ಮಕ್ಕಳ ಬಯಕೆಯುಳ್ಳ ಮಹಿಳೆಯರಿಗೆಲ್ಲ ಸರಳವಾಗಿ ಗರ್ಭಧಾರಣೆ ಸಾಧ್ಯವಾಗೋದಿಲ್ಲ. ಆಗ ಮಹಿಳೆಯರು ಐವಿಎಫ್ ಮೊರೆ ಹೋಗ್ತಾರೆ. ಮಡಿಲಿಗೊಂದು ಮಗುಪಡೆಯಲು ಇನ್ನಿಲ್ಲದ ಪ್ರಯತ್ನ ನಡೆಸ್ತಾರೆ. ಐವಿಎಫ್ ಸಂದರ್ಭದಲ್ಲಿ ಅನೇಕ ಸವಾಲು, ಸಮಸ್ಯೆಯನ್ನು ಮಹಿಳೆ ಎದುರಿಸಬೇಕಾಗುತ್ತದೆ.
ತಾಯ್ತನ ಎನ್ನುವುದು ಹೆಣ್ಣಿನ ಬದುಕಿನಲ್ಲಿ ಮರೆಯಲಾಗದ ಒಂದು ಘಟ್ಟ. ಅದು ಆಕೆಯ ಕರ್ತವ್ಯ, ಜವಾಬ್ದಾರಿ ಕೂಡ ಹೌದು. ಸಾಮಾನ್ಯವಾಗಿ ಎಲ್ಲ ಹೆಣ್ಣಿಗೂ ತಾನು ತಾಯಿಯಾಗಬೇಕೆನ್ನುವ ಹಂಬಲ ತಾನಾಗಿಯೇ ಹುಟ್ಟಿಹೊಳ್ಳುತ್ತೆ. ಆದರೆ ಕೆಲವು ಮಹಿಳೆಯರ ಪಾಲಿಗೆ ಇದು ಅಸಾಧ್ಯವಾಗುತ್ತೆ. ಯಾವುದೋ ಒಂದು ತೊಂದರೆಯಿಂದಾಗಿ ಆಕೆ ಬಂಜೆ ಎಂದು ಕರೆಸಿಕೊಳ್ಳುವ ಸಂದರ್ಭ ಎದುರಾಗುತ್ತೆ.
ಯಾವಾಗ ಒಬ್ಬ ಮಹಿಳೆ ಸ್ವಾಭಾವಿಕವಾಗಿ ತಾಯಿ (Mother) ಯಾಗಲು ಸಾಧ್ಯವಿಲ್ಲವೋ ಆಗ ಕೃತಕ ಗರ್ಭಧಾರಣೆಯ ಮೂಲಕ ಮಗುವನ್ನು ಪಡೆಯಬಹುದಾಗಿದೆ. ಬಂಜೆತನವನ್ನು ಅನುಭವಿಸುತ್ತಿರುವ ಅನೇಕ ದಂಪತಿ ಇಂದು ಎ ಆರ್ ಟಿ (ಅಸಿಸ್ಟೆಡ್ ರಿಪ್ರೊಡಕ್ಟಿವ್ ಥೆರಫಿ) ಚಿಕಿತ್ಸೆಯ ಮೂಲಕ ಮಗುವನ್ನು ಪಡೆದಿದ್ದಾರೆ. ಈ ಪ್ರಕ್ರಿಯೆಯನ್ನು ಎಗ್ ರಿಟ್ರೈವಲ್ (Egg Retrieval ) ಎನ್ನಲಾಗುತ್ತೆ. ಈ ವೈದ್ಯಕೀಯ ವಿಧಾನವನ್ನು ಸಾಮಾನ್ಯವಾಗಿ ಐವಿಎಫ್ ಅಥವಾ ಇನ್ನಿತರ ಫರ್ಟಿಲಿಟಿ ಚಿಕಿತ್ಸೆಗಳಲ್ಲಿ ಬಳಕೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಎಗ್ ರಿಟ್ರೈವಲ್ ವಿಧಾನ ಗರ್ಭಧಾರಣೆಗೆ ಅತ್ಯಂತ ಸುರಕ್ಷಿತ ಎನ್ನಲಾಗುತ್ತದೆ.
ಗರ್ಭಾವಸ್ಥೆಯಲ್ಲಿ ಸೋಂಕು ಕಾಣಿಸಿಕೊಂಡ್ರೆ ತಾಯಿ - ಮಗುವಿಗೆ ಅಪಾಯ
ಎಗ್ ರಿಟ್ರೈವಲ್ ವಿಧಾನದ ನಂತರ ಶ್ರೋಣಿಯ ಪ್ರದೇಶ ಮತ್ತು ಅಂಡಾಂಶಯಗಳಲ್ಲಿ ಸೋಂಕು ಮತ್ತು ಕರುಳು, ಮೂತ್ರಕೋಶ, ಗರ್ಭಾಶಯ, ಅಂಡಾಂಶಯ ಮತ್ತು ಕೆಲವು ರಕ್ತನಾಳಗಳಲ್ಲಿ ಚಿಕ್ಕ ಚಿಕ್ಕ ಗಾಯ ಉಂಟಾಗಬಹುದು. ಈ ವಿಧಾನವನ್ನು ಅಲ್ಟ್ರಾಸೌಂಡ್ ಗೆ ಸೂಜಿಯನ್ನು ಹಾಕುವ ಮೂಲಕ ಮಾಡಲಾಗುತ್ತದೆ. ಹಾಗಾಗಿ ಇದರಲ್ಲಿ ಗಂಭೀರ ಸಮಸ್ಯೆಗಳಾಗುವ ಸಾಧ್ಯತೆ ಬಹಳ ಕಡಿಮೆ ಇದೆ. ಕೊನೆಯ ಚುಚ್ಚುಮದ್ದಿನ ನಂತರ 34-36 ಗಂಟೆಗಳ ನಂತರ ಮತ್ತು ಅಂಡೋತ್ಪತ್ತಿಯ ಮೊದಲು ವೈದ್ಯರಿಂದ ಎಗ್ ರಿಟ್ರೈವಲ್ ಚಿಕಿತ್ಸೆ ಪಡೆಯಬಹುದಾಗಿದೆ. ಈ ವಿಧಾನದಲ್ಲಿ ಮಹಿಳೆ ಗರ್ಭಧರಿಸಿದಾಗ ಆಕೆಯಲ್ಲಿ ಈ ಕೆಳಗಿನ ಅಡ್ಡ ಪರಿಣಾಮಗಳು ಉಂಟಾಗಬಹುದು.
ಸೆಳೆತ ಮತ್ತು ಹೊಟ್ಟೆ ನೋವು: ಎಗ್ ರಿಟ್ರೈವಲ್ ಚಿಕಿತ್ಸೆಯ ನಂತರ ಸೆಳೆತ ಮತ್ತು ಹೊಟ್ಟೆನೋವು ಸಾಮಾನ್ಯವಾಗಿ ಎಲ್ಲರಲ್ಲೂ ಕಾಣಿಸುತ್ತೆ. ಮಹಿಳೆಯ ಯೋನಿಯ ಮೂಲಕ ಅಂಡಾಂಶಯವನ್ನು ತಲುಪಲು ಸೂಜಿಯನ್ನು ಸೇರಿಸುವುದರಿಂದ ಇಂತಹ ಸೆಳೆತಗಳು ಉಂಟಾಗುತ್ತವೆ. ಚಿಕಿತ್ಸೆಯ ಸಮಯದಲ್ಲಿ ಅರವಳಿಕೆ ಚುಚ್ಚುಮದ್ದನ್ನು ನೀಡುವುದರಿಂದ ಮಹಿಳೆಯರಿಗೆ ಯಾವುದೇ ನೋವಿನ ಅರಿವಾಗುವುದಿಲ್ಲ. ವೈದ್ಯಕೀಯ ವಿಧಾನದ ನಂತರ ಉಂಟಾಗುವ ನೋವಿಗೆ ವೈದ್ಯರ ಸಹಾಯದಿಂದ ನೋವು ನಿವಾರಕ ಮಾತ್ರೆಗಳನ್ನು ಸೇವಿಸಬಹುದು.
ಗರ್ಭಿಣಿಯರನ್ನು ಕಾಡುವ ಗಂಭೀರ ಸಮಸ್ಯೆ ಪ್ರಿಕ್ಲಾಂಪ್ಸಿಯಾ
ಹೊಟ್ಟೆ ಊದಿಕೊಳ್ಳುವುದು : ಎಗ್ ರಿಟ್ರೈವಲ್ ಚಿಕಿತ್ಸೆಯ ನಂತರ ಹೊಟ್ಟೆ ಊದಿಕೊಳ್ಳುವುದು ಕೂಡ ಸಾಮಾನ್ಯ ಸಂಗತಿಯಾಗಿದೆ. ಅಂಡಾಂಶಗಳ ಬೆಳವಣಿಗೆಯಿಂದ ಉಳಿದ ಅಂಗಗಳ ಮೇಲೆ ಒತ್ತಡ ಬೀಳುವುದರಿಂದ ಊತ ಮತ್ತು ನೋವು ಕಾಣಿಸಿಕೊಳ್ಳುತ್ತದೆ. ಇಂತಹ ತೊಂದರೆಯಿಂದ ಮುಕ್ತಿ ಪಡೆಯಲು ಮಹಿಳೆಯರು ಒಳ್ಳೆಯ ಆಹಾರವನ್ನು ಸೇವಿಸಬೇಕು ಮತ್ತು ಹೆಚ್ಚು ಉಪ್ಪಿನ ಆಹಾರದಿಂದ ದೂರವಿರಬೇಕು. ಸಡಿಲವಾದ ಬಟ್ಟೆಗಳನ್ನು ಧರಿಸಬೇಕು ಮತ್ತು ನೋವನ್ನು ಕಡಿಮೆಗೊಳಿಸಲು ಹೀಟಿಂಗ್ ಪ್ಯಾಡ್ ಅಥವಾ ಬಿಸಿನೀರಿನ ಬಾಟಲಿಗಳನ್ನು ಬಳಸಬಹುದು.
ರಕ್ತಸ್ರಾವ (Bleeding) : ಎಗ್ ರಿಟ್ರೈವಲ್ ನಡೆದ ಕೆಲವು ದಿನಗಳ ತನಕ ರಕ್ತಸ್ರಾವ ಆಗುವುದು ಸಾಮಾನ್ಯವಾಗಿದೆ. ಅಂಡಾಂಶಯದ ಚೀಲಗಳನ್ನು ಚುಚ್ಚಲು ಸೂಜಿಗಳನ್ನು ಬಳಸುವುದರಿಂದ ಸಣ್ಣ ಪ್ರಮಾಣದ ರಕ್ತಸ್ರಾವ ಉಂಟಾಗುತ್ತದೆ. ಇಂತಹ ಸಮಯದಲ್ಲಿ ಮಹಿಳೆಯರು ಟ್ಯಾಂಪೂನ್ ಗಳ ಬದಲು ಸ್ಯಾನಿಟರಿ ಪ್ಯಾಡ್ ಗಳನ್ನೇ ಬಳಸುವುದು ಉತ್ತಮ. ಏಕೆಂದರೆ ಟ್ಯಾಂಪೂನ್ ಗಳಿಂದ ಇನ್ಫೆಕ್ಷನ್ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಈ ಸಮಯದಲ್ಲಿ ಲೈಂಗಿಕ ಕ್ರಿಯೆಗಳಿಂದಲೂ ದೂರವಿರಬೇಕು.
ವಾಂತಿ ಮತ್ತು ವಾಕರಿಕೆ (Vomitting) : ಎಗ್ ರಿಟ್ರೈವಲ್ ಚಿಕಿತ್ಸೆಯ ನಂತರ ಕೆಲವು ಮಹಿಳೆಯರಿಗೆ ವಾಕರಿಕೆಯ ಅನುಭವ ಅಥವಾ ವಾಂತಿಯಾಗುತ್ತದೆ. ಎ ಆರ್ ಟಿ ಚಿಕಿತ್ಸೆ ನಡೆಸುವಾಗ ನೀಡಿದ ಅನಸ್ತೇಶಿಯಾದಿಂದ ಜೀರ್ಣಕ್ರಿಯೆಯ ಮೇಲೆ ಅಡ್ಡಪರಿಣಾಮಗಳು ಉಂಟಾಗಿ ಇಂತಹ ತೊಂದರೆಗಳು ಆಗುತ್ತದೆ. ಹಾಗಾಗಿ ಚಿಕಿತ್ಸೆಯ ನಂತರ ಮಹಿಳೆಯರು ಕೆಲವು ಗಂಟೆಗಳ ಕಾಲ ಏನೂ ಸೇವಿಸಬಾರದು. ನಂತರ ಕೂಡ ಕಡಿಮೆ ಹಾಗೂ ಬೇಗ ಜೀರ್ಣವಾಗುವಂತಹ ಆಹಾರ ಸೇವಿಸಬೇಕು ಹಾಗೂ ಮದ್ಯಪಾನದಿಂದ ದೂರವಿರಬೇಕು.