ಮುಟ್ಟಿನ ಬಗ್ಗೆ ಇರೋ ಈ ನಂಬಿಕೆಗಳು ಸರಿಯಾ, ತಪ್ಪಾ? ನೀವೇ ನೋಡಿ

By Suvarna NewsFirst Published Sep 14, 2021, 3:22 PM IST
Highlights

ಮುಟ್ಟಿನ ಬಗ್ಗೆ ಇನ್ನೂ ಸರಿಯಾದ ತಿಳುವಳಿಕೆ ನಮ್ಮ ಸಮಾಜದಲ್ಲಿ ಇಲ್ಲ. ಅನೇಕ ತಪ್ಪು ನಂಬಿಕೆಗಳು, ಮಿಥ್‌ಗಳು ನಮ್ಮ ನಡುವೆ ಬೇರೂರಿವೆ. ಅವುಗಳ ಬಗ್ಗೆ ತಿಳಿಯೋಣ ಬನ್ನಿ. 
 

ಮಿಥ್ಯ: ಮುಟ್ಟಿನ ನೋವು ಕೆಟ್ಟದು

ಸತ್ಯ: ವೈದ್ಯಕೀಯವಾಗಿ ಡಿಸ್ಮೆನೊರಿಯಾ ಎಂದು ಕರೆಯಲ್ಪಡುವ ಪಿರಿಯಡ್ ನೋವು ಹೆಚ್ಚಿನ ಮಹಿಳೆಯರು ಎದುರಿಸುತ್ತಿರುವ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಇದು ಹಲವಾರು ಕಾರಣಗಳಿಂದ ಉಂಟಾಗಬಹುದು. ಇದನ್ನು ಎರಡು ವಿಧವಾಗಿ ವಿಂಗಡಿಸಲಾಗಿದೆ- ಸ್ಪಾಸ್ಮೊಡಿಕ್ ಮತ್ತು ಕಂಜೆಸ್ಟಿವ್ ನೋವು. ಅನೇಕರು ಅದರ ಬಗ್ಗೆ ಚಿಂತಿತರಾಗುತ್ತಾರೆ ಮತ್ತು ಇದು ಸಾಮಾನ್ಯವಲ್ಲ ಎಂದು ಭಾವಿಸುತ್ತಾರೆ.

ತಜ್ಞರು ಇದು ಸಂಪೂರ್ಣ ನಾರ್ಮಲ್ ಎಂದು ಸೂಚಿಸುತ್ತಾರೆ. ಸುಮಾರು 70-80 ಪ್ರತಿಶತ ಮಹಿಳೆಯರಲ್ಲಿ ಮುಟ್ಟಿನ ನೋವು ಕಾಣಿಸಿಕೊಳ್ಳುತ್ತದೆ. ನೋವು ಸೌಮ್ಯದಿಂದ ಗಂಭೀರದವರೆಗೂ ಇರಬಹುದು. ಕೆಲವು ಸಂದರ್ಭಗಳಲ್ಲಿ, ಕೆಲವು ಮಹಿಳೆಯರು ಮೂರ್ಛೆ ಹೋಗಬಹುದು. ವಿಭಿನ್ನ ಮಹಿಳೆಯರಲ್ಲಿ ನೋವು ಮತ್ತು ರೋಗಲಕ್ಷಣಗಳು ವಿಭಿನ್ನ.

ವಾಸ್ತವವಾಗಿ, ಪಿರಿಯಡ್ಸ್ ಅವಧಿಯಲ್ಲಿ ಸೌಮ್ಯದಿಂದ ಮಧ್ಯಮ ನೋವು ಒಳ್ಳೆಯ ಸಂಕೇತ. ಪಿರಿಯಡ್ ನೋವು ಆರೋಗ್ಯಕರ ಗರ್ಭಕೋಶ ಮತ್ತು ಅಂಡಾಶಯದ ಸಂಕೇತ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು.

ಮಿಥ್ಯ: ಪಿರಿಯಡ್ಸ್ ವೇಳೆ ಹುಳಿ ಮತ್ತು ತಣ್ಣನೆಯ ಆಹಾರವನ್ನು ಸೇವಿಸಬಾರದು

ಸತ್ಯ: ಪಿರಿಯಡ್ಸ್ ಸಮಯದಲ್ಲಿ ಹುಳಿ ಆಹಾರವನ್ನು ಸೇವಿಸಬಾರದು ಎನ್ನುವುದರ ಹಿಂದೆ ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ. ಹುಳಿ ಆಹಾರಗಳಲ್ಲಿ ವಿಟಮಿನ್ ಸಿ ತುಂಬಿರುತ್ತದೆ, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ತಣ್ಣನೆಯ ಆಹಾರವನ್ನು ಸೇವಿಸಬಹುದು, ಆದರೆ ಮಿತವಾಗಿರಲಿ. ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರಗಳು ಮಾತ್ರ ಬೇಡ. ಏಕೆಂದರೆ ಅವುಗಳು ಈಗಾಗಲೇ ಪಿರಿಯಡ್ಸ್‌ನಿಂದ ಉಂಟಾಗುವ ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಇನ್ನಷ್ಟು ನೋವು ಸೇರಿಸಬಹುದು.

ಮಿಥ್ಯ: ನಿಮ್ಮ ಮುಟ್ಟಿನ ಸಮಯದಲ್ಲಿ ಸೆಕ್ಸ್ ಮಾಡಿದರೆ ಗರ್ಭಿಣಿಯಾಗಲು ಸಾಧ್ಯವಿಲ್ಲ

ಸತ್ಯ: ಮುಟ್ಟಿನ ಸಮಯದಲ್ಲಿ ಗರ್ಭಿಣಿಯಾಗಲು ಸಾಧ್ಯವಿದೆ. ನೀವು ನಿಯಮಿತವಾಗಿ ಪಿರಿಯಡ್ಸ್ ಹೊಂದಿರುವವರಾಗಿದ್ದರೆ, ನೀವು ಸಂಭೋಗಿಸಿದರೂ ಗರ್ಭಧರಿಸುವ ಸಾಧ್ಯತೆಯಿಲ್ಲ. ಗರ್ಭಿಣಿಯಾಗಬೇಕಿದ್ದರೆ ನೀವು ಅಂಡವನ್ನು ಬಿಡುಗಡೆ ಮಾಡಬೇಕಾಗುತ್ತದೆ. ಇದು ಸಾಮಾನ್ಯವಾಗಿ ನಿಮ್ಮ ಪೀರಿಯಡ್ಸ್ ಮುಗಿದ ನಂತರ ಸಂಭವಿಸುತ್ತದೆ.

ನೀವು ಅನಿಯಮಿತ ಅವಧಿಯ ಮುಟ್ಟು ಹೊಂದಿದ್ದರೆ, ನಿಮ್ಮ ಅಂಡ ಬಿಡುಗಡೆಯಾಗುವ ಸಮಯ ಹಾಗೂ ಮುಟ್ಟಿನ ಸಮಯ ಓವರ್‌ಲ್ಯಾಪ್ ಆಗಬಹುದು. ಆಗ ಗರ್ಭಧಾರಣೆಯ ಆತಂಕವಿರುತ್ತದೆ. ನೀವು ಗರ್ಭಧಾರಣೆ ನಿಯಂತ್ರಣ ಮಾತ್ರೆ ಅಥವಾ ಬೇರೆ ನಿಯಂತ್ರಣ ವಿಧಾನಗಳನ್ನು ಅನುಸರಿಸದೇ ಹೋದರೆ ಈ ಅವಧಿಯಲ್ಲಿ ಲೈಂಗಿಕತೆ ಪೂರ್ತಿ ಸುರಕ್ಷಿತವೇನೂ ಅಲ್ಲ.

ಎದೆ ಹಾಲುಣಿಸುವವರು ಈ ಮಿಥ್‌ಗಳನ್ನು ನಂಬಬೇಡಿ

ಮಿಥ್ಯ: ಪಿರಿಯಡ್ಸ್ ಸಮಯದಲ್ಲಿ ವ್ಯಾಯಾಮ ಮಾಡಬಾರದು

ಸತ್ಯ: ಪಿರಿಯಡ್ಸ್ ಸಮಯದಲ್ಲಿ ವ್ಯಾಯಾಮ ಮಾಡುವುದರಿಂದ ನೋವು ಹೆಚ್ಚಾಗಬಹುದು ಎಂದು ನಂಬಲಾಗಿದೆ. ಇದಕ್ಕೆ ವಿರುದ್ಧವಾಗಿ, ಕೆಲವು ಸರಳ ವ್ಯಾಯಾಮಗಳು ಮತ್ತು ಯೋಗ ಆಸನಗಳು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ನೀವು ನಿಯಮಿತವಾಗಿ ವ್ಯಾಯಾಮ ಮಾಡುವವರಾಗಿದ್ದರೆ, ಪಿರಿಯಡ್ಸ್ ಸಮಯದಲ್ಲಿ ಅದನ್ನು ಬಿಟ್ಟುಬಿಡಬಾರದು. ಪ್ರಯಾಸಕರವಾದ ವ್ಯಾಯಾಮಗಳಿಗಿಂತ ಸ್ವಲ್ಪ ಸೌಮ್ಯವಾದ ವ್ಯಾಯಾಮಗಳನ್ನು ಮಾಡಲು ನೀವು ಆಯ್ಕೆ ಮಾಡಬಹುದು.

ಮಿಥ್ಯ: ತಣ್ಣೀರಿನ ಸ್ನಾನವು ನೋವನ್ನು ಹೆಚ್ಚಿಸುತ್ತದೆ

ಸತ್ಯ: ನಿಮ್ಮ ಗರ್ಭಾಶಯವು ಅದರ ತ್ಯಾಜ್ಯ ಭಾಗವನ್ನು ಹೊರಚೆಲ್ಲುತ್ತಿರುವುದರಿಂದ ಪೀರಿಯಡ್ಸ್ ಉಂಟಾಗುತ್ತದೆ ಹೊರತು ನೀವು ಮಾಡುವ ಸ್ನಾನದ ನೀರಿಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ಹೌದು, ಬಿಸಿ ನೀರಿನ ಸ್ನಾನವು ನಿಮ್ಮ ದೇಹದ ನೋವನ್ನು ನಿವಾರಿಸಿ ಹಿತ ನೀಡಬಹುದು, ವಿಶ್ರಾಂತಿ ಕೊಡಬಹುದು. ಆದರೆ ತಣ್ಣೀರಿನ ಸ್ನಾನವು ಯಾವುದೇ ಹಾನಿ ಉಂಟುಮಾಡುವುದಿಲ್ಲ.

ಗರ್ಭ ನಿರೋಧಕ ಮಾತ್ರೆ ಸೇವನೆಯಿಂದ ಸೆಕ್ಸ್ ಲೈಫ್ ನೀರಸವಾಗುವುದೇ?

ಮಿಥ್ಯ: ಮುಟ್ಟಿನ ಅವಧಿಯಲ್ಲಿ ಈಜುವುದನ್ನು ತಪ್ಪಿಸಿ

ಸತ್ಯ: ನಿಮ್ಮ ಮುಟ್ಟಿನ ಅವಧಿಯಲ್ಲಿ ಈಜುವುದು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಯಾವುದೇ ಟ್ಯಾಂಪೂನ್ ಅಥವಾ ಮುಟ್ಟಿನ ಕಪ್ ಇಲ್ಲದಿದ್ದಾಗ, ರಕ್ತ ಈಜುವ ನೀರಿನಲ್ಲಿ ಬೆರೆಯಬಹುದು ಎಂಬ ಕಾಳಜಿಯಲ್ಲಿ ಈ ನಂಬಿಕೆ ಹುಟ್ಟಿಕೊಂಡಿರಬಹುದು.

ಮಿಥ್ಯ: ಪಿರಿಯಡ್ಸ್ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸಬಾರದು

ಸತ್ಯ: ಈ ಮಿಥ್ ಬಹುಶಃ ರೂಢಿಗತವಾದ ಪುರಾತನ ಚಿಂತನೆಯಿಂದ ಮೂಡಿದೆ. ಆದರೆ ನಿಮ್ಮ ಪಿರಿಯಡ್ಸ್‌ನಲ್ಲಿ ಲೈಂಗಿಕತೆಯು ಅನಾರೋಗ್ಯಕರವಲ್ಲ. ವಾಸ್ತವವಾಗಿ, ಇದು ಕೆಲವು ಸಂದರ್ಭಗಳಲ್ಲಿ ನೋವಿನ ಸೆಳೆತವನ್ನು ನಿವಾರಿಸಲು ಸಹಾಯ ಮಾಡುತ್ತದೆ. ನಿಮಗೆ ಹಿತವೆನಿಸಿದರೆ ಪಿರಿಯಡ್ಸ್ ಸಮಯದಲ್ಲಿ ನೀವು ಸೆಕ್ಸ್ ನಡೆಸಬಹುದು.

click me!