ಗರ್ಭದಲ್ಲಿರುವ ಮೂರು ತಿಂಗಳ ಭ್ರೂಣ. ಈ ಬೆಳೆಯುತ್ತಿರುವ ಮಗುವಿನ ಹೃದಯದಲ್ಲಿ ಬ್ಲಾಕ್. ಇದರ ಪರಿಣಾಮ ಗಂಭೀರ, ತಾಯಿ ಹಾಗೂ ಮಗುವಿನ ಜೀವಕ್ಕೆ ಅಪಾಯ. ಆದರೆ ಗರ್ಭದಲ್ಲಿರುವ ಒಂದು ಮುಷ್ಟಿ ಗಾತ್ರದ ಮಗುವಿಗೆ ಕೇವಲ 90 ಸೆಕೆಂಡ್‌ನಲ್ಲಿ ಆಪರೇಶನ್ ಮಾಡಲಾಗಿದೆ. ಇದೀಗ ತಾಯಿ ಮಗು ಆರೋಗ್ಯವಾಗಿದ್ದಾರೆ. ಅತ್ಯಂತ ಸವಾಲಿನ, ಅತೀ ಅಪಾಯಕಾರಿ ಆಪರೇಶನ್ ಅತ್ಯಂತ ಯಶಸ್ವಿಯಾಗಿದೆ.
ತಾಯಿಯಾಗುವ ಆಕೆಯ ಕನಸಿಗೆ ವಿಧಿ ಮತ್ತೊಂದು ಕೊಳ್ಳಿ ಇಡಲು ಸಜ್ಜಾಗಿತ್ತು. ಆದ್ರೆ, ವೈದ್ಯೋ ನಾರಾಯಣೋ ಹರಿಃ ಎಂಬಂತೆ, ಆ ತಾಯಿಯ ಪಾಲಿಗೆ ಡಾಕ್ಟರ್ಗಳೇ ದೇವರಾದ್ರೂ. ಈ ಸ್ಟೋರಿ ಓದಿದ್ರೆ ನಿಮ್ಮ ಹೃದಯದ ಬಡಿತ ಹೆಚ್ಚದೇ ಇರದು.
ಆಕೆ, 28 ವರ್ಷದ ದೆಹಲಿ ನಿವಾಸಿ ಗೃಹಿಣಿ. ಮದುವೆ ಬಳಿಕ ಸುಂದರ ಸಂಸಾರ ಸಾಗಿಸುತ್ತಿದ್ದ ದಂಪತಿಗೆ ಪಾಲಿಗೆ ಯಾಕೋ ಮಗು ಪಡೆಯುವ ಆಸೆ ಕೈಗೂಡಲಿಲ್ಲ. ಆಕೆ ಮೂರು ಬಾರಿ ಗರ್ಭಿಣಿಯಾದರೂ, ತಾಯ್ತನದ ಸಂತೋಷ ಅನುಭವಿಸುವ ಅದೃಷ್ಟವಿರಲಿಲ್ಲ. ಮೂರು ಬಾರಿಯೂ ಗರ್ಭಪಾತದಿಂದ ಮಗು ಕಳೆದುಕೊಂಡಿದ್ದಳು. ಮತ್ತೊಮ್ಮೆ ಗರ್ಭ ಧರಿಸಿದ ಮಹಿಳೆಗೆ ಈ ಬಾರಿಯೂ ಮಡಿಲು ತುಂಬುವ ಭಾಗ್ಯ ಇರಲಿಲ್ಲ. ಚೆಕ್ ಅಪ್ಗೆ ಆಸ್ಪತ್ರೆಗೆ ಬಂದ ದಂಪತಿಗೆ ಶಾಕ್ ಕಾದಿತ್ತು. ಗರ್ಭದಲ್ಲಿ ಭ್ರೂಣದ ಹೃದಯದ ಸ್ಥಿತಿ ಉತ್ತಮವಾಗಿರಲಿಲ್ಲ. ಮಗು ಹುಟ್ಟಿದ ಮೇಲೂ ಹೃದಯ ಕಾಯಿಲೆ ಬಾಧಿಸಬಹುದು ಅಂತ ವೈದ್ಯರು ಎಚ್ಚರಿಸಿದ್ರು.
106ನೇ ವಯಸ್ಸಿನಲ್ಲಿ ಫ್ಲೈಟ್ ಹತ್ತಿದ ಅಜ್ಜಿ, ಶತಾಯುಷಿಯ ಕನಸಿಗೆ ರೆಕ್ಕೆ ಕಟ್ಟಿ ಹಾರಾಡಿಸಿದವರಾರು ಗೊತ್ತಾ ?
ಆದರೆ ಮೂರು ಬಾರಿ ಮಗುವನ್ನು ಕಳೆದುಕೊಂಡಿದ್ದ ಆಕೆ, ಈ ಕಾರಣಕ್ಕಾಗಿ ಮಗುವನ್ನು ಕಳೆದುಕೊಳ್ಳಲು ಸಿದ್ಧರಿರಲಿಲ್ಲ. ಹೇಗಾದರೂ ಸರಿ ಈ ಮಗು ಉಳಿಸಿಕೊಳ್ಳಲೇಬೇಕೆಂದು ನಿರ್ಧರಿಸಿದ ತಾಯಿ, ವೈದ್ಯರಿಗೆ ದೊಂಬಾಲು ಬಿದ್ದಳು. ದೆಹಲಿಯ ಪ್ರತಿಷ್ಠಿತ ಏಮ್ಸ್ (AIMMS) ಕಾರ್ಡಿಯೋರಾಕಿಕ್ ಸೈನ್ಸಸ್ ಕೇಂದ್ರದ ನುರಿತ ಹೃದ್ರೋಗ ತಜ್ಞರು ಈ ಕೇಸ್ ಅನ್ನು ಸವಾಲಾಗಿ ಸ್ವೀಕರಿಸಿದ್ರು. ಗರ್ಭದಲ್ಲಿರುವ ಭ್ರೂಣದ ಹೃದಯದಲ್ಲಿ ಬ್ಲಾಕ್ ಇರುವುದನ್ನು ಪತ್ತೆ ಮಾಡಿದ್ದ ವೈದ್ಯರು, ಬ್ಲಾಕ್ ತೆರವುಗೊಳಿಸಲು ಗರ್ಭದ ಒಳಗೇ ಅಪಾಯಕಾರಿ ಶಸ್ತ್ರಚಿಕಿತ್ಸೆ ನಡೆಸುವ ತೀರ್ಮಾನಕ್ಕೆ ಬಂದರು. ಆಪರೇಷನ್ ಮೂಲಕ ಮಗುವಿನ ಹಾರ್ಟ್ ಬ್ಲಾಕ್ ತೆಗೆಯುವುದು ಹಾಗೂ ಮಗು ಹುಟ್ಟುವಾಗ ಉತ್ತಮ ಆರೋಗ್ಯದಿಂದ ಇರುವಂತೆ ನೋಡಿಕೊಳ್ಳಬೇಕು.
ತಾಯಿಯ ಗರ್ಭದಲ್ಲಿರುವ ಭ್ರೂಣದ ಹೃದಯ ಸಣ್ಣ ದ್ರಾಕ್ಷಿ ಗಾತ್ರದ್ದು. ಹೃದಯದ ಬ್ಲಾಕ್ ತೆರೆವು ಮಾಡಲು ಬಲೂನ್ ಡಿಲೇಷನ್ ಶಸ್ತ್ರಚಿಕಿತ್ಸೆ ಮಾಡಬೇಕು. ಅದೂ ಜಸ್ಟ್ 90 ಸೆಕೆಂಡಿನಲ್ಲಿ. ಈ ಸವಾಲಿಗೆ ತಯಾರಾಗಿ ನಿಂತ ವೈದ್ಯರ ತಂಡ. ಗರ್ಭದಲ್ಲಿದ್ದ ಭ್ರೂಣದ ಹೃದಯಕ್ಕೆ 90 ಸೆಕೆಂಡಿನಲ್ಲಿ ಸರ್ಜರಿ ಮಾಡಿಯೇ ಬಿಟ್ಟರು.
ಅಪಾಯಕಾರಿ ಹಾರ್ಟ್ ಆಪರೇಷನ್
ಮಗುವಿನ ಹೃದಯದಲ್ಲಿ ಕವಾಟ ಬ್ಲಾಕ್ ಆಗಿದ್ದಾಗ ನಡೆಸುವ ಪ್ರಕ್ರಿಯೆಯನ್ನು ಬಲೂನ್ ಡಿಲೇಷನ್ ಎಂದು ಕರೆಯಲಾಗುತ್ತದೆ. ಅಲ್ಟ್ರಾಸೌಂಡ್ ಮೂಲಕ ಪ್ರಕ್ರಿಯೆ ನಡೆಸಲಾಗಿದೆ. ತಾಯಿಯ ಹೊಟ್ಟೆಯ ಮೂಲಕ ಮಗುವಿನ ಹೃದಯಕ್ಕೆ ಸೂಚಿಯನ್ನು ಚುಚ್ಚಲಾಗುತ್ತದೆ. ಬಳಿಕ ಬಲೂನಿನ ನಳಿಕೆಯನ್ನು ಬಳಸಿ, ರಕ್ತದ ಹರಿವು ಸುಧಾರಿಸುವಂತೆ ಬ್ಲಾಕ್ ಆಗಿದ್ದ ಕವಾಟವನ್ನು ತೆರವುಗೊಳಿಸಲಾಗುತ್ತದೆ.
ರಸ್ತೆ ಮೇಲೆ ಪೊಂಗಲ್ ಮಾಡಿದ ಸುಧಾಮೂರ್ತಿ.. ಸರಳತೆಯೇ ಶಕ್ತಿ, ಸೇವೆಯೇ ಭಕ್ತಿ
ಜಸ್ಟ್ 90 ಸೆಕೆಂಡಿನಲ್ಲಿಯೇ ಸರ್ಜರಿ
ಇದು ಹೈರಿಸ್ಕ್ ಆಪರೇಷನ್. ಇದರಿಂದ ಗರ್ಭದಲ್ಲಿದ್ದ ಮಗುವಿನ ಜೀವಕ್ಕೆ ಅಪಾಯ ಉಂಟುಮಾಡಬಹುದು. ಅತ್ಯಂತ ನಿಖರವಾಗಿ ಈ ಪ್ರಕ್ರಿಯೆ ನಡೆಸುವುದು ವೈದ್ಯರಿಗೆ ಸವಾಲಾಗಿತ್ತು. ಸಾಮಾನ್ಯವಾಗಿ ಎಲ್ಲ ಪ್ರಕ್ರಿಯೆಗಳನ್ನೂ ಆಂಜಿಯೋಗ್ರಫಿ ಅಡಿಯಲ್ಲಿ ಮಾಡಲಾಗುತ್ತದೆ. ಆದ್ರೆ ಈ ಕೇಸ್ನಲ್ಲಿ ಅದು ಸಾಧ್ಯವಿರಲಿಲ್ಲ. ಎಲ್ಲವನ್ನೂ ಅಲ್ಟ್ರಾಸೌಂಡ್ ಮಾರ್ಗದರ್ಶನದಲ್ಲೇ ಮಾಡಬೇಕಿತ್ತು. ಪ್ರಮುಖ ಹೃದಯ ಭಾಗವನ್ನೇ ಚುಚ್ಚುತ್ತಿರುವುದರಿಂದ ವೇಗವಾಗಿಯೂ ನಡೆಸಬೇಕಿತ್ತು. ಸಣ್ಣ ತಪ್ಪಾದರೂ ಮಗು ಸಾಯುತ್ತದೆ. ಅದಕ್ಕಾಗಿ ಟೈಮ್ ಲೆಕ್ಕ ಹಾಕಿದ್ದ ವೈದ್ಯರು, ಕೇವಲ 90 ಸೆಕೆಂಡ್‌ಗಳಲ್ಲಿ ಮುಗಿಸಿ ನಿಟ್ಟುಸಿರು ಬಿಟ್ಟರು.
‘ಮಗು ತಾಯಿಯ ಗರ್ಭದಲ್ಲಿರುವಾಗಲೇ ಕೆಲವು ಗಂಭೀರ ಹೃದಯ ಕಾಯಿಲೆ ಗುರುತಿಸಬಹುದು. ಕೆಲವೊಮ್ಮೆ ಗರ್ಭದಲ್ಲಿಯೇ ಚಿಕಿತ್ಸೆ ನೀಡುವುದರಿಂದ, ಹುಟ್ಟಿದ ಬಳಿಕ ಮಗುವಿನ ಆರೋಗ್ಯ ಮತ್ತು ಬೆಳವಣಿಗೆಗೆ ಸಹಾಯಕಾರಿಯಾಗುತ್ತದೆ ಅಂತಾರೆ ವೈದ್ಯರು ‘ಗರ್ಭದಲ್ಲಿರುವ ಭ್ರೂಣ ಮತ್ತು ತಾಯಿ ಇಬ್ಬರೂ ಶಸ್ತ್ರಚಿಕಿತ್ಸೆ ಬಳಿಕ ಆರೋಗ್ಯವಾಗಿದ್ದಾರೆ. ಮಗುವಿನ ಭವಿಷ್ಯದ ಆರೋಗ್ಯ ದ ಮೇಲೆ ನಿಗಾ ವಹಿಸಬೇಕು ಹಾಗೂ ಹೃದಯದ ಕವಾಟಗಳ ಬೆಳವಣಿಗೆಯನ್ನು ನಿರಂತರವಾಗಿ ಗಮನಿಸಬೇಕು’ ಅಂತಾರೆ ಏಮ್ಸ್‌ನ ಕಾರ್ಡಿಯಾಲಜಿ ಆಂಡ್ ಕಾರ್ಡಿಯಾಕ್ ಅನಸ್ತೇಶಿಯಾ ವಿಭಾಗ, ಅಬ್‌ಸ್ಟೆಟ್ರಿಕ್ಸ್ ಆಂಡ್ ಗೈನಾಕಾಲಜಿ ವಿಭಾಗದ ವೈದ್ಯರ ತಂಡ. ಮೂರು ಮಗು ಕಳೆದುಕೊಂಡಿದ್ದ ದಂಪತಿಗೆ ನಾಲ್ಕನೇ ಮಗುವನ್ನು ಬದುಕಿಸುವ ಮೂಲಕ ವೈದ್ಯರ ತಂಡ, ತಾಯ್ತನದ ಆನಂದ ಅನುಭವಿಸುವಂತೆ ಮಾಡಿದ್ದಾರೆ.
ಹಾಟ್ಸ್ ಆಫ್ ಡಾಕ್ಟರ್ಸ್..!