
ಮಹಿಳೆ ಎಂದರೆ ಹಾಗೆ, ಮಹಿಳೆ ಎಂದರೆ ಹೀಗೆ.... ಅವಳು ಕ್ಷಮಯಾ ಧರಿತ್ರಿ, ಅವಳು ಭೂಮಿ, ಅವಳೇ ದೇವತೆ... ಮಹಿಳೆ ಎಂದರೆ ಕೇವಲ ವ್ಯಕ್ತಿಯಲ್ಲ; ಅವಳು ಶಕ್ತಿ, ಧೈರ್ಯ, ಪ್ರೀತಿ ಮತ್ತು ಕಾಳಜಿಯ ಪ್ರತೀಕ. ತಾಯಿಯಾಗಿ, ಸಹೋದರಿಯಾಗಿ, ಮಗಳಾಗಿ ಕುಟುಂಬವನ್ನು ಮುನ್ನಡೆಸುತ್ತಾ ಸಮಾಜದ ಬದುಕಿಗೆ ಬಲ ತುಂಬುವ ದೇವತೆ... ಎನ್ನುತ್ತಲೇ ಸ್ತ್ರೀ ಎಂದರೆ ಅಷ್ಟೇ ಸಾಕೆ... ಎಂದೆಲ್ಲಾ ಹೇಳುವ ಮೂಲಕ ಮಹಿಳೆಯರನ್ನು ಹೊಗಳಿ ಅಟ್ಟಕ್ಕೇರಿಸುವುದು ತಲೆತಲಾಂತರಗಳಿಂದಲೂ ನಡೆದೇ ಬಂದಿದೆ. ಹಿಂದೂ ಸಂಪ್ರದಾಯದಲ್ಲಿ ಮಹಿಳೆಯರಿಗೆ ಕೊಡುವ ಗೌರವವನ್ನೂ ಇದು ಸೂಚಿಸುತ್ತದೆ ಹೌದಾದರೂ, ಒಂದು ಹಂತದಲ್ಲಿ ಅಸಹನೀಯ ಎನ್ನುವಷ್ಟರ ಮಟ್ಟಿಗೆ ಹೊಗಳಿ ಹೊನ್ನಶೂಲಕ್ಕೆ ಏರಿಸಿ, ಮಹಿಳೆಯರಿಂದಲೇ ಹೆಚ್ಚಿನದ್ದನ್ನು ಬಯಸುವುದು ಇದ್ದೇ ಇದೆ. ನಮ್ಮದು ಪುರುಷ ಪ್ರಧಾನ ಸಮಾಜ ಎಂದು ಬೀದಿಬೀದಿಗಳಲ್ಲಿ ಮಹಿಳೆಯರು ಪ್ರತಿಭಟನೆಗೆ ಇಳಿಯುವುದು ಒಂದೆಡೆಯಾದರೆ, ಹೆಣ್ಣನ್ನು ಹೊಗಳಿ ಹೊಗಳಿ ಅಟ್ಟಕ್ಕೇರಿಸುವುದು ಇನ್ನೊಂದೆಡೆ. ಅದರಲ್ಲಿಯೂ ಮನೆಗೆಲಸ, ಕಚೇರಿಯ ಕೆಲಸ, ಕುಟುಂಬದ ಜವಾಬ್ದಾರಿ, ಮಕ್ಕಳ ಜವಾಬ್ದಾರಿ, ಮನೆಯಲ್ಲಿ ಅತ್ತೆ-ಸೊಸೆ ಮತ್ತಿತರ ಜವಾಬ್ದಾರಿ ಎಲ್ಲವನ್ನೂ ಹೆಣ್ಣು ಹೊತ್ತುಕೊಳ್ಳುವ ಅನಿವಾರ್ಯತೆ ಎದುರಾದಾಗ ಆಕೆಯ ಕಷ್ಟವನ್ನು ನೋಡುವ ಬದಲು ಸ್ತ್ರೀ ಎಂದರೆ ಅಷ್ಟೇ ಸಾಕೆ... ಎನ್ನುವ ಮಾತುಗಳಾಗಿ ಆಕೆಯ ಬಾಯಿ ಮುಚ್ಚಿಸಲಾಗುತ್ತದೆ ಎನ್ನುವ ಗಂಭೀರ ಆರೋಪವನ್ನೂ ಕೆಲವು ಸ್ತ್ರೀವಾದಿಗಳು ಮಾಡುವುದು ಇದೆ.
ಇದೇ ಕಾರಣಕ್ಕೆ ಆಕೆಯನ್ನು ಮದರ್ ಇಂಡಿಯಾ ಎಂದು ಹೊಗಳುವುದು ಇದೆ. ಆದರೆ ಇವೆಲ್ಲಾ ಕೆಲಸಗಳನ್ನು ನಿಭಾಯಿಸಿ ಸೋತು ಸುಣ್ಣಗಾದರೆ, ಅಥವಾ ಎಲ್ಲರನ್ನೂ ಕೇರ್ ಮಾಡುವಷ್ಟರಲ್ಲಿಯೇ, ತನ್ನನ್ನು ತಾನು ಕೇರ್ ಮಾಡಿಕೊಳ್ಳುವಷ್ಟು ಪುರುಸೊತ್ತು ಇಲ್ಲದೇ ದಪ್ಪಗಾದರೆ ಅಥವಾ ಸಣ್ಣಗಾದರೆ ಬಾಡಿ ಷೇಮಿಂಗ್ ಮಾಡುವವರು ಕೂಡ ಇದೇ ಮಂದಿನೆ. ಅದರಲ್ಲಿಯೂ ಸೆಲೆಬ್ರಿಟಿಗಳೆಂದರೆ ತೆಳ್ಳಗೆ, ಬೆಳ್ಳಗೆ ಇರಬೇಕು ಎಂದು ಬಯಸುವ ಅಭಿಮಾನಿಗಳು ಆಕೆ ಮಗುವಾದ ಮೇಲೆ ಸಹಜವಾಗಿ ದಪ್ಪವಾದರೂ, ಬಾಡಿ ಷೇಮಿಂಗ್ ಮಾಡಿ ಆಕೆಯನ್ನು ಅದೆಷ್ಟು ಮಟ್ಟಿಗೆ ಕುಗ್ಗಿಸುತ್ತಾರೆ ಎನ್ನುವುದು ಇತ್ತೀಚಿನ ದಿನಗಳಲ್ಲಿಯೇ ಸೋಷಿಯಲ್ ಮೀಡಿಯಾಗಳಲ್ಲಿ ಕಂಡುಬರುತ್ತಿವೆ. ಇದರ ಅರ್ಥ ಆಕೆ ನೋಡಲು ಮಿಸ್ ಇಂಡಿಯಾ ಆಗಿರಬೇಕು.
ಕಾರ್ಯಕ್ರಮವೊಂದರಲ್ಲಿ ಇದನ್ನೇ ಮಾರ್ಮಿಕವಾಗಿ ನುಡಿದಿದ್ದಾರೆ ನೇರ ನುಡಿಗಳಿಂದಲೇ ಫೇಮಸ್ ಆಗಿರೋ ನಟಿ ಟ್ವಿಂಕಲ್ ಖನ್ನಾ. ಈ ಜನರಿಗೆ ಮಹಿಳೆ ಕೆಲಸದಲ್ಲಿ ಮದರ್ ಇಂಡಿಯಾ ಆಗಿರಬೇಕು, ಆದರೆ ನೋಡಲು ಮಿಸ್ ಇಂಡಿಯಾ ಆಗಿರಬೇಕು ಅಂತಾರೆ. ಹೀಗಾದರೆ ಹೇಗೆ ಎಂದು ತುಂಬಾ ಸೂಚ್ಯವಾಗಿ ಬಾಡಿ ಷೇಮಿಂಗ್ ಮಾಡುವವರ ವಿರುದ್ಧ ಮಾತನಾಡಿದ್ದಾರೆ. ಈಚೆಗೆ ನಟಿ ಐಶ್ವರ್ಯ ರೈ ಸೇರಿದಂತೆ ಮೊನ್ನೆ ಮೊನ್ನೆಯಷ್ಟೇ ನಟಿ ಕತ್ರಿನಾ ಕೈಫ್ ಅವರ ಬಾಡಿ ಷೇಮಿಂಗ್ ಕುರಿತು ಪರೋಕ್ಷವಾಗಿ ಮಾತನಾಡಿದ ನಟಿ ಟ್ವಿಂಕಲ್ ಖನ್ನಾ, ಮಹಿಳೆಯರ ಸಮಸ್ಯೆಯ ಬಗ್ಗೆ ಒಂದೇ ಒಂದು ಲೈನ್ನಲ್ಲಿ ಪಂಚಿಂಗ್ ಡೈಲಾಗ್ ಹೇಳಿದ್ದಾರೆ.
ಆಗ ಅಲ್ಲಿದ್ದವರೆಲ್ಲಾ ಇದನ್ನು ಕೇಳಿ ನಕ್ಕಿದ್ದಾರೆ. ಆ ಕ್ಷಣದಲ್ಲಿ ಅದು ಹಾಸ್ಯ ಎನ್ನಿಸಿರಬಹುದು. ಆದರೆ ಇದು ಬಹುತೇಕ ಹೆಣ್ಣುಮಕ್ಕಳ ರಿಯಲ್ ಲೈಫ್ ಸ್ಟೋರಿ ಎಂದು ಕಮೆಂಟ್ಗಳಲ್ಲಿ ನೆಟ್ಟಿಗರು ಹೇಳುತ್ತಿದ್ದಾರೆ. ಈ ಕಮೆಂಟ್ಸ್ ನೋಡಿದರೆ, ಅದೆಷ್ಟು ಮಹಿಳೆಯರು ಇಂಥ ನೋವನ್ನು ಅನುಭವಿಸುತ್ತಿದ್ದಾರೆ ಎನ್ನುವುದು ತಿಳಿಯುತ್ತದೆ. ಹೆಣ್ಣನ್ನು ಹಾಡಿ ಹೊಗಳುವ ಜನರಿಗೆ ಆಕೆ ಮದರ್ ಇಂಡಿಯಾನೂ ಆಗಿರಬೇಕು, ಮಿಸ್ ಇಂಡಿಯಾನೂ ಆಗಿರಬೇಕು ಎಂದು ಬಯಸುವುದು ಎಷ್ಟು ಸರಿ ಎಂಬುದಾಗಿ ಕಮೆಂಟ್ಗಳಲ್ಲಿ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.