ಮಿತಿಯಲ್ಲಿದ್ರೆ ಎಲ್ಲವೂ ಒಳ್ಳೆಯದು ಎನ್ನುವ ಮಾತಿದೆ. ಆಲ್ಕೋಹಾಲನ್ನು ಕೂಡ ಔಷಧಿ ರೂಪದಲ್ಲಿ ತೆಗೆದುಕೊಂಡ್ರೆ ಆರೋಗ್ಯಕ್ಕೆ ಉತ್ತಮ. ಅದರ ಕಟ್ಟೆ ಒಡೆದ್ರೆ ದೇಹ ಜಖಂಗೊಳ್ಳೋದು ನಿಶ್ಚಿತ. ಮಿತಿಮೀರಿ ಮದ್ಯ ಸೇವನೆ ಮಾಡಿದ್ರೆ ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಆಲ್ಕೋಹಾಲ್ ಒಳಗೆ ಹೋಗ್ತಿದ್ದಂತೆ ಜಗತ್ತು ಮರೆಯುವ ಜನರು ಒತ್ತಡ ಕಡಿಮೆ ಮಾಡಲು ಇದು ಒಳ್ಳೆ ಮದ್ದು ಎಂದುಕೊಂಡಿದ್ದಾರೆ. ಆಲ್ಕೋಹಾಲ್ ಸೇವನೆ ಮಾಡಿ ನೋವನ್ನು ಮರೆಯುತ್ತೇವೆ ಎನ್ನುವ ಜನರು ಅದ್ರಿಂದ ಎಷ್ಟೆಲ್ಲ ನೋವು ಕಾಡಬಹುದು ಎಂಬುದನ್ನು ಮರೆಯುತ್ತಾರೆ. ಮದ್ಯಪಾನ ಆರೋಗ್ಯಕ್ಕೆ ಹಾನಿಕರ. ಇದ್ರಲ್ಲಿ ಎರಡು ಮಾತಿಲ್ಲ. ಈ ವಿಷ್ಯ ಕುಡಿಯೋರಿಗೆ ತಿಳಿದಿಲ್ಲ ಎಂದಲ್ಲ. ಆಲ್ಕೋಹಾಲ್ ಆರೋಗ್ಯ ಹಾಳ್ಮಾಡ್ತಿದೆ ಎಂಬ ಅರಿವಿದ್ದರೂ ಒಮ್ಮೆ ಚಟಕ್ಕೆ ಬಿದ್ಮೇಲೆ ಬಿಡೋದು ಕಷ್ಟ. ಹಾಗಾಗಿ ನಾನಾ ಕಾರಣ ಹೇಳಿ ಜನರು ಕುಡಿತ ಮುಂದುವರೆಸುತ್ತಾರೆ. ಈಗಿನ ಪಾರ್ಟಿಗಳಲ್ಲಿ ಆಲ್ಕೋಹಾಲ್ ಇಲ್ಲವೆಂದ್ರೆ ಅದು ಪಾರ್ಟಿ ಎನ್ನಿಸಿಕೊಳ್ಳೋದಿಲ್ಲ. ಹದಿಹರೆಯದವರಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಇದ್ರ ದಾಸರಾಗ್ತಿದ್ದಾರೆ. ಫ್ಯಾಷನ್ ಅಂತ ಶುರುವಾಗುವ ಆಲ್ಕೋಹಾಲ್ ಸೇವನೆ ನಂತ್ರ ಚಟವಾಗಿ ಬದಲಾಗುತ್ತದೆ.
ಆಲ್ಕೋಹಾಲ್ (Alcohol) ಸೇವನೆಯಲ್ಲಿ ಮಹಿಳೆ (Woman) ಯರು ಹಿಂದೆ ಬಿದ್ದಿಲ್ಲ. ವಿದೇಶದಲ್ಲಿ ಮಾತ್ರವಲ್ಲ ನಮ್ಮ ದೇಶದಲ್ಲೂ ಅನೇಕ ಮಹಿಳೆಯರು ಪಾರ್ಟಿ (Party) ಹೆಸರಿನಲ್ಲಿ ಮದ್ಯಪಾನ ಮಾಡ್ತಿದ್ದಾರೆ. ಹಿಂದೆ ಮದ್ಯಪಾನ ಮಾಡೋದ್ರಲ್ಲಿ ಪುರುಷರು ಮುಂದಿದ್ದರು. ಆದ್ರೀಗ ಕಾಲ ಬದಲಾಗಿದೆ. 1991ರಿಂದ 2000ನೇ ಇಸವಿಯೊಳಗೆ ಹುಟ್ಟಿದ ಹುಡುಗಿಯರು ಪುರುಷರಷ್ಟೇ ಮದ್ಯಪಾನ ಮಾಡುತ್ತಿದ್ದಾರೆ. ಪುರುಷರ ಜೊತೆ ಕುಳಿತು ಅವರಷ್ಟೇ ಮದ್ಯಪಾನ ಮಾಡ್ತಿದ್ದಾರೆ ಎಂಬುದನ್ನು ಅಮೆರಿಕಾ ವರದಿ ಮಾಡಿದೆ. ಯುಎಸ್ (US) ಸರ್ಕಾರದ ಅಂಕಿಅಂಶಗಳ ಪ್ರಕಾರ, 2000 ಮತ್ತು 2015 ರ ನಡುವೆ, ಸಿರೋಸಿಸ್ ನಿಂದ ಸಾವನ್ನಪ್ಪುತ್ತಿರುವ ಮಹಿಳೆಯರ ಸಾವಿನ ಸಂಖ್ಯೆ ಶೇಕಡಾ 57 ರಷ್ಟು ಹೆಚ್ಚಳವಾಗಿದೆ. ಈ ಸಮಯದಲ್ಲಿ ಶೇಕಡಾ 21 ಪುರುಷರು ಸಿರೋಸಿಸ್‌ನಿಂದ ಸಾವನ್ನಪ್ಪಿದ್ದಾರೆ.
ಆಲ್ಕೋಹಾಲ್ ನಮ್ಮ ಯಕೃತ್ತಿನ ಅನಾರೋಗ್ಯ (Illness) ಕ್ಕೆ ಕಾರಣವಾಗುತ್ತದೆ ಎಂಬ ಸಂಗತಿ ಎಲ್ಲರಿಗೂ ತಿಳಿದಿದೆ. ಆದ್ರೆ ಯಕೃತ್ತ (Liver) ನ್ನು ಹೊರತುಪಡಿಸಿ ಅನೇಕ ಸಮಸ್ಯೆ ಇದ್ರಿಂದ ಕಾಡುತ್ತದೆ.
ಅತಿಯಾದ ಆಲ್ಕೋಹಾಲ್ ಸೇವನೆಯಿಂದಾಗಿ ಅಧಿಕ ರಕ್ತದೊತ್ತಡದ ಸಮಸ್ಯೆ ಕಾಡುತ್ತದೆ. ಇದರಿಂದಾಗಿ ಹೃದಯದ ಸ್ನಾಯುಗಳು ಹೆಚ್ಚು ದುರ್ಬಲವಾಗುತ್ತವೆ. ಇದರಿಂದಾಗಿ ರಕ್ತವನ್ನು ಪಂಪ್ ಮಾಡುವ ಸಮಸ್ಯೆಯೂ ನಿಮ್ಮನ್ನು ಕಾಡುತ್ತದೆ. ಮದ್ಯಪಾನ ನಿರಂತರವಾಗಿ ಮುಂದುವರಿದರೆ ಹೃದಯ ವೈಫಲ್ಯದ ಸಮಸ್ಯೆ ಎದುರಾಗಬಹುದು ಎನ್ನುತ್ತಾರೆ ತಜ್ಞರು. ಯಕೃತ್ತು ಮತ್ತು ಹೃದಯದ ಸಮಸ್ಯೆ ಮಹಿಳೆ ಮತ್ತು ಪುರುಷ ಇಬ್ಬರನ್ನೂ ಕಾಡಬಹುದು. ಅತಿ ಬೇಗ ಮದ್ಯದ ಗುಂಗಿಗೆ ಒಳಗಾಗುವ ಮಹಿಳೆಯರನ್ನು ಕೆಲ ಅನಾರೋಗ್ಯ ಸಮಸ್ಯೆ ಕಾಡುತ್ತದೆ.
ಪತಿಯ ಬಲವಂತದ ಸೆಕ್ಸ್ ಗೆ ನೀವೂ ಕಾರಣವಿರ್ಬಹುದು..
ಆಲ್ಕೋಹಾಲ್ ಸೇವನೆಯಿಂದ ಮಹಿಳೆಯರಿಗೆ ಕಾಡುತ್ತೆ ಈ ಸಮಸ್ಯೆ :
ಮದ್ಯಪಾನ ಮಾಡುವುದರಿಂದ ಮಹಿಳೆಯರಿಗೆ ಲಿವರ್ ಸಿರೋಸಿಸ್ ಸಮಸ್ಯೆ ಹೆಚ್ಚು ಕಾಡುತ್ತದೆ. ಪುರುಷರಿಗಿಂತ ಮಹಿಳೆಯರು ಇದರಿಂದ ಬಳಲುತ್ತಿದ್ದಾರೆ ಎಂದು ಸಮೀಕ್ಷೆಯಿಂದ ಬಹಿರಂಗವಾಗಿದೆ. ಆಲ್ಕೋಹಾಲ್ ಪುರುಷರಿಗಿಂತ ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಮದ್ಯಪಾನ ಮಹಿಳೆಯರ ಮೆದುಳಿನ ಮೇಲೂ ಪರಿಣಾಮ ಬೀರುತ್ತದೆ. ಹೆಚ್ಚು ಆಲ್ಕೋಹಾಲ್ ಸೇವನೆ ಮಾಡುವ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಕಾಡುವ ಅಪಾಯ ಹೆಚ್ಚು ಎಂಬುದು ಕೂಡ ಬಹಿರಂಗವಾಗಿದೆ.
Winter Care: ಚಳಿಗಾಲದ ತ್ವಚೆ ಸಮಸ್ಯೆಗೆ ಸಾಸಿವೆ ಎಣ್ಣೆ ಬಳಸಿ ನೋಡಿ
ಗರ್ಭಾವಸ್ಥೆಯಲ್ಲಿ ಆಲ್ಕೋಹಾಲ್ ಕುಡಿಯುವುದರಿಂದ ಮಗುವಿಗೆ ಭ್ರೂಣದ ಆಲ್ಕೋಹಾಲ್ ಸ್ಪೆಕ್ಟ್ರಮ್ ಡಿಸಾರ್ಡರ್ಸ್ (FASD) ಅಪಾಯವಿದೆ. ಮದ್ಯದ ಅತಿಯಾದ ಸೇವನೆಯು ಗರ್ಭಪಾತ, ಸತ್ತ ಮಗು ಜನನ ಮತ್ತು ಅನೇಕ ಜನ್ಮಜಾತ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ.ಪಿರಿಯಡ್ಸ್ ಸಮಯದಲ್ಲಿ ಆಲ್ಕೋಹಾಲ್ ಸೇವನೆ ಮಾಡುವುದು ಕೂಡ ಅಪಾಯಕಾರಿ. ಮುಟ್ಟಿನ ಸಮಯದಲ್ಲಿ ಆಲ್ಕೋಹಾಲ್ ಸೇವನೆ ಮಾಡುವುದ್ರಿಂದ ಬ್ಲಡ್ ತೆಳುವಾಗುತ್ತದೆ. ಕೆಲವರಿಗೆ ಅತಿಯಾದ ರಕ್ತಸ್ರಾವವಾಗುತ್ತದೆ. ಅತಿಯಾದ ಮದ್ಯ ಸೇವನೆ ಮಾಡುವ ಮಹಿಳೆಯರಲ್ಲಿ ಕಾಲುಗಳು ಮತ್ತು ಕೈಗಳ ಸೆಳೆತ ಹೆಚ್ಚು.