
ತಿಂಗಳಿಗೆ ಸರಿಯಾಗಿ ಮುಟ್ಟಾಗಿಲ್ಲ ಎಂದಾಗ ಮಹಿಳೆಯರಿಗೆ ಟೆನ್ಷನ್ ಜಾಸ್ತಿಯಾಗುತ್ತೆ. ಅಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ಮಹಿಳೆಯರು ಒಂದೆರಡು ದಿನ ಹೆಚ್ಚು ಕಡಿಮೆ ಆದ್ರೂ ತಲೆಬಿಸಿ ಮಾಡಿಕೊಳ್ತಾರೆ. ಅನಗತ್ಯ ಗರ್ಭಧಾರಣೆ ಭಯ ಅವರನ್ನು ಕಾಡುತ್ತದೆ. ಸಾಮಾನ್ಯವಾಗಿ ಪ್ರತಿಯೊಬ್ಬ ಮಹಿಳೆಯ ಋತುಚಕ್ರದ ಅವಧಿ ಭಿನ್ನವಾಗಿರುತ್ತದೆ. 21 ದಿನಗಳಿಂದ 28 ದಿನಗಳೊಳಗೆ ಪಿರಿಯಡ್ಸ್ ಆಗೋದು ಮಾಮೂಲಿ. ಗರ್ಭ ಧರಿಸಿದಾಗ ಪಿರಿಯಡ್ಸ್ ಆಗೋದಿಲ್ಲ. ಇದು ಎಲ್ಲ ಮಹಿಳೆಯರಿಗೆ ತಿಳಿದಿರುವ ಸಂಗತಿ. ಆದ್ರೆ ಬರೀ ಗರ್ಭಧಾರಣೆಯಿಂದ ಮಾತ್ರವಲ್ಲ ಬೇರೆ ಕಾರಣಗಳಿಂದ ಕೂಡ ಮಹಿಳೆಯರಿ ಪಿರಿಯಡ್ ಮಿಸ್ ಆಗುತ್ತೆ.
ಮುಟ್ಟಿ (Periods) ನ ಮೊದಲ ಕೆಲವು ವರ್ಷ ಅನಿಯಮಿತ ಪಿರಿಯಡ್ಸ್ ಬರುವುದು ಸಹಜ. ಹಾರ್ಮೋನ್ (Hormones) ನಲ್ಲಿ ಬದಲಾವಣೆ ಸೇರಿದಂತೆ ಅನೇಕ ವಿಷಯಗಳು ಅನಿಯಮಿತ ಮುಟ್ಟಿಗೆ ಕಾರಣವಾಗುತ್ತವೆ. ಆದ್ರೆ ಒಂದು ನಿರ್ದಿಷ್ಟ ಅವಧಿಯ ನಂತರ ಪಿರಿಯಡ್ಸ್ ಮಿಸ್ ಆಗುವುದು ಒಳ್ಳೆಯ ಸೂಚನೆಯಲ್ಲ. ಹಾರ್ಮೋನ್ ಏರುಪೇರು ಸಮಸ್ಯೆಗೆ ಕಾರಣವಾಗಬಹುದು. ಪಿರಿಯಡ್ಸ್ ಮಿಸ್ ಆಗೋಕೆ ಅನೇಕ ಕಾರಣವಿದೆ. ನಾವಿಂದು ಬೇರೆ ಯಾವೆಲ್ಲ ಕಾರಣಕ್ಕೆ ಪಿರಿಯಡ್ಸ್ ಮಿಸ್ ಆಗುತ್ತೆ ಎಂಬುದನ್ನು ನಿಮಗೆ ಹೇಳ್ತೆವೆ.
ಈ ಕಾರಣಕ್ಕೆ ಮಿಸ್ ಆಗುತ್ತೆ ಪಿರಿಯಡ್ಸ್ :
ಗರ್ಭನಿರೋಧಕ (Contraceptive) ಮಾತ್ರೆಗಳ ಸೇವನೆ : ಇಂಟರ್ನ್ಯಾಷನಲ್ ಜರ್ನಲ್ ಆಫ್ ವುಮೆನ್ಸ್ ಡರ್ಮಟಾಲಜಿ ಪ್ರಕಾರ, ಗರ್ಭನಿರೋಧಕ ಮಾತ್ರೆ (Pills) ಕೂಡ ನಿಮ್ಮ ಪಿರಿಯಡ್ಸ್ ನಲ್ಲಿ ಏರುಪೇರಾಗಲು ಕಾರಣ. ದೀರ್ಘಕಾಲ ನೀವು ಗರ್ಭನಿರೋಧಕ ಮಾತ್ರೆ ಸೇವನೆ ಮಾಡ್ತಿದ್ದರೆ ಇದು ಅನಿಯಮಿತ ಮುಟ್ಟಿಗೆ ಕಾರಣವಾಗುತ್ತದೆ. ಗರ್ಭನಿರೋಧಕ ಮಾತ್ರೆ ವಿವಿಧ ಹಾರ್ಮೋನುಗಳ ಮೇಲೆ ಪರಿಣಾಮ ಬೀರುತ್ತದೆ. ಇದು ನಿಮ್ಮ ಮುಟ್ಟಿನ ಮೇಲೂ ಪರಿಣಾಮ ಬೀರುತ್ತದೆ. ದೀರ್ಘಕಾಲ ಗರ್ಭನಿರೋಧಕ ಮಾತ್ರೆ ಸೇವನೆ ಮಾಡುವ ಕೆಲವರಿಗೆ ಅತಿಹೆಚ್ಚು ರಕ್ತಸ್ರಾವವಾಗುತ್ತದೆ. ಮತ್ತೆ ಕೆಲವರಿಗೆ ಅತಿ ಕಡಿಮೆ ಬ್ಲೀಡಿಂಗ್ ಆಗುತ್ತದೆ. ಕೆಲವೊಮ್ಮೆ ಮುಟ್ಟಿನ ಸಮಯವನ್ನು ನಿಯಮಿತಗೊಳಿಸಲು ವೈದ್ಯರು ಗರ್ಭನಿರೋಧಕ ಮಾತ್ರೆ ನೀಡಿರ್ತಾರೆ. ಯಾವುದೇ ಮಾತ್ರೆ ಸೇವನೆ ಮೊದಲು ನೀವು ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು.
ಒತ್ತಡ (Stress) : ಒತ್ತಡ ಪಿರಿಯಡ್ಸ್ ಮಿಸ್ ಆಗಲು ಮುಖ್ಯ ಕಾರಣಗಳಲ್ಲಿ ಒಂದು. ಕೆಲಸದ ಹೊರೆ ಹೆಚ್ಚಿದ್ದರೆ ಒತ್ತಡ ಹೆಚ್ಚಾಗುತ್ತದೆ. ಇದು ಪಿರಿಯಡ್ಸ್ ಮೇಲೆ ಪರಿಣಾಮ ಬೀರುತ್ತದೆ. ಅತಿಯಾದ ಒತ್ತಡವು ಮನಸ್ಸು ಮತ್ತು ದೇಹ ಎರಡರ ಮೇಲೂ ಪರಿಣಾಮ ಬೀರುತ್ತದೆ. ಹೆಚ್ಚಿನ ಒತ್ತಡವು ಮೆದುಳಿನ ಹೈಪೋಥಾಲಮಸ್ ಮೇಲೆ ಪರಿಣಾಮ ಬೀರುತ್ತದೆ. ಇದ್ರಿಂದ ಅದ್ರ ಕಾರ್ಯನಿರ್ವಹಣೆಯಲ್ಲಿ ಬದಲಾವಣೆಯಾಗುತ್ತದೆ. ಮುಟ್ಟು ಸಮಯಕ್ಕೆ ಸರಿಯಾಗಿ ಆಗ್ಬೇಕೆಂದ್ರೆ ಒತ್ತಡವನ್ನು ನಿಯಂತ್ರಿಸುವುದು ಮುಖ್ಯವಾಗುತ್ತದೆ. ಅನವಶ್ಯಕ ವಿಷ್ಯಕ್ಕೆ ಒತ್ತಡ ಮಾಡಿಕೊಳ್ಳುವ ಬದಲು ಧ್ಯಾನ, ಯೋಗದ ಮೂಲಕ ಟೆನ್ಷನ್ ನಿಯಂತ್ರಿಸಲು ಕಲಿಯಿರಿ.
ತೂಕದಲ್ಲಿ ಬದಲಾವಣೆ (Changes in Weight) : ಅನೇಕರಿಗೆ ಏಕಾಏಕಿ ತೂಕ ಏರಿಕೆಯಾಗುತ್ತದೆ. ಮತ್ತೆ ಕೆಲವರಿಗೆ ಒಂದೇ ಸಮನೆ ತೂಕ ಇಳಿದಿರುತ್ತದೆ. ಈ ಏರಿಕೆ ಹಾಗೂ ಇಳಿಕೆ ಎರಡೂ ನಿಮ್ಮ ಮುಟ್ಟಿನ ಮೇಲೆ ಪರಿಣಾಮ ಬೀರುತ್ತದೆ. ತೂಕ ಏರಿಕೆ ಹಾಗೂ ಕಡಿಮೆಯಾಗುವುದು ಸಂತಾನೋತ್ಪತ್ತಿ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.
Winter Care: ಚಳಿಯಲ್ಲಿ ಒಳ ಉಡುಪಿನ ಬಗ್ಗೆ ಇರಲಿ ಹೆಚ್ಚಿನ ಎಚ್ಚರ
ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOS) : ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್‌ನ ಮೊದಲ ಲಕ್ಷಣವೆಂದರೆ ಅನಿಯಮಿತ ಮುಟ್ಟು. ಆಂಡ್ರೊಜೆನ್ ಹಾರ್ಮೋನ್ ಮಟ್ಟದಲ್ಲಿನ ಹೆಚ್ಚಳದಿಂದಾಗಿ ಪ್ರತಿ ತಿಂಗಳು ಸಂಭವಿಸುವ ಅಂಡೋತ್ಪತ್ತಿ ಕಂಡುಬರುವುದಿಲ್ಲ. ಇದನ್ನು ಹೈಪರಾಂಡ್ರೊಜೆನಿಸಂ ಎಂದೂ ಕರೆಯುತ್ತಾರೆ.
Women's Health: ಸಿಸೇರಿಯನ್ ಆಗಿ ಥಟ್ಟಂತ ಚೇತರಿಸಿಕೊಳ್ಳಲು ಈ ಮನೆಮದ್ದು ಮಾಡಿ
ಗರ್ಭಾಶಯದ ಪಾಲಿಪ್ಸ್ ಅಥವಾ ಫೈಬ್ರಾಯ್ಡ್ : ಗರ್ಭಾಶಯದಲ್ಲಿನ ಫೈಬ್ರಾಯ್ಡ್ ಗಳು ಅಥವಾ ಎಂಡೊಮೆಟ್ರಿಯಲ್ ಪಾಲಿಪ್‌ಗಳ ಕಾರಣದಿಂದಾಗಿ ಪಿರಿಯಡ್ಸ್ ನಿಲ್ಲುತ್ತದೆ. ಪಾಲಿಪ್ಸ್ ಹೆಚ್ಚು ಸಂಕೀರ್ಣ ಸಮಸ್ಯೆಯಾಗಿದೆ. ಮುಟ್ಟು ಅನಿಯಮಿತವಾಗಿದ್ದರೆ ಅದನ್ನು ನಿರ್ಲಕ್ಷ್ಯಿಸಬಾರದು. ಕಾರಣ ತಿಳಿದು ಚಿಕಿತ್ಸೆ ಶುರು ಮಾಡಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.