ಮಗು ಆದ್ಮೇಲೆ ಹೆಣ್ಣು ಹೈರಾಣಾಗಿ ಹೋಗುತ್ತಾಳೆ. ಅವಳ ತ್ವಚೆ, ಕೂದಲ ಸೌಂದರ್ಯ ಅಂದಗೆಡುತ್ತದೆ. ದೇಹದಲ್ಲಿ ಅಗತ್ಯ ಪೋಷಕಾಂಶಗಳ ಕೊರತೆ ಎದುರಾಗುತ್ತದೆ. ಇವೆಲ್ಲವಕ್ಕೂ ಏನು ಮಾಡಬೇಕು?
ಪ್ರಗ್ನೆನ್ಸಿ ಎಂಬುದು ಸುಂದರವಾದ ಜರ್ನಿ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ ಇದು ಒಬ್ಬೊಬ್ಬರಿಗೂ ವಿಭಿನ್ನ ಅನುಭವ ನೀಡುತ್ತದೆ. ಪ್ರಗ್ನೆನ್ಸಿಯಲ್ಲಿ ಕೆಲ ಮಹಿಳೆಯರು ಹಿಂದೆಂದೂ ಇಲ್ಲದಷ್ಟು ಹೊಳಪನ್ನು ಪಡೆದರೆ ಮತ್ತೆ ಕೆಲವರು ಕಪ್ಪುಕಲೆ, ತುರಿಕೆ, ಪ್ಯಾಚಸ್ ಅನುಭವಿಸಬೇಕಾಗುತ್ತದೆ. ಇವೇನೇ ಇರಲಿ, ಮಗು ಹುಟ್ಟಿದ ಬಳಿಕ ಎಲ್ಲ ತಾಯಂದಿರೂ ತ್ವಚೆಗೆ ಹೆಚ್ಚಿನ ಕಾಳಜಿ ವಹಿಸಬೇಕು. ಇಲ್ಲದಿದ್ದಲ್ಲಿ ನಿಮ್ಮ ಕಡೆಗಣನೆಗೆ ಸೌಂದರ್ಯ ಹಾಳಾಗುತ್ತದೆ.
ಪ್ರಗ್ನೆನ್ಸಿಯು ಮುಖ ಹಾಗೂ ಮೈಯ ಕಾಂತಿ ಮೇಲೆ ಪರಿಣಾಮ ಬೀರುತ್ತದೆ. ಮಗು ಹುಟ್ಟಿದ ಬಳಿಕ ಕೆಮಿಕಲ್ಸ್‌ಯುಕ್ತ ಸೌಂದರ್ಯವರ್ಧಕಗಳನ್ನು ಬಳಸಲೂ ಆಗುವುದಿಲ್ಲ. ಆಗ ಆರ್ಗ್ಯಾನಿಕ್ ಹಾಗೂ ಆರೋಗ್ಯಯುತ ಮಾರ್ಗಗಳನ್ನು ಹುಡುಕಿಕೊಳ್ಳುವುದು ಒಳಿತು. ಇದಕ್ಕಾಗಿ ಚರ್ಮರೋಗ ತಜ್ಞರು ನೀಡಿರುವ ಸಲಹೆಗಳು ಇಲ್ಲಿವೆ.
undefined
ಸ್ವಚ್ಛತೆ
ದೇಹವನ್ನು ಸದಾ ಕಾಲ ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯವೇ. ಆದರೆ, ಮಗುವಾದ ಬಳಿಕ ನಿಮ್ಮ ಸಮಯವೆಲ್ಲ ಮಗುವಿಗಾಗಿ ಹೋಗುತ್ತಿರುವಾಗ ವೈಯಕ್ತಿಕ ಸ್ವಚ್ಛತೆಯತ್ತ ಹೆಚ್ಚು ಗಮನ ಹರಿಸಲು ಸಾಧ್ಯವಾಗದಿರಬಹುದು. ಕೊಳಕು ಡೈಪರ್‌ಗಳು, ಮೈಗೆ ಮತ್ತಿಕೊಂಡ ಮಗುವಿನ ಆಹಾರ, ಮೆಟರ್ನಿಟಿ ಬಟ್ಟೆಗಳು, ಬೇಬಿ ಕ್ರೀಂ ಯಾವುದನ್ನೂ ಈ ಸಂದರ್ಭದಲ್ಲಿ ದೂರವಿಡುವುದು ಕಷ್ಟವೇ. ಹಾಗಿದ್ದು ಕೂಡಾ ಸ್ವಚ್ಛತೆ ಆದ್ಯತೆಯಾಗಲೇ ಬೇಕು. ಸಾಧ್ಯವಾದರೆ ದಿನಕ್ಕೆರಡು ಬಾರಿ ಸ್ನಾನ ಮಾಡಿ. ಒಮ್ಮೆ ಧರಿಸಿದ ಬಟ್ಟೆಗಳನ್ನು ಒಗೆಯದೆ ಮತ್ತೆ ಧರಿಸಬೇಡಿ.
ಯೋಗ
ಯೋಗ ಮಾನಸಿಕ ಶಾಂತಿಯನ್ನಷ್ಟೇ ಅಲ್ಲ, ದೈಹಿಕ ಸೌಂದರ್ಯವನ್ನೂ ಹೆಚ್ಚಿಸುತ್ತದೆ. ಯೋಗದಿಂದ ದೇಹದ ಟಾಕ್ಸಿನ್‌ಗಳು ಹೊರಹೋಗಿ ಒತ್ತಡ ಕೂಡಾ ಕಡಿಮೆಯಾಗುತ್ತದೆ. ಹೀಗೆ ಟಾಕ್ಸಿನ್‌ಗಳು ಹೊರಹೋದಾಗ, ನೆಗೆಟಿವ್ ಯೋಚನೆಗಳು ಕಡಿಮೆಯಾದಾಗ ದೇಹ ಹೆಚ್ಚಿನ ಕಾಂತಿ ಪಡೆದುಕೊಳ್ಳುತ್ತದೆ.
ಆಹಾರ
ಮಗುವಿನ ಡೆಲಿವರಿ ಬಳಿಕ ನಿದ್ದೆಗೆಟ್ಟು ಮಗುವಿನ ಲಾಲನೆಪಾಲನೆ ಮಾಡುವಾಗ ತಾಯಿಯ ದೇಹಕ್ಕೆ ಬೇಕಾದ ಸರಿಯಾದ ಪೋಷಣೆ ದೊರೆಯುವುದಿಲ್ಲ. ಬಾಣಂತನ ಹೆಸರಿನಲ್ಲಿ ಬಹಳಷ್ಟು ಆಹಾರವನ್ನೂ ಹಿರಿಯರು ಕೊಡದೆ ಸತಾಯಿಸಬಹುದು. ಈ ಎಲ್ಲ ಸುಸ್ತು ಕಳೆದುಕೊಳ್ಳಲು ಸಿಕ್ಕಾಪಟ್ಟೆ ತಿನ್ನುವ ಚಪಲ ಒಂದೆಡೆ, ಪ್ರಗ್ನೆನ್ಸಿಯಲ್ಲಿ ಹೆಚ್ಚಾದ ತೂಕ ಇಳಿಸುವ ಆಶೆ ಇನ್ನೊಂದೆಡೆ. ಹೀಗಾಗಿ ಆಹಾರದ ವಿಷಯದಲ್ಲಿ ಬಹಳಷ್ಟು ಹೊಸ ತಾಯಂದಿರು ಎಡವುವ ಸಾಧ್ಯತೆ ಹೆಚ್ಚು. ಈ ಸಂದರ್ಭದಲ್ಲಿ ತೂಕ ಹೆಚ್ಚಿಸದ, ಆದರೆ ಆರೋಗ್ಯಕ್ಕೆ ಒಳ್ಳೆಯದೆನಿಸಿದ ಆಹಾರವನ್ನು ಚೆನ್ನಾಗಿ ಸೇವಿಸುವುದೇ ಸರಿಯಾದ ಮಂತ್ರ. ಅಂದರೆ ಫೈಬರ್ ಹೆಚ್ಚಿರುವ ಸೊಪ್ಪು, ತರಕಾರಿಗಳು, ಧಾನ್ಯಗಳು ಇತ್ಯಾದಿಯನ್ನು ಚೆನ್ನಾಗಿ ಸೇವಿಸಿ. ಎನರ್ಜಿ ಚೆನ್ನಾಗಿದ್ದಾಗ ಖುಷಿಯಾಗಿರಲು ಸಾಧ್ಯ. ತಾಯಿ ಖುಷಿಯಾಗಿದ್ದರೆ, ಮಗುವೂ ಖುಷಿಯಾಗಿರುತ್ತದೆ.
ನೀರು
ನಾವು ಬ್ಯುಸಿಯಿರುವಾಗ ನೀರು ಕುಡಿಯುವುದನ್ನು ಮರೆಯುವುದು ಇಲ್ಲವೇ ಕಡೆಗಣಿಸುವುದು ಮಾಡುತ್ತೇವೆ. ಆದರೆ, ಆರೋಗ್ಯವಂತ ತ್ವಚೆಗೆ ದಿನಕ್ಕೆ ಕನಿಷ್ಠ 8-10 ಗ್ಲಾಸ್ ನೀರು ಬೇಕಾಗುತ್ತದೆ. ಇದು ಚರ್ಮವನ್ನು ಒಳಗಿನಿಂದ ಮಾಯಿಶ್ಚರೈಸ್ ಮಾಡುತ್ತದೆ. ಇದರಿಂದ ಚರ್ಮ ಹೊಳಪು ಪಡೆದುಕೊಳ್ಳುತ್ತದೆ.
ರೂಟಿನ್
ಪ್ರಗ್ನೆನ್ಸಿ ಬಳಿಕ ಡೆಡ್‌ಸ್ಕಿನ್, ಕಲೆಗಳು, ಮೊಡವೆ ಇವೆಲ್ಲ ಕಾಮನ್. ಹಾಗಾಗಿ, ಸ್ಕಿನ್‌ಕೇರನ್ನು ರೂಟಿನ್ ಮಾಡಿಕೊಳ್ಳುವುದು ಅಗತ್ಯ. ಹಾಗಾಗಿ, ಕ್ಲೆನ್ಸಿಂಗ್, ಟೋನಿಂಗ್ ಹಾಗೂ ತ್ವಚೆಗೆ ಮಾಯಿಶ್ಚರೈಸರ್ ಹಚ್ಚುವುದನ್ನು ದೈನಂದಿನ ಅಭ್ಯಾಸವಾಗಿಸಿಕೊಳ್ಳಿ. ಇದರಿಂದ ತ್ವಚೆಗೂ ಒಳ್ಳೆಯದು, ನಿಮಗೂ ಸ್ವಲ್ಪ ಮಿ ಟೈಂ ಸಿಕ್ಕಂತಾಗುತ್ತದೆ.