ಹುಟ್ಟಿನಿಂದ ಸಾವಿನ ವರೆಗೆ ಎಲ್ಲವೂ ತ್ಯಾಗ, ಅವಳು ಅವಳಿಗಾಗಿ ಬದುಕಿದ ದಿನ ಯಾವತ್ತು?

Published : Mar 08, 2023, 12:25 PM ISTUpdated : Mar 08, 2023, 12:38 PM IST
ಹುಟ್ಟಿನಿಂದ ಸಾವಿನ ವರೆಗೆ ಎಲ್ಲವೂ ತ್ಯಾಗ, ಅವಳು ಅವಳಿಗಾಗಿ ಬದುಕಿದ ದಿನ ಯಾವತ್ತು?

ಸಾರಾಂಶ

ಹೆಣ್ಣು ಎಂದರೆ ಸಮಾಜದ ಕಣ್ಣು. ಹೆಣ್ಣು ಎಂದರೆ ಮಮತಾಮಯಿ, ತ್ಯಾಗಮಯಿ, ಸಹನಾಮೂರ್ತಿ, ದಯಾಮಯಿ ಎಲ್ಲವೂ ಹೌದು. ಆಕೆ ಎಲ್ಲರನ್ನೂ ಪ್ರೀತಿಯಿಂದ ಪೊರೆಯುತ್ತಾಳೆ. ನನಗೆ ಬೇಕೆಂಬ ಸ್ವಾರ್ಥವಿಲ್ಲದೆ ಎಲ್ಲವನ್ನೂ ಮತ್ತೊಬ್ಬರಿಗಾಗಿ ನೀಡುತ್ತಾಳೆ. ಹುಟ್ಟಿನಿಂದ ಸಾವಿನ ವರೆಗೆ ಹೆಣ್ಣಿನ ಜೀವನದಲ್ಲಿ ಎಲ್ಲವೂ ತ್ಯಾಗ, ಹಾಗಿದ್ರೆ ಅವಳು ಅವಳಿಗಾಗಿ ಬದುಕಿದ ದಿನ ಯಾವತ್ತು?

-ವಿನುತಾ ಪೆರ್ಲ

ಸ್ತ್ರೀ ಎಂದರೆ ಶಕ್ತಿ. ಎಲ್ಲವನ್ನೂ ಪೊರೆಯುವ, ಎಲ್ಲವನ್ನೂ ಸಲಹುವ ಅದ್ಭುತ. ಹೆಣ್ಣು ತಾನು ಹುಟ್ಟಿದ ಮನೆಗಾಗಿ, ಮದುವೆಯಾಗಿ ಹೋದ ಮನೆಗಾಗಿ ಎಲ್ಲವನ್ನೂ ತ್ಯಾಗ ಮಾಡುತ್ತಾಳೆ. ಆದರೆ ಆಕೆ ಯಾವತ್ತೂ ಗುರುತಿಸಿಕೊಳ್ಳುವುದೇ ಇಲ್ಲ. ಆಕೆಯ ತ್ಯಾಗವನ್ನು ಯಾರೂ ನೆನಪಿಟ್ಟುಕೊಳ್ಳುವುದೂ ಇಲ್ಲ. ಆಕೆಯ ಕೆಲಸ, ತ್ಯಾಗ ಎಷ್ಟು ಸಹಜವಾಗಿ ಗುರುತಿಸಲ್ಪಟ್ಟಿದೆಯೆಂದರೆ ಹೆಣ್ಣು ಇರುವುದೇ ಇಂಥಾ ಕೆಲಸಗಳನ್ನು ಮಾಡುವುದಕ್ಕೆ ಎಂಬ ಹಣೆಪಟ್ಟಿ ಅಂಟಿಕೊಡಿದೆ. ಆಕೆ ಅಪ್ಪ-ಅಮ್ಮ, ಅತ್ತೆ-ಮಾವ, ಗಂಡ-ಮಕ್ಕಳು ಅನ್ನೋ ಜವಾಬ್ದಾರಿಗಳ ಮಧ್ಯೆ ಆಕೆ ತನಗಾಗಿಯೇ ಯಾವತ್ತಾದರೂ ಬದುಕಿದ್ದಾಳಾ ?

ಅಪ್ಪ-ಅಮ್ಮನನ್ನು ಖುಷಿಯಾಗಿಡುವ ಮಗಳು
ಗಂಡು ಮಕ್ಕಳಿಗೆ ಯಾವುದೇ ಕಟ್ಟುಪಾಡುಗಳಿಲ್ಲ. ಆದರೆ ಹೆಣ್ಣುಮಕ್ಕಳಿಗೆ ಚಿಕ್ಕಂದಿನಲೇ ಹಲವು ನಿರ್ಬಂಧಗಳನ್ನು ಹೇರಲಾಗುತ್ತದೆ. ಗಂಡು ಹುಡುಗರ ಜೊತೆ ಮಾತನಾಡಬೇಡ, ಜೋರಾಗಿ ನಗಬೇಡ, ಸಂಜೆಯಾಗೋ ಮುಂಚೆ ಮನೆ ಸೇರಿಬಿಡು. ಆಟದ ಗ್ರೌಂಡ್‌ಗೆ ಹೋಗಬೇಡ. ರಂಗೋಲಿ ಹಾಕೋದು ಕಲಿತ್ಕೋ, ಅಡುಗೆ ಮನೆಯಲ್ಲಿ ಅಮ್ಮನಿಗೆ (Mother) ಹೆಲ್ಪ್ ಮಾಡು. ಹುಡುಗಿ ಎಂದ ತಕ್ಷಣ ಹೀಗೆ ಹೀಗೆ ಸಾಲು ಸಾಲು ಕಟ್ಟುಪಾಡುಗಳು ಸಿದ್ಧವಾಗಿಬಿಡುತ್ತವೆ. ಹೆಣ್ಣು ಮಗಳೆಂದರೆ ಆಕೆಯ ಕೆಲಸವೇ ಅಪ್ಪ-ಅಮ್ಮನನ್ನ ಯಾವಾಗಲೂ ಖುಷಿಯಾಗಿಡುವುದು ಎಂಬಂತಾಗಿಬಿಟ್ಟಿದೆ.

Womens Day 2023 Wishes: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು

ಅತ್ತೆ-ಮಾವನ ಮುದ್ದಿನ ಸೊಸೆ
ಮಾವ ಬೆಳಗ್ಗೇನು ತಿಂಡಿ ಮಾಡ್ಲಿ, ಮಧ್ಯಾಹ್ನಕ್ಕೆ ಹುರುಳಿ ಸಾರು ಓಕೆ, ಚಿಕನ್ ಕರಿ ಮಾಡಲಾ, ಪೆಪ್ಪರ್‌ ಪ್ರೈ ಮಾಡಲಾ, ಖಾರ ಒಂಚೂರು ಜಾಸ್ತಿ ಇದ್ದರೆ ಪರ್ವಾಗಿಲ್ವಾ, ಅತ್ತೆ, ಹಬ್ಬಕ್ಕೆ ಏನು ಅಡುಗೆ ಮಾಡೋಣ, ರಂಗೋಲಿ ಡಿಸೈನ್ ಹೀಗಿದ್ದರೆ ಸಾಕಾ ಎಂದು ಪ್ರತಿದಿನವೂ ಕೇಳುವ ಗೋಳು..ಗಂಡನನ್ನು ಮೆಚ್ಚಿಸಲು ಬೇರೆಯದೇ ಕಷ್ಟ. ಅತ್ತೆಗೆ ಕಾಲು ನೋವಿದ್ದರೆ ಒತ್ತಿಕೊಡಬೇಕು, ಮಾವನ ಬಿಪಿ, ಶುಗರ್‌ ಮಾತ್ರೆಯನ್ನು ನೆನಪಿನಲ್ಲಿಟ್ಟು ತಂದುಕೊಡಬೇಕು. ಅಲ್ಲಿ ಆಕೆ ಅವಳಿಗಾಗಿ ಬದುಕುತ್ತಿಲ್ಲ. ಮದುವೆಯ (Marriage) ನಂತರ ಆಕೆಯ ಜೀವನ ಸಂಪೂರ್ಣವಾಗಿ ಅತ್ತೆ-ಮಾವಂದಿರ ಸೇವೆಗೆ ಮೀಸಲಾಗಿಬಿಡುತ್ತದೆ.

ಗಂಡನಿಗೆ ತಕ್ಕುದಾದ ಹೆಂಡತಿ
ಮದುವೆಯಾದ ಮೇಲೆ ಗಂಡನಿಗೆ ತಕ್ಕ ಹೆಂಡ್ತಿ (Wife) ಆಗಲೇಬೇಕಲ್ಲಾ..ಗಂಡನಿಗೆ ಇಷ್ಟವಾದ ಆಹಾರ, ಗಂಡನಿಗೆ ಇಷ್ಟವಾದ ಡ್ರೆಸ್, ಗಂಡನಿಗೆ ಇಷ್ಟವಾದ ಹಾಡು ಕೇಳುತ್ತಾ ಜೀವನವೂ ಅದಕ್ಕೇ ಒಗ್ಗಿಬಿಡುತ್ತದೆ. ಇಂಥದ್ದನ್ನು ಹಾಕ್ಕೊಂಡು ನನ್‌ ಜೊತೆ ಬರ್ಬೇಡ ಅನ್ನೋ ಗಂಡನ ಹಠದಿಂದ ಅನಿವಾರ್ಯವಾಗಿ ಗಂಡನಿಗೆ ಇಷ್ಟವಾದ ಬಟ್ಟೆ ಧರಿಸುವುದು ರೂಢಿಯಾಗಿಬಿಡುತ್ತದೆ. ಸಂಸಾರವನ್ನು ನಿಭಾಯಿಸಲು ಕಷ್ಟವೋ ಸುಖವೋ ಗಂಡನನ್ನು ಅನುಸರಿಸಿಕೊಂಡು ಹೋದರಾಯಿತು ಎಂದು ಹೆಣ್ಣು ಗುಲಾಮಗಳಂತೆ ಗಂಡನ ಮಾತನ್ನೇ ಕೇಳುತ್ತಾ ಬದುಕುತ್ತಾಳೆ. 

Womens Day: ಅರ್ಧ ನಾರೀಶ್ವರನಲ್ಲೇ ಇದೆ ಸಮಾನತೆಯ ಸಂದೇಶ

ಮಕ್ಕಳಿಗೆ ಇಷ್ಟವಾಗುವ ಅಮ್ಮ
ಮಗ ಅದನ್ನು ತಿನ್ನಲ್ಲ..ಹೀಗಾಗಿ ಆ ಅಡುಗೆ ನಮ್ಮನೇಲಿ ಮಾಡಲ್ಲ. ಫ್ಯಾನ್‌ ಹಾಕದಿದ್ರೆ ಮಗ ನಿದ್ದೆ ಮಾಡಲ್ಲ, ಹೀಗಾಗಿ ತನಗೆ ಚಳಿಯಾದ್ರೂ ಫ್ಯಾನ್ ಆನ್‌ ಇರ್ಲಿ, ಮಗನಿಗೆ ಅದೇ ಕಲರ್ ಇಷ್ಟ, ಸೋ ಮನೆಯ ಪೈಂಟ್ ಅದೇ ಇರ್ಲಿ. ಹೀಗೆ ಮಕ್ಕಳ ಇಷ್ಟದಲ್ಲೇ ತಾಯಿ ಜೀವನ ಸಾಗಿಸುತ್ತಾಳೆ. ಮಕ್ಕಳು ದೊಡ್ಡವಳಾದಾಗಳು ತನಗಿಷ್ಟವಾದ ಸೀರೆ ಉಟ್ಟು ಹೋದರೆ ಮಕ್ಕಳ ಸ್ಟೇಟಸ್ ಕಮ್ಮಿಯಾಗಿಬಿಡಬಹುದೇನೋ ಎಂದು ಅವರಿಗಿಷ್ಟವಾದ ಸೀರೆಯನ್ನೇ ಆರಿಸಿಕೊಳ್ಳುತ್ತಾಳೆ. ಅವರ ಆಯ್ಕೆಯ ಆಹಾರವನ್ನೇ ಇಷ್ಟವಿಲ್ಲದಿದ್ದರೂ ತಿನ್ನುತ್ತಾಳೆ. 

ಮೊಮ್ಮಕ್ಕಳ ಪ್ರೀತಿಯ ಅಜ್ಜಿ
ಜೀವನಪೂರ್ತಿ ಮತ್ತೊಬ್ಬರಿಗಾಗಿ ಬದುಕಿದ ಅವಳು ಮೊಮ್ಮಕ್ಕಳಿಗಾಗಿ (Grandmother) ಖುಷಿಯನ್ನು ನೀಡದೇ ಇರುವಳೇ ? ಮುದ್ದು ಮಕ್ಕಳ ನಗುವಿನಲ್ಲೇ ಸ್ವರ್ಗವನ್ನು ಕಾಣುತ್ತಾಳೆ. ಮಗುವಿನ ಲಾಲನೆ-ಪೋಷಣೆಯಲ್ಲೇ ಜೀವನೋತ್ಸಾಹ ಕಂಡು ಕೊಳ್ಳುತ್ತಾಳೆ. ಈ ಮಧ್ಯೆ ಹಿಂದಿನ ಕಾಲದಂತೆ ಈಗ ಮಕ್ಕಳನ್ನು ಬೆಳೆಸಿದ್ರೆ ಆಗಲ್ಲ ಎಂಬ ಸೊಸೆಯ ಮೂದಲಿಕೆಯನ್ನೂ ಮೌನವಾಗಿ ಸಹಿಸಿಕೊಳ್ಳುತ್ತಾಳೆ. 

ಜೀವನಪೂರ್ತಿ ಅವರಿವರಿಗಾಗಿಯೇ ಬದುಕಿದ ಹೆಣ್ಣಿನ ತ್ಯಾಗವನ್ನು ಗುರುತಿಸಿದವರಿಲ್ಲ. ಹಾಗಿದ್ರೆ ಅವಳು ನಾನು, ನನ್ನದು, ನನ್ನಿಷ್ಟದ ಬಟ್ಟೆ, ನನ್ನಿಷ್ಟದ ಆಹಾರ, ನನ್ನಿಷ್ಟದ ಪ್ಲೇಸ್ ಅಂಥ ಬದುಕಿದ ದಿನ ಯಾವತ್ತಾದರೂ ಇದೆಯಾ ? ಆಲೋಚಿಸಬೇಕಾದ ವಿಷ್ಯ ಅಲ್ವಾ ?

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವೇದಿಕೆಯಲ್ಲಿ ವಧು ಸದ್ದಿಲ್ಲದೆ ಮಾಡಿದ ಅದೊಂದು ಕೆಲಸ ಇಂಟರ್‌ನೆಟ್‌ನಲ್ಲಿ ಫುಲ್ ವೈರಲ್ ಆಯ್ತು..
ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?