
ಮುಂಬೈ: ಮಹಿಳೆಗೆ ಮಹಿಳೆಯೇ ಶತ್ರು ಎನ್ನುವುದು ತಲೆತಲಾಂತರಗಳಿಂದ ಬಂದಿರುವ ಮಾತು. ಹಾಗೆಂದು ಇದನ್ನು ಹಿರಿಯರೇನೂ ಸುಖಾಸುಮ್ಮನೇ ಮಾಡಿದ್ದಲ್ಲ. ಹತ್ತು ಹಲವು ಉದಾಹರಣೆಗಳನ್ನು ನೋಡಿಯೇ ಈ ಮಾತು ಚಾಲ್ತಿಯಲ್ಲಿ ಬಂದಿರುವುದು. ಮಹಿಳಾವಾದಿಗಳಿಗೆ ಈ ಮಾತು ಹಿಡಿಸದೇ ಹೋದರೂ, ಮನೆಯಿಂದ ಹಿಡಿದು ಕಚೇರಿಯವರೆಗೆ, ಚಿಕ್ಕ ಪುಟ್ಟ ಉದ್ಯೋಗ ಸ್ಥಳದಿಂದ ಹಿಡಿದು, ದೊಡ್ಡ ದೊಡ್ಡ ವಲಯಗಳಲ್ಲಿ, ಹಲವಾರು ಮಹಿಳೆಯರು ಇನ್ನೋರ್ವ ಮಹಿಳೆಯಿಂದಲೇ ಯಾತನೆ ಅನುಭವಿಸಿರುವುದು ಇದ್ದೇ ಇದೆ. ವಿಧಾನಗಳು ಬೇರೆಬೇರೆಯಾಗಿದ್ದರೂ, ಎಲ್ಲಾ ಕ್ಷೇತ್ರಗಳಲ್ಲಿಯೂ ಹಲವು ಮಹಿಳೆಯರು ಈ ಕೆಟ್ಟ ಅನುಭವವನ್ನು ಅನುಭವಿಸಿಯೇ ಇರುತ್ತಾರೆ. ಅದರಲ್ಲಿಯೂ ಕೆಲವು ಕ್ಷೇತ್ರಗಳಲ್ಲಿ ತಾವು ಉನ್ನತ ಮಟ್ಟಕ್ಕೆ ಏರಲು ಯಾವೆಲ್ಲಾ ಮಟ್ಟಿಗೆ ಮಹಿಳೆಯರು ಹೋಗುತ್ತಾರೆ ಎನ್ನುವ ಅನುಭವವೂ ಹಲವರಿಗೆ ಆಗಿದ್ದಿದೆ.
ಇದೀಗ ಅದರ ಬಗ್ಗೆಯೇ ಮಾತನಾಡಿದ್ದಾರೆ ಉದ್ಯಮಿ ಹಾಗೂ ನಟ ರಾಮ್ಚರಣ್ ಅವರ ಪತ್ನಿ ಉಪಾಸನಾ ಕಾಮಿನೇನಿ ಕೊನಿಡೇಲಾ (Upasana Kamineni Konidela). ಉಪಾಸನಾ ಅವರು ಸಾಕಷ್ಟು ಬಾರಿ ಮಹಿಳಾ ಸಬಲೀಕರಣದ ಬಗ್ಗೆ ಧ್ವನಿ ಎತ್ತುತ್ತಾರೆ, ಮಹಿಳೆಯರ ಸಬಲೀಕರಣದ ಬಗ್ಗೆ ಸಾಕಷ್ಟು ಕೆಲಸವನ್ನೂ ಮಾಡಿದ್ದಾರೆ. ಆದರೆ ಇದೀಗ ಅವರು ಕೆಲವು ಮಹಿಳೆಯರ ಬಗ್ಗೆ ಮಾತನಾಡಿದ್ದಾರೆ. ತಮ್ಮ ವೈಯಕ್ತಿಕ ಲಾಭಕ್ಕಾಗಿ ಅಥವಾ ಪುರುಷರನ್ನು ಮೆಚ್ಚಿಸಲು ಇತರ ಮಹಿಳೆಯರನ್ನು ಕೆಳಗಿಳಿಸುವ ಮಹಿಳೆಯರಿಗೆ ಅವರು ಬಲವಾದ ಸಂದೇಶವನ್ನು ಕಳುಹಿಸಿದ್ದಾರೆ. 'ಒಬ್ಬ ಮಹಿಳೆಯ ನೋವು ಎಂದಿಗೂ ಇನ್ನೊಬ್ಬ ಮಹಿಳೆಯ ಗೆಲುವಾಗಬಾರದು' ಎಂದಿರುವ ಉಪಸನಾ ಅವರು, ದುರ್ಬಲ ಪುರುಷರನ್ನು ಮೆಚ್ಚಿಸಲು ಇತರ ಮಹಿಳೆಯ ಬೆನ್ನಿಗೆ ಇರಿಯುವುದನ್ನು ನಿಲ್ಲಿಸಿ ಎಂದು ಹೆಂಗಳೆಯರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ, ಒಬ್ಬರನ್ನೊಬ್ಬರು ನಿಜವಾಗಿಯೂ ಬೆಂಬಲಿಸುವ, ಆಚರಿಸುವ ಮತ್ತು ಪ್ರೇರೇಪಿಸುವ ಮಹಿಳೆಯರಿಗಿಂತ ಹೆಚ್ಚಿನ ಸಬಲೀಕರಣ ಇನ್ನೊಂದಿಲ್ಲ ಎಂದು ಉಪಾಸನಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉಪಾಸನಾ ಸ್ಪಷ್ಟವಾಗಿ "ಒಬ್ಬ ಮಹಿಳೆಯ ನೋವು ಎಂದಿಗೂ ಇನ್ನೊಬ್ಬ ಮಹಿಳೆಯ ಗೆಲುವಾಗಬಾರದು. ಪರಸ್ಪರರ ಸೋಲುಗಳಲ್ಲಿ ಸಂತೋಷವನ್ನು ಕಂಡುಕೊಳ್ಳುವ ಮನಸ್ಥಿತಿಯನ್ನು ಮಹಿಳೆಯರು ಬದಲಾಯಿಸಬೇಕು. ದುರ್ಬಲ ಪುರುಷರನ್ನು ಮೆಚ್ಚಿಸಲು ಬೆನ್ನಿಗೆ ಇರಿಯುವುದನ್ನು ನಿಲ್ಲಿಸಿ ಎನ್ನುವ ಮೂಲಕ ವೈಯಕ್ತಿಕ ಲಾಭಕ್ಕಾಗಿ ಅಥವಾ "ದುರ್ಬಲ ಪುರುಷ"ನನ್ನು ಸಮಾಧಾನಪಡಿಸಲು ಇತರ ಮಹಿಳೆಯರನ್ನು ಬಳಸುವ ಅಥವಾ ತಡೆಯುವ ಮಹಿಳೆಯರಿಗೆ ಅವರು ಕಠಿಣ ಎಚ್ಚರಿಕೆ ನೀಡಿದ್ದಾರೆ.
ನಿಜವಾದ ಸಬಲೀಕರಣವು ಪರಸ್ಪರ ಸ್ಪರ್ಧಿಸುವುದರಲ್ಲಿ ಅಥವಾ ಕೆಳಕ್ಕೆ ಎಳೆಯುವುದರಲ್ಲಿ ಅಲ್ಲ, ಆದರೆ ಒಟ್ಟಿಗೆ ಎದ್ದು ಪರಸ್ಪರ ಬೆಂಬಲಿಸುವುದರಲ್ಲಿ ಅಡಗಿದೆ ಎಂದು ಉಪಾಸನಾ ಒತ್ತಿ ಹೇಳಿದ್ದಾರೆ. ಸಾಮಾಜಿಕ ಕಾರ್ಯಕರ್ತೆ ಸುನೀತಾ ಕೃಷ್ಣನ್ ಅವರ ಕೆಲಸವನ್ನು ಉಲ್ಲೇಖಿಸಿ, ಸಮಾಜದಲ್ಲಿ ಮಹಿಳೆಯರು ಎದುರಿಸುತ್ತಿರುವ ಅನ್ಯಾಯ ಅಥವಾ ಶೋಷಣೆಯು ಇತರ ಮಹಿಳೆಯರ ಪಾತ್ರ ಅಥವಾ ಸ್ವಾರ್ಥದಿಂದಾಗಿ ಸಂಭವಿಸುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು, ಇದನ್ನು ತುರ್ತಾಗಿ ನಿಲ್ಲಿಸಬೇಕಾಗಿದೆ ಎಂದರು. ನಮ್ಮ ಸಹಾಯದ ಅಗತ್ಯವಿರುವ ಅನೇಕ ಮಹಿಳೆಯರು ಇದ್ದಾರೆ. ಆದರೆ ನನ್ನ ಸಂಶೋಧನೆಯು, ಇತರ ಮಹಿಳೆಯರನ್ನು ತುಳಿಯುವ ಮಹಿಳೆಯರ ಬಗ್ಗೆ ತೋರಿಸುತ್ತದೆ ಎಂದಿರುವ ಉಪಾಸನಾ, ನಿಮಗೆ ನನ್ನ ಎಚ್ಚರಿಕೆ ಇದು: ನಿಮ್ಮ ಯಶಸ್ಸಿಗಾಗಿ ಅಥವಾ ದುರ್ಬಲ ಪುರುಷನನ್ನು ಮೆಚ್ಚಿಸಲು ನೀವು ಮಹಿಳೆಯ ಮೇಲೆ ಕಾಲಿಡಬಹುದು ಎಂದು ಭಾವಿಸಬೇಡಿ. ನಮ್ಮ ಹೆಚ್ಚಿನ ಮಕ್ಕಳು ಆ ಪರಿಸ್ಥಿತಿಯಲ್ಲಿದ್ದಾರೆ. ಏಕೆಂದರೆ ಇತರ ಮಹಿಳೆಯರು ತಮ್ಮ ಸ್ವಂತ ಸಂತೋಷವನ್ನು ಪಡೆಯಲು ಮಹಿಳೆಯರಿಗೆ ಅನ್ಯಾಯ ಮಾಡಿದ್ದಾರೆ ಎಂದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.