ತಮಿಳುನಾಡು ದೇಗುಲಕ್ಕಿನ್ನು ಮಹಿಳಾ ಅರ್ಚಕಿಯರು: ಪಿಇಟಿ ಯೋಜನೆಯಡಿ ಶಾಸ್ತ್ರ ಕಲಿತಿರುವ ಮಹಿಳೆಯರು

By Kannadaprabha News  |  First Published Sep 17, 2023, 10:00 AM IST

ದೇಶದ ಇತಹಾಸದಲ್ಲೇ ಇದೇ ಮೊದಲ ಬಾರಿಗೆ ತಮಿಳುನಾಡಿನ ಮೂವರು ಮಹಿಳೆಯರು ದೇವಾಲಯದ ಮಹಿಳಾ ಅರ್ಚಕರಾಗಿ ಸೇವೆ ಸಲ್ಲಿಸಲಿದ್ದಾರೆ.


ಚೆನ್ನೈ: ದೇಶದ ಇತಹಾಸದಲ್ಲೇ ಇದೇ ಮೊದಲ ಬಾರಿಗೆ ತಮಿಳುನಾಡಿನ ಮೂವರು ಮಹಿಳೆಯರು ದೇವಾಲಯದ ಮಹಿಳಾ ಅರ್ಚಕರಾಗಿ ಸೇವೆ ಸಲ್ಲಿಸಲಿದ್ದಾರೆ. ಎಲ್ಲಾ ಜಾತಿಯ ಜನರು ದೇವಾಲಯದ ಅರ್ಚಕರಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲು ಪಿಇಟಿ ಯೋಜನೆ ಜಾರಿಗೆ ತಂದ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್‌ ನೇತೃತ್ವದ ಡಿಎಂಕೆ ಸರ್ಕಾರ ಪಿಇಟಿ ಯೋಜನೆಯಡಿ (PET scheme) ಮೊದಲಿಗೆ 3 ಮಹಿಳೆಯರಿಗೆ ಅರ್ಚಕರಾಗುವ ಅವಕಾಶ ಕಲ್ಪಿಸಿದೆ. ಈಗಾಗಲೇ ಈ ಯೋಜನೆಯಡಿ ಹಲವಾರು ಜಾತಿಗಳಿಗೆ ಸೇರಿದ ಪುರುಷರು ಶಾಸ್ತ್ರಗಳನ್ನು ಕಲಿತು ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇದು ಜಾತಿ ಮತ್ತು ಲಿಂಗ ಬೇಧವನ್ನು ತೊರೆದು ಮಹಿಳೆಯರು ಗರ್ಭಗುಡಿ ಪ್ರವೇಶಿಸಿ ದೇವರ ಆರಾಧನೆ ಮತ್ತು ಪೂಜಾ ಕೈಂಕರ್ಯಗಳಲ್ಲಿ ತೊಡಗುತ್ತಿರುವ ದೇಶದ ಮೊದಲ ನಿದರ್ಶನವಾಗಿದೆ. ರಮ್ಯಾ(Ramya), ಕೃಷ್ಣವೇಣಿ ಮತ್ತು ರಂಜಿತಾ ಎಂಬ ಮೂವರು ಮಹಿಳೆಯರು ತಿರುಚ್ಚಿಯ ಶ್ರೀರಂಗಂ ದೇವಸ್ಥಾನದಲ್ಲಿ ಪೂಜಾ ವಿಧಾನ ಮತ್ತು ಸಂಸ್ಕ್ರತ ಸೇರಿದಂತೆ ವಿವಿಧ ವಿಷಯಗಳ ಕುರಿತು ಒಂದು ವರ್ಷಗಳ ಕಾಲ ಅಧ್ಯಯನ ನಡೆಸಿ ಕೋರ್ಸ್‌ವೊಂದನ್ನು ಪೂರ್ಣಗೊಳಿಸಿದ್ದಾರೆ.
ಇದೀಗ ಮೂವರು ಮಹಿಳೆಯರು ರಾಜ್ಯಾದ್ಯಂತ ವಿವಿಧ ದೇವಾಲಯಗಳಲ್ಲಿ ಅರ್ಚಕರಾಗಿ ಒಂದು ವರ್ಷದ ತರಬೇತಿ ಪಡೆದ ಬಳಿಕ ಸಹಾಯಕ ಅರ್ಚಕರಾಗಿ ನೇಮಕವಾಗಲಿದ್ದಾರೆ.

Tap to resize

Latest Videos

ಇನ್ನು ನಾನು ಯಾವಾಗಲೂ ದೇವರ ಸೇವೆ ಮಾಡಲು ಬಯಸುತ್ತಿದ್ದೆ. ಶೀಘ್ರದಲ್ಲೇ ದೇವಸ್ಥಾನದಲ್ಲಿ ದೇವರ ಸೇವೆ ಮಾಡಲಿದ್ದೇನೆ. ನಾವೇ ಮೊದಲ ಮಹಿಳಾ ಅರ್ಚಕರು ಎಂಬ ಹೆಮ್ಮೆ ನಮಗಿದೆ. ಇತರ ಮಹಿಳೆಯರಿಗೂ ಈ ಅವಕಾಶ ಸಿಗಲಿ. ಎಲ್ಲ ವಿರೋಧಗಳ ನಡುವೆ ಸರ್ಕಾರ ನಮ್ಮನ್ನು ಬೆಂಬಲಿಸಿದಂತೆ ಜನರೂ ಬೆಂಬಲ ನೀಡಬೇಕು ಎಂದು ಮಹಿಳೆಯರು ಮಾತನಾಡಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಸ್ಟಾಲಿನ್‌ (Chief Minister M K Stalin) ಪೈಲಟ್‌ ಮತ್ತು ಗಗನಯಾತ್ರಿಗಳಾಗಿಯೂ ಮಹಿಳೆಯರು ಅನೇಕ ಸಾಧನೆ ಮಾಡಿದ್ದರೂ ಅವರನ್ನು ಅಶುದ್ಧರೆಂದು ಪರಿಗಣಿಸಿ ದೇವಾಲಯದ ಅರ್ಚಕರ ಸ್ಥಾನದಿಂದ ನಿರ್ಬಂಧಿಸಲಾಗಿತ್ತು. ಆದರೆ ಇದು ಅಂತಿಮವಾಗಿ ಬದಲಾಗಿದೆ. ಮಹಿಳೆಯರೂ ಕೂಡ ಗರ್ಭಗುಡಿಗೆ ಕಾಲಿಡುತ್ತಿದ್ದಾರೆ. ಸಮಾನತೆಯ ಹೊಸ ಯುಗವನ್ನು ತರುತ್ತಿದ್ದಾರೆ ಎಂದಿದ್ದಾರೆ.

ಆದರೆ ಸರ್ಕಾರದ ಈ ಯೋಜನೆಗೆ ಜನರಿಂದ ಯಾವ ರೀತಿಯ ಬೆಂಬಲ ವ್ಯಕ್ತವಾಗಲಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ತಮಿಳುನಾಡು ಸರ್ಕಾರದ ಈ ಯೋಜನೆ ಬಗ್ಗೆ ನಿಮ್ಮ ಅಭಿಪ್ರಾಯವೇನು? 

click me!