ಪಕ್ಕದಲ್ಲಿದ್ರೂ ಗುರುತಿಸದ ಗಣ್ಯ ವ್ಯಕ್ತಿ: ಕನ್ನಡತಿ ಅಕ್ಕ ಖ್ಯಾತಿಯ ಅನು ನೋವಿನ ಮಾತು

Published : Sep 08, 2026, 06:54 PM IST
Anu

ಸಾರಾಂಶ

'ಕೆಚ್ಚೆದೆಯ ಕನ್ನಡತಿ ಅಕ್ಕ' ಖ್ಯಾತಿಯ ಅನು, ಮಹಿಳಾ ಸಮಾವೇಶವೊಂದರಲ್ಲಿ ತಮ್ಮನ್ನು ಗುರುತಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಪಕ್ಕದಲ್ಲಿದ್ದ ರೀಲ್ಸ್ ಕಲಾವಿದರನ್ನು ಹೊಗಳಿದ ಗಣ್ಯರು, ಸಮಾಜಕ್ಕಾಗಿ ದುಡಿಯುತ್ತಿರುವ ತಮ್ಮನ್ನು ಕಡೆಗಣಿಸಿದ್ದು ನೋವು ತಂದಿದೆ ಎಂದು ಅವರು ಬರೆದುಕೊಂಡಿದ್ದಾರೆ.

ಬೆಂಗಳೂರು: ಕೆಚ್ಚೆದೆಯ ಕನ್ನಡತಿ ಅಕ್ಕ ಅಂತಾನೇ ಫೇಮಸ್ ಆಗಿರುವ ಅನು ಅವರು ತಮ್ಮ ಅಸಮಾಧಾನವನ್ನು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಮಹಿಳಾ ಸಮಾವೇಶದಲ್ಲಿ ತಮ್ಮ ಪಕ್ಕದಲ್ಲಿದ್ದ ಗಣ್ಯರೊಬ್ಬರು ತಮ್ಮನ್ನು ಗುರುತಿಸದ ಕಾರಣ ಮತ್ತು ತಾವ್ಯಾಕೆ ತಮ್ಮ ಹೆಸರಿನ ಬ್ಯಾನರ್ ಹಾಕದಂತೆ ಹೇಳಿದ್ದು ಎಂಬುದರ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಆ ಗಣ್ಯರು ಯಾರು? ತಮ್ಮಲ್ಲಿ ಮೂಡಿದ ಪ್ರಶ್ನೆ ಏನು ಎಂದು ಅನು ಅವರೇ ಉತ್ತರ ನೀಡಿದ್ದಾರೆ.

ಅನು ಅವರ ಫೇಸ್‌ಬುಕ್‌ನಲ್ಲಿ ಬರೆದುಕೊಂಡ ಬರಹ ಈ ಕೆಳಗಿನಂತಿದೆ

ನಿನ್ನೆ ನಡೆದ ಮಹಿಳಾ ಸಮಾವೇಶದಲ್ಲಿ ನನ್ನನ್ನು ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಆಹ್ವಾನ ಪತ್ರಿಕೆಯಲ್ಲೂ ನನ್ನ ಹೆಸರು ಇತ್ತು. ಕಾರ್ಯಕ್ರಮದ ಇಬ್ಬರು ಮಹಿಳಾ ಮುಖ್ಯ ಅತಿಥಿಗಳಲ್ಲಿ ನಾನೂ ಒಬ್ಬಳಾಗಿದ್ದೆ. ಕಾರ್ಯಕ್ರಮದ ಆಯೋಜಕರು ಸಾರ್ವಜನಿಕವಾಗಿ ನನ್ನ ಹೆಸರಿನ ಬ್ಯಾನರ್ ಹಾಕುವುದಾಗಿ ಕೇಳಿದಾಗ, ನಾನು ಅದನ್ನೂ ಬೇಡವೆಂದೆ. ನಾನು ನಡೆಸುತ್ತಿರುವ ಪ್ಲಾಸ್ಟಿಕ್ ಮುಕ್ತ ಅಭಿಯಾನದ ಆಶಯಕ್ಕೆ ವಿರುದ್ಧವಾಗಿ ಅನಗತ್ಯ ಪ್ಲಾಸ್ಟಿಕ್ ಬ್ಯಾನರ್ ಹಾಕುವುದು ನನಗೆ ಇಷ್ಟವಿರಲಿಲ್ಲ. ಜೊತೆಗೆ, ಸಾರ್ವಜನಿಕ ಕಾರ್ಯಕ್ರಮದಲ್ಲಿ ದುಂದು ವೆಚ್ಚ ಮಾಡುವುದನ್ನೂ ನಾನು ಒಪ್ಪುವುದಿಲ್ಲ.

ನನ್ನ ಪರಿಚಯಕ್ಕಾಗಿ ಬ್ಯಾನರ್ ಬೇಡ, ನನ್ನ ಕೆಲಸವೇ ನನ್ನ ಪರಿಚಯವಾಗಲಿ ಎಂದುಕೊಂಡಿದ್ದೆ. ಆದರೆ ಅದೇ ವೇದಿಕೆಯ ಮೇಲೆ, ಮಹಿಳಾ ಆಯೋಗದ ಅಧ್ಯಕ್ಷರಾದ ಮಹಾತಾಯಿ ಅವರು ಒಬ್ಬ ಕಾಮಿಡಿ ರೀಲ್ಸ್ ಕಲಾವಿದರನ್ನು ಗುರುತಿಸಿ, ಅವರು ಸಮಾಜವನ್ನು ನಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ನೂರಾರು ಜನರ ಮುಂದೆ ಮೆಚ್ಚುಗೆಯಿಂದ ಮಾತನಾಡಿದರು. ಅವರ ಪಕ್ಕದಲ್ಲೇ ನಾನು ಕುಳಿತಿದ್ದೆ.

ಮಹಿಳೆಯ ಹೋರಾಟವನ್ನು ಗುರುತಿಸದಿರುವುದು

161 ಕನ್ನಡ ಸರ್ಕಾರಿ ಶಾಲೆಗಳಿಗೆ ಬಣ್ಣ ಹಚ್ಚುವ ಕೆಲಸ. ಹತ್ತಾರು ಬಾವಿ, ಕಲ್ಯಾಣಿ ಮತ್ತು ಪುರಾತನ ಸ್ಥಳಗಳ ಸ್ವಚ್ಛತೆ. ಮಹಿಳಾ ಸಬಲೀಕರಣಕ್ಕಾಗಿ ಕೆಲಸ. ಬಾಲ್ಯವಿವಾಹದ ವಿರುದ್ಧ ಹೋರಾಟ. ಪ್ಲಾಸ್ಟಿಕ್ ಮುಕ್ತ ಅಭಿಯಾನ. ಹೀಗೆ ವರ್ಷಗಳಿಂದ ಸಮಾಜಕ್ಕಾಗಿ ಕೆಲಸ ಮಾಡುತ್ತಾ ಬಂದಿರುವ ನಾನು ಯಾರು ಎಂಬುದನ್ನು ವೇದಿಕೆಯ ಮೇಲೆ ಒಂದು ಮಾತು ಹೇಳುವ ಅಗತ್ಯವೂ ಅವರಿಗೆ ಅನಿಸಲಿಲ್ಲ. ನನ್ನನ್ನು ಗುರುತಿಸದಿರುವುದಕ್ಕಿಂತ, ಒಬ್ಬ ಮಹಿಳೆಯಾಗಿ ಮತ್ತೊಬ್ಬ ಮಹಿಳೆಯ ಹೋರಾಟವನ್ನು ಗುರುತಿಸದಿರುವುದು ನನಗೆ ಹೆಚ್ಚು ನೋವು ತಂದಿತು.

ಬಹುಶಃ ಅವರಿಗೆ ನನ್ನ ಪರಿಚಯವಿರದೇ ಇರಬಹುದು.ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಆ ಕ್ಷಣದಲ್ಲಿ ನನ್ನೊಳಗೆ ಒಂದು ಪ್ರಶ್ನೆ ಮಾತ್ರ ಮೂಡಿತು. ಸಮಾಜಕ್ಕಾಗಿ ಸದ್ದು ಮಾಡದೆ ಕೆಲಸ ಮಾಡುವ ಹೆಣ್ಣುಮಕ್ಕಳಿಗೆ ನಮ್ಮ ವೇದಿಕೆಗಳಲ್ಲಿ ಯಾವಾಗ ಧ್ವನಿ ಸಿಗುತ್ತದೆ? ನಾನು ಪ್ರಶಸ್ತಿಗಾಗಿ ಕೆಲಸ ಮಾಡಿಲ್ಲ. ಚಪ್ಪಾಳೆಗಾಗಿ ಕೆಲಸ ಮಾಡಿಲ್ಲ. ಯಾರಾದರೂ ಗುರುತಿಸಲಿ ಎಂಬ ನಿರೀಕ್ಷೆಯಲ್ಲೂ ಕೆಲಸ ಮಾಡಿಲ್ಲ. ಆದರೆ ನಿನ್ನೆ ನಡೆದದ್ದು ನನಗೆ ಒಂದು ಕಹಿ ಪಾಠ ಕಲಿಸಿತು.

ನನ್ನನ್ನು ಗುರುತಿಸದ ಆ ವೇದಿಕೆಯಿಂದ ಮತ್ತಷ್ಟು ಗಟ್ಟಿಯಾದೆ!

ವೇದಿಕೆಗಳು ನಮ್ಮನ್ನು ಗುರುತಿಸದೇ ಇರಬಹುದು. ಆದರೆ ನಾವು ಮಾಡಿದ ಕೆಲಸವನ್ನು ಇತಿಹಾಸ ಎಂದಿಗೂ ಮರೆತಿರಬಾರದು. ನನ್ನನ್ನು ಯಾರು ಗುರುತಿಸುತ್ತಾರೆ, ಯಾರು ಗುರುತಿಸುವುದಿಲ್ಲ ಎಂಬುದಕ್ಕಿಂತ, ನನ್ನಿಂದ ಎಷ್ಟು ಮಕ್ಕಳಿಗೆ ಶಾಲೆ ಉಳಿಯಿತು, ಎಷ್ಟು ಹೆಣ್ಣುಮಕ್ಕಳಿಗೆ ಧೈರ್ಯ ಬಂತು, ಎಷ್ಟು ಪುರಾತನ ಜಲಮೂಲಗಳು ಮತ್ತೆ ಉಸಿರಾಡಿದವು ಎಂಬುದೇ ನನಗೆ ಮುಖ್ಯ. ನಿನ್ನೆ ನನ್ನನ್ನು ಗುರುತಿಸದ ಆ ವೇದಿಕೆಯಿಂದಲೇ ನಾನು ಮತ್ತಷ್ಟು ಗಟ್ಟಿಯಾದೆ. ನನ್ನ ಪರಿಚಯವನ್ನು ನಾನು ಹೇಳಿಕೊಳ್ಳಬೇಕಾಗಿಲ್ಲ. ನನ್ನ ಕೆಲಸವೇ ಒಂದು ದಿನ ನನ್ನ ಪರವಾಗಿ ಮಾತನಾಡುತ್ತದೆ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೊಟ್ಟೆ ಬೇಯಿಸಿದ ನೀರನ್ನು ಸಿಂಕ್‌ಗೆ ಚೆಲ್ತೀರಾ? ಇನ್ಮುಂದೆ ಆ ತಪ್ಪು ಮಾಡ್ಬೇಡಿ
ಭಾರತದ ಶೇ.80ರಷ್ಟು ಚಿನ್ನ ಅಮಿತಾಭ್​ ಮೊಮ್ಮಗಳ ಮೈಮೇಲೆ? ನವ್ಯಾ ನವೇಲಿ ನಂದಾ ಚಿನ್ನದ ಡ್ರೆಸ್​ ಮಹಿಮೆ