರಾಮೋಟರಿಂಗ್ ಮಾಡುವ ಮೂಲಕ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ. ಸನ್ ಗ್ಲಾಸ್ ಧರಿಸಿ ಹಾರಿದ ಅವರ ಫೋಟೋ, ವಿಡಿಯೋಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ. ಅವರ ಉತ್ಸಾಹ ಎಲ್ಲರಿಗೂ ಸ್ಪೂರ್ತಿಯಾಗಿದೆ. ಜೀವನೋತ್ಸಾಹ ಎಂದರೆ ಹೇಗಿರಬೇಕೆಂಬುದನ್ನು ಅಜ್ಜಿ ತೋರಿಸಿಕೊಟ್ಟಿದ್ದಾರೆ.
ಇಷ್ಟಕ್ಕೂ ಈ ಫ್ಲೈಯಿಂಗ್ ಅಜ್ಜಿ ಹಾರಿದ್ದು ಮಾತ್ರ ಸಾಹಸವಾಗಿ ನಾವು ನೋಡುತ್ತೇವೆ. ಆದರೆ, ಚಿಕ್ಕ ವಯಸ್ಸಿನಲ್ಲೇ ವಿಧವೆಯಾಗಿ 4 ಮಕ್ಕಳನ್ನು ಸಾಕಿ ಬೆಳೆಸಿದ ಅವರ ಬದುಕೇ ಒಂದು ಸಾಹಸವಾಗಿದೆ.
97 ನೇ ವಯಸ್ಸಿನಲ್ಲಿ, ಉಷಾ ತುಸೆ ಅವರು ಪುಣೆಯ ಸಾಹಸ ಕ್ರೀಡಾ ಕಂಪನಿ 'ಫ್ಲೈಯಿಂಗ್ ರೈನೋ ಪ್ಯಾರಾಮೋಟರಿಂಗ್' ಜೊತೆ ಪ್ಯಾರಾಮೋಟರಿಂಗ್‌ಗೆ ಹೋದ ವಿಡಿಯೋವನ್ನು ಕಂಪನಿಯು ಹಂಚಿಕೊಂಡಿದೆ. ಅದು ಶೀಘ್ರದಲ್ಲೇ ವೈರಲ್ ಆಯಿತು ಮತ್ತು ನೆಟಿಜನ್‌ಗಳ ಹೃದಯವನ್ನು ಗೆದ್ದಿತು. ಸೀರೆಯನ್ನು ಉಟ್ಟು, ಸನ್‌ಗ್ಲಾಸ್ ಧರಿಸಿ, ನಗುತ್ತಲೇ ಹಾರಾಡಿದ ಅಜ್ಜಿ ತನ್ನ ಆಸೆಯನ್ನು ಪೂರೈಸಿಕೊಂಡ ಸಂತಸದಲ್ಲಿದ್ದರು.
ಕುಟುಂಬ ಪ್ರವಾಸದಲ್ಲಿ, ಇತರರು ಪ್ಯಾರಾಮೋಟರಿಂಗ್ ಮಾಡುವುದನ್ನು ನೋಡಿದ ಅಜ್ಜಿ, ತಾವು ಕೂಡಾ ಹೀಗೆ ಹಾರಬೇಕೆಂದು ಎಣಿಸಿ ಕಡೆಗೂ ಆಸೆ ಈಡೇರಿಸಿಕೊಂಡರು. ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಕೂಡ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಅಜ್ಜಿಯನ್ನು 'ಹೀರೋ ಆಫ್ ದ ಡೇ' ಎಂದು ಕರೆದಿದ್ದಾರೆ.
ಮೂಲತಃ ನಾಗ್ಪುರದವರಾದ ಉಷಾ ಅವರು ಕೇಂದ್ರ ಅಬಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಆಕೆ ತನ್ನ ನಾಲ್ಕು ಹೆಣ್ಣು ಮಕ್ಕಳನ್ನು ಯುವ ವಿಧವೆಯಾಗಿ ಬೆಳೆಸಿದಳು, ಈ ಸಮಯದಲ್ಲಿ ಅನೇಕ ಸವಾಲುಗಳನ್ನು ಮೆಟ್ಟಿ ನಿಂತ ಅಜ್ಜಿಗೆ ಹಾರುವ ಸವಾಲು ದೊಡ್ಡದೆನಿಸಿರಲಿಕ್ಕಿಲ್ಲ.
ಉಷಾ ಅವರ ಸಾಧನೆಯನ್ನು ಮೆಚ್ಚುತ್ತಾ, ‘ಎಕ್ಸ್’ ಬಳಕೆದಾರರೊಬ್ಬರು ಹೇಳಿದ್ದಾರೆ,'ವಯಸ್ಸು ಕೇವಲ ಒಂದು ಸಂಖ್ಯೆ. ಗೆಲ್ಲಲು ಎಂದೂ ತಡವಲ್ಲ. ಮಿತಿಗಳನ್ನು ಧಿಕ್ಕರಿಸಬಹುದು ಮತ್ತು ಸಾಧ್ಯತೆಗಳಿಗೆ ಅಂತ್ಯವಿಲ್ಲ ಎಂಬ ಪಾಠವನ್ನು ನಾನು ಅಜ್ಜಿಯಿಂದ ಕಲಿತಿದ್ದೇನೆ. ನಾವು ಏನು ಮಾಡಲು ಸಾಧ್ಯವಿಲ್ಲ ಎಂಬುದರ ಕುರಿತು ಕೊರಗೋದು ನಿಲ್ಲಿಸೋಣ ಮತ್ತು ನಮ್ಮಲ್ಲಿರುವ ಅಪರಿಮಿತ ಸಾಮರ್ಥ್ಯವನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸೋಣ.'
ಅಜ್ಜಿಯ ಫಿಟ್ನೆಸ್ ಹಾಗೂ ಹೊಸದನ್ನು ಪ್ರಯತ್ನಿಸುವ ಚೈತನ್ಯ ಖಂಡಿತಾ ಪ್ರತಿಯೊಬ್ಬರಿಗೂ ಮಾದರಿಯಾಗಿದೆ.
It’s NEVER too late to fly.
She’s my hero of the day… pic.twitter.com/qjskoIaUt3