
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಸಾಕಷ್ಟು ಸಾವು-ನೋವಿಗೆ ಕಾರಣವಾಗಿದೆ. ಯುದ್ಧ ಬಾಧಿತ ಉಕ್ರೇನ್ ರಾಜಧಾನಿ ಕೀವ್‍ನಲ್ಲಿ ಎರಡು ಬಾರಿ ಸ್ಫೋಟ ಸಂಭವಿಸಿದೆ. ಅದೆಷ್ಟೋ ಮಂದಿ ಮನೆ, ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದಾರೆ. ಪುಟ್ಟ ಮಕ್ಕಳು ಪೋಷಕರನ್ನು ಕಳೆದುಕೊಂಡು ಅನಾಥರಾಗಿ ಬೀದಿ ಪಾಲಾಗಿದ್ದಾರೆ. ರಸ್ತೆ ಬದಿಗಳಲ್ಲಿ ನಿಂತು ರಕ್ಷಿಸುವಂತೆ ಮೊರೆಯಿಡುತ್ತಿದ್ದಾರೆ. ರಷ್ಯಾ (Russia) ವಿರುದ್ಧ ಹೋರಾಡಲು ಉಕ್ರೇನ್‌ನ (Ukraine) ಪ್ರಜೆಗಳೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.
ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಪತ್ನಿ ಒಲೆನಾ ಝೆಲೆನ್ಸ್ಕಾ (Olena Zelenska)ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳೊಂದಿಗೆ ಅನೇಕರನ್ನು ಪ್ರೇರೇಪಿಸುತ್ತಿದ್ದಾರೆ. ರಷ್ಯಾದ ಬೃಹತ್ ಮಿಲಿಟರಿ ಬೆಂಗಾವಲು ಪಡೆ ಉಕ್ರೇನ್‌ನ ರಾಜಧಾನಿ ಕೈವ್‌ನ್ನು ಆಕ್ರಮಿಸುತ್ತಿದ್ದರೂ, ಒಲೆನಾ ಝೆಲೆನ್ಸ್ಕಾ ಸಂಘರ್ಷದ ವಿರುದ್ಧ ಸಮಾನ ಉತ್ಸಾಹದಿಂದ ಮಾತನಾಡುತ್ತಿದ್ದಾರೆ. ಭಯಭೀತರಾದ ಜನರಿಗೆ ಉತ್ಸಾಹದ ಮಾತುಗಳ ಮೂಲಕ ಬೆಂಬಲ ನೀಡುತ್ತಿದ್ದಾರೆ. ಜೀವನಕ್ಕೆ ಭರವಸೆ ತುಂಬುತ್ತಿದ್ದಾರೆ.
Russia Ukraine Crisis: ರಷ್ಯಾದ ಸೇನಾ ಟ್ಯಾಂಕರ್ ಅನ್ನೇ ಟೋಯಿಂಗ್ ಮಾಡಿದ ಉಕ್ರೇನ್ ರೈತ!
ಇತ್ತೀಚೆಗೆ ಉಕ್ರೇನ್‌ನ ವೃದ್ಧೆಯೊಬ್ಬರು ಎಕೆ 47 (AK 47) ಕೈಯಲ್ಲಿ ಹಿಡಿದು ಬಳಸಲು ಕಲಿಯುತ್ತಿದ್ದ ದೃಶ್ಯ ಪೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಮಾಜಿ ಮಿಸ್ ಉಕ್ರೇನ್ ಕೂಡಾ ತಮ್ಮ ದೇಶಕ್ಕಾಗಿ ಆಯುಧ (Weapon) ಹಿಡಿಯೋಕೆ ರೆಡಿ ಎಂದು ಸಿದ್ಧರಾಗಿದ್ದರು. ಉಕ್ರೇನ್ ಮಾಜಿ ಸುಂದರಿ ತನ್ನ ದೇಶವನ್ನು ರಷ್ಯಾದ ಆಕ್ರಮಣಕಾರರಿಂದ ರಕ್ಷಿಸಲು ಪ್ರತಿಜ್ಞೆ ಮಾಡಿದ್ದರು.
ಉಕ್ರೇನ್‌ನ ಸ್ಥಿತಿಗಾಗಿ ಎಲ್ಲರೂ ಮರುಗುತ್ತಿದ್ದಾರೆ. ರಷ್ಯಾದ ಪಡೆಗಳು ಕೈವ್ ಅನ್ನು ಸುತ್ತುವರಿದಿರುವಾಗ ಉಕ್ರೇನಿಯನ್ ಅಧ್ಯಕ್ಷರ ಪತ್ನಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಉಕ್ರೇನ್‌ನ ಪ್ರಥಮ ಮಹಿಳೆ ಒಲೆನಾ ಝೆಲೆನ್ಸ್ಕಾ ರಷ್ಯಾದ ಆಕ್ರಮಣದ ಪ್ರತಿಯಾಗಿ ಬಲವಾದ ಪ್ರತಿರೋಧವನ್ನು ಒಡ್ಡಿದ್ದಕ್ಕಾಗಿ ಉಕ್ರೇನಿಯನ್ನರನ್ನು ಹೊಗಳಿದ್ದಾರೆ. ಉಕ್ರೇನ್ನಿಯನ್ನರ ಧೈರ್ಯ, ಸಾಹಸಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಲೆನಾ ಝೆಲೆನ್ಸ್ಕಾ ಯುದ್ಧದ ಸಮಯದಲ್ಲಿ ದೇಶದ ಪ್ರೇರಕ ಶಕ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. 44 ವರ್ಷದ ಝೆಲೆನ್ಸ್ಕಾ ಶಕ್ತಿ ಮತ್ತು ಏಕತೆಯ ಕರೆಗಳೊಂದಿಗೆ ಅನೇಕರನ್ನು ಪ್ರೇರೇಪಿಸಿದ್ದಾರೆ. ಸದ್ಯ ಉಕ್ರೇನಿಯನ್ ಅಧ್ಯಕ್ಷ ವೊಲೊಡೊಮಿರ್ ಝೆಲೆನ್ಸ್ಕಿ (Volodymyr Zelenskyy) ಅವರ ಪತ್ನಿ ಒಲೆನಾ ಝೆಲೆನ್ಸ್ಕಾತಮ್ಮ ಇಬ್ಬರು ಮಕ್ಕಳಾದ ಸಶಾ ಮತ್ತು ಸಿರಿಲ್ ಜೊತೆಗೆ ಉಕ್ರೇನ್‌ನಲ್ಲಿ ಉಳಿದಿದ್ದಾರೆ ಎಂದು ತಿಳಿದುಬಂದಿದೆ.
Russia Ukraine Crisis: ರಷ್ಯಾದಿಂದ ಮತ್ತೆ ಅಣ್ವಸ್ತ್ರ ಬೆದರಿಕೆ
ಉಕ್ರೇನಿಯನ್ ಅಧ್ಯಕ್ಷ ವೊಲೊಡೊಮಿರ್ ಝೆಲೆನ್ಸ್ಕಿ ಅವರು ತಮ್ಮ ಕುಟುಂಬದೊಂದಿಗೆ ರಾಜಧಾನಿ ಕೈವ್‌ನಲ್ಲಿ ಉಳಿಯಲು ನಿರ್ಧರಿಸಿದ್ದಾರೆ. ಝೆಲೆನ್ಸ್ಕಿ ವೀಡಿಯೋವೊಂದರಲ್ಲಿ ರಷ್ಯಾ ಅವರನ್ನು ಟಾರ್ಗೆಟ್ ನಂಬರ್ ಒನ್ ಮತ್ತು ಅವರ ಕುಟುಂಬವನ್ನು ಟಾರ್ಗೆಟ್ ನಂಬರ್ ಟು ಎಂದು ಗುರುತಿಸಿದೆ ಎಂದು ಹೇಳಿದ್ದಾರೆ. ‘ರಷ್ಯಾ, ಉಕ್ರೇನ್ ರಾಷ್ಟ್ರದ ಮುಖ್ಯಸ್ಥರನ್ನು ನಾಶಪಡಿಸುವ ಮೂಲಕ ಉಕ್ರೇನ್ ಅನ್ನು ರಾಜಕೀಯವಾಗಿ ನಾಶಮಾಡಲು ಬಯಸುತ್ತಿದೆ. ಆದರೆ ನಾನು ರಾಜಧಾನಿಯಲ್ಲಿ ಉಳಿಯುತ್ತೇನೆ. ನನ್ನ ಕುಟುಂಬವೂ ಉಕ್ರೇನ್‌ನಲ್ಲಿದೆ’ ಎಂದಿದ್ದಾರೆ.
ಉಕ್ರೇನ್‌ನಲ್ಲಿ ಉಳಿಯಲು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಬಿಕ್ಕಟ್ಟಿನ ನೈಜತೆಯನ್ನು ಹಂಚಿಕೊಂಡಿದ್ದಕ್ಕಾಗಿ ಝೆಲೆನ್ಸ್ಕಾ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಉಕ್ರೇನ್‌ನಲ್ಲಿ ಸದ್ಯ ಈ ರೀತಿಯ ಪರಿಸ್ಥಿತಿ ಇದೆ. ಜಗತ್ತು ನೋಡಲು ವೀಡಿಯೊ ಇಲ್ಲಿದೆ. ನಾವು ಯುದ್ಧದಲ್ಲಿದ್ದೇವೆ' ಎಂದು ಅವರು ಉಕ್ರೇನ್‌ನಲ್ಲಿನ ಹಿಂಸಾಚಾರದ ಕ್ಲಿಪ್‌ಗಳನ್ನು ತೋರಿಸುವ ಇತ್ತೀಚಿನ ವಿಡಯೋವನ್ನು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
‘ಪುಟಿನ್ ದಾಳಿಯ ಕಾರಣ, ಉಕ್ರೇನಿಯನ್ನರು ತಮ್ಮ ಮಕ್ಕಳನ್ನು ಪ್ರತಿ ರಾತ್ರಿ ನೆಲಮಾಳಿಗೆಗೆ ಕರೆದುಕೊಂಡು ಹೋಗಬೇಕು ಮತ್ತು ಅವರ ಮನೆಗಳ ಗೋಡೆಗಳ ಕೆಳಗೆ ಶತ್ರುಗಳೊಂದಿಗೆ ಹೋರಾಡಬೇಕು. ಉಕ್ರೇನ್ ಶಾಂತಿಯುತ ದೇಶವಾಗಿದೆ. ನಾವು ಯುದ್ಧಕ್ಕೆ ವಿರುದ್ಧವಾಗಿದ್ದೇವೆ. ನಾವೆಂದು ಮೊದಲು ದಾಳಿ ಮಾಡಲಿಲ್ಲ. ಆದರೆ ನಾವು ಬಿಟ್ಟುಕೊಡಲು ಹೋಗುವುದಿಲ್ಲ. ಇಡೀ ಜಗತ್ತೇ, ನೋಡಿ: ನಿಮ್ಮ ದೇಶಗಳಲ್ಲಿಯೂ ನಾವು ಶಾಂತಿಗಾಗಿ ಹೋರಾಡುತ್ತಿದ್ದೇವೆ’ ಎಂದು ತಿಳಿಸಿದ್ದಾರೆ
ಒಲೆನಾ ಝೆಲೆನ್ಸ್ಕ ಮೂಲತಃ ಹಾಸ್ಯ ಚಿತ್ರಕಥೆಗಾರರಾಗಿದ್ದರು. ಹಾಸ್ಯ ಬರಹಗಾರ ಮತ್ತು ಚಿತ್ರಕಥೆಗಾರನಾಗಿ ತೆರೆಮರೆಯಲ್ಲಿ ವರ್ಷಗಳ ಕಾಲ ಕೆಲಸ ಮಾಡಿದರು. ಪತಿ ವೊಲೊಡಿಮಿರ್ ಝೆಲೆನ್ಸ್ಕಿ ಉಕ್ರೇನ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗ ಒಲೆನಾ ತಮ್ಮ ಕೆಲಸವನ್ನು ಮುಂದುವರೆಸಿದರು. ಅಸ್ತಿತ್ವದಲ್ಲಿರುವ ವೃತ್ತಿಜೀವನದೊಂದಿಗೆ ತಮ್ಮ ರಾಜಕೀಯ ಜೀವನವನ್ನು ಸಮತೋಲನಗೊಳಿಸುವ ಮಾರ್ಗಗಳನ್ನು ಕಂಡುಕೊಂಡರು. ಒಲೆನಾ ಝೆಲೆನ್ಸ್ಕ ಉಕ್ರೇನ್ ರಣಭೂಮಿಯಲ್ಲಿ ಸದ್ಯ ಧ್ವನಿಯೆತ್ತಿ ಮಾತನಾಡುತ್ತಿರುವ ಧೀರ ಮಹಿಳೆಯಂದು ಗುರುತಿಸಿಕೊಂಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.