Kitchen Tips: ಹಳೆಯ ಮಿಕ್ಸರ್ ಜಾರ್‌ಗೆ ಹೀಗೆ ಹೊಸ ರೂಪ ನೀಡಿ

By Suvarna NewsFirst Published Jan 23, 2023, 6:06 PM IST
Highlights

ಕೆಲವರ ಮನೆಯಲ್ಲಿ ಮಿಕ್ಸ್ ಜಾರ್ ವಿಪರೀತ ಕೊಳಕಾಗಿರುತ್ತದೆ. ಅದನ್ನು ಮುಟ್ಟೋದೆ ಕಷ್ಟವಾಗುತ್ತೆ. ಟೈಂ ಇಲ್ಲದೆ ಮಿಕ್ಸಿ ಜಾರ್ ಗತಿ ಈ ರೀತಿ ಆಗಿದೆ ಎನ್ನುವವರು ಉಜ್ಜಿ, ಉಜ್ಜಿ ಜಾರ್ ಕ್ಲೀನ್ ಮಾಡ್ಬೇಕಾಗಿಲ್ಲ. ಕೆಲ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿದ್ರೆ ಸಾಕು.
 

ಅಡುಗೆ ಮನೆಯಲ್ಲಿ ಮಿಕ್ಸರ್ ಬಹುಮುಖ್ಯ ಪಾತ್ರವಹಿಸುತ್ತದೆ. ಎಲ್ಲ ಮಸಾಲೆಗಳನ್ನು ನುಣ್ಣಗೆ ರುಬ್ಬಲು ಇದು ಬಹಳ ಸಹಾಯಕಾರಿ. ಬಹುಶಃ ಈಗ ಮಹಿಳೆಯರಿಗೆ ಮಿಕ್ಸರ್ ಇಲ್ದೇ ಇದ್ರೆ ಅಡುಗೆ ಮಾಡಲು ಆಗೋದೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಇದು ಜೀವನದಲ್ಲಿ ಹಾಸುಹೊಕ್ಕಾಗಿದೆ. ಮಿಕ್ಸರ್ ಗಳು ಬಂದ ಮೇಲೆ ಅಡುಗೆ ಮಾಡುವವರ ಕೆಲಸ ಬಹಳ ಸುಲಭವಾಗಿದೆ. ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಇದೊಂದು ವರದಾನವೇ ಸರಿ.

ಹಿಂದಿನ ಕಾಲದಲ್ಲಾದರೆ ಮಹಿಳೆಯರು ರುಬ್ಬುವ ಕಲ್ಲಿನಲ್ಲಿ ಬೀಸುತ್ತಿದ್ದರು. ಅದಕ್ಕೆ ಹೆಚ್ಚಿನ ಸಮಯ ಮತ್ತು ಪರಿಶ್ರಮ ಎರಡೂ ಬೇಕಾಗಿತ್ತು. ಆದರೆ ಈಗಿನ ಮುಂದುವರೆದ ವಿದ್ಯಮಾನದಲ್ಲಿ ಅಷ್ಟೊಂದು ಪರಿಶ್ರಮ ಪಡಬೇಕಾಗಿಲ್ಲ. ಒಂದು ಸ್ವಿಚ್ (Switch) ಆನ್ ಮಾಡುವ ಮೂಲಕ ನಾವು ಮಸಾಲೆ (Spice), ಜ್ಯೂಸ್, ಪೌಡರ್ ಗಳನ್ನು ಕ್ಷಣಾರ್ಧದಲ್ಲಿ ಮಾಡಬಹುದು.

ವೃತ್ತಿನಿರತ ಮಹಿಳೆಯರಿಗೆ ಅವರ ನಿತ್ಯದ ಬ್ಯುಸಿ ಶೆಡ್ಯುಲ್ ನಲ್ಲಿ ಕೆಲವೊಮ್ಮೆ ಮನೆ ಕಡೆ ಹೆಚ್ಚು ಲಕ್ಷ್ಯವಹಿಸಲು ಸಾಧ್ಯವಾಗುವುದಿಲ್ಲ. ಹಾಗೆಯೇ ಮಿಕ್ಸರ್ (Mixer) ಜಾರ್ ಗಳು ಮುಂತಾದ ಚಿಕ್ಕ ಪುಟ್ಟ ಸಲಕರಣೆಗಳನ್ನು ಕ್ಲೀನ್ ಆಗಿ ತೊಳೆಯುವಷ್ಟು ಟೈಮ್ ಇರುವುದಿಲ್ಲ. ಹೀಗಾದಾಗ ಒಮ್ಮೊಮ್ಮೆ ಜಾರ್ ನಲ್ಲಿ ಕಲೆಗಳು ಉಳಿಯುತ್ತವೆ. ಅದನ್ನು ಆ ನಂತ್ರ ಸ್ವಚ್ಛಗೊಳಿಸೋದು ಬಹಳ ಕಷ್ಟ. ಕಲೆ ಮಿಕ್ಸಿ ಸೌಂದರ್ಯವನ್ನು ಹಾಳು ಮಾಡುತ್ತದೆ. ನಾವು ಚಾಕು, ಬ್ಲೇಡ್ ಮುಂತಾದವುಗಳನ್ನು ಬಳಸಿ ಕಲೆ ತೆಗೆಯುವ ಪ್ರಯತ್ನ ನಡೆಸುತ್ತೇವೆ. ಇದರಿಂದ ಜಾರ್ ಗಳು ಹಾಳಾಗುತ್ತದೆ. ಅಂತಹ ಕಲೆಗಳನ್ನು ಸುಲಭವಾಗಿ ತೆಗೆಯಲು ಸುಲಭ  ಟಿಪ್ಸ್ ಇಲ್ಲಿದೆ.

ನಿಂಬೆ ಹಣ್ಣಿನ ಸಿಪ್ಪೆ : ಅಡುಗೆಯಲ್ಲಿ ಹುಳಿ ಹಾಕುವುದಕ್ಕೋಸ್ಕರ ನಾವು ನಿಂಬೆಹಣ್ಣನ್ನು ಬಳಸಿಯೇ ಬಳಸುತ್ತೇವೆ. ಹಾಗೆ ಬಳಸಿದ ನಿಂಬೆಹಣ್ಣನ್ನು ಎಸೆಯುವ ಬದಲು ಅದರಿಂದ ಜಾರ್ ಗಳನ್ನು ತೊಳೆದರೆ, ಜಾರ್ ನ ಕಲೆಗಳು ಹೋಗುತ್ತದೆ. ನಿಂಬೆ ಹಣ್ಣಿನಿಂದ ಜಾರ್ ಗಳಿಗೆ ಹೆಚ್ಚಿನ ಹೊಳಪು ಕೂಡ ಬರುತ್ತದೆ. ನಿಂಬೆ ಹಣ್ಣಿನ ಪರಿಮಳ ಕೂಡ ಜಾರ್ ನಲ್ಲಿ ತುಂಬಿರುತ್ತದೆ.

ಉಪ್ಪು ಬಳಸಿ ನೋಡಿ : ಉಪ್ಪಂತೂ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಉಪ್ಪು ಅಡುಗೆಯಲ್ಲಿ ಅಲ್ಲದೇ ಜಾರ್ ಗಳನ್ನು ಸ್ವಚ್ಛಗೊಳಿಸಲೂ ಕೂಡ ಉಪಯೋಗವಾಗುತ್ತದೆ. ಉಪ್ಪಿಗೆ ಸ್ವಲ್ಪ ನೀರನ್ನು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಈ ಮಿಶ್ರಣವನ್ನು ನಿಮ್ಮ ಜಾರ್ ಸುತ್ತಲೂ ಹಚ್ಚಿ ಸ್ವಲ್ಪ ಸಮಯ ಹಾಗೇ ಬಿಡಿ. ತುಸು ಗಂಟೆಗಳ ನಂತರ ಜಾರ್ ತೊಳೆದರೆ ಜಾರ್ ಕ್ಲೀನ್ ಆಗಿರುತ್ತದೆ ಮತ್ತು ಹೊಳಪು ಕೂಡ ಹೆಚ್ಚಿರುತ್ತದೆ.

ಬೇಕಿಂಗ್ ಪೌಡರ್ : ಬೇಕಿಂಗ್ ಪೌಡರ್ ಜೊತೆ ನೀರನ್ನು ಸೇರಿಸಿ ಮಿಶ್ರಣ ತಯಾರಿಸಿಕೊಳ್ಳಿ. ಅದನ್ನು ಜಾರ್ ಗೆ ಹಚ್ಚಿ ಹಾಗೇ ಬಿಡಿ. ಸ್ವಲ್ಪ ಸಮಯದ ನಂತರ ಮಿಕ್ಸಿ ಜಾರ್ ಅನ್ನು ತೊಳೆಯಿರಿ. ಇದರಿಂದ ಜಾರ್ ಸ್ವಚ್ಛವಾಗುತ್ತದೆ ಮತ್ತು ಜಾರ್ ನ ದುರ್ವಾಸನೆ ಕೂಡ ದೂರವಾಗುತ್ತದೆ.

ವಿನೆಗರ್ : ವಿನೆಗರ್ ಮತ್ತು ನೀರಿನ ಮಿಶ್ರಣವನ್ನು ಮಿಕ್ಸರ್ ಜಾರ್ ಗೆ ಹಚ್ಚಿ ಸ್ವಲ್ಪ ಸಮಯ ಬಿಡಿ. ಈ ಮಿಶ್ರಣ ಬಹಳ ಕಡು ಕಲೆಗಳನ್ನು ಕೂಡ ಹೋಗಲಾಡಿಸುತ್ತದೆ. ತಿಂಗಳಲ್ಲಿ ಒಂದೆರಡು ಬಾರಿ ಹೀಗೆ ಮಾಡಿ ಜಾರ್ ಅನ್ನು ಸ್ವಚ್ಛಗೊಳಿಸಬಹುದು.

ಆರೋಗ್ಯದ ಮೇಲೆ ಮ್ಯಾಜಿಕ್ ಮಾಡುತ್ತೆ ಮೂಲಂಗಿ ಎಲೆ ಜ್ಯೂಸ್

ಅಡುಗೆ ಸೋಡಾ ಮತ್ತು ನಿಂಬೆ ಹಣ್ಣು : ಅಡುಗೆ ಸೋಡಾ ಮತ್ತು ನಿಂಬೆರಸವನ್ನು ಚೆನ್ನಾಗಿ ಬೆರೆಸಿ ಮಿಕ್ಸಿ ಮತ್ತು ಜಾರ್ ಎರಡನ್ನೂ ಸ್ವಚ್ಛಗೊಳಿಸಬಹುದು. ಇದರಿಂದ ಜಿಡ್ಡು, ಮಸಾಲೆ ಕಲೆಗಳು ಇಲ್ಲವಾಗುತ್ತದೆ.

ಗೀಜರ್ ಸ್ಫೋಟದಿಂದ ದೂರ ಇರ್ಬೇಕೆಂದ್ರೆ ಹೀಗೆಲ್ಲ ಮಾಡಿ

ಮಾರುಕಟ್ಟೆಯಲ್ಲಿ ಸಿಗುತ್ತೆ ಲಿಕ್ವಿಡ್ : ಇತ್ತೀಚೆಗೆ ಮಾರುಕಟ್ಟೆಯಲ್ಲಿ ಸಿಗುವ ಕೆಲವು ಲಿಕ್ವಿಡ್ ಡಿಟರ್ಜೆಂಟ್ ಗಳು, ಆಲ್ಕೋಹಾಲ್ ಗಳಿಂದ ಕೂಡ ಜಾರ್ ಗಳನ್ನು ಸ್ವಚ್ಛಗೊಳಿಸಬಹುದು. ಜಾರ್ ಗಳನ್ನು ತೊಳೆದು ಬಿಸಿಲಿನಲ್ಲಿ ಒಣಗಿಸಿದರೆ ಅದರಲ್ಲಿರುವ ಕೀಟಾಣುಗಳು ನಾಶವಾಗುತ್ತವೆ.  

click me!