
2021ರಲ್ಲಿ ಕರ್ನಾಟಕದ ತೃತೀಯ ಲಿಂಗಿ ಮಹಿಳೆಯೊಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ಬಂದಾಗ, ಎಲ್ಲರಿಗೂ ಅಚ್ಚರಿಯೋ ಅಚ್ಚರಿ. ಯಾರೀ ಮಂಜಮ್ಮ ಜೋಗತಿ ಎಂದು ಎಲ್ಲರೂ ಗೂಗಲ್ನಲ್ಲಿ ತಡಕಾಡಿದರೂ ಅಷ್ಟೊಂದು ಮಾಹಿತಿ ಸಿಕ್ಕಿರಲಿಲ್ಲ. ಹಲವಾರು ದಶಕಗಳಿಗೆ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳಿಗೆ ಸೀಮಿತವಾಗಿದ್ದ ಪದ್ಮಶ್ರೀ ಪ್ರಶಸ್ತಿ ಇಂಥ ಮಹಿಳೆಗೆ ಸಿಕ್ಕಾಗಲೇ ಮಂಜಮ್ಮ ಜೋಗತಿ ಯಾರು ಎಂದು ಬೆಳಕಿಗೆ ಬಂದವರು. ನಾಡಿನ ಜಾನಪದ ಕಲಾ ಪ್ರಕಾರದ ಬೆಳವಣಿಗೆಗೆ ಹಗಲಿರುಳೂ ಶ್ರಮಿಸುತ್ತಿರುವ ನಾಡಿನ ಶೋಷಿತರ ಧ್ವನಿಯಾಗಿ, ಅವರ ಕಲೆಯ ರಾಯಭಾರಿಯಾಗಿದ್ದಾರೆ ಮಂಜಮ್ಮ ಜೋಗತಿ. ಜಾನಪದ ಅಕಾಡೆಮಿ ಅಧ್ಯಕ್ಷರಾಗಿದ್ದರೂ ಚಿಕ್ಕ ಗುಡಿಸಲಿಲ್ಲಿಯೇ ವಾಸವಾಗಿರುವ ಇವರು, ಅನುಭವಿಸಿರುವ ನೋವು ಅಷ್ಟಿಷ್ಟಲ್ಲ. ಇದೀಗ ತಮ್ಮಂತೆಯೇ ಸಂಕಷ್ಟದಲ್ಲಿರುವವರಿಗೆ ಆಸರೆ ನೀಡುವ ಅಮ್ಮಾ ಆಗಿದ್ದಾರೆ. ಅವರ ಕಲಾಸೇವೆ ಪರಿಗಣಿಸಿ ರಾಜ್ಯೋತ್ಸವ, ಜಾನಪದಶ್ರೀ, ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಮಂಜಮ್ಮ ಜೋಗತಿ ಅವರಿಗೆ ಸಿಕ್ಕರೂ, ಅವರ ಕರಾಳ ಬದುಕಿನ ಕಥೆಯನ್ನು ಮಾತ್ರ ಎಲ್ಲರೂ ತಿಳಿದುಕೊಳ್ಳಲೇಬೇಕು.
ಅದಕ್ಕೆ ಕಾರಣವನ್ನೂ ಅವರೇ ಹೇಳಿದ್ದಾರೆ. ರಾಜೇಶ್ ಗೌಡ ಅವರ ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಮಂಜಮ್ಮ ಜೋಗತಿ ಅವರು, ತಮ್ಮ ಜೀವನದ ಕರಾಳ ಕಥೆಯನ್ನು ಹೇಳುತ್ತಲೇ, ಆ ಕಥೆಯ ಮೂಲಕವೇ ಅದೆಷ್ಟೋ ಜನರನ್ನು ಸಾಯುವುದರಿಂದ ತಪ್ಪಿಸಿದ್ದೇನೆ ಎಂದಿದ್ದಾರೆ. ಎಂಥದ್ದೇ ಕಷ್ಟ ಬಂದರೂ ಸಾಯುವುದೊಂದೇ ಮಾರ್ಗವಲ್ಲ, ನನ್ನ ಕಥೆಯನ್ನು ಕೇಳಿದ ಮೇಲೆ, ನೀವು ಸಾಯಬೇಕಾ ನಿರ್ಧರಿಸಿ ಎನ್ನುವ ಮೂಲಕ ಮಕ್ಕಳು ಹಾಗೂ ಅದೆಷ್ಟೋ ಜನರ ಬಾಳಲ್ಲಿ ಜೀವನ ಸ್ಫೂರ್ತಿಯನ್ನು ತುಂಬಿರುವುದಾಗಿ ಮಂಜಮ್ಮ ಹೇಳಿದ್ದಾರೆ.
ಚಹಾ ಮಾರುತ್ತಿದ್ದ ಯಶ್, ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು ಹೇಗೆ? ನಟನ ರೋಚಕ ಸ್ಟೋರಿ ಇದು...
ತಮ್ಮ ಬಾಲ್ಯದ ಜೀವನವನ್ನು ವಿವರಿಸಿದ್ದಾರೆ ಇವರು. ಕೊನೆಗೆ ಜೋಗತಿಯಾಗಿ ಬದುಕುತ್ತ ಭಿಕ್ಷೆ ಬೇಡಿ ಜೀವನ ಸಾಗಿಸಿದ್ದ ಸಂದರ್ಭದಲ್ಲಿ, ಭಿಕ್ಷೆ ಬೇಡಿ ಮರಳುವಾಗ ನಾಲ್ಕೈದು ಕಾಮಾಂಧರ ಕೈಯಲ್ಲಿ ಸಿಲುಕಿ ನರಳಿದ ಘನಘೋರ ಘಟನೆಯನ್ನು ವಿವರಿಸಿದ್ದಾರೆ. ಆ ಕಾಮಾಂಧರು ತಮ್ಮನ್ನು ಹೇಗೆ ಮುಕ್ಕಿ ತಿಂದರು ಎಂಬುದನ್ನು ವಿವರಿಸಿದ್ದಾರೆ. ಮನೆಗೆ ಬಂದರೆ ಹೇಳಿಕೊಳ್ಳಲು ಅಪ್ಪ-ಅಮ್ಮ ಇಲ್ಲ. ಬಂಧು-ಬಾಂಧವರು ಎನ್ನುವವರೂ ಇಲ್ಲ. ಅಂಥ ಸಂದರ್ಭದಲ್ಲಿ ನನಗೆ ಇದ್ದುದು ಸಾಯುವುದೊಂದೇ ಮಾರ್ಗವಾಗಿತ್ತು. ವಿಷ ಕುಡಿದೆ, ಆದರೆ ಸಾಯಲಿಲ್ಲ. ಕೊನೆಗೆ ರೈಲಿನ ಅಡಿಗೆ ಆದರೆ, ದೇಹ ಪೀಸ್ ಪೀಸ್ ಆಗುತ್ತದೆ ಎಂದು ಧೈರ್ಯ ಮಾಡಿ ರೈಲಿನ ಟ್ರ್ಯಾಕ್ ಬಳಿ ಹೊರಡಲು ಸಿದ್ಧಳಾದೆ... ಆದರೆ.... ಎನ್ನುತ್ತಲೇ ಅಂದು ನಡೆದ ಘಟನೆ ವಿವರಿಸಿದ್ದಾರೆ.
ಎಲ್ಲರಲ್ಲಿಯೂ ಎರಡು ಮನಸ್ಸು ಇರುತ್ತದೆ, ಒಂದು ಬೇಕು ಎನ್ನುತ್ತೆ, ಇನ್ನೊಂದು ಬೇಡ ಅನ್ನತ್ತೆ. ಸಾಯುವಾಗಲೂ ಹಾಗೇ ಆಗತ್ತೆ. ಒಂದು ಸಾಯಿ ಅನ್ನತ್ತೆ, ಇನ್ನೊಂದು ಬೇಡ, ಬದುಕು ಎನ್ನುತ್ತೆ ಎನ್ನುತ್ತಲೇ, ನಾನು ಮಕ್ಕಳಿಗೂ ಇದನ್ನೇ ಹೇಳುತ್ತೇನೆ, ಕೇಳಿ. ಅಂದು ನಾನು ನನ್ನ ಬೇಡ ಎನ್ನುವ ಮನಸ್ಸನ್ನು ಕೇಳಿದೆ. ಸಾಯುವ ನಿರ್ಧಾರದಿಂದ ಹೊರಕ್ಕೆ ಬಂದೆ. ಒಂದು ಚೊಂಬು ನೀರು ಕುಡಿದು ಮಲಗಿದೆ. ಬೆಳಿಗ್ಗೆ ಎದ್ದಾಗ ಬೇರೆಯದ್ದೇ ಲೋಕ ತೆರೆದುಕೊಂಡಿತು. ಏನಾದರೂ ಸಾಧನೆ ಮಾಡಬೇಕು ಎಂದುಕೊಂಡೆ. ಇಂದು ಅದು ನನಸಾಗಿದೆ ಎನ್ನುತ್ತಲೇ ಮಂಜಮ್ಮಾ ಅವರು, ನೋಡಿ ಮಕ್ಕಳೇ, ನೀವು ಒಂದೋ ಗಂಡು, ಇಲ್ಲವೇ ಹೆಣ್ಣು. ಆದರೆ ನಾನು ಅದೂ ಅಲ್ಲದೇ, ಇದೂ ಅಲ್ಲದೇ ಬದುಕಿ ಸಾಧಿಸಿ ತೋರಿಸಿದ್ದೇನೆ. ಅಂದು ಸಾಯುವ ಮನಸ್ಸು ಮಾಡಿದ್ದರೆ ಇಂದು ಪದ್ಮಶ್ರೀ ಬರುತ್ತಿರಲಿಲ್ಲ. ನಿಮಗೂ ಯಾವುದೇ ಕ್ಷಣದಲ್ಲಿ ಸಾಯುವ ಮನಸ್ಸಾದರೆ ನನ್ನ ಕಷ್ಟವನ್ನು ಒಮ್ಮೆ ನೋಡಿಬಿಡಿ ಎಂದಿದ್ದಾರೆ ಮಂಜಮ್ಮ. ತಮ್ಮದೇ ಜೀವನಗಾಥೆಯನ್ನು ಶಾಲೆ-ಕಾಲೇಜುಗಳಲ್ಲಿಯೂ ಹೇಳುವ ಮೂಲಕ ಹದಿಹರೆಯದ ಮನಸ್ಸನ್ನು ಹೇಗೆ ಬದಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ ಜೋಗತಿ.
ಇನ್ನು ಇವರ ಬಾಲ್ಯದ ಕುರಿತು ಹೇಳುವುದಾದರೆ, ಎಸ್ಸೆಸ್ಸೆಲ್ಸಿ ವರೆಗೆ ಓದಿರುವ ಮಂಜಮ್ಮ ಜೋಗತಿಗೆ ಮೂಲತಃ ಮಂಜುನಾಥ ಎಂದು ಹೆಸರಿಟ್ಟಿದ್ದರು. ಬಾಲಕನಾಗಿಯೇ ಇದ್ದ ಮಂಜುನಾಥ ಹೈಸ್ಕೂಲು ಪ್ರವೇಶಿಸುವ ಸಂದರ್ಭದಲ್ಲಿ ದೇಹದಲ್ಲಾದ ಬದಲಾವಣೆಯಿಂದ ಮಂಜಮ್ಮ ಜೋಗತಿಯಾಗಿ ಬದಲಾಗಬೇಕಾಯಿತು. ಬಾಲಕ ಮಂಜುನಾಥ ದೇಹದಲ್ಲಾದ ಬದಲಾವಣೆ ಬಳಿಕ ಮಂಜಮ್ಮ ಜೋಗತಿಯಾಗಿ ಬದಲಾಯಿಸಿತು. ಎಲ್ಲರಂತೆ ಮಗ ಬೆಳೆದು ಆಸರೆಯಾಗುತ್ತಾನೆ ಎಂದುಕೊಂಡಿದ್ದ ತಂದೆ-ತಾಯಿ ಮಗನಲ್ಲಾದ ಬೆಳವಣಿಗೆ ಕಂಡು ಕುಗ್ಗಿ ಹೋದರು. ತಾನು ಮಾಡದ ತಪ್ಪಿಗೆ ಕುಟುಂಬ ಸದಸ್ಯರು ನೊಂದುಕೊಂಡರು ಎಂದು ಜರ್ಝರಿತಗೊಂಡು ಆತ್ಮಹತ್ಯೆಗೂ ಪ್ರಯತ್ನಿಸಿ, ಬದುಕುಳಿದ ಮಂಜುನಾಥ, ನನ್ನಿಂದ ಕುಟುಂಬ ಸದಸ್ಯರಿಗೆ ತಲೆ ತಗ್ಗಿಸುವಂತಾಗಬಾರದು ಎಂದು ಕುಟುಂಬದಿಂದ ದೂರ ಉಳಿದು ಮಂಜಮ್ಮ ಜೋಗತಿಯಾಗಿಯೇ ಬದುಕಲಾರಂಭಿಸಿದಳು. ತಂದೆ-ತಾಯಿ ದೂರ ಇಟ್ಟ ಬಳಿಕ ಒಬ್ಬಂಟಿಯಾಗಿಯೇ ಇದ್ದ ಮಂಜಮ್ಮ, ಕಾಳಮ್ಮ ಜೋಗತಿ ಎಂಬುವರನ್ನು ಗುರುವಾಗಿ ಸ್ವೀಕರಿಸಿದರಲ್ಲದೆ, ತನ್ನ ಎಲ್ಲ ವಿದ್ಯೆಯನ್ನು ಮಂಜಮ್ಮಗೆ ಧಾರೆ ಎರೆದರು. ಹೊಟ್ಟೆ ಪಾಡಿಗಾಗಿ ಎಂದೂ ಭಿಕ್ಷೆ ಬೇಡದ ಮಂಜಮ್ಮ ಅವರು ಜೋಗತಿ ನೃತ್ಯದ ಮೂಲಕ ಕಾರ್ಯಕ್ರಮಗಳನ್ನು ನೀಡಿ ಅದರಿಂದ ಗೌರವಧನದಲ್ಲಿ ಜೀವನ ಕಟ್ಟಿಕೊಂಡರು. ಅಷ್ಟೇ ಅಲ್ಲ, ಅನೇಕ ಜೋಗತಿಯರಿಗೆ ನೃತ್ಯ ತರಬೇತಿ ನೀಡಿ ಅವರ ಬದುಕಿಗೂ ನೆರವಾದರು.
ಹಿಂದೂಗಳ ದ್ವೇಷಿಸೋದ ಕಲಿಸ್ತಾರೆ, 1 ಲಕ್ಷಕ್ಕೆ ಹುಡುಗಿಯರ ಖರೀದಿಸ್ತಾರೆ: ವಕೀಲೆ ನಾಜಿಯಾ ಖಾನ್ ವಿಡಿಯೋ ವೈರಲ್
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.