
ಮಹಿಳೆಯರು ಆರೋಗ್ಯವನ್ನು ನಿರ್ಲಕ್ಷ್ಯ ಮಾಡ್ತಾರೆ ಅನ್ನೋದು ಒಂದಾದ್ರೆ ವೈದ್ಯರ ಬಳಿ ಹೋದಾಗ ಎಲ್ಲ ವಿಷ್ಯವನ್ನು ಹೇಳೋದಿಲ್ಲ ಅನ್ನೋದು ಇನ್ನೊಂದು ಆರೋಪ. ಬಹುತೇಕ ಮಹಿಳೆಯರು ವೈದ್ಯರ ಬಳಿ ಹೋಗಲು ಸಂಕೋಚ ವ್ಯಕ್ತಪಡಿಸ್ತಾರೆ. ಮೊದಲ ಬಾರಿ ಸ್ತ್ರೀರೋಗ ತಜ್ಞರ ಬಳಿ ಹೋದಾಗ ಅವರ ಟೆನ್ಷನ್ ಜಾಸ್ತಿಯಾಗುತ್ತದೆ. ವೈದ್ಯರು ಏನೆಲ್ಲ ಕೇಳ್ಬಹುದು ಎನ್ನುವುದ್ರಿಂದ ಹಿಡಿದು ತನ್ನ ದೇಹವನ್ನು ಅವರು ಪರೀಕ್ಷೆ ಮಾಡ್ತಾರಲ್ಲ ಎನ್ನುವ ನಾಚಿಕೆಯವರೆಗೆ ಅನೇಕ ವಿಷ್ಯಗಳು ಅವರನ್ನು ವೈದ್ಯರ ಬಳಿ ಹೋಗದಂತೆ ಮಾಡುತ್ತದೆ.
ವೈದ್ಯ (Doctor) ರ ಬಳಿ ಎಲ್ಲವನ್ನೂ ಬಿಚ್ಚಿಡದೆ ಹೋದಾಗ ವೈದ್ಯರಿಗೆ ನಿಮ್ಮ ಸಮಸ್ಯೆ ತಿಳಿಯೋದಿಲ್ಲ. ಸಂತಾನೋತ್ಪತ್ತಿ ಆರೋಗ್ಯ (Health) ಕ್ಕೆ ಸಂಬಂಧಿಸಿದ ಸಮಸ್ಯೆ ಕಂಡುಹಿಡಿಯುವುದರಿಂದ ಹಿಡಿದು ಒಟ್ಟಾರೆ ಆರೋಗ್ಯವನ್ನು ಉತ್ತಮವಾಗಿಡಲು ಮನಸ್ಸು ಬಿಚ್ಚಿ ಮಾತನಾಡುವುದು ಮುಖ್ಯವಾಗುತ್ತದೆ. ಮೊದಲ ಬಾರಿಗೆ ಸ್ತ್ರೀರೋಗತಜ್ಞ (Gynecologist) ರನ್ನು ಭೇಟಿ ಮಾಡಲು ಹೋಗ್ತಿದ್ದರೆ ಕೆಲವೊಂದು ಸಂಗತಿಯನ್ನು ನೆನಪಿಟ್ಟುಕೊಳ್ಳಿ.
ಪ್ಯುಬಿಕ್ ಕೂದಲಿನ ಬಗ್ಗೆ ಟೆನ್ಷನ್ ಬೇಡ : ಅನೇಕ ಮಹಿಳೆಯರು ಖಾಸಗಿ ಅಂಗದಲ್ಲಿ ಸಮಸ್ಯೆ ಕಾಣಿಸಿಕೊಂಡ್ರೆ ಅಥವಾ ಸಂತಾನೋತ್ಪತ್ತಿಗೆ ಸಂಬಂಧಿಸಿದ ಪರೀಕ್ಷೆ ವೇಳೆ ಪ್ಯುಬಿಕ್ ಕೂದಲಿನ ಬಗ್ಗೆ ಟೆನ್ಷನ್ ಮಾಡಿಕೊಳ್ತಾರೆ. ಖಾಸಗಿ ಅಂಗ ಸ್ವಚ್ಛಗೊಳಿಸಲು ಮರೆತಿದ್ದೇನೆ, ಕೂದಲಿರುವುದು ಮುಜುಗರ ತರಿಸಬಹುದು ಎಂದೆಲ್ಲ ಆಲೋಚನೆ ಮಾಡ್ತಾರೆ. ಸ್ತ್ರೀರೋಗ ತಜ್ಞರು ನಿಮ್ಮ ಆರೋಗ್ಯದ ಬಗ್ಗೆ ಗಮನ ನೀಡ್ತಾರೆಯೇ ವಿನಃ ನಿಮ್ಮ ಪ್ಯುಬಿಕ್ ಕೂದಲಿನ ಬಗ್ಗೆ ಗಮನ ಹರಿಸೋದಿಲ್ಲ. ಒಂದ್ವೇಳೆ ಸ್ವಚ್ಛತೆಯ ಕೊರತೆಯಿಂದ್ಲೇ ಸೋಂಕು ಕಾಣಿಸಿಕೊಂಡಿದ್ದರೆ ಅದನ್ನು ಕ್ಲೀನ್ ಮಾಡುವಂತೆ ಸಲಹೆ ನೀಡ್ತಾರೆ. ಆದ್ರೆ ಇದ್ರ ಬಗ್ಗೆ ನೀವು ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಸ್ತ್ರೀರೋಗ ತಜ್ಞರಿಗೆ ಇದು ಸಾಮಾನ್ಯ.
Home Decoration: ಮನೆ ಆಕರ್ಷಕವಾಗಿ ಕಾಣ್ಬೇಕೆಂದ್ರೆ ಈ ತಪ್ಪು ಮಾಡ್ಬೇಡಿ
ಎಲ್ಲವನ್ನೂ ಸ್ಪಷ್ಟವಾಗಿ ಹೇಳಿ : ಮೊದಲ ಬಾರಿ ಮಾತ್ರವಲ್ಲ ನೀವು ಯಾವಾಗ, ಯಾವ ವೈದ್ಯರನ್ನು ಭೇಟಿಯಾದ್ರೂ ಕೂಡ ನಿಮ್ಮ ಸಮಸ್ಯೆಯನ್ನು ನೀವು ಸ್ಪಷ್ಟವಾಗಿ ಹೇಳ್ಬೇಕು. ಯಾವುದೇ ವಿಷ್ಯವನ್ನು ಮುಚ್ಚಿಡುವ ಪ್ರಯತ್ನ ನಡೆಸಬಾರದು. ಕೆಲವೊಮ್ಮೆ ನಾಚಿಕೆಯಿಂದ ಇಂಟರ್ಕೋರ್ಸ್ ಬಗ್ಗೆ ಸರಿಯಾದ ಮಾಹಿತಿ ನೀಡೋದಿಲ್ಲ. ಇನ್ನು ಕೆಲವೊಮ್ಮೆ ಮರೆತಿರುತ್ತದೆ. ನಿಮಗೆ ಹೇಳಲು ಮರೆತು ಹೋಗುತ್ತೆ ಎಂದಾದ್ರೆ ನಿಮ್ಮನ್ನು ಕಾಡ್ತಿರುವ ಎಲ್ಲ ಸಮಸ್ಯೆಗಳನ್ನು ಪೇಪರ್ ನಲ್ಲಿ ಬರೆದುಕೊಂಡು ಹೋಗಿ. ನೀವು ಎಲ್ಲ ಸಮಸ್ಯೆ ಹೇಳಿದಾಗ ಮಾತ್ರ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಲು ವೈದ್ಯರಿಗೆ ಸಾಧ್ಯವಾಗುತ್ತದೆ.
ಮುಟ್ಟಿನ ದಿನವನ್ನು ಟ್ರ್ಯಾಕ್ ಮಾಡಿ : ಕೆಲ ಮಹಿಳೆಯರಿಗೆ ಮುಟ್ಟಿನ ದಿನಾಂಕ ನೆನಪಿರೋದಿಲ್ಲ. ಸ್ತ್ರೀರೋಗ ತಜ್ಞರನ್ನು ಭೇಟಿಯಾದಾಗ ಅವರು ಮುಟ್ಟಿನ ದಿನಾಂಕದ ಬಗ್ಗೆ ಕೇಳ್ತಾರೆ. ವೈದ್ಯರ ಬಳಿ ಹೋಗುವಾಗ ಮಾತ್ರವಲ್ಲ ಪ್ರತಿ ಬಾರಿ ನೀವು ಮುಟ್ಟಿನ ದಿನಾಂಕವನ್ನು ಟ್ರ್ಯಾಕ್ ಮಾಡ್ಬೇಕು. ದಿನಾಂಕದಲ್ಲಿ ಆಗುವ ಏರುಪೇರು ಅನೇಕ ರೋಗದ ಲಕ್ಷಣವಾಗಿರುತ್ತದೆ. ನೀವು ಸರಿಯಾದ ದಿನಾಂಕವನ್ನು ಹೇಳಿದ್ರೆ ವೈದ್ಯರಿಗೆ ಸಮಸ್ಯೆ ಕಂಡು ಹಿಡಿಯುವುದು ಸುಲಭವಾಗುತ್ತದೆ. ಅಲ್ಲದೆ ಗರ್ಭಧಾರಣೆ ಕೆಲಸವನ್ನು ಇದು ಸುಲಭಗೊಳಿಸುತ್ತದೆ. ಈಗಿನ ದಿನಗಳಲ್ಲಿ ಮುಟ್ಟಿನ ದಿನಾಂಕವನ್ನು ನೆನಪಿಟ್ಟುಕೊಳ್ಳುವ ಸಾಕಷ್ಟು ಅಪ್ಲಿಕೇಷನ್ ಲಭ್ಯವಿದೆ. ನೀವು ಅದ್ರ ಸಹಾಯಪಡೆಯಬಹುದು.
Beauty Tips: ಮುಖದ ಕೂದಲು ತೆಗೆಯಲು ಹುಡುಗಿಯರು ಶೇವ್ ಮಾಡ್ಬಹುದಾ?
ಪ್ರಶ್ನೆಗಳಿಗೆ ಉತ್ತರ ತಿಳಿಯಿರಿ : ಸಮಸ್ಯೆ ಹೇಳಿದ್ರೆ ಸಾಲದು, ಅನೇಕ ಬಾರಿ ನಮಗೆ ಪ್ರಶ್ನೆಗಳಿರುತ್ತವೆ. ಸ್ತ್ರೀರೋಗ ವೈದ್ಯರ ಬಳಿ ಹೋದಾಗ ನಿಮ್ಮ ಸಮಸ್ಯೆಗಳನ್ನು ಕೇಳಿ ಅದಕ್ಕೆ ಉತ್ತರ ಪಡೆಯಬಹುದು. ಮುಟ್ಟಿನ ಸಮಯದಲ್ಲಿ ಯಾವ ಪ್ಯಾಡ್ ಬಳಕೆ ಮಾಡ್ಬೇಕು, ಖಾಸಗಿ ಅಂಗದ ಸ್ವಚ್ಛತೆಯನ್ನು ಹೇಗೆ ಕಾಪಾಡಬೇಕು, ಕಾಂಡೋಮ್ ಬಳಕೆ ಹೇಗೆ ಹೀಗೆ ನಿಮ್ಮಲ್ಲಿ ಅನೇಕ ಪ್ರಶ್ನೆ ಕಾಡ್ತಿದ್ದು ಅದಕ್ಕೆ ಉತ್ತರಬೇಕೆಂದ್ರೆ ಎಲ್ಲಕ್ಕಿಂತ ಸ್ತ್ರೀರೋಗ ತಜ್ಞರು ಬೆಸ್ಟ್.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.