ಸಮ್ಮತಿ ಸೆಕ್ಸ್‌ನಿಂದ ಗರ್ಭಿಣಿಯಾದ ಅವಿವಾಹಿತ ಮಹಿಳೆಯರು ಗರ್ಭಪಾತ ಮಾಡಿಕೊಳ್ಳುವಂತಿಲ್ಲ!

Published : Jul 16, 2022, 07:27 PM ISTUpdated : Jul 16, 2022, 11:07 PM IST
ಸಮ್ಮತಿ ಸೆಕ್ಸ್‌ನಿಂದ ಗರ್ಭಿಣಿಯಾದ ಅವಿವಾಹಿತ ಮಹಿಳೆಯರು ಗರ್ಭಪಾತ ಮಾಡಿಕೊಳ್ಳುವಂತಿಲ್ಲ!

ಸಾರಾಂಶ

ಪರಸ್ಪರ ಸಮ್ಮತಿಯೊಂದಿಗೆ ಸೆಕ್ಸ್‌ ನಡೆದು, ಅವಿವಾಹಿತ ಮಹಿಳೆ ಗರ್ಭಿಣಿಯಾಗಿ 20 ವಾರಗಳು ಕಳೆದಿದ್ದಲ್ಲಿ, ಅಂಥ ಪ್ರಕರಣದಲ್ಲಿ ಅಬಾರ್ಷನ್‌ ಅನುಮತಿ ನೀಡಲಾಗದು ಎಂದು ದೆಹಲಿ ಹೈಕೋರ್ಟ್‌ ಹೇಳಿದೆ. 23 ವಾರದ ಗರ್ಭವನ್ನು ತೆಗೆಯಲು ಅನುಮತಿ ನೀಡುವಂತೆ 25 ವರ್ಷದ ಅವಿವಾಹಿತ ಮಹಿಳೆ ಕೋರ್ಟ್‌ ಮೆಟ್ಟಿಲೇರಿದ್ದಳು, ಈ ವಿಚಾರದಲ್ಲಿ ಈ ಕೋರ್ಟ್‌ ಈ ಮಾತನ್ನು ಹೇಳಿದೆ.  

ನವದೆಹಲಿ (ಜುಲೈ 16): 25 ವರ್ಷದ ಅವಿವಾಹಿತ ಮಹಿಳೆಗೆ 23 ವಾರಗಳ ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ದೆಹಲಿ ಹೈಕೋರ್ಟ್ ಶುಕ್ರವಾರ ಅನುಮತಿ ನಿರಾಕರಿಸಿದೆ. ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ ಅವರಿದ್ದ ವಿಭಾಗೀಯ ಪೀಠವು ಒಪ್ಪಿಗೆಯ ಲೈಂಗಿಕ ಸಂಬಂಧದಿಂದ ಗರ್ಭವತಿ ಆದ ಅವಿವಾಹಿತ ಮಹಿಳೆಗೆ  2003ರ ವೈದ್ಯಕೀಯ ಗರ್ಭಪಾತದ ನಿಯಮಗಳ ಪ್ರಕಾರ 20 ವಾರಗಳಿಗಿಂತ ಹಳೆಯದಾದ ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ಅನುಮತಿ ಇಲ್ಲ ಎಂದು ತೀರ್ಪು ನೀಡುವ ಮೂಲಕ ಅಬಾರ್ಷನ್‌ಗೆ ಅನುಮತಿ ನಿರಾಕರಿಸಿತು. "ಅವಿವಾಹಿತ ಮಹಿಳೆಯಾಗಿರುವ ಮತ್ತು ಸಮ್ಮತಿಯ ಸಂಬಂಧದಿಂದ ಗರ್ಭ ಧರಿಸಿರುವ ಅರ್ಜಿದಾರರು, ವೈದ್ಯಕೀಯ ಗರ್ಭಪಾತದ ನಿಯಮಗಳು, 2003 ರ ಅಡಿಯಲ್ಲಿ ಯಾವುದೇ ಷರತ್ತುಗಳನ್ನು ಸ್ಪಷ್ಟವಾಗಿ ಒಳಗೊಂಡಿರುವುದಿಲ್ಲ. ಆದ್ದರಿಂದ, ಸೆಕ್ಷನ್ 3(2)(ಬಿ) ಈ ಪ್ರಕರಣದ ಸತ್ಯಾಸತ್ಯತೆಗಳಿಗೆ ಕಾಯ್ದೆ ಅನ್ವಯಿಸುವುದಿಲ್ಲ,’’ ಎಂದು ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ. ಅದರೊಂದಿಗೆ,  ಎಂಟಿಪಿ ನಿಯಮಗಳ ನಿಯಮ 3B ಪ್ರಕಾರ, 20 ವಾರಗಳ ನಂತರ ಮಹಿಳೆಯ ಗರ್ಭಧಾರಣೆಯನ್ನು ಮುಕ್ತಾಯಗೊಳಿಸಲು ಅನುಮತಿಸುವುದಿಲ್ಲ ಮತ್ತು ಆದ್ದರಿಂದ, ನ್ಯಾಯಾಲಯವು ಶಾಸನವನ್ನು ಮೀರಿ ಹೋಗುವಂತಿಲ್ಲ ಎಂದು ಹೇಳಿದೆ.

25 ವರ್ಷದ ಮಹಿಳೆಯು ಗರ್ಭಧರಿಸಿ 23 ವಾರಗಳಾಗಿದೆ. ಹಾಗೇನಾದರೂ ನಾವು ಆಕೆಯ ಪರವಾಗಿ ತೀರ್ಪು ನೀಡಿದರೆ, ಅದು ಮಗುವನ್ನು ಕೊಲ್ಲುವ (Killing The Child) ರೀತಿ ಆಗಲಿದೆ. ಆದ್ದರಿಂದ ಮಹಿಳೆ ಮಗುವಿಗೆ ಜನ್ಮ ನೀಡಬೇಕು. ಮಗುವನ್ನು ಸಾಕುವ ಮನಸ್ಸಿಲ್ಲ ಎಂದಾದಲ್ಲಿ ದತ್ತು ತೆಗೆದುಕೊಳ್ಳುವವರಿಗೆ ನೀಡಬೇಕು ಎಂದು ಹೇಳಿದೆ.

ಮಗುವನ್ನು ಕೊಂದ ರೀತಿ ಆಗಲಿದೆ: “ಮಗುವನ್ನು ಕೊಲ್ಲಲು ನಾವು ನಿಮಗೆ ಅವಕಾಶ ನೀಡುವುದಿಲ್ಲ; 23 ವಾರಗಳು ಮುಗಿದಿವೆ. ಸಾಮಾನ್ಯ ಹೆರಿಗೆಯಾಗಲು ಇನ್ನು ಎಷ್ಟು ವಾರಗಳು ಬಾಕಿ ಉಳಿದಿವೆ? ಗೊತ್ತಿಲ್ಲ, ಅಂದಾಜು ಎಷ್ಟು ವಾರಗಳಿರಬಹುದು? ಮಗುವನ್ನು ಯಾರಾದರೂ ದತ್ತು ತೆಗೆದುಕೊಳ್ಳುವವರಿಗೆ ನೀಡಿ. ಮಗುವನ್ನು ಯಾಕೆ ಸುಮ್ಮನೆ ಕೊಲ್ಲುತ್ತೀರಿ' ಎಂದು ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ (Satish Chandra Sharma) ಮತ್ತು ನ್ಯಾಯಮೂರ್ತಿ ಸುಬ್ರಮಣ್ಯ ಪ್ರಸಾದ್ (Subramonium Prasad) ಅವರಿದ್ದ ವಿಭಾಗೀಯ ಪೀಠ ಪ್ರಶ್ನಿಸಿತು. ನ್ಯಾಯಾಲಯವು (Delhi High Court) ತನ್ನ ಆದೇಶವನ್ನು ಕಾಯ್ದಿರಿಸಿದ್ದರೂ, ಗರ್ಭಪಾತವನ್ನು ಅನುಮತಿಸುವ ಪರವಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಮಾಂಗಲ್ಯ ತೆೆಗೆಯೋದು ಪತಿಗೆ ನೀಡೋ ಮಾನಸಿಕ ಕ್ರೌರ್ಯ: ಮದ್ರಾಸ್ ಹೈ ಕೋರ್ಟ್

ನಿಯಮ ಈಕೆಗೆ ಅನ್ವಯಿಸುವುದಿಲ್ಲ: ನಿಯಮಗಳ ಅನುಸಾರ, ಕೆಲವು ವರ್ಗದ ಮಹಿಳೆಯರಿಗೆ ಮಾತ್ರ 20-24 ವಾರಗಳ ನಡುವೆ ಗರ್ಭಾವಸ್ಥೆಯನ್ನು ಮುಕ್ತಾಯಗೊಳಿಸಲು ಅವಕಾಶವಿದೆ. ಈ ಪಟ್ಟಿಯಲ್ಲಿ ಅವಿವಾಹಿತ ಮಹಿಳೆಯರು ಸೇರಿಲ್ಲ ಎಂದು ಕೋರ್ಟ್‌ ಹೇಳಿದೆ. "ಈ ಪ್ರಕರಣವು ವೈದ್ಯಕೀಯ ಗರ್ಭಪಾತದ ಕಾಯಿದೆಯ ಸೆಕ್ಷನ್ 3(2)(ಬಿ)(i) ಅಡಿಯಲ್ಲಿ ಒಳಗೊಂಡಿದೆ, ಅದರ ಪ್ರಕಾರ ಇಬ್ಬರು ವೈದ್ಯರು ಇದ್ದರೆ 20-24 ವಾರಗಳ ನಡುವಿನ ಗರ್ಭಧಾರಣೆಯನ್ನು ಕೊನೆಗೊಳಿಸಬಹುದು. ಗರ್ಭಧಾರಣೆಯ ನಿರಂತರತೆಯು ಗರ್ಭಿಣಿ ಮಹಿಳೆಯ ಜೀವಕ್ಕೆ ಅಪಾಯವನ್ನು ಒಳಗೊಂಡಿರುತ್ತದೆ ಅಥವಾ ಅವರ ದೈಹಿಕ ಅಥವಾ ಮಾನಸಿಕ ಆರೋಗ್ಯಕ್ಕೆ ಗಂಭೀರವಾದ ಗಾಯವನ್ನು ಒಳಗೊಂಡಿರುತ್ತದೆ" ಎಂದು ಮಹಿಳೆಯ ಪರ ವಕೀಲರು ಕೋರ್ಟ್‌ನಲ್ಲಿ ವಾದ ಮಾಡಿದ್ದರು.

ಇದನ್ನೂ ಓದಿ: ಹಿಂದೂ ದೇವರಲ್ಲಿ ನಂಬಿಕೆ ಇದ್ದರೆ ಅನ್ಯ ಧರ್ಮದ ವ್ಯಕ್ತಿ ಕೂಡ ದೇವಸ್ಥಾನ ಪ್ರವೇಶಿಸಬಹುದು!

ಒಪ್ಪದ ಕಪಿಲ್‌ ಸಿಬಲ್: “ಆಕೆ ಈ ಮಗುವನ್ನು ಬೆಳೆಸಲು ದೈಹಿಕವಾಗಿ, ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಸಿದ್ಧವಾಗಿಲ್ಲ, ಅವಿವಾಹಿತ ಪೋಷಕರಾಗಿದ್ದಾರೆ. ವಿವಾಹೇತರವಾಗಿ ಮಗುವಿಗೆ ಜನ್ಮ ನೀಡುವುದು ಅವಳಿಗೆ ಅಪಾರವಾದ ಮಾನಸಿಕ ಸಂಕಟ ಮತ್ತು ದೈಹಿಕ ತೊಂದರೆ ಮತ್ತು ನೋವನ್ನು ಉಂಟುಮಾಡುತ್ತದೆ. ಇದು ಅವಳಿಗೆ ಸಾಮಾಜಿಕ ಕಳಂಕವಾಗುತ್ತದೆ ಮತ್ತು ಮಗುವೂ ಅಕ್ರಮ ಸಂತಾನವಾಗುತ್ತದೆ,” ಎಂದು ಮಹಿಳೆಯ ಪರ ವಕೀಲರು ವಾದಿಸಿದರು. ಈ ಪ್ರಕರಣವು ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಒಳಪಡುವುದಿಲ್ಲ ಎಂದು ನ್ಯಾಯಾಲಯ ಹೇಳಿತು ಮತ್ತು ನ್ಯಾಯಾಲಯದಲ್ಲಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರ ಅಭಿಪ್ರಾಯವನ್ನು ನೀಡಲು ಸಹ ಕರೆದಿದೆ. "ಇದು ಕಠಿಣವಾಗಿದೆ. ಒಂದೆಡೆ ಮಗು ಇಷ್ಟೊಂದು ಪ್ರಮಾಣದಲ್ಲಿ ಬೆಳವಣಿಗೆಯಾಗಿದೆ... ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಈ ಹಂತದಲ್ಲಿ ಮಗುವಿಗೆ ಗರ್ಭಪಾತ ಮಾಡಬಾರದು' ಎಂದು ಸಿಬಲ್ ಪ್ರತಿಕ್ರಿಯಿಸಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದರ್ಶನ್ 'ದಿ ಡೆವಿಲ್' ನಾಯಕಿ ರಚನಾ ರೈ ಸಾಮಾನ್ಯರಲ್ಲ, ಸ್ಪೆಷಲ್ ಲೇಡಿ!
ಕಸದ ಬುಟ್ಟಿಯ ವಾಸನೆ, ಕೊಳೆ ಎರಡೂ ಒಟ್ಟಿಗೆ ತೆಗೆದುಹಾಕಲು ಭಾಳ ಸಿಂಪಲ್ಲಾಗಿರೊ ಟ್ರಿಕ್ ಇದು