
ಬೆಂಗಳೂರು (ಸೆ.16): ದೇಶದ ಪ್ರಮುಖ ಅರೆಸೇನಾ ಪಡೆಯಾದ 'ಕೇಂದ್ರೀಯ ಮೀಸಲು ಪೊಲೀಸ್ ಪಡೆ'ಯ (CRPF) ದಟ್ಟ ಅರಣ್ಯ ಯುದ್ಧ ತಂತ್ರಜ್ಞಾನ ಹಾಗೂ ನಕ್ಸಲ್ ನಿಗ್ರಹ ಕಮಾಂಡೋ ಘಟಕವಾದ 'ಕೋಬ್ರಾ' (CoBRA - ಕಮಾಂಡೋ ಬಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್) ವಲಯಕ್ಕೆ ಪ್ರಥಮ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರು ಮುಖ್ಯಸ್ಥೆಯಾಗಿ ನೇಮಕಗೊಂಡಿದ್ದಾರೆ. ಅಸ್ಸಾಂ-ಮೇಘಾಲಯ ಕೇಡರ್‌ನ 2006 ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಸಂಯುಕ್ತಾ ಪರಾಶರ್ ದೆಹಲಿಯಲ್ಲಿರುವ ಕೋಬ್ರಾ ವಲಯ ಪ್ರಧಾನ ಕಚೇರಿಯ ಇನ್ಸ್‌ಪೆಕ್ಟರ್ ಜನರಲ್ (IG) ಆಗಿ ಐತಿಹಾಸಿಕ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಈ ಹಿಂದೆ ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿಯೂ (NIA) ಸೇವೆ ಸಲ್ಲಿಸಿರುವ ಸಂಯುಕ್ತಾ ಪರಾಶರ್ ಅವರು, 1996 ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ದಾನೇಶ್ ರಾಣಾ ಅವರಿಂದ ಈ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ.
"ಸಿಆರ್‌ಪಿಎಫ್‌ನ 10 ಬಟಾಲಿಯನ್‌ಗಳನ್ನು ಒಳಗೊಂಡಿರುವ ಅತ್ಯಂತ ಶಕ್ತಿಶಾಲಿ 'ಕೋಬ್ರಾ' ಪಡೆಯನ್ನು ಮಹಿಳಾ ಅಧಿಕಾರಿಯೊಬ್ಬರು ಮುನ್ನಡೆಸುತ್ತಿರುವುದು ಸಿಆರ್‌ಪಿಎಫ್ ಇತಿಹಾಸದಲ್ಲೇ ಇದು ಮೊದಲ ಬಾರಿಯಾಗಿದೆ" ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿಆರ್‌ಪಿಎಫ್ ಮೂಲಗಳ ಪ್ರಕಾರ, ಪಡೆಗಳ ಆಡಳಿತಾತ್ಮಕ ವಲಯಗಳಾದ ರಾಜಸ್ಥಾನ, ಮಧ್ಯಪ್ರದೇಶ, ಜಮ್ಮು, ಈಶಾನ್ಯ ರಾಜ್ಯಗಳು ಹಾಗೂ ಪ್ರಸ್ತುತ ಕೋಬ್ರಾ ವಲಯದಲ್ಲೂ ಮಹಿಳಾ ಅಧಿಕಾರಿಗಳು ಸೆಕ್ಟರ್ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಸಿಆರ್‌ಪಿಎಫ್ ಮಹಾನಿರ್ದೇಶಕರಾಗಿರುವ (DGP) ಜಿ.ಪಿ. ಸಿಂಗ್ ಅವರು ಈ ಹಿಂದೆ ಅಸ್ಸಾಂನ ಡಿಜಿಪಿ ಆಗಿದ್ದಾಗ, ಸಂಯುಕ್ತಾ ಪರಾಶರ್ ಅವರು ಅವರ ಅಡಿಯಲ್ಲಿ ಕಾರ್ಯನಿರ್ವಹಿಸಿದ ಅನುಭವವನ್ನೂ ಹೊಂದಿದ್ದಾರೆ.
ದೇಶದ ವಿವಿಧ ರಾಜ್ಯಗಳಲ್ಲಿ ಎಡಪಂಥೀಯ ಉಗ್ರವಾದ ಅಥವಾ ನಕ್ಸಲೈಟ್ (LWE) ಸಮಸ್ಯೆಯನ್ನು ಮಟ್ಟಹಾಕಲು ಹಾಗೂ ಈಶಾನ್ಯ ರಾಜ್ಯಗಳಲ್ಲಿನ ದಂಗೆಕೋರರನ್ನು ಹತೋಟಿಗೆ ತರಲು ಸಿಆರ್‌ಪಿಎಫ್ 2008-09 ರಲ್ಲಿ 'ಕೋಬ್ರಾ' ಕಮಾಂಡೋ ಪಡೆಯನ್ನು ಸ್ಥಾಪಿಸಿತು. ದಟ್ಟ ಕಾಡುಗಳಲ್ಲಿ ನುಗ್ಗಿ ಕಾರ್ಯಾಚರಣೆ ನಡೆಸುವಲ್ಲಿ ಈ ಪಡೆ ಅತ್ಯಂತ ಸಮರ್ಥವಾಗಿದೆ.
1979 ರ ಅಕ್ಟೋಬರ್‌ನಲ್ಲಿ ಜನಿಸಿದ ಸಂಯುಕ್ತಾ ಪರಾಶರ್ (46), ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸೇರಿದಂತೆ ತಮ್ಮ ಹೋಮ್ ಕೇಡರ್ ರಾಜ್ಯವಾದ ಅಸ್ಸಾಂನಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಅಪ್ಪರ್ ಅಸ್ಸಾಂ ನಕ್ಸಲ್ ಮತ್ತು ದಂಗೆಕೋರ ಪೀಡಿತ ಪ್ರದೇಶಗಳಲ್ಲಿ ನಡೆದ ಹಲವು ಸಾಹಸಿ ಕೌಂಟರ್-ಇನ್ಸರ್ಜೆನ್ಸಿ (ದಂಗೆಕೋರರ ನಿಗ್ರಹ) ಕಾರ್ಯಾಚರಣೆಗಳ ನೇತೃತ್ವ ವಹಿಸಿ, ಅಲ್ಲಿನ ಉಗ್ರರನ್ನು ಮಟ್ಟಹಾಕಿದ ಹೆಗ್ಗಳಿಕೆ ಇವರಿಗಿದೆ.
ಶಿಕ್ಷಣ: ತಮ್ಮ ಆರಂಭಿಕ ಶಿಕ್ಷಣವನ್ನು ಅಸ್ಸಾಂನಲ್ಲೇ ಪೂರ್ಣಗೊಳಿಸಿದ ಇವರು, ಉನ್ನತ ಶಿಕ್ಷಣಕ್ಕಾಗಿ ದೆಹಲಿಗೆ ತೆರಳಿದರು. ದೆಹಲಿ ವಿಶ್ವವಿದ್ಯಾಲಯದ ಪ್ರತಿಷ್ಠಿತ 'ಇಂದ್ರಪ್ರಸ್ಥ ಕಾಲೇಜಿ'ನಲ್ಲಿ ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದ ನಂತರ, ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಿಂದ (JNU) 'ಅಂತರರಾಷ್ಟ್ರೀಯ ಸಂಬಂಧಗಳು' (International Relations) ವಿಷಯದಲ್ಲಿ ಸ್ನಾತಕೋತ್ತರ (MA) ಪದವಿ ಮುಗಿಸಿದರು.
ಐಪಿಎಸ್ ಆಯ್ಕೆ: ತದನಂತರ ಯುಪಿಎಸ್ಸಿ (UPSC) ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಭಾರತೀಯ ಪೊಲೀಸ್ ಸೇವೆಗೆ (IPS) ಸೇರ್ಪಡೆಯಾದರು.
ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯ: ತಮ್ಮ ಕರ್ತವ್ಯ ನಿಷ್ಠೆ ಹಾಗೂ ಸಾಹಸಗಳಿಂದ ದೇಶಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಸಂಯುಕ್ತಾ ಪರಾಶರ್ ಅವರು ಫೇಸ್‌ಬುಕ್‌ನಲ್ಲಿ 76,000 ಕ್ಕೂ ಹೆಚ್ಚು ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ 24,000 ಕ್ಕೂ ಹೆಚ್ಚು Followers ಹೊಂದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.