
ಕಾಲ ಎಷ್ಟು ಬದಲಾದರೂ ಹೆಣ್ಣು ಮಗು ಹುಟ್ಟಿದಾಗ ಹೀಗಳೆಯುವ ಪೋಷಕರ, ಸಂಬಂಧಿಗಳ ಸಂಖ್ಯೆಯೇನೂ ಕಡಿಮೆ ಆಗಿಲ್ಲ, ಇದೇ ಕಾರಣಕ್ಕೆ ಇಲ್ಲೊಂದು ಕಡೆ ಹೆಣ್ಣು ಮಗುವಾಗಿದೆ ಎಂದು ಪೋಷಕರು ಮುದ್ದು ಮುದ್ದಾದ ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಹೋದಂತಹ ಮನ ಮಿಡಿಯುವ ಘಟನೆ ಉತ್ತರ ಭಾರತದಲ್ಲಿ ನಡೆದಿದೆ. ಆದರೆ ಇದನ್ನು ನೋಡಿ ಆಸ್ಪತ್ರೆಯ ವೈದ್ಯೆಯೊಬ್ಬರು ಪೋಷಕರ ಕಣ್ಣು ತೆರೆಸುವ ವೀಡಿಯೋವೊಂದನ್ನು ಮಾಡಿದ್ದು, ವೀಡಿಯೋ ನೋಡಿದ ಪೋಷಕರು ಮರಳಿ ಬಂದು ಮಗುವನ್ನು ತೆಗೆದುಕೊಂಡು ಹೋಗಿದ್ದಾರೆ. ವೈದ್ಯೆ ಮಾಡಿದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ವೈರಲ್ ಆದ ವೀಡಿಯೋವೊಂದರಲ್ಲಿ ಡಾ. ಸುಷ್ಮಾ ಎಂಬ ವೈದ್ಯರು ಮಗುವನ್ನು ಎತ್ತಿಕೊಂಡು ಇಂದು ಒಂದು ಮುದ್ದಾದ ಹೆಣ್ಣು ಮಗು ನಿನ್ನಯಷ್ಟೇ ಈ ಮಗುವಿನ ಜನ್ಮವಾಗಿದೆ. ಈ ಮಗು ಈಕೆಯ ತಾಯಿಗೆ ಬದುಕುಳಿದಿರುವ 2ನೇ ಹೆಣ್ಣು ಮಗುವಾಗಿದೆ. ತಾಯಿಗೆ ಇದು ಮೂರನೇ ಹೆರಿಗೆಯಾಗಿದ್ದು, ಈ ಹಿಂದೆಯೇ ಒಂದು ಹೆಣ್ಣು ಮಗು ತೀರಿ ಹೋಗಿದೆ. ಸಾಲಾಗಿ ಮೂರು ಹೆಣ್ಣು ಮಕ್ಕಳೇ ಹುಟ್ಟಿದ್ದರಿಂದ ಮನೆಯವರು ಬಹಳ ಬೇಸರಗೊಂಡಿದ್ದಾರೆ. ಈ ಮಗುವಿನ ತಂದೆ ಒಮ್ಮೆಯೂ ಈಕೆಯನ್ನು ಭೇಟಿ ಮಾಡಿಲ್ಲ, ಪೋನ್ ಮಾಡಿಯೂ ತಾಯಿಯನ್ನು ವಿಚಾರಿಸಿಲ್ಲ, ಅಲ್ಲದೇ ಮನೆಯವರು ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಬಾ ಎಂದು ತಾಯಿಗೆ ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದರಿಂದ ಒಬ್ಬಳು ವೈದ್ಯೆಯಾಗಿ ಒಬ್ಬಳು ಮಗಳಾಗಿ, ಒಬ್ಬಳು ಹೆಣ್ಣಾಗಿ, ಒಬ್ಬಳು ತಾಯಿಯಾಗಿ ನನಗೆ ಈ ವಿಚಾರ ತುಂಬಾ ಬೇಸರವಾಗುತ್ತಿದೆ. ನಮ್ಮ ದೇಶದ ರಾಷ್ಟ್ರಪತಿ ಮಹಿಳೆಯಾಗಿದ್ದಾರೆ. ಅಂತರಿಕ್ಷಕ್ಕೆ ಹೋದಂತಹ ಸಾಧನೆ ಮಾಡಿದ ಸುನೀತಾ ವಿಲಿಯಮ್ಸ್ ಕೂಡ ಹೆಣ್ಣಾಗಿದ್ದಾರೆ. ಹೀಗಿರುವಾಗ ಈ ರೀತಿ ಮಾಡಿದ್ದು ಎಷ್ಟು ಸರಿ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ವೈದ್ಯೆಯ ಈ ಪೋಸ್ಟ್‌ಗೆ ಅನೇಕರು ಕಾಮೆಂಟ್ ಮಾಡಿದ್ದು, ಈ ಮುದ್ದು ಮಗುವನ್ನು ತಮಗೆ ನೀಡುವಂತೆ ಮನವಿ ಮಾಡಿದ್ದಾರೆ. ವೈದ್ಯೆಯ ವೀಡಿಯೋ ಎಷ್ಟು ವೈರಲ್ ಆಗಿದೆಯೆಂದರೆ ಕಡೆಗೂ ಪೋಷಕರೇ ಮನ ಬದಲಾಯಿಸಿ ಬಂದು ಮಗುವನ್ನು ತೆಗೆದುಕೊಂಡು ಹೋದರು ಎಂದು ವೈದ್ಯರೇ ಮತ್ತೊಂದು ವೀಡಿಯೋದಲ್ಲಿ ಹೇಳಿದ್ದಾರೆ.
ನೆಟ್ಟಿಗರೊಬ್ಬರು ಇವರಿಗೆ ಸುಲಭವಾಗಿ ಹೆಣ್ಣು ಮಗುವಾಗಿದೆ ಅದಕ್ಕೆ ಇಷ್ಟು ನಿರ್ಲಕ್ಷ್ಯ, ನಾವು ಒಂದು ಹೆಣ್ಣು ಮಗು ಪಡೆಯುವುದಕ್ಕೆ ಪಟ್ಟ ಪಾಡು ಅಷ್ಟಿಷ್ಟಲ್ಲ, ನಾವು ಹೆಣ್ಣು ಮಗುವಿಗಾಗಿ ದೇವಸ್ಥಾನದಿಂದ ದೇವಸ್ಥಾನಕ್ಕೆ ಹೋದೆವು, ಪೂಜೆ ಮಾಡಿಸಿದೆವು, ನನ್ನ ಮಗನೊಂದಿಗೆ 6 ವರ್ಷಗಳ ಅಂತರದ ನಂತರ ನನಗೆ ನನ್ನ ಪುಟ್ಟ ದೇವತೆ ಸಿಕ್ಕಳು. ಅದು ಕೂಡ ಸುಲಭವಾಗಿರಲಿಲ್ಲ, ಅವಳು ತುಂಬಾ ಬೇಗನೆ ಬಂದಳು 28 ವಾರಗಳಲ್ಲೇ ಜನಿಸಿದ ಆಕೆ ಕೇವಲ 950 ಗ್ರಾಂ ತೂಕ ಇದ್ದಳು. 2 ತಿಂಗಳ ಎನ್‌ಐಸಿ ಕಾಳಜಿಯ ಬಳಿ ನಾವು ಅವಳನ್ನು ಎತ್ತಿಕೊಂಡೆವು, ಅವಳನ್ನು ಪ್ರೀತಿಸುತ್ತೇವೆ... ಅವಳಿಗೆ ಈಗ 16 ತಿಂಗಳು ಎಂದು ಮಹಿಳೆಯೊಬ್ಬರು ಭಾವುಕರಾಗಿ ಬರೆದುಕೊಂಡಿದ್ದಾರೆ.
ಇಂದಿನ ಕಾಲದಲ್ಲಿ ಹೆಣ್ಣಾಗಲಿ ಗಂಡಾಗಲಿ ಕನಿಷ್ಠ ಮಗುವಿರಲಿ ಎನ್ನುವಂತಹ ಬಹುತೇಕರಿಗೆ ಬೇಕೂ ಎಂದರೂ ಮಕ್ಕಳಾಗುವುದಿಲ್ಲ. ಆದರೆ ಮಗು ಸುಲಭವಾಗಿ ಆಗುವವರು ಮಕ್ಕಳನ್ನು ಬೀದಿಯಲ್ಲೋ ಆಸ್ಪತ್ರೆಯಲ್ಲೋ ಬಿಟ್ಟು ಕರುಣೆ ಇಲ್ಲದಂತೆ ಹೊರಟು ಹೋಗುತ್ತಾರೆ. ಇತ್ತ ವೈದ್ಯೆಯ ವೀಡಿಯೋ ಸಾಕಷ್ಟು ವೈರಲ್ ಆಗುತ್ತಿದ್ದಂತೆ ಪೋಕಷರು ಕೂಡ ಮನಸ್ಸು ಬದಲಿಸಿ ಮಗುವನ್ನು ತಮ್ಮ ಮನೆಗೆ ಕರೆದೊಯ್ದಿದ್ದಾರೆ ಎಂದು ವರದಿಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.