International Booker Prize: ಬಾನು ಮುಷ್ತಾಕ್‌ ಕೃತಿಗೆ ಬೂಕರ್‌ ಪ್ರಶಸ್ತಿ ಬಂದದ್ದೇಕೆ? ಅಂಥದ್ದೇನಿದೆ ಆ ಕತೆಗಳಲ್ಲಿ?

Published : May 23, 2025, 06:46 PM IST
Banu Mushtaq Booker Prize

ಸಾರಾಂಶ

ಜಾಗತಿಕ ಪ್ರಸಿದ್ಧಿ ಪಡೆದವರ ಕೃತಿಗಳನ್ನು ತೀರ್ಪುಗಾರರು ಬಹು ಸುಲಭವಾಗಿ ಪರಿಗಣಿಸುತ್ತಾರೆ. ಆದರೆ ಬಾನು ಮುಷ್ತಾಕ್‌ ಅವರಿಗೆ ಅಂಥಾ ಅಂತಾರಾಷ್ಟ್ರೀಯ ಖ್ಯಾತಿಯೇನೂ ಇರಲಿಲ್ಲ. ಆದರೂ ಅವರ ಕೃತಿ ತೀರ್ಪುಗಾರರ ಮನಸ್ಸನ್ನು ಗೆದ್ದುಬಿಟ್ಟಿತು. ಅದು ಹೇಗೆ?

ಕನ್ನಡದ ಲೇಖಕಿ, ಕತೆಗಾರ್ತಿ ಬಾನು ಮುಷ್ತಾಕ್‌ ಅವರ ʼಹಾರ್ಟ್‌ ಲ್ಯಾಂಪ್‌ʼ ಕೃತಿ ಇಂಟರ್‌ನ್ಯಾಷನಲ್‌ ಬೂಕರ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಶಾರ್ಟ್‌ ಲಿಸ್ಟ್‌ನಲ್ಲಿದ್ದ ಆರು ಕೃತಿಗಳಲ್ಲಿ ಈ ಮಹತ್ವದ ಪುರಸ್ಕಾರ ಗಳಿಸಿಕೊಂಡದ್ದು ಬಾನು ಅವರ ಪುಸ್ತಕ. ವಿಶ್ವದಾದ್ಯಂತದ ಕಾದಂಬರಿಕಾರರು, ಕತೆಗಾರರು ಈ ಪ್ರಶಸ್ತಿಗಾಗಿ ನಾನು- ತಾನು ಎನ್ನುತ್ತ ಸ್ಪರ್ಧಿಸುತ್ತಾರೆ. ಈಗಾಗಲೇ ಸ್ವಲ್ಪ ಜಾಗತಿಕ ಪ್ರಸಿದ್ಧಿ ಪಡೆದವರ ಕೃತಿಗಳನ್ನು ತೀರ್ಪುಗಾರರು ಬಹು ಸುಲಭವಾಗಿ ಪರಿಗಣಿಸುತ್ತಾರೆ. ಆದರೆ ಬಾನು ಮುಷ್ತಾಕ್‌ ಅವರಿಗೆ ಅಂಥಾ ಅಂತಾರಾಷ್ಟ್ರೀಯ ಖ್ಯಾತಿಯೇನೂ ಇರಲಿಲ್ಲ. ಆದರೂ ಅವರ ಕೃತಿ ತೀರ್ಪುಗಾರರ ಮನಸ್ಸನ್ನು ಗೆದ್ದುಬಿಟ್ಟಿತು. ಅದು ಹೇಗೆ?

ಇತ್ತೀಚಿಗೆ ನಡೆದ ಸಂವಾದವೊಂದರಲ್ಲಿ ಬಾನು ಅವರು ಹೇಳಿದ್ದರು- ಹೀಗೊಂದು ಅಂತಾರಾಷ್ಟ್ರೀಯ ಸ್ಪರ್ಧೆ ಇದೆ. ಅದಕ್ಕೆ ಅನುವಾದವನ್ನು ಕಳಿಸೋಣವೇ ಅಂತ ಬಾನು ಅವರ ಕತೆಗಳ ಅನುವಾದಕಿ ದೀಪಾ ಭಸ್ತಿ ಕರೆ ಮಾಡಿ ಹೇಳಿದರು. ಆಗ ಅವರು ಹೃದಯ ತಪಾಸಣೆಗಾಗಿ ಹೋಗ್ತಾ ಇದ್ರಂತೆ‌. ನಿನಗೆ ಸರಿ ಅನ್ನಿಸಿದ್ದನ್ನು ಮಾಡು ಅಂತ ಹೇಳಿದರಂತೆ. ಬಾನು ಅವರಿಗೆ ಬೂಕರ್ ಸ್ಪರ್ಧೆಯ ಬಗ್ಗೆಯಾಗಲೀ, ಅದು ತಂದು ಕೊಡುವ ಮನ್ನಣೆಯ ಬಗ್ಗೆಯಾಗಲೀ ಅರಿವಿರಲಿಲ್ಲ‌ವಂತೆ. ಬೂಕರ್‌ ಪ್ರಶಸ್ತಿ ಪಡೆದ ನಂತರ ಮಾಡಿದ ಭಾಷಣದಲ್ಲಿ ಬಾನು ಅವರು ಮಾತಾಡ್ತಾ "ನನಗೆ ಈ ಕ್ಷಣ ಸಾವಿರಾರು ನಕ್ಷತ್ರ ಹುಳಗಳ ಮಿಂಚನ್ನು ನೋಡಿದ ಹಾಗೆ ಆಗ್ತಾ ಇದೆ" ಅಂದಿದ್ದರು.

ವಿಶೇಷ ಅಂದರೆ ಈ ಪುಸ್ತಕದಲ್ಲಿ ಯಾವ ಕತೆಗಳೂ ಸ್ಪರ್ಧೆಗಳಿಗಾಗಿ ಬರೆದವುಗಳಲ್ಲ, ಬುಕರ್ ಪ್ರಶಸ್ತಿಗಾಗಿಯೂ ಬರೆದವುಗಳಲ್ಲ. ಇವು ಸುಮಾರು ಹತ್ತಾರು ವರ್ಷಗಳ ಹಿಂದೆ ಬರೆದ ಕತೆಗಳು. ಬಾನು ಅವರ ಕತೆಗಳಲ್ಲಿ ಅತ್ಯುತ್ತಮ ಎನಿಸಿದ 12 ಕತೆಗಳನ್ನು ಅಯ್ದುಕೊಂಡು ದೀಪಾ ಭಾಸ್ತಿ ಅವರು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಕತೆಗಳಲ್ಲಿನ ನೋವು ಪ್ರಾಮಾಣಿಕವಾದದ್ದು, ನೈಜವಾದದ್ದು. ಬಾನು ಅವರು ತಮ್ಮ ಜೀವನದಲ್ಲಿ ಸುತ್ತ ಕಂಡ ವಿಚಾರಗಳು, ಅನುಭವಗಳು ಕತೆಯಾಗಿವೆ. ವ್ಯವಸ್ಥೆಯಲ್ಲಿ ಮನಕ್ಕೆ ತಟ್ಟಿದ, ಕಣ್ಣಿಗೆ ಕಂಡ ವಿಚಾರಗಳನ್ನು ಬಾನು ಮುಷ್ತಾಕ್ ಅವರು ಬರೆದಿದ್ದಾರೆ. ಅವು ಮುಸ್ಲಿಂ ಸ್ತ್ರೀಯರ ಬವಣೆಯ ಕತೆಗಳಂತೆ ಕಾಣುತ್ತದೆ- ಕಾಣುತ್ತದೆ ಮಾತ್ರವಲ್ಲ, ಅದು ನಿಜವೂ ಆಗಿದೆ. ಅವುಗಳನ್ನು ಕತೆಯಾಗಿ ಓದುವಾಗ ಆ ನೋವಿನ ತೀವ್ರತೆ ನಮ್ಮನ್ನು ತಲುಪುತ್ತದೆ.

ಅನೇಕ ಸಲ ಈ ಬೂಕರ್ ಮುಂತಾದ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಬೇರೆ ಬೇರೆ ಕಾರಣಗಳಿಗಾಗಿ ನಿರ್ಧರಿಸಲ್ಪಡುತ್ತವೆ. ಇಂಥ ಕೃತಿಗಳಿಗೆ ಒಬ್ಬ ಗಟ್ಟಿಯಾದ ಅನುವಾದಕ, ಅದನ್ನು ಅಂತಾರಾಷ್ಟ್ರೀಯ ವಲಯಕ್ಕೆ ತಲುಪಿಸಬಹುದಾದ ಸಾಮರ್ಥ್ಯ ಹೊಂದಿರುವ ಏಜೆಂಟ್‌ ಕೂಡ ಬೇಕಾಗುತ್ತದೆ. ಇವರನ್ನು ಲಿಟರರಿ ಏಜೆಂಟ್‌ ಅನ್ನುತ್ತಾರೆ. ಬಾನು ಅವರ ಕೃತಿಯ ಹಿಂದೆ ಕಾನಿಷ್ಕಾ ಗುಪ್ತಾ ಎಂಬ ಒಬ್ಬ ಗಟ್ಟಿಯಾದ ಲಿಟರರಿ ಏಜೆಂಟ್‌ ಇದ್ದಾರೆ. ಇವರು ಹಲವು ಭಾರತೀಯ ಕೃತಿಗಳಿಗೂ ಪ್ರತಿಷ್ಠಿತ ಪೆಂಗ್ವಿನ್‌ ಪ್ರಕಾಶನಕ್ಕೂ ಕೊಂಡಿಯಾಗಿದ್ದಾರೆ. ಪೆಂಗ್ವಿನ್‌ ಪ್ರಕಾಶನಕ್ಕೆ ಸೂಕ್ತವಾಗುವಂಥ ಕೃತಿಗಳನ್ನು ಆಯ್ದು ನೀಡುವುದು, ಪ್ರಕಾಶನಕ್ಕೆ ಬೇಕಾದಂತೆ ಯಾವುದಾದರೂ ಬದಲಾವಣೆ ಬೇಕಿದ್ದರೆ ಕೃತಿಯಲ್ಲಿ ಮಾಡಿಸುವುದು- ಇವರ ಕೆಲಸ. ಹಾಗೆ ಕಾನಿಷ್ಕಾ ಗುಪ್ತಾರಿಂದ ಆಯ್ಕೆಯಾದ ಈ ಕೃತಿ ಪೆಂಗ್ವಿನ್‌ ಪ್ರಕಾಶದಿಂದ ಮುದ್ರಿತವಾಗಿದೆ. ಸಹಜವಾಗಿಯೇ, ಪೆಂಗ್ವಿನ್‌ನಿಂದ ಪ್ರಕಟವಾದ ಕೃತಿಗಳು ಬೂಕರ್‌ನಲ್ಲಿ ಮುಂದೆ ನಿಲ್ಲುವ ರೂಢಿ ನಡೆದುಕೊಂಡು ಬಂದಿದೆ.

ಜೊತೆಗೆ ಇಂಥ ಸ್ಪರ್ಧೆಗಳ ತೀರ್ಪುಗಾರರು ಕೃತಿಯಲ್ಲಿ ಇನ್ನೂ ಹಲವು ಅಂಶಗಳನ್ನೂ ಗಮನಿಸುತ್ತಾರೆ. ಅಂದರೆ, ಕತೆ ಚೆನ್ನಾಗಿರಬೇಕು ಅಥವಾ ಓದಿಸಿಕೊಂಡು ಹೋಗಬೇಕು ಎಂಬುದು ಇಲ್ಲಿ ಮುಖ್ಯವಲ್ಲ. ಆ ಕೃತಿಯಲ್ಲಿ ಪ್ರತಿಪಾದಿಸಲಾದ ವಿಷಯಗಳು ಬಡವರ, ಶೋಷಿತರ ಪರವಾಗಿರಬೇಕು. ಮಹಿಳೆಯರ ನೋವುಗಳನ್ನು ಬಿಂಬಿಸಬೇಕು, ಸ್ತ್ರೀ ಸಮಾನತೆಯ ಆಶಯವನ್ನು ಪ್ರತಿಪಾದಿಸಬೇಕು. ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಪರವಾಗಿ ಮಾತನಾಡಬೇಕು. ಅಧಿಕಾರದಲ್ಲಿರುವವರ, ಅದರಲ್ಲೂ ಬಲಪಂಥೀಯ ಆಡಳಿತಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಟೀಕಿಸಬೇಕು. ಲೇಖಕರು ಸಾಮಾಜಿಕ ಚಳವಳಿಗಳಲ್ಲಿ ಒಡನಾಟ ಹೊಂದಿರುವವರಾದರೆ ಇನ್ನೂ ಬೆಸ್ಟ್.‌ ಈ ಹಿಂದೆ ಪ್ರಶಸ್ತಿ ಪಡೆದ ಅನೇಕರು ಸಾಮಾಜಿಕ ಹೋರಾಟಗಾರರು, ದೇಶದ ಆಡಳಿತಗಳಿಂದ ಬಹಿಷ್ಕೃತರಾದವರು, ಜೈಲಿಗೆ ಹೋದವರು ಇತ್ಯಾದಿ ಆಗಿದ್ದಾರೆ. ಇಂಥವರನ್ನೇ ತೀರ್ಪುಗಾರರು ಹುಡುಕುತ್ತಾರೆ.

ಬಾನು ಮುಷ್ತಾಕ್‌ ಇದೆಲ್ಲವೂ ಆಗಿದ್ದರು. ಅವರ ಕತೆಗಳು ಮುಸ್ಲಿಂ ಸಮುದಾಯದಲ್ಲಿ ತುಳಿತಕ್ಕೆ ಒಳಗಾದ ಸ್ತ್ರೀಯರ ನೋವುಗಳನ್ನು ಅಭಿವ್ಯಕ್ತಿಸಿವೆ. ತ್ರಿವಳಿ ತಲಾಖ್‌ನಿಂದ ನೊಂದವರು, ಫ್ಯೂಡಲ್‌ ಗಂಡಂದಿರು ಹಾಗೂ ಧಾರ್ಮಿಕ ಗುರುಗಳಿಂದ ಶೋಷಣೆಗೆ ಒಳಗಾದವರು ಇವರ ಕತೆಗಳಲ್ಲಿ ಇದ್ದಾರೆ. ಬಾನು ಅವರು ವಕೀಲರಾದ್ದರಿಂದ ಅವರು ಕಂಡುಂಡ ಕೆಲವು ಮಹಿಳೆಯರ ಜೀವನವನ್ನು ಕತೆಯಾಗಿಸಿದ್ದಾರೆ ಅನ್ನಬಹುದು. ಅವರು ಪತ್ರಕರ್ತೆಯೂ ಆಗಿದ್ದರು. ಲಂಕೇಶ್‌ ಪತ್ರಿಕೆಗೆ ವರದಿ ಮಾಡುತ್ತಿದ್ದರು. ಒಂದು ಸಲ ಇಂಥ ಪ್ರಕರಣವೊಂದನ್ನು ವರದಿ ಮಾಡಿದ್ದಕ್ಕಾಗಿ ಅವರ ಮೇಲೆ ಹಲ್ಲೆ ಯತ್ನ ನಡೆದಿತ್ತು. ಅವರಿಗೆ ಮುಸ್ಲಿಂ ಸಮುದಾಯದ ಒಳಗಿನಿಂದಲೇ ಫತ್ವಾ ಕೂಡ ಹೊರಟಿತ್ತು ಎನ್ನಲಾಗುತ್ತದೆ. ಇನ್ನು ಅವರು ದತ್ತಪೀಠ ಅಂದರೆ ಬಾಬಾಬುಡನ್‌ಗಿರಿ ಹೋರಾಟದಲ್ಲಿ ಗೌರಿ ಲಂಕೇಶ್‌ ಅವರ ಜೊತೆಗೆ ಸೇರಿಕೊಂಡು ಹಿಂದೂ ಸಂಘಟನೆಗಳನ್ನು ವಿರೋಧಿಸಿ ಚಳವಳಿಯಲ್ಲಿ ಭಾಗವಹಿಸಿದ್ದರು. ಅಂದರೆ ಬೂಕರ್‌ ಸಮಿತಿ ನಿರೀಕ್ಷಿಸುವ ಎಲ್ಲ ಅರ್ಹತೆಗಳೂ ಬಾನು ಅವರಲ್ಲಿವೆ ಅಂತಾಯ್ತು.

ಬಾನು ಅವರ ಈ ಕೃತಿಯಲ್ಲಿನ ಕತೆಗಳು ಮುಸ್ಲಿಂ ಮಹಿಳೆಯರ ಜೀವನವನ್ನೇ ಆಧರಿಸಿದೆ ಅಂತ ಹೇಳಿದೆ. ಅದಕ್ಕೆ ಉದಾಹರಣೆ, ಕೃತಿಯ ಶೀರ್ಷಿಕೆ ಹೊತ್ತ ʼಎದೆಯ ಹಣತೆʼ ಎಂಬ ಕತೆ. ಇದರಲ್ಲಿ ಒಬ್ಬಾಕೆ ಮುಸ್ಲಿಂ ಮಹಿಳೆ ಇರ್ತಾಳೆ. ಆಕೆಯ ಗಂಡ ಅವಳಿಗೆ ನಾಲ್ಕೋ ಐದೋ ಮಕ್ಕಳನ್ನು ಕೊಡ್ತಾನೆ. ನಂತರ ಬೇರೊಬ್ಬ ಹೆಣ್ಣಿನತ್ತ ಕಣ್ಣು ಹಾಕಿ ಆಕೆಯ ಹಿಂದೆ ಹೋಗುತ್ತಾನೆ. ಈಕೆ ಗಂಡನಿಂದ, ಇತ್ತ ತವರು ಮನೆಯಿಂದ, ಸಮಾಜದಿಂದಲೂ ತಿರಸ್ಕೃತಳಾಗಿ ಬದುಕಬೇಕಾಗುತ್ತದೆ. ಈ ಬವಣೆಯನ್ನು ತಾಳಲಾಗದೆ ಒಂದು ಹಂತದಲ್ಲಿ ಆಕೆ ಸಾಯುವ ನಿರ್ಧಾರಕ್ಕೆ ಬರುತ್ತಾಳೆ. ಪುಟ್ಟ ಹಸುಗೂಸನ್ನು ಮನೆಯೊಳಗೆ ಮಲಗಿಸಿ ಅಂಗಳಕ್ಕೆ ಬಂದು ಮೈಗೆ ಸೀಮೆಎಣ್ಣೆ ಸುರಿದುಕೊಂಡು ಇನ್ನೇನು ಬೆಂಕಿ ಹಚ್ಚಬೇಕು ಎಂಬಷ್ಟರಲ್ಲಿ, ಒಳಗಿದ್ದ ಮಗು ಚಿಟಾರ್‌ ಎಂದು ಚೀರುತ್ತದೆ. ಈ ಮಹಿಳೆಯ ದೊಡ್ಡ ಮಗಳು ಆ ಹಸುಗೂಸನ್ನು ಎತ್ತಿಕೊಂಡು ಬಂದು ಈಕೆಯ ಕಾಲಬುಡದಲ್ಲಿ ಇಟ್ಟು, ಇದಕ್ಕಾಗಿ ನೀನು ಬದುಕಬೇಕು ಎನ್ನುತ್ತಾಳೆ. ಮಹಿಳೆ ತನ್ನ ನಿರ್ಧಾರ ಬದಲಾಯಿಸುತ್ತಾಳೆ. ತುಂಬಾ ಸರಳವಾದ, ಆದರೆ ಗಂಭೀರವಾದ ಕತೆಯಿದು. ಇಂಥ ಹಲವು ಕತೆಗಳು ಈ ಸಂಕಲನದಲ್ಲಿವೆ. ಈ ಕತೆಗಳು ಕಟ್ಟಿಕೊಟ್ಟಿರುವ ದಕ್ಷಿಣ ಭಾರತದ ಒಂದು ಸಮುದಾಯದ ಬದುಕು, ಅದರ ತೀವ್ರತೆ ತಮ್ಮ ಗಮನವನ್ನು ಸೆಳೆಯಿತು ಎಂದು ಬೂಕರ್‌ ಸಮಿತಿ ತೀರ್ಪುಗಾರರು ಹೇಳಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!