ಸಾರ್ವಜನಿಕ ಸಾರಿಗೆಗಿಂತ ಖಾಸಗಿ ವಾಹನಗಳ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಬಹುತೇಕ ಎಲ್ಲರ ಮನೆಯಲ್ಲೂ ದ್ವಿಚಕ್ರ ವಾಹನವನ್ನು ನಾವು ನೋಡ್ಬಹುದು. ಗರ್ಭಿಣಿಯರು ಕೂಡ ದ್ವಿಚಕ್ರ ವಾಹನವನ್ನು ಪ್ರಯಾಣಕ್ಕೆ ಆಯ್ಕೆ ಮಾಡಿಕೊಳ್ತಾರೆ. ಆದ್ರೆ ಇದು ತಾಯಿ- ಮಗುವಿಗೆ ಒಳ್ಳೆಯದಾ ಎಂಬ ಪ್ರಶ್ನೆ ಕಾಡೋದು ಸಾಮಾನ್ಯ.
ಇತ್ತೀಚಿನ ಒತ್ತಡದ ಜೀವನ ಹಾಗೂ ಆಹಾರ ಕ್ರಮಗಳಿಂದಾಗಿ ಅನೇಕ ಮಹಿಳೆಯರು ತಾಯಿಯಾಗದ ಸಮಸ್ಯೆ ಎದುರಿಸ್ತಿದ್ದಾರೆ. ಗರ್ಭಧರಿಸಲು ಅನೇಕ ಸವಾಲುಗಳನ್ನು ಎದುರಿಸಬೇಕಾಗಿದೆ. ಅನೇಕ ಚಿಕಿತ್ಸೆ ನಂತ್ರ ಗರ್ಭ ಧರಿಸಿದ್ರೂ ಮಗು ಸುರಕ್ಷಿತವಾಗಿ ಹೊರಗೆ ಬರುವವರೆಗೂ ಆತಂಕ ಮನೆ ಮಾಡಿರುತ್ತದೆ. ಗರ್ಭಿಣಿಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಸಾಮಾನ್ಯ ದಿನಕ್ಕಿಂತ ಗರ್ಭಾವಸ್ಥೆಯಲ್ಲಿ ದೇಹದಲ್ಲಿ ಸಾಕಷ್ಟು ಬದಲಾವಣೆ ಆಗ್ತಿರುತ್ತದೆ. ಕೇವಲ ಮಹಿಳೆಗೆ ಮಾತ್ರವಲ್ಲ ಹೊಟ್ಟೆಯಲ್ಲಿರುವ ಮಗುವಿನ ಮೇಲೂ ಇದು ಪರಿಣಾಮ ಬೀರುತ್ತದೆ. ಗರ್ಭಧಾರಣೆಯ ಮೊದಲ ಮೂರು ತಿಂಗಳು ಹೆಚ್ಚಿನ ಕಾಳಜಿ ಅತ್ಯಗತ್ಯ. ಹಾಗೆಯೇ ಕೊನೆಯ ಮೂರು ತಿಂಗಳು ಕೂಡ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಮೊದಲ ಮೂರು ತಿಂಗಳಲ್ಲಿ ಗರ್ಭಪಾತದ ಅಪಾಯ ಹೆಚ್ಚಿರುತ್ತದೆ. ಹಾಗೆಯೇ ಕೊನೆಯ ಮೂರು ತಿಂಗಳಲ್ಲಿ ಅಕಾಲಿಕ ಹೆರಿಗೆಯ ಅಪಾಯವಿರುತ್ತದೆ.
ಗರ್ಭಾವಸ್ಥೆ (Pregnancy) ಯಲ್ಲೂ ಮಹಿಳೆಯರು ಮನೆ ಕೆಲಸ ಹಾಗೂ ಕಚೇರಿ (Office) ಕೆಲಸ ಮಾಡ್ತಾರೆ. ಕಚೇರಿಗೆ ಹೋಗಲು ದ್ವಿಚಕ್ರ ವಾಹನ (Two Wheeler) ಬಳಕೆ ಮಾಡೋದನ್ನು ನಾವು ನೋಡಿರಬಹುದು. ಸ್ಕೂಟರ್ ಚಲಾವಣೆ ಮಾಡುವ ಮಹಿಳೆಯರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಸಮಯಕ್ಕೆ ಸರಿಯಾಗಿ ಪ್ರಯಾಣ ಬೆಳೆಸಬಹುದು ಎನ್ನುವ ಕಾರಣಕ್ಕೆ ಹಾಗೇ ಸಾರ್ವಜನಿಕ ಸಾರಿಗೆಗಾಗಿ ಕಾಯುವ ಸಮಯವನ್ನು ಉಳಿಸಲು ಹೆಚ್ಚಿನವರು ಸ್ಕೂಟರ್ ಆಯ್ಕೆ ಮಾಡಿಕೊಳ್ತಾರೆ. ಗರ್ಭಾವಸ್ಥೆಯಲ್ಲೂ ಸ್ಕೂಟರ್ ಚಲಾಯಿಸುವ ಅನೇಕ ಮಹಿಳೆರಿದ್ದಾರೆ. ಆದ್ರೆ ಗರ್ಭಿಣಿಯರು ಸ್ಕೂಟರ್ ಓಡಿಸೋದು ಎಷ್ಟು ಸೇಫ್ ಅನ್ನೋದನ್ನು ನಾವಿಂದು ಹೇಳ್ತೇವೆ.
ಗರ್ಭಾವಸ್ಥೆಯಲ್ಲಿ ಮಹಿಳೆಯರು ಸ್ಕೂಟರ್ ಬಳಸುವುದು ಸೂಕ್ತವಲ್ಲ. ಸ್ಕೂಟರ್ ಬದಲು ಸುರಕ್ಷಿತ ಸಾರಿಗೆ ಸಾಧನ ಬಳಸುವುದು ಒಳ್ಳೆಯದು. ಸ್ಕೂಟರ್ ಗಿಂತ ಆಟೋ, ಕಾರು, ರೈಲು, ಮೆಟ್ರೋ ಹೆಚ್ಚು ಸುರಕ್ಷಿತ. ಗರ್ಭಾವಸ್ಥೆಯಲ್ಲಿ ಸ್ಕೂಟರ್ ಚಲಾಯಿಸದಂತೆ ಬಹುತೇಕ ವೈದ್ಯರು ಸಲಹೆ ನೀಡ್ತಾರೆ. ಒಂದ್ವೇಳೆ ಅನಿವಾರ್ಯ ಎನ್ನಿಸಿದ್ರೆ ನೀವು ವೈದ್ಯರ ಸಲಹೆ ಪಡೆಯುವುದು ಸೂಕ್ತ. ವೈದ್ಯರು ಮೊದಲ ತ್ರೈಮಾಸಿಕದಲ್ಲಿ ಸ್ಕೂಟರ್ ಚಲಾಯಿಸಲು ಗರ್ಭಿಣಿಯರಿಗೆ ಒಪ್ಪಿಗೆ ನೀಡಬಹುದು. ಬೇಬಿ ಬಂಪ್ ಕಾಣಿಸಿಕೊಳ್ತಿದ್ದಂತೆ ವೈದ್ಯರು, ಸ್ಕೂಟರ್ ಚಲಾಯಿಸಲು ನಿರಾಕರಿಸ್ತಾರೆ. ದ್ವಿಚಕ್ರ ವಾಹನ ಚಲಾಯಿಸದಂತೆ ಹಾಗೆ ದ್ವಿಚಕ್ರ ವಾಹನದಲ್ಲಿ ಕುಳಿತುಕೊಳ್ಳದಂತೆ ವೈದ್ಯರು ಸಲಹೆ ನೀಡಲು ಮುಖ್ಯ ಕಾರಣವಿದೆ. ಇದು ಗರ್ಭಿಣಿಯರ ಕೆಲ ಸಮಸ್ಯೆಯುಂಟು ಮಾಡುತ್ತದೆ. ದ್ವಿಚಕ್ರವಾಹನ ಸುರಕ್ಷಿತವಲ್ಲ. ಸ್ಕೂಟರ್ ನಿಂದ ಬೀಳುವ ಅಪಾಯ ಹೆಚ್ಚಿರುತ್ತದೆ. ಹಾಗೆಯೇ ಅದ್ರ ಮೇಲೆ ಕುಳಿತುಕೊಳ್ಳುವುದು ಕಷ್ಟವಾಗುತ್ತದೆ. ಇದ್ರಿಂದ ಗರ್ಭಿಣಿಯರು ಅಸ್ವಸ್ಥತೆ ಅನುಭವಿಸುತ್ತಾರೆ.
ಗರ್ಭಾವಸ್ಥೆಯ ಆರಂಭದ ತಿಂಗಳಲ್ಲಿ ರಸ್ತೆಯ ಗುಂಡಿಗಳು ಗರ್ಭಪಾತಕ್ಕೆ ಕಾರಣವಾಗಬಹುದು. ಅಪಘಾತಗಳು ಹುಟ್ಟುವ ಮಗುವಿನ ಮೇಲೆ ಪರಿಣಾಮ ಬೀರಬಹುದು. ಗರ್ಭಾವಸ್ಥೆಯಲ್ಲಿ ಯಾವುದೇ ತೊಂದರೆಗಳಿದ್ದರೆ ಅಥವಾ ರಕ್ತಸ್ರಾವವಾಗ್ತಿದ್ದರೆ ಯಾವುದೇ ಕಾರಣಕ್ಕೂ ಸ್ಕೂಟರ್ ಚಲಾಯಿಸಬೇಡಿ ಎಂದು ವೈದ್ಯರು ಹೇಳ್ತಾರೆ.
ಆರಂಭದ ಮೂರು ತಿಂಗಳು ವಾಂತಿ, ತಲೆಸುತ್ತು ಹಾಗೂ ವಾಕರಿಕೆ ಕಾಣಿಸಿಕೊಳ್ಳುತ್ತದೆ. ಸ್ಕೂಟರ್ ಚಲಾಯಿಸುವಾಗ ಬ್ಯಾಲೆನ್ಸ್ ಇದ್ರಿಂದ ತಪ್ಪಬಹುದು. ಸ್ಕೂಟಿ ಓಡಿಸಲು ದೈಹಿಕ ಶಕ್ತಿ ಅವಶ್ಯಕತೆಯಿದೆ. ಆದ್ರೆ ವಾಕರಿಕೆ, ವಾಂತಿಯಿಂದ ಸುಸ್ತಾಗಿದ್ದಾಗ ಸ್ಕೂಟಿ ಓಡಿಸುವುದು ಕಷ್ಟವಾಗುತ್ತದೆ. ಇದ್ರಿಂದ ಅಪಘಾತವಾಗುವ ಸಾಧ್ಯತೆಯಿರುತ್ತದೆ.
ಪೀರಿಯಡ್ಸ್‌ನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆ, ಯಾಕೆ ಹೀಗಾಗುತ್ತೆ ?
ಇನ್ನು ಬೇಬಿ ಬಂಪ್ ಕಾಣಿಸಿಕೊಳ್ತಿದ್ದಂತೆ ಸುಸ್ತು ಹೆಚ್ಚಾಗುತ್ತದೆ. ಹಾಗೆ ಮಗುವಿನ ಒಂದೊಂದೇ ಭಾಗದ ಬೆಳವಣಿಗೆ ಶುರುವಾಗುತ್ತದೆ. ಈ ಸಂದರ್ಭದಲ್ಲಿ ಸ್ಕೂಟಿ ಚಲಾಯಿಸುವುದು ಹಿಂಸೆ ಎನ್ನಿಸಬಹುದು. ಬ್ರೇಕ್ ಒತ್ತಿದಾಗ ಹೊಟ್ಟೆ ಸ್ಕೂಟರ್ ಗೆ ಜಜ್ಜುವ ಅಪಾಯವೂ ಇರುತ್ತದೆ.
ಗರ್ಭಾವಸ್ಥೆಯಲ್ಲಿ ಜಾಂಡೀಸ್ ಡೇಂಜರಸ್? ತಜ್ಞರು ಏನ್ ಹೇಳ್ತಾರೆ?
ಗರ್ಭಾವಸ್ಥೆಯಲ್ಲಿ ಸಾಧ್ಯವಾದಷ್ಟು ಸ್ಕೂಟರ್ ಚಲಾವಣೆ ಮಾಡಬೇಡಿ. ಕಾರಿನ ಬಳಕೆ ಒಳ್ಳೆಯದು. ಅದು ಸಾಧ್ಯವಿಲ್ಲ ಎನ್ನುವವರು ಸಾರ್ವಜನಿಕ ಸಾರಿಗೆ ಬಳಸಿ ಎನ್ನುತ್ತಾರೆ ವೈದ್ಯರು.