
ಹೆರಿಗೆ ಎನ್ನುವುದು ಮಹಿಳೆಯರ ಜೀವನದಲ್ಲಿ ಅತ್ಯಂತ ಅಮೂಲ್ಯವಾಗಿರುವ ಕ್ಷಣ. ಮತ್ತೊಂದು ಜೀವವನ್ನು ಈ ಭೂಮಿಯ ಮೇಲೆ ತರುವ ಘಳಿಗೆ ಅದು. ಅದೇ ವೇಳೆ ಹೆಣ್ಣಿಗೆ ಪುನರ್ಜನ್ಮ ಸಿಗುವ ಕ್ಷಣ ಕೂಡ. 9 ತಿಂಗಳು ಗರ್ಭದಲ್ಲಿ ಹೊತ್ತು, ಅದೆಷ್ಟೋ ಸಮಸ್ಯೆಗಳನ್ನು ಎದುರಿಸಿ, ಅದೆಷ್ಟೋ ಸಂಕಷ್ಟ, ದೇಹದಲ್ಲಿ ಆಗುತ್ತಿರುವ ಬದಲಾವಣೆಗೆ ಒಗ್ಗಿಕೊಳ್ಳುವ ಕಷ್ಟದ ನಡುವೆಯೂ ಮತ್ತೊಂದು ಜೀವವನ್ನು ನೋಡಲು ಹೆಣ್ಣು ಕಾತರಳಾಗಿರುವುದು ಒಂದೆಡೆಯಾದರೆ, ಹೆರಿಗೆಯ ಬಳಿಕವೂ ಆಕೆ ಅನುಭವಿಸುವ ನೋವು ಆ ಹೆಣ್ಣಿಗಷ್ಟೇ ಗೊತ್ತಿರಲು ಸಾಧ್ಯ.
ಒಂದಿಷ್ಟ ತಿಂಗಳು ಅಥವಾ ಒಂದು ವರ್ಷ ಪತ್ನಿಯ ಜೊತೆ ಸೇರಲು ಆಗದೇ ಹಲವು ಗಂಡಂದಿರು ಕೂಡ ಸಂಕಟ ಪಡುವುದು ಇದ್ದೇ ಇದೆ. ಇದೇ ಕಾರಣಕ್ಕೆ ಮಗುವಾದ ಬಳಿಕ ಪತ್ನಿಯ ಜೊತೆ ಸೇರಲು ಅವರು ಬಯಸುವುದು ಸಹಜ. ಆದರೆ ಹೀಗೆ ದಿಢೀರನೆ ಕಾಮಾತುರಕ್ಕೆ ಬಿದ್ದರೆ ಅದು ಹೆಣ್ಣಿನ ಮೇಲೆ ದೀರ್ಘ ಕಾಲದ ಪರಿಣಾಮ ಬೀರುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಹೆರಿಗೆ ಆದ ಮೇಲೆ ಒಂದಿಷ್ಟು ದಿನಗಳವರೆಗೆ ದೈಹಿಕ ಸಂಪರ್ಕ ನಡೆಸಬಾರದು. ಆದರೆ ಇದರ ಬಗ್ಗೆ ಓಪನ್ ಆಗಿ ಮಾತನಾಡುವವರು ಕಡಿಮೆಯೇ. ದಂಪತಿ ನಡುವೆ ಈ ವಿಷಯದ ಬಗ್ಗೆ ಚರ್ಚೆಯಾದರೂ, ಇದು ಹಲವರಿಗೆ ಇನ್ನೂ ಪ್ರಶ್ನೆಯಾಗಿಯೇ ಉಳಿಯುತ್ತದೆ. ಅದಕ್ಕೆ ಈಗ ಉತ್ತರ ನೀಡಿದ್ದಾರೆ ಖ್ಯಾತ ಸ್ತ್ರೀರೋಗ ತಜ್ಞರಾಗಿರುವ ಡಾ. ದೀಪ್ತಿ.
Delivery ಆಗಿ ಎಷ್ಟು ದಿನಗಳ ನಂತರ ಗಂಡ ಹೆಂಡತಿ ಸೇರಬಹುದು ಎನ್ನುವ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ. ಹೆರಿಗೆ ಆದ ಮೇಲೆ ಕನಿಷ್ಠ 40 ದಿನಗಳವರೆಗೆ ಹಲವು ಹೆಣ್ಣುಮಕ್ಕಳಿಗೆ ಬ್ಲೀಡಿಂಗ್ ಆಗುತ್ತಿರುತ್ತದೆ. ಕೆಲವೊಮ್ಮೆ ಅದು ಆ ಕ್ಷಣಕ್ಕೆ ಸ್ಟಾಪ್ ಆದಂತೆ ಕಂಡರೂ ಮತ್ತೆ ಕೆಲವು ದಿನಗಳ ಬಳಿಕ ಬ್ಲೀಡಿಂಗ್ ಆಗುವುದು ಇದೆ. ಇದು ಹೆಣ್ಣುಮಕ್ಕಳ ಗರ್ಭಕೋಶವನ್ನು ಶುಚಿ ಮಾಡುವ ನೈಸರ್ಗಿಕ ಕ್ರಿಯೆಯಾಗಿದೆ. ಈ ಸಂದರ್ಭದಲ್ಲಿ ರಕ್ತನಾಳಗಳೆಲ್ಲವೂ ತೆರೆದಿರುತ್ತವೆ. ಆದ್ದರಿಂದ ಈ ಸಂದರ್ಭದಲ್ಲಿ ದೈಹಿಕ ಸಂಪರ್ಕ ಮಾಡಲೇಬಾರದು ಎಂದಿದ್ದಾರೆ ವೈದ್ಯೆ.
ಅದಾದ ಬಳಿಕ ಪ್ರತಿ ಹೆಣ್ಣಿನಲ್ಲಿಯೂ ಬೇರೆ ಬೇರೆ ರೀತಿಯಲ್ಲಿ ಸಮಸ್ಯೆ ಬರುವ ಸಾಧ್ಯತೆ ಇದೆ. ನಾರ್ಮಲ್ ಡಿಲೆವರಿಯಾದರೆ ಯೋನಿಯಲ್ಲಿ ಹಾಗೂ ಸಿಸರಿನ್ ಆದರೆ ಹೊಟ್ಟೆಯ ಭಾಗದಲ್ಲಿ ಹೊಲಿಗೆ ಇರುವ ಕಾರಣ, ಈ ಸಂದರ್ಭದಲ್ಲಿ ದೈಹಿಕ ಸಂಪರ್ಕ ಏರ್ಪಟ್ಟರೆ ಅದು ಹೆಣ್ಣಿನ ಪ್ರಾಣಕ್ಕೂ ಅಪಾಯ ತಂದೊಡ್ಡಬಹುದು. ಆದ್ದರಿಂದ 40 ದಿನಗಳ ಬಳಿಕ ಪತ್ನಿಯ ದೈಹಿಕ, ಮಾನಸಿಕ ಆರೋಗ್ಯವನ್ನು ನೋಡಿಕೊಂಡು ಸಂಪರ್ಕ ಮಾಡಬಹುದು ಎಂದಿದ್ದಾರೆ ವೈದ್ಯೆ.
ವೈದ್ಯೆಯ ಸಲಹೆ ಕೇಳಲು ಈ ಲಿಂಕ್ ಕ್ಲಿಕ್ ಮಾಡಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.