Mothers Day 2022: ಅಮ್ಮನನ್ನು ಖುಷಿಪಡಿಸಲು ಈ ರೀತಿ ಸರ್‌ಪ್ರೈಸ್ ನೀಡಿ

By Suvarna NewsFirst Published May 7, 2022, 11:52 AM IST
Highlights

ತಾಯಿ, ಅಮ್ಮ, ಜನನಿ, ಮಾತೆ, ಅವ್ವ, ಅಬ್ಬೆ ಆಕೆಗೆ ಹೆಸರು ಹಲವು. ಆದರೆ ಪ್ರೀತಿ ಮಾತ್ರ ಸಾಗರಕ್ಕಿಂತ ಅಗಾಧವಾದುದು. ಮಮತೆ ಮಾತಿಗೂ ಸಿಲುಕದ್ದು. ಮೇ 8 ರಂದು ತಾಯಂದಿರ ದಿನ (Mother's Day). ನಿಮಗಾಗಿ ಎಲ್ಲವನ್ನೂ ಮಾಡಿರುವ ಅಮ್ಮನಿಗಾಗಿ ನೀವೇನು ಮಾಡಬಹುದು ?

ಮೇ 8 ರಂದು ತಾಯಂದಿರ ದಿನ (Mother's Day) ಬರುತ್ತದೆ. ಮಕ್ಕಳಿಗಾಗಿ ಜೀವವನ್ನೇ ಮುಡಿಪಾಗಿರುವ ತಾಯಂದಿರು ಎಲ್ಲರ ಜೀವನದಲ್ಲೂ ಪ್ರಮುಖ ಪಾತ್ರ ವಹಿಸುತ್ತಾರೆ. ಹೀಗಾಗಿಯೇ ಪ್ರಪಂಚದಾದ್ಯಂತ ಮದರ್ಸ್ ಡೇ ಆಚರಿಸಲಾಗುತ್ತದೆ. ಮಗುವನ್ನು ಗರ್ಭದಲ್ಲಿ ಹೊತ್ತ ತಾಯಿ ಅಲ್ಲಿಂದ ತೊಡಗಿ ಜೀವನಪೂರ್ತಿ ಮಗುವಿಗಾಗಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಳ್ಳುತ್ತಾಳೆ. ಮಕ್ಕಳ (Children) ಖುಷಿಯಲ್ಲೇ ತನ್ನ ಖುಷಿಯನ್ನು ಕಂಡುಕೊಳ್ಳುತ್ತಾಳೆ. ಅವರಿಗಾಗಿ ಜೀವನದಲ್ಲಿ ಯಾವುದೇ ತ್ಯಾಗವನ್ನು ಮಾಡಲು ಸಿದ್ಧವಾಗುತ್ತಾಳೆ. ಇಂಥಾ ತಾಯಿಗಾಗಿ ಒಂದು ದಿನವಲ್ಲ, ವರ್ಷ ಪೂರ್ತಿ ಮೀಸಲಿಟ್ಟರೂ ಕಡಿಮೆಯೇ.  ತಾಯಂದಿರ ದಿನದಂದು ಅಮ್ಮನನ್ನು ಖುಷಿಪಡಿಸಲು (Happy) ಮಕ್ಕಳು ಏನೇನು ಮಾಡಬಹುದು ?

ತೋಟಗಾರಿಕೆಗೆ ನೆರವಾಗಿ
ನಿಮ್ಮ ತಾಯಿ ತೋಟಗಾರಿಕೆಯ (Gardening) ನ್ನು ಪ್ರೀತಿಸುತ್ತಿದ್ದರೆ ನಿಮ್ಮ ಹಿತ್ತಲನ್ನು ಹೆಚ್ಚು ಸುಂದರವಾಗಿಸುವುದಕ್ಕಿಂತ ಉತ್ತಮವಾದ ಉಡುಗೊರೆ ಇನ್ನೊಂದಿಲ್ಲ. ಅವುಗಳನ್ನು ಆರೈಕೆ ಮಾಡಲು ಕೈಬರಹದ ಸೂಚನೆಗಳ ಚಾರ್ಟ್‌ನೊಂದಿಗೆ ಹೊಸ ಹೂವು, ಸಸ್ಯ ಅಥವಾ ಗಿಡಮೂಲಿಕೆಗಳ ಸಸಿಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ನೀವು ಪ್ರಾರಂಭಿಸಬಹುದು. ಅವರ ದಿನವನ್ನು ವಿಶೇಷವಾಗಿಸಲು ನೀವು ನಿಜವಾದ ಪ್ರಯತ್ನಗಳನ್ನು ಮಾಡಿದ್ದೀರಿ ಎಂದು ಇದು ತೋರಿಸುತ್ತದೆ. ಇದಲ್ಲದೆ, ಸಸ್ಯಗಳು ಅರಳಿದಾಗ, ಅವರು ಖಂಡಿತವಾಗಿಯೂ ನಿಮ್ಮನ್ನು ನೆನಪಿಸುತ್ತಾರೆ. ನಿಮ್ಮ ತಾಯಿಯೊಂದಿಗೆ ನೀವು ಇಡೀ ದಿನವನ್ನು ಯೋಜಿಸಬಹುದು ಮತ್ತು ಅವರ ವೈಯಕ್ತಿಕ ಉದ್ಯಾನವನ್ನು ನೋಡಿಕೊಳ್ಳಬಹುದು - ಹೊಸ ಸಸಿಗಳನ್ನು ನೆಡಲು ಸಹಾಯ ಮಾಡಿ, ಕಳೆಗಳನ್ನು ತೊಡೆದುಹಾಕಲು, ಸಸ್ಯಗಳಿಗೆ ನೀರುಣಿಸಲು ಮೊದಲಾದ ರೀತಿಯಲ್ಲಿ ದಿನವನ್ನು ಕಳೆಯಬಹುದು.

Mothers Day 2022: ತಾಯಂದಿರ ದಿನವನ್ನು ವಿಶೇಷವಾಗಿ ಆಚರಿಸಲು ಬಯಸಿದ್ದರೆ ಹೀಗೆ ಮಾಡಿ

ಹವ್ಯಾಸವನ್ನು ಮುಂದುವರಿಸಲು ಸಹಾಯ ಮಾಡಿ
ನಮ್ಮ ತಾಯಂದಿರು ಇಡೀ ದಿನವನ್ನು ತಮ್ಮ ಕಚೇರಿ ಅಥವಾ ಮನೆಯ ಜೀವನ ಗೃಹಿಣಿ ಕೆಲಸದಲ್ಲಿ ನಿರತರಾಗಿ ಕಳೆಯುತ್ತಾರೆ. ಆದ್ರೆ ಅವರಲ್ಲೂ ಹವ್ಯಾಸ (Habit) ಗಳಿರುತ್ತವೆ. ಶಾಲಾ, ಕಾಲೇಜು ದಿನಗಳಲ್ಲಿ ಆಸಕ್ತಿಯಿದ್ದ ವಿಷಯಗಳಿಗೆ ಮತ್ತೆ ಜೀವ ತುಂಬಿ. ನೃತ್ಯ, ಹಾಡುಗಾರಿಕೆ, ಯೋಗ, ವಾದನಗಳನ್ನು ನುಡಿಸುವುದು ಅವರ ಆಸಕ್ತಿಯಾಗಿದ್ದರೆ ಅದಕ್ಕೆ ಪ್ರೋತ್ಸಾಹಿಸಿ. ಹವ್ಯಾಸಕ್ಕೆ ಸಂಬಂಧಿಸಿದ ಪರಿಕರಗಳನ್ನು ಗಿಫ್ಟ್ (Gift) ಮಾಡಿ. ಇದು ಅವರಿಗೆ ಅತಿ ಹೆಚ್ಚು ಖುಷಿಯನ್ನು ನೀಡುತ್ತದೆ.

ಚಲನಚಿತ್ರವನ್ನು ವೀಕ್ಷಿಸಲು ಅನುವು ಮಾಡಿಕೊಡಿ
ಅದೆಷ್ಟೋ ಬಾರಿ ಮನೆಮಂದಿಯೆಲ್ಲಾ ಟಿವಿಯಲ್ಲಿ ಯಾವುದೇ ಸಿನಿಮಾ ಮಾಡುತ್ತಿರುತ್ತಾರೆ. ಆದರೆ ಆಕೆ ಮಾತ್ರ ಅಡುಗೆ ಮನೆಯಲ್ಲಿ
ನಿಮಗಾಗಿ ಸ್ನ್ಯಾಕ್ಸ್ ಮಾಡುತ್ತಿರುತ್ತಾಳೆ ಎಂಬುದನ್ನು ನೀವು ಗಮನಿಸಿದ್ದೀರಾ ? ಮನೆ ಮಂದಿಯೆಲ್ಲಾ ಯಾವುದೋ ಸೀನ್ ನೋಡಿ ಕಿರುಚಿದಾಗ ಮಾತ್ರ ಒಮ್ಮೆ ಆಕೆ ಬಂದು ಇಣುಕಿ ಹೋಗುತ್ತಾಳೆ. ಟಿವಿ ಮುಂದೆ ಕುಳಿತು ನೋಡುವಷ್ಟು ಸಮಯ ಆಕೆಗಿಲ್ಲ. ತಾಯಂದಿರ ದಿನಕ್ಕೆ ಹೀಗೆ ಮಾಡಿ, ಅವಳ ನೆಚ್ಚಿನ ಹಳೇ ಸಿನಿಮಾ (Movie)ವನ್ನು ಹುಡುಗಿ ಪ್ಲೇ ಮಾಡಿ, ಅವಳು ಅದನ್ನು ನೋಡಿ ಆಸ್ವಾದಿಸಲು ಬಿಡಿ. ಅವಳಿಗಾಗಿ ನೆಚ್ಚಿನ ಸ್ನ್ಯಾಕ್ಸ್‌ನ್ನು ಮಾಡಿ ಕೊಡಲು ಮರೆಯದಿರಿ.

ಶಾಪಿಂಗ್‌ಗೆ ಕರೆದುಕೊಂಡು ಹೋಗಿ
ಆಕೆಗೆ ಮನೆಯಿಂದ ಹೊರ ಹೋಗಿ ಶಾಪಿಂಗ್ (Shopping) ಮಾಡುವುದು ತುಂಬಾ ಇಷ್ಟವಿರುತ್ತದೆ. ಆದರೆ ಸಮಯದ ಅಭಾವದಿಂದ ಎಷ್ಟೋ ಬಾರಿ ಅದು ಸಾಧ್ಯವಾಗುವುದಿಲ್ಲ. ಹೀಗಾಗಿ ತಾಯಂದಿರ ದಿನದಂದು ಆಕೆಯನ್ನು ಔಟಿಂಗ್ ಕರೆದುಕೊಂಡು ಹೋಗಿ ಶಾಪಿಂಗ್ ಮಾಡಿಸಿ. ಆಕೆ ಇಷ್ಟವಾದ ಬಟ್ಟೆ, ಚಪ್ಪಲಿ, ತಿನಿಸುಗಳನ್ನು ಕೊಡಿಸಿ.

Happy Mothers Day : ಈ ದಿನ ಹೆತ್ತ ತಾಯಿ ಮರೆಯಬೇಡಿ

ನೆಚ್ಚಿನ ಸ್ಥಳಕ್ಕೆ ಕರೆದುಕೊಂಡು ಹೋಗಿ
ನಿಮ್ಮ ತಾಯಿ ಹಲವು ವರ್ಷಗಳಿಂದ ಪ್ರವಾಸಕ್ಕೆ ಹೋಗಲು ಯೋಜಿಸುತ್ತಿದ್ದರೆ ಅಥವಾ ಯಾವುದೋ  ಸ್ಥಳಕ್ಕೆ (Place) ಹೋಗಲು ಬಯಸುತ್ತಿದ್ದರೆ, ಆ ಕನಸನ್ನು ನನಸಾಗಿಸಲು ಇದು ಉತ್ತಮ. ನಿಮ್ಮ ತಾಯಿಯ ನೆಚ್ಚಿನ ಸ್ಥಳಕ್ಕೆ ಒಂದು ಸಣ್ಣ ರಜೆಯನ್ನು ಯೋಜಿಸಿ ಅವರ ಮುಖದಲ್ಲಿ ಖುಷಿ ಮೂಡುವಂತೆ ಮಾಡಿ. ನೀವು ಉಳಿದುಕೊಳ್ಳಲು ವ್ಯವಸ್ಥೆ ಮಾಡುತ್ತಿದ್ದರೆ, ಮಸಾಜ್, ಅಡುಗೆ ಅಥವಾ ಪೂಲ್‌ನಲ್ಲಿ ವಿಶ್ರಾಂತಿ ಪಡೆಯುವುದು ಸೇರಿದಂತೆ ಲಭ್ಯವಿರುವ ಎಲ್ಲಾ ವಿಶ್ರಾಂತಿ ಚಟುವಟಿಕೆಗಳನ್ನು ನೀವು ಬುಕ್ ಮಾಡಬಹುದು.

ಅಡುಗೆಮನೆಯ ಉಸ್ತುವಾರಿ ವಹಿಸಿಕೊಳ್ಳಿ
ಅದೆಷ್ಟೋ ವರ್ಷಗಳಿಂದ ತಾಯಿ ಹೊತ್ತು ಗೊತ್ತಿನ ಪರಿವೆಯಿಲ್ಲದೆ ಅಡುಗೆಮನೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿರುತ್ತಾರೆ. ಬಗೆ ಬಗೆಯ ಅಡುಗೆಯನ್ನು ಮಾಡಿ ಉಣಬಡಿಸುತ್ತಿರುತ್ತಾರೆ. ಮನೆಗೆ ವಿಶೇಷ ಅತಿಥಿಗಳು ಬಂದಾಗ ನಿರ್ವಹಿಸುವುದು ಇನ್ನೂ ಕಷ್ಟ. ವರ್ಷಪೂರ್ತಿ ಎಲ್ಲಾ ದಿನಗಳು ತಾಯಿ ಅಡುಗೆಮನೆ (Kitchen)ಯಲ್ಲೇ ಇದ್ದು, ನಿಮಗಾಗಿ ಆಹಾರವನ್ನು ತಯಾರಿಸುತ್ತಾರೆ. ಹೀಗಾಗಿ ತಾಯಂದಿರ ದಿನದಂದು ಆಕೆಗೆ ಬಿಡುವು ನೀಡಿ. ಮನೆಮಂದಿಯೆಲ್ಲಾ ಕೈಯಾರೆ ಅಡುಗೆ ಮಾಡಿ ಅವಳಿಗೆ ಉಣಬಡಿಸಿ. ಆಕೆಯ ಮನಸ್ಸು ತುಂಬಿ ಬರದಿದ್ದರೆ ಮತ್ತೆ ಹೇಳಿ.

click me!