ಎಲ್ಲ ಗಲಭೆಗಳಿಗೂ ಬೇಕು ಹೆಣ್ಣು ಮತ್ತು ಆಕೆಯ ದೇಹ!

Published : Jul 21, 2023, 10:45 AM IST
ಎಲ್ಲ ಗಲಭೆಗಳಿಗೂ ಬೇಕು ಹೆಣ್ಣು ಮತ್ತು ಆಕೆಯ ದೇಹ!

ಸಾರಾಂಶ

ರಾಜ್ಯ ಸರಕಾರದ ವೈಫಲ್ಯವೋ, ಕೇಂದ್ರ ಸರಕಾರದ ನಿರ್ಲಕ್ಷ್ಯವೋ ಅದು ಬೇರೆ. ಹೆಣ್ಣಿಗೆ ಅವಮಾನವಾಗಿದೆ ಅಂದ್ರೆ ಅದು ಅಖಂಡ ಭಾರತಕ್ಕೆ ಮಾಡಿದ ಅವಮಾನವಲ್ಲವೇ?

ಇಡೀ ದೇಶಕ್ಕೆ ದೇಶವೇ ಸಿಡಿದೆದ್ದಿದೆ. ಪ್ರತಿಭಟನೆ, ಆಕ್ರೋಶ, ಕಿಚ್ಚು ವ್ಯಾಪಿಸುತ್ತಿದೆ. ರಾಜಕೀಯ ಕೆಸರೆರಚಾಟವಂತೂ ತಾರಕಕ್ಕೇರಿದೆ. ಮಣಿಪುರದ ಘಟನೆ ಸಭ್ಯ ಮಾನವ ಸಮುದಾಯವನ್ನೇ ಜಗತ್ತಿನೆದುರು ಬೆತ್ತಲುಗೊಳಿಸಿದೆ. ಮಣಿಪುರದ ಗಲಭೆಕೋರರು ಮೇ 4ರಂದು ಮಾಡಿದ ಮಾನಗೆಟ್ಟ ಕೆಲಸವನ್ನು ವಿಡಿಯೊ ರಿಲೀಸ್ ಮಾಡಿ, ಇಡೀ ದೇಶದೆದುರು ವೈರಲ್ ಮಾಡಬೇಕಾಯ್ತು. 

ಅಷ್ಟಕ್ಕೂ ಎಲ್ಲ ಗಲಭೆಗಳಿಗೂ ಬಲಿಯಾಗೋದು ಮಾತ್ರ ಹೆಣ್ಣು ಮತ್ತು ಆಕೆಯ ದೇಹ!
 
ಈಗಲ್ಲ, ಹೆಣ್ಣಿನ ಮಾನ ಕಸಿಯುವ ದಾರ್ಷ್ಟ್ಯ ಶತಮಾನಗಳಿಂದಲೂ ನಡೆದುಕೊಂಡೇ ಬಂದಿದೆ. ಪ್ರತಿ ರಾಜ್ಯ, ಜಿಲ್ಲೆ, ತಾಲೂಕು , ಅಷ್ಟೇ ಯಾಕೆ ಸಣ್ಣ ಹಳ್ಳಿಯೊಂದರಲ್ಲಿ ನಡೆಯುವ ಸಣ್ಣ ಪುಟ್ಟ ಜಾತಿ, ಜನಾಂಗೀಯ ಗಲಭೆಗಳಲ್ಲಿಯೂ ಬೀದಿಗೆ ಎಳೆತಂದು ನಿಲ್ಲಿಸೋದು ಹೆಣ್ಣನ್ನೇ. ಆ ಮೂಲಕ ಸೇಡು ತೀರಿಸಿಕೊಳ್ಳಲು ರಕ್ಕಸ ಗುಣ ಗಂಡಸಿನ ಡಿಎನ್ಎಯಲ್ಲೇ ಹರಿದು ಬಂದು ಬಿಟ್ಟಿದೆ.
 
ಸ್ವಲ್ಪ ಇತಿಹಾಸ ಕೆದಕಿ ನೋಡಿ, 1947ರ ಭಾರತ ವಿಭಜನೆ ಸಮಯದಲ್ಲಾದ ಹಿಂಸಾಚಾರದಲ್ಲೂ ಸಾವಿರಾರು ಹೆಣ್ಣು ಮಕ್ಕಳು ಸಾಮೂಹಿಕವಾಗಿ ಅತ್ಯಾಚಾರಕ್ಕೀಡಾದವರು, ಜೀವ ತೆತ್ತವರ ಸಂಖ್ಯೆಗೆ ಲೆಕ್ಕ ಸಿಕ್ಕಿಲ್ಲ.

ಮಣಿಪುರ ಮಹಿಳೆ ಬೆತ್ತಲೆ ಮೆರವಣಿಗೆ ಪ್ರಕರಣ, ಓರ್ವನ ಬಂಧನ, ಇತರ ಆರೋಪಿಗಳಿಗೆ ಹುಡುಕಾಟ!

1971ರ ಬಾಂಗ್ಲಾದೇಶ ಸ್ವಾತಂತ್ರ್ಯ ಯುದ್ಧ, 1984ರ ಸಿಖ್ ದಂಗೆ, ಶ್ರೀಲಂಕಾದಲ್ಲಿನ ಜನಾಂಗೀಯ ಯುದ್ಧ, 2002ರ ಗುಜರಾತ್ ದಂಗೆ...ಹೀಗೆ ಪ್ರತಿ ದಂಗೆಯಲ್ಲೂ ಹೆಣ್ಮಕ್ಕಳ ಸಾಮೂಹಿ‌ಕ ಅತ್ಯಾಚಾರ, ಲೈಂಗಿಕ ಶೋಷಣೆಗೆ ಸಾಲು ಸಾಲು ಉದಾಹರಣೆಗಳಿವೆ. ಅಷ್ಟೇ ಯಾಕೆ, ಮಹಾಭಾರತದಲ್ಲಿ ಜೂಜಿನಲ್ಲಿ ಸೋತ ಧರ್ಮರಾಯ ಪಣಕ್ಕಿಟ್ಟಿದ್ದು ತನ್ನ ಧರ್ಮ ಪತ್ನಿ ದ್ರೌಪದಿಯನ್ನಲ್ಲವೇ? ಸಭೆಯಲ್ಲಿ ಮಾನ ಹರಾಜಾಗಿದ್ದು ಹೆಣ್ಣಿನ ಕುಲದ್ದಲ್ಲವೇ? 

ಅಷ್ಟಕ್ಕೂ ಮಣಿಪುರದಲ್ಲಿ ನಡೆದಿದ್ದೇನು?
ಮೇ 3 ರಂದು ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ 150ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು. ಪರಿಶಿಷ್ಟ ಪಂಗಡದ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೀಟೈ ಸಮುದಾಯದ ಬೇಡಿಕೆಯನ್ನು ಪ್ರತಿಭಟಿಸಲು ಬೆಟ್ಟದ ಜಿಲ್ಲೆಗಳಲ್ಲಿ 'ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ' ಆಯೋಜಿಸಲಾಗಿತ್ತು.

ಮಣಿಪುರದ ಜನಸಂಖ್ಯೆಯ ಸುಮಾರು 53 ಪ್ರತಿಶತದಷ್ಟಿರುವ ಮೈತೈಗಳು ಇಂಫಾಲ್ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ, ಆದರೆ ನಾಗಾಗಳು ಮತ್ತು ಕುಕಿಗಳನ್ನು ಒಳಗೊಂಡಿರುವ ಬುಡಕಟ್ಟು ಜನಾಂಗದವರು ಶೇಕಡಾ 40 ರಷ್ಟಿದ್ದಾರೆ. ಮತ್ತು ಹೆಚ್ಚಾಗಿ ಗುಡ್ಡಗಾಡು ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ಬಲಿಷ್ಠ ಮೈತ್ರೆಗಳು, ಕುಕಿ ಬುಡಕಟ್ಟಿನ ಪ್ರತಿಭಟನೆಗೆ ಸೇಡಿನ ಕ್ರಮವಾಗಿ ಮಾಡಿದ್ದು ಕುಕಿ ಬುಡಕಟ್ಟು ಮಹಿಳೆಯರನ್ನು ಬೆತ್ತಲೆಗೊಳಿಸಿ, ಊರ ತುಂಬಾ ಮೆರವಣಿಗೆ ಮಾಡಿದ್ದಾರೆ. ಎಂಥ ಅಮಾನವೀಯ ವರ್ತನೆ ಇದು?

ಮಣಿಪುರ ಘಟನೆ ಅಪರಾಧಿಗಳನ್ನು ಸುಮ್ಮನೆ ಬಿಡಲ್ಲ: ಮೋದಿ; ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ನಾವು ಕೈಗೊಳ್ತೇವೆ; ಸುಪ್ರೀಂಕೋರ್ಟ್‌

ಅಮಾಯಕ ಬುಡಕಟ್ಟು ಮಹಿಳೆಯರನ್ನು ಬೀದಿಯಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಿ, ಹಾಡಹಗಲೇ ರೇಪ್‌ ಮಾಡಲು ಯತ್ನಿಸುವ ಈ ಧೈರ್ಯ ಗಲಭೆಕೋರರಿಗೆ ಹೇಗೆ ಬಂತು? ಯಾರ ಬೆಂಬಲದಿಂದ ಇಷ್ಟು ಸೊಕ್ಕಿದ್ದಾರೆ? ಯಾವುದೇ ಯುದ್ಧಗ್ರಸ್ತ, ಗಲಭೆಗ್ರಸ್ತ ಪ್ರದೇಶದಲ್ಲಿ ದುಷ್ಕರ್ಮಿಗಳಿಗೆ ಸುಲಭವಾಗಿ ಸೇಡು ತೀರಿಸಿಕೊಳ್ಳಲು, ತಮ್ಮ ಶಕ್ತಿ ಪ್ರದರ್ಶನಕ್ಕೆ  ಹೆಣ್ಣನ್ನೇ ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವುದೇಕೆ?
  
ಪ್ರತಿ ಬಾರಿ ಇಂಥ ಕುಕೃತ್ಯ ನಡೆದಾಗಲೆಲ್ಲ ಖಂಡನೆ, ಪ್ರತಿಭಟನೆಗಷ್ಟೇ ಸೀಮಿತವಾಗುವುದು, ಒಂದಷ್ಟು ವಿಚಾರಣೆ, ಶಿಕ್ಷೆ ಅಷ್ಟಾದರೆ ಸಾಕೇ? ಯಾರದ್ದೋ ಮೇಲಿನ ಸಿಟ್ಟಿಗೆ ಹೆಣ್ಣನ್ನು‌ ಬೀದಿಗೆಳೆದು ನಿಲ್ಲಿಸಿ, ಅತ್ಯಾಚಾರ ಮಾಡಿ ಅಟ್ಟಹಾಸದಿಂದ ಮೆರೆಯುವ ಪಾತಕ ಮನಸ್ಸಿನ ಗಂಡಸರನ್ನು ನಿಯಂತ್ರಿಸಲು ಇನ್ನೆಷ್ಟು ಕಾಲ ಬೇಕು? ಇನ್ನೆಷ್ಟು ಬಾರಿ ಭಾರತ, ಜಗತ್ತಿನ ಎದುರು ತಲೆತಗ್ಗಿಸಿ ನಿಲ್ಲಬೇಕು?
 
ಸ್ಥಳೀಯ ಪ್ರಭಾವಿ ನಾಯಕರೆನಿಸಿಕೊಂಡ ಗಂಡಸರನ್ನು ಮಟ್ಟ ಹಾಕುವವರೆಗೆ, ಅಂಥವರಿಗೆ ರಾಜಕೀಯ ಆಶ್ರಯ ನೀಡುವುದನ್ನು ನಿಲ್ಲಿಸುವವರೆಗೆ, ಪೊಲೀಸ್ ವ್ಯವಸ್ಥೆ ಕಠಿಣವಾಗುವವರೆಗೆ ಹೆಣ್ಣು‌ಮಕ್ಕಳಷ್ಟೇ ಅ,ಲ್ಲ ಇಡೀ ದೇಶವೇ ಪದೇ ಪದೇ ಬೆತ್ತಲಾಗುತ್ತಲೇ ಇರುತ್ತದೆ.

ಎಂ.ಸಿ. ಶೋಭಾ,  ಔಟ್ ಪುಟ್ ಹೆಡ್, ಸುವರ್ಣ ನ್ಯೂಸ್

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

SM
About the Author

Shobha MC

ಮಂಡ್ಯ ಜಿಲ್ಲೆಯ ಮಳವಳ್ಳಿಯವರು. ಮಾನಸ ಗಂಗೋತ್ರಿಯಲ್ಲಿ ಪತ್ರಿಕೋದ್ಯಮ ಎಂಎ ಮುಗಿಸಿ, ಸೇರಿದ್ದು ವಿಜಯ ಕರ್ನಾಟಕ ಪತ್ರಿಕೆಗೆ. ಸೂರ್ಯೋದಯ ಸೇರಿ ಪತ್ರಿಕೆಗಳಲ್ಲಿ 7 ವರ್ಷಗಳ ಅನುಭವ. ನ್ಯೂಸ್ ಚಾನೆಲ್ಗಳಿನ್ನೂ ಸರಿಯಾಗಿ ಕಣ್ಬಿಡದ ಕಾಲದಲ್ಲೇ ದೃಶ್ಯ ಮಾಧ್ಯಮಕ್ಕೆ ಕಾಲಿಟ್ಟಿದ್ದು, ಟೆಲಿವಿಷನ್ ಪಟ್ಟುಗಳೆಲ್ಲ ಕರತಲಾಮಲಕ. ಉದಯ ಟಿವಿಯಲ್ಲಿ 2 ವರ್ಷ ಸೇವೆ. ಕಳೆದ 17 ವರ್ಷದಿಂದಲೂ ಸುವರ್ಣ ನ್ಯೂಸ್ ಇನ್ಪುಟ್, ಔಟ್ಪುಟ್ ಹೆಡ್ ಆಗಿ ಕಾರ್ಯ ನಿರ್ವಹಣೆ. ಪತ್ರಿಕೆ- ಟಿವಿ ಎರಡರ ಅಗಾಧ ಅನುಭವ ಇರುವ ಏಕೈಕ ಪತ್ರಕರ್ತೆ. ಪ್ರತಿಷ್ಠಿತ ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ಪತ್ರಕರ್ತರ ಸಂಘ, ಕೆಂಪೇಗೌಡ ಪ್ರಶಸ್ತಿ, ಪಬ್ಲಿಕ್ ರಿಲೇಷನ್ ಕೌನ್ಸಿಲ್ ಆಫ್ ಇಂಡಿಯಾ, ಪ್ರೆಸ್ಕ್ಲಬ್ ವಾರ್ಷಿಕ ಪ್ರಶಸ್ತಿಗಳು ಮುಡಿಗೇರಿವೆ. ಸದ್ಯ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯೆ, ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಸಿಲಬಸ್ ಕಮಿಟಿ ಸದಸ್ಯೆಯಾಗಿಯೂ ನೇಮಕ.Read More...
Read more Articles on
click me!

Recommended Stories

ಮಹಿಳೆಯರೇ ಎಚ್ಚರ.. ದೇಹ ತೋರಿಸುವ ಈ ಲಕ್ಷಣಗಳು ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!