
ಮುಟ್ಟು (Menstruation) ನೈಸರ್ಗಿಕ ಕ್ರಿಯೆ. ಇದ್ರಿಂದ ಹೆಣ್ಣು (Females) ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದ್ರೆ ಮುಟ್ಟಿನ ವಿಷ್ಯದಲ್ಲಿ ಈಗ್ಲೂ ಸಂಪ್ರದಾಯ (Tradition), ಪದ್ಧತಿಗಳನ್ನು ಅನೇಕ ಕಡೆ ಆಚರಣೆ ಮಾಡಲಾಗ್ತಿದೆ. ಮುಟ್ಟಾದ ಹುಡುಗಿಯರು – ಮಹಿಳೆಯರಿಗೆ ಅನೇಕ ನಿಷೇಧಗಳಿವೆ. ಇದು ಮಹಿಳೆಯರ ಭಾವನಾತ್ಮಕ ಸ್ಥಿತಿ, ಮನಸ್ಥಿತಿ ಮತ್ತು ಜೀವನಶೈಲಿ ಮತ್ತು ಮುಖ್ಯವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಭಿವೃದ್ಧಿ ಹೊಂದುತ್ತಿರುವ ಭಾರತದಲ್ಲಿ ಮುಟ್ಟಿನ ಬಗ್ಗೆ ಸರಿಯಾದ ಜ್ಞಾನವಿಲ್ಲ. ನೈರ್ಮಲ್ಯದ ಬಗ್ಗೆ ಶಿಕ್ಷಣವಿಲ್ಲ. ಇದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ. ಭಾರತದಲ್ಲಿ ಪ್ರಚಲಿತದಲ್ಲಿರುವ ಮುಟ್ಟಿನ ಸಂಬಂಧಿತ ಪುರಾಣಗಳು, ಮಹಿಳೆಯರ ಜೀವನದ ಮೇಲೆ ಅವುಗಳ ಪ್ರಭಾವ, ಪ್ರಾಥಮಿಕ ಆರೈಕೆಯಲ್ಲಿ ಈ ಸಮಸ್ಯೆಗಳನ್ನು ಪರಿಹರಿಸುವ ತಂತ್ರಗಳ ಕುರಿತು ಸಂಕ್ಷಿಪ್ತ ವಿವರಣೆ ಇಲ್ಲಿದೆ.
ಮುಟ್ಟು ಅಂದ್ರೇನು? : ಸಂತಾನೋತ್ಪತ್ತಿ ಚಕ್ರದ ನೈಸರ್ಗಿಕ ಭಾಗ ಮುಟ್ಟು. ಗರ್ಭಾಶಯದಿಂದ ರಕ್ತವು ಯೋನಿಯ ಮೂಲಕ ಹೊರಬರುವ ವಿಧಾನ. ಇದು ನೈಸರ್ಗಿಕ ಪ್ರಕ್ರಿಯೆ. ಸಾಮಾನ್ಯವಾಗಿ 11 ರಿಂದ 14 ವರ್ಷ ವಯಸ್ಸಿನ ಹುಡುಗಿಯರಲ್ಲಿ ಕಂಡುಬರುತ್ತದೆ. ಇದು ಪ್ರೌಢಾವಸ್ಥೆಯ ಪ್ರಾರಂಭದ ಸೂಚಕವಾಗಿದೆ.
ಭಾರತದಲ್ಲಿ ಮುಟ್ಟಿಗೆ ಸಂಬಂಧಿಸಿದಂತೆ ಇರುವ ನಂಬಿಕೆ :
ಭಾರತದ ಅನೇಕ ಭಾಗಗಳಲ್ಲಿ, ಮುಟ್ಟನ್ನು ಇನ್ನೂ ಕೊಳಕು ಮತ್ತು ಅಶುದ್ಧವೆಂದು ಪರಿಗಣಿಸಲಾಗಿದೆ. ಮುಟ್ಟಿನ ಬಗ್ಗೆ ಅನೇಕ ಪುರಾಣ ಕಥೆಗಳಿವೆ. ಇಂದ್ರನು ಬ್ರಾಹ್ಮಣರ ಹತ್ಯೆ ಮಾಡಿದ್ದನು. ಇಂದ್ರನ ಅಪರಾಧದ ಒಂದು ಭಾಗವನ್ನು ಸ್ತ್ರೀಯರು ತೆಗೆದುಕೊಂಡರು. ಬ್ರಾಹ್ಮಣ ಹತ್ಯೆಯ ಅಪರಾಧವು ಪ್ರತಿ ತಿಂಗಳು ಋತುಸ್ರಾವವಾಗಿ ಪ್ರಕಟವಾಗುತ್ತದೆ ಎಂದು ಗ್ರಂಥಗಳಲ್ಲಿ ಹೇಳಲಾಗಿದೆ.
ಇದಲ್ಲದೆ, ಹಿಂದೂ ನಂಬಿಕೆಯಂತೆ ಮುಟ್ಟಿನ ದಿನಗಳಲ್ಲಿ ಮಹಿಳೆಯರು ಸಾಮಾನ್ಯ ಜೀವನದಲ್ಲಿ ಭಾಗವಹಿಸುವಂತಿಲ್ಲ. ಕುಟುಂಬಕ್ಕೆ ಮತ್ತು ಜೀವನದ ದಿನನಿತ್ಯದ ಕೆಲಸಗಳಿಗೆ ಮರಳುವ ಮುನ್ನ ಶುದ್ಧಿಯಾಗಬೇಕು ಎನ್ನಲಾಗುತ್ತದೆ. ವೈಜ್ಞಾನಿಕವಾಗಿ, ಮುಟ್ಟಿನ ನಿಜವಾದ ಕಾರಣವೆಂದರೆ ಅಂಡೋತ್ಪತ್ತಿ ನಂತರ ಆದ್ರೆ ವಿಜ್ಞಾನದಲ್ಲಿ ಇದನ್ನು ಗರ್ಭಾವಸ್ಥೆಯ ತಪ್ಪಿದ ಅವಕಾಶ ಎಂದು ಹೇಳಲಾಗುತ್ತದೆ. ಇದು ಎಂಡೊಮೆಟ್ರಿಯಲ್ ನಾಳಗಳಿಂದ ರಕ್ತಸ್ರಾವಕ್ಕೆ ಕಾರಣವಾಗುತ್ತದೆ ಮತ್ತು ಮುಂದಿನ ಚಕ್ರವನ್ನು ಸಿದ್ಧಪಡಿಸುತ್ತದೆ. ಹಾಗಾಗಿ ಮುಟ್ಟಿನ ಸಮಯದಲ್ಲಿ ಮಹಿಳೆ ಅಶುದ್ಧಳಲ್ಲ ಎಂಬುದನ್ನು ಎಲ್ಲರೂ ತಿಳಿಯಬೇಕಿದೆ.
ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರು ದೇವರ ಮನೆ ಹಾಗೂ ದೇವಸ್ಥಾನಕ್ಕೆ ಹೋಗುವುದಿಲ್ಲ. ಕೆಲ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಅಡುಗೆ ಮನೆಗೆ ಹೋಗುವುದಿಲ್ಲ. ಅಷ್ಟೇ ಅಲ್ಲ ದೇವರ ಗ್ರಂಥ ಹಾಗೂ ಪುರಾಣ ಪುಸ್ತಕಗಳನ್ನು ಮುಟ್ಟುವುದಿಲ್ಲ. ಮುಟ್ಟಾದ ಮಹಿಳೆಯನ್ನು ಕುಟುಂಬಸ್ಥರು ಟಚ್ ಮಾಡುವುದಿಲ್ಲ.
ಮುಟ್ಟಾದ ಮಹಿಳೆ ಅಶುದ್ಧಳು ಹಾಗೂ ನೈರ್ಮಲ್ಯವಿಲ್ಲದವಳು ಎಂದು ನಂಬಲಾಗುತ್ತದೆ. ಇದೇ ಕಾರಣಕ್ಕೆ ಆಕೆಗೆ ಆಹಾರ ತಯಾರಿಸಲು ಬಿಡುವುದಿಲ್ಲ. 2011ರಲ್ಲಿ ನಡೆಸಿದ ಅಧ್ಯಯನವೊಂದರಲ್ಲಿ ಮುಟ್ಟಿನ ಸಮಯದಲ್ಲಿ ಮಹಿಳೆ ದೇಹದಿಂದ ಕೆಟ್ಟ ವಾಸನೆ ಬರುತ್ತದೆ ಎನ್ನಲಾಗಿತ್ತು. ಆದ್ರೆ ಯಾವುದೇ ವೈಜ್ಞಾನಿಕ ಪರೀಕ್ಷೆ, ಮುಟ್ಟಾದ ಮಹಿಳೆ ಆಹಾರ ತಯಾರಿಸಿದ್ರೆ ಆಹಾರ ಹಾಳಾಗುತ್ತದೆ ಎಂಬ ವರದಿ ನೀಡಿಲ್ಲ. ನೈರ್ಮಲ್ಯದ ಹೆಸರಿನಲ್ಲಿ ಅನೇಕ ಕಡೆ ಮುಟ್ಟಾದ ಮಹಿಳೆಯರು ಉಪ್ಪಿನಕಾಯಿ ಮುಟ್ಟುವುದಿಲ್ಲ.
ಇಷ್ಟೇ ಅಲ್ಲ ಮುಟ್ಟು ಹಾಗೂ ದುಷ್ಟಶಕ್ತಿ ಬಗ್ಗೆಯೂ ಭಾರತದಲ್ಲಿ ಕೆಲ ನಂಬಿಕೆಯಿದೆ. ಮುಟ್ಟಾದ ಮಹಿಳೆ ಬಳಸಿದ ಬಟ್ಟೆಯನ್ನು ಕೆಲ ಪ್ರದೇಶದಲ್ಲಿ ದುಷ್ಟಶಕ್ತಿ ಪ್ರಯೋಗಕ್ಕೆ ಬಳಕೆ ಮಾಡಲಾಗುತ್ತದೆ. ಮುಟ್ಟಾದ ಮಹಿಳೆ ಬಟ್ಟೆ ಬಳಸಿಕೊಂಡು ತಾಂತ್ರಿಕರು ಆ ಮಹಿಳೆಗೆ ಹಾನಿ ಮಾಡಬಹುದು ಎಂಬ ನಂಬಿಕೆಯೂ ಇದೆ. ಪುರುಷನ ಮೇಲೆ ಇಚ್ಛೆ ಹೊಂದಿರುವ ಮಹಿಳೆ ಆತನನ್ನು ಸೆಳೆಯಲು ಮುಟ್ಟಿನ ಸಮಯದಲ್ಲಾದ ರಕ್ತಸ್ರಾವವನ್ನು ಬಳಸಬಹುದು ಎಂಬ ಚಿತ್ರ – ವಿಚಿತ್ರ ನಂಬಿಕೆಗಳಿವೆ. ಆದ್ರೆ ಇದ್ಯಾವುದಕ್ಕೂ ವೈಜ್ಞಾನಿಕ ವಿವರಣೆಯಿಲ್ಲ.
ಋತುಚಕ್ರದ ಸಮಯದಲ್ಲಿ ಕೆಲವು ಕಟ್ಟುನಿಟ್ಟಾದ ಆಹಾರ ನಿರ್ಬಂಧಗಳನ್ನು ಅನುಸರಿಸಲಾಗುತ್ತದೆ. ಮೊಸರು, ಹುಣಸೆಹಣ್ಣು ಮತ್ತು ಉಪ್ಪಿನಕಾಯಿಗಳನ್ನು ಸಾಮಾನ್ಯವಾಗಿ ಋತುಚಕ್ರದ ಹುಡುಗಿಯರಿಗೆ ನೀಡುವುದಿಲ್ಲ.
Breakup ಒಂದೇ ಅಸ್ತ್ರವಲ್ಲ! ನಿಮ್ಮನ್ನೊಮ್ಮೆ ಪ್ರಶ್ನಿಸಿಕೊಳ್ಳಿ!
ವ್ಯಾಯಾಮಕ್ಕೆ ಸಂಬಂಧಿಸಿದಂತೆಯೂ ತಪ್ಪು ಕಲ್ಪನೆಗಳಿವೆ. ವ್ಯಾಯಾಮದಿಂದ ಆರೋಗ್ಯ ಹದಗೆಡುತ್ತದೆ ಎಂದು ನಂಬಲಾಗಿದೆ. ಆದ್ರೆ ಮುಟ್ಟಿನ ಸಮಯದಲ್ಲಿ ಲಘು ವ್ಯಾಯಾಮ ಮಾಡುವುದು ಒಳ್ಳೆಯದು.
ಮುಟ್ಟನ್ನು ಧರ್ಮ, ಮಾಲಿನ್ಯ, ಶುದ್ಧತೆ ದೃಷ್ಟಿಯಿಂದಲೂ ನೋಡಲಾಗುತ್ತದೆ. ಮುಟ್ಟಾದ ಮಹಿಳೆಯನ್ನು ಮಾಲಿನ್ಯಕ್ಕೆ ಕಾರಣವಾಗ್ತಾಳೆಂದು ನಂಬಲಾಗಿದೆ. ನೀರನ್ನು ಶುದ್ಧತೆಗೆ ಹೋಲಿಕೆ ಮಾಡಲಾಗುತ್ತದೆ. ಹಾಗಾಗಿಯೇ ಅನೇಕ ಕಡೆ ಋತುಸ್ರಾವವಾದ ತಕ್ಷಣ ಸ್ನಾನ ಮಾಡುವಂತೆ ಸೂಚನೆ ನೀಡಲಾಗುತ್ತದೆ.
ಇದಲ್ಲದೆ ಮುಟ್ಟಾದವರು ಹಸುವನ್ನು ಮುಟ್ಟುವಂತಿಲ್ಲ. ಹಸುವಿನ ಸ್ಪರ್ಶ ಮಾಡಿದ್ರೆ ಹಸು ಬಂಜೆಯಾಗುತ್ತದೆ ಎಂದು ನಂಬಲಾಗಿದೆ.
ಬರೋಬ್ಬರಿ 23 ವರ್ಷದಿಂದ ಸ್ಯಾಂಡ್‌ವಿಚ್ ಬಿಟ್ಟು ಬೇರೇನೂ ತಿಂದೇ ಇಲ್ಲ ಈಕೆ !
ಮುಟ್ಟಿನ ಬಗ್ಗೆ ಜಾಗೃತಿ ಅಗತ್ಯ : ಈಗ್ಲೂ ಮುಟ್ಟಿನ ಬಗ್ಗೆ ಅನೇಕ ಮಹಿಳೆಯರಿಗೆ ಸರಿಯಾದ ಜ್ಞಾನವೇ ಇಲ್ಲ. ಮುಟ್ಟಿನ ಸಂದರ್ಭದಲ್ಲಿ ಬಳಸಿದ ಬಟ್ಟೆಯನ್ನೇ ಬಳಸುವವರಿದ್ದಾರೆ. ಹಾಗೆಯೇ ಪೇಪರ್,ಕೊಳಕು ವಸ್ತುಗಳನ್ನು ಬಳಸುವವರಿದ್ದಾರೆ. ನಾಲ್ಕು ದಿನ ಸ್ನಾನ ಮಾಡದ ಮಹಿಳೆಯರಿದ್ದಾರೆ. ಮೊದಲ ಮತ್ತು ಅಗ್ರಗಣ್ಯ ತಂತ್ರವೆಂದರೆ ಹದಿಹರೆಯದ ಹುಡುಗಿಯರಲ್ಲಿ ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವುದು. ಚಿಕ್ಕ ಹುಡುಗಿಯರು ಹೆಚ್ಚಾಗಿ ಮುಟ್ಟಿನ ಬಗ್ಗೆ ಸೀಮಿತ ಜ್ಞಾನ ಹೊಂದಿರುತ್ತಾರೆ. ಅವರ ತಾಯಂದಿರಿಗೆ ಇದ್ರ ಬಗ್ಗೆ ಸರಿಯಾಗಿ ತಿಳಿದಿರುವುದಿಲ್ಲ. ಹಾಗಾಗಿ ಅವರು ಮಕ್ಕಳಿಗೆ ಹೇಳುವುದಿಲ್ಲ. ಮಕ್ಕಳಿಗೆ ಈ ಬಗ್ಗೆ ಜ್ಞಾನ ನೀಡಲು ಆರೋಗ್ಯ ಶಿಕ್ಷಣ ಅಭಿಯಾನಗಳು ನಡೆಯಬೇಕು. ಮುಟ್ಟಿನ ಬಗ್ಗೆ ಶಾಲಾ ಶಿಕ್ಷಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ.
ಶಿಕ್ಷಣದ ಕೊರತೆ ಕೂಡ ಇದಕ್ಕೆ ಕಾರಣವಾಗುತ್ತದೆ. ಹೆಣ್ಣು ಮಕ್ಕಳು ವಿದ್ಯಾವಂತರಾಗಬೇಕು. ಅವರಿಗೆ ಶಿಕ್ಷಣ ಸಿಗಬೇಕು. ನ್ಯಾಪ್ಕಿನ್ ಬಳಕೆ ಹಾಗೂ ಸ್ವಚ್ಛತೆ ಬಗ್ಗೆ ಜ್ಞಾನ ನೀಡ್ಬೇಕು. ಶೌಚಾಲಯಗಳ ಸಂಖ್ಯೆ ಹೆಚ್ಚಿಸಬೇಕು. ದೆಹಲಿಯಲ್ಲಿ, ಮಹಿಳೆಯರಿಗೆ ಅಂದಾಜು 132 ಸಾರ್ವಜನಿಕ ಶೌಚಾಲಯಗಳಿದ್ದರೆ ಪುರುಷರಿಗೆ 1534 ಶೌಚಾಲಯಗಳಿವೆ. ಇದಲ್ಲದೆ ಕಡಿಮೆ ವೆಚ್ಚದಲ್ಲಿ ಸ್ಯಾನಿಟರಿ ಪ್ಯಾಡ್ ಸಿಗುವಂತಾಗಬೇಕು. ಗ್ರಾಮೀಣ ಮತ್ತು ಕೊಳೆಗೇರಿ ಪ್ರದೇಶಗಳಲ್ಲಿ ಇದನ್ನು ವಿತರಿಸಬೇಕು. ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಇದ್ರ ಬಗ್ಗೆ ಜ್ಞಾನ ನೀಡಿದ್ರೆ ಅವರು ತಾಯಿ, ಪತ್ನಿ,ಮಕ್ಕಳ ಜೊತೆ ಕೈಜೋಡಿಸುತ್ತಾರೆ. ಗೊಡ್ಡು ನಂಬಿಕೆಗಳು ದೂರವಾಗುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.