ತಲೆ ಕೂದಲನ್ನು ತುರುಬು ಕಟ್ಟಿ ಅದಕ್ಕೆ ಮಲ್ಲಿಗೆ ಹಾರವನ್ನು ಸುತ್ತಿ, ಹಣೆ ತುಂಬಾ ಕುಂಕುಮ ಇಟ್ಟುಕೊಂಡು ಸೀರೆ ಉಡುವ ಸುಧಾಮೂರ್ತಿ ಬಾಬ್ ಕಟ್ ಮಾಡಿಸಿಕೊಂಡು ಬ್ರೇಕಿಂಗ್ ಸುದ್ದಿಯಾದ ವಿಷಯ ಗೊತ್ತೇ?
ತಲೆ ಕೂದಲನ್ನು ತುರುಬು ಕಟ್ಟಿ ಅದಕ್ಕೆ ಮಲ್ಲಿಗೆ ಹಾರವನ್ನು ಸುತ್ತಿ, ಹಣೆ ತುಂಬಾ ಕುಂಕುಮ ಇಟ್ಟುಕೊಂಡು ಸೀರೆ ಉಡುವ ಸುಧಾಮೂರ್ತಿ ಬಾಬ್ ಕಟ್ ಮಾಡಿಸಿಕೊಂಡು ಬ್ರೇಕಿಂಗ್ ಸುದ್ದಿಯಾದ ವಿಷಯ ಗೊತ್ತೇ?
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆ, ಲೇಖಕಿ ಮತ್ತು ಗೇಟ್ಸ್ ಫೌಂಡೇಶನ್‌ನ ಸಾರ್ವಜನಿಕ ಆರೋಗ್ಯ ಉಪಕ್ರಮಗಳ ಸಕ್ರಿಯ ಸದಸ್ಯೆ, ದಾನಿ ಸುಧಾ ಮೂರ್ತಿಯವರು ಸಂಪ್ರದಾಯ ಮನೆತನದಿಂದ ಬಂದವರು. ಆದರೆ, ಅವರ ಡೇರಿಂಗ್ ನಡೆಗಳು ಒಂದೆರಡಲ್ಲ. ಆಗಿನ ಕಾಲದಲ್ಲೇ ಅವರು ತೆಗೆದುಕೊಂಡ ಪ್ರತಿ ನಿರ್ಧಾರಗಳೂ ಹೆಚ್ಚು ಬೋಲ್ಡ್ ಆಗಿದ್ದವು.
ಕ್ರಾಂತಿಕಾರಿ ನಿಲುವು
5 ದಶಕಗಳ ಹಿಂದೆ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಿಂದ ಬಂದ ಹೆಣ್ಮಗಳೊಬ್ಬಳು ಇಂಜಿನಿಯರಿಂಗ್ ಮಾಡಿದ್ದು ಸಣ್ಣ ಸಾಧನೆಯೇನಲ್ಲ. ಅವರ ಇಡೀ ಕಾಲೇಜಿನಲ್ಲಿ ಅವರೊಬ್ಬರೇ ವಿದ್ಯಾರ್ಥಿನಿ ಇದ್ದುದು. ತಾನು ಇಂಜಿನಿಯರಿಂಗ್ ಮಾಡುತ್ತೇನೆ ಎಂದು ಮನೆಯವರೆಲ್ಲರಿಗೂ ಹೇಳಿದಾಗ ತುಂಬಾ ವಿರೋಧಗಳು ಬಂದಿದ್ದವು. ಅವರ ಅಜ್ಜ ನಿವೃತ್ತ ಶಾಲಾ ಶಿಕ್ಷಕರಾಗಿದ್ದು, ಇತಿಹಾಸವನ್ನು ಕಲಿಸುತ್ತಿದ್ದರು. ಅವರು ಇತಿಹಾಸ ಓದಲು ಹೇಳಿದರು. ಅವರ ತಂದೆ ವೈದ್ಯರಾಗಿದ್ದರಿಂದ ಮೆಡಿಸಿನ್ ಓದಲು ಹೇಳಿದರು. ಅವರ ಸುತ್ತಲಿನ ಎಲ್ಲರೂ ಅವರಿಗೆ ಅನೇಕ ಆಯ್ಕೆಗಳನ್ನು ನೀಡಿದರು. ಆದರೆ ಹುಡುಗರು ಓದುತ್ತಿದ್ದ ಎಂಜಿನಿಯರಿಂಗ್ ಮಾತ್ರ ಬೇಡವೆಂದರು. ಆದರೆ ಸುಧಾಮೂರ್ತಿ ಮಾತ್ರ 'ಯಾಕೆ ಇಂಜಿನಿಯರಿಂಗ್ ಮಾಡಬಾರದು?' ಎಂದು ಯೋಚಿಸಿ ಕಡೆಗೂ ಇಂಜಿನಿಯರಿಂಗ್ ಕಾಲೇಜಿಗೆ ಸೇರಿಯೇ ಬಿಟ್ಟರು. ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಟೆಕ್ ಮಾಡಿದರು. ಓದಲು ಹೋದಾಗ ಕಾಲೇಜಿನ ಹುಡುಗರೆಲ್ಲ ಗೇಲಿ ಮಾಡಿದರು. ಆದರೆ, ಯಾವುದಕ್ಕೂ ಕೇರ್ ಮಾಡದೆ ಓದಿನಲ್ಲಿ ಮೊದಲ ಸ್ಥಾನ ಕಾಯ್ದುಕೊಂಡ ಸುಧಾಗೆ ನಂತರ ಅವರೆಲ್ಲ ಗೆಳೆಯರಾದರು.
ನಂತರ ಟೆಲ್ಕೋ ಕಂಪನಿಗೆ ಕೇವಲ ಪುರುಷ ಇಂಜಿನಿಯರ್‌ಗಳಿಗೆ ಅರ್ಜಿ ಸಲ್ಲಿಸಲು ಕೇಳಲಾಗಿತ್ತು. ಇದು ಲಿಂಗ ಬೇಧ ಎಂದು ಕೋಪಗೊಂಡ ಸುಧಾ ಅಮ್ಮ, ನೇರ ಜೆ ಆರ್ ಡಿ ಟಾಟಾ ಅವರಿಗೇ ಪತ್ರ ಬರೆದು ಈ ಬಗ್ಗೆ ಪ್ರಶ್ನಿಸಿದ್ದರು. ಕಡೆಗೂ ಆಕೆಗೆ ಕಂಪನಿಯಿಂದ ಕರೆ ಬಂದಿತ್ತು. ಟೆಲ್ಕೋ ಸೇರಿದ ಮೊದಲ ಇಂಜಿನಿಯರ್ ಮಹಿಳೆ ಅವರಾಗಿದ್ದರು. ಆಗಿನ ಕಾಲದಲ್ಲಿ ಸುಧಾಮೂರ್ತಿಯ ಕ್ರಾಂತಿಕಾರಿ ನಿರ್ಧಾರಗಳು ಇಷ್ಟಕ್ಕೇ ನಿಲ್ಲಲಿಲ್ಲ. ಅವರ ಕೂದಲು ಕತ್ತರಿಸಿಕೊಳ್ಳುವ ನಿರ್ಧಾರದವರೆಗೂ ಅದು ಮುಂದುವರಿಯಿತು.
ಬಾಬ್ ಕಟ್ ಹುಡುಗಿಯ ಅಕ್ಕನನ್ನು ಯಾರು ಮದುವೆಯಾಗುತ್ತಾರೆ?!
ಈಚೆಗೆ 'ಶಿ ದ ಪೀಪಲ್ ಟಿವಿ'ಗೆ ಸುಧಾಮೂರ್ತಿ ಕೊಟ್ಟ ಸಂದರ್ಶನದಲ್ಲಿ ಅವರ ಹೇರ್ ಕಟ್ ಬಗ್ಗೆ ಸ್ವಾರಸ್ಯಕರ ಘಟನೆಯನ್ನು ವಿವರಿಸಿದ್ದಾರೆ.
60ರ ದಶಕದ ಕೊನೆಯಲ್ಲಿ ಇನ್ನೂ ಯುವತಿಯಾಗಿದ್ದ ಸುಧಾ ಮೂರ್ತಿ ಬಾಬ್ ಕಟ್ ಮಾಡಿಸಿಕೊಂಡಿದ್ದರು. ತುಂಬಾ ಸಾಂಪ್ರದಾಯಿಕ ಕುಟುಂಬದಿಂದ ಬಂದಿದ್ದ ಅವರು ಬಾಬ್ ಕಟ್ ಮಾಡಿಸಿಕೊಂಡಿದ್ದು ಆಗಂತೂ ಬ್ರೇಕಿಂಗ್ ನ್ಯೂಸ್ ಆಗಿತ್ತು. ಹುಬ್ಬಳ್ಳಿಯ ಜನರೆಲ್ಲ ಡಾ. ಕುಲಕರ್ಣಿಯ ಮಗಳು ಕೂದಲು ಗಿಡ್ಡಗೆ ಕತ್ತರಿಸಿಕೊಂಡಿದ್ದಾಳೆ ಎಂದು ಆಘಾತ ವ್ಯಕ್ತಪಡಿಸಿದ್ದರಂತೆ. ಇವರು ಕೂದಲು ಕತ್ತರಿಸಿಕೊಂಡಿದ್ದು ತಿಳಿದ ಸಂಬಂಧಿಕರು, ಸ್ನೇಹಿತರೆಲ್ಲ- ನೀ ಹೀಗೆ ಮಾಡಿದರೆ ನಿನ್ನ ಸಹೋದರಿಯರನ್ನು ಯಾರು ಮದುವೆಯಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಲಾರಂಭಿಸಿದರಂತೆ. ಬಾಬ್ ಕಟ್ ಹುಡುಗಿಯ ಅಕ್ಕ ತಂಗಿಯರನ್ನು ಯಾರು ತಾನೇ ಮದುವೆಯಾಗುತ್ತಾರೆ ಎಂದೆಲ್ಲ ಹೇಳಿದ್ದರಂತೆ. ಆಗ ಸುಧಮ್ಮ ಅವರಿಗೆ- ನಾನೇನಾದರೂ ನನ್ನ ಅಕ್ಕತಂಗಿಯರ ಕೂದಲನ್ನು ಕತ್ತರಿಸಿದೆನೇ ಎಂದು ಮರು ಪ್ರಶ್ನೆ ಹಾಕಿದರಂತೆ.
ನನಗೆ ನನ್ನ ಕೂದಲನ್ನು ಕತ್ತರಿಸಬೇಕೆನಿಸಿತು. ಬಾಬ್ ಕಟ್ ಮಾಡಿಸಿಕೊಂಡೆ. ಯಾರಿಗಾದರೂ ನಾನು ಕೂದಲು ಕತ್ತರಿಸಿಕೊಂಡ ಕಾರಣಕ್ಕೆ ನನ್ನ ಸಹೋದರಿಯರನ್ನು ಮದುವೆಯಾಗಲು ಸಮಸ್ಯೆ ಎದುರಾಗುತ್ತದೆ ಎಂದರೆ ಅವರು ನನ್ನ ಸೋದರಿಯರಿಗೆ ಉತ್ತಮ ಸಂಗಾತಿಯಾಗುವುದಿಲ್ಲ ಎಂದೇ ವಾದಿಸಿದೆ. ಅದೇ ನನ್ನ ನಿಲುವಾಗಿತ್ತು ಎಂದಿದ್ದಾರೆ.
ಇಂದಿನ ತಲೆಮಾರಿನ ಹುಡುಗಿಯರಿಗೆ ಓದು, ನಡೆನುಡಿ, ಸಾಧನೆ ಪ್ರತಿಯೊಂದರಲ್ಲೂ ಸುಧಾಮೂರ್ತಿ ಆದರ್ಶವಾಗಿದ್ದಾರೆ. ಅಲ್ಲವೇ?