ಎರಡೂ ಕೈ ಇಲ್ಲದೆಯೂ ವಿಮಾನ ಹಾರಿಸುವ ಪೈಲೆಟ್ ಲೈಸೆನ್ಸ್ ಪಡೆದ ಈ ಮಹಿಳೆಯ ಧೀರೋದಾತ್ತ ಕತೆ ನಮ್ಮಲ್ಲಿ ತುಂಬಾ ಮಂದಿಗೆ ಸ್ಫೂರ್ತಿ ಆಗಬಹುದು...
ಈಕೆಗೆ ಹುಟ್ಟುವಾಗಲೇ ಎರಡೂ ಕೈ (Hands) ಗಳಿಲ್ಲ. ತೋಳುಗಳು (Arms) ಬುಡದಿಂದಲೇ ಇಲ್ಲ. ಏನು ಮಾಡಲು ಸಾಧ್ಯ? ಉಳಿದವರಾದರೆ ಉಂಡು ಮಲಗು ಎಂಬ ಸೂತ್ರಕ್ಕೆ ಬಿದ್ದು, ಪರಾವಲಂಬಿಗಳಾಗಿ ಇದ್ದುಬಿಡುತ್ತಿದ್ದರೇನೋ. ಆದರೆ ಈಕೆ ಛಲವಂತೆ. ತನ್ನ ಮಿತಿಯನ್ನು ಮೀರಿಬಿಟ್ಟಳು.
ಜೆಸ್ಸಿಕಾ ಕಾಕ್ಸ್ (Jessica Cox) ಅರಿಜೋನಾದವಳು. 1983ರಲ್ಲಿ ಜನಿಸಿದಳು. ಹುಟ್ಟುತ್ತಲೇ ಎರಡೂ ತೋಳುಗಳಿರಲಿಲ್ಲ. ತುಂಬಾ ವಿರಳವಾದ ಕಾಯಿಲೆಗೆ ಅವು ಬಲಿಯಾಗಿದ್ದವು ಆಕೆ 10ನೇ ವರ್ಷದವರೆಗೂ ತನ್ನೆರಡು ತೋಳುಗಳನ್ನು ಮುಚ್ಚುವಂಥ ಬಟ್ಟೆ ತೊಡುತ್ತಿದ್ದಳು. ಆದರೆ, ಅದೊಂದು ದಿನ ಏನಾಯಿತೋ ಗೊತ್ತಿಲ್ಲ. ತೋಳುಗಳನ್ನು ಮುಚ್ಚುವ ಬಟ್ಟೆ ಎಸೆದು ನಾನು ಹೇಗಿದ್ದೇನೋ ಹಾಗೆಯೇ ಇರಲು ಬಯಸುತ್ತೇನೆ ಎಂದು ಬಿಟ್ಟಳು.
ಹಾಗೆ ಹೇಳಿದ್ದು ಮಾತ್ರವಲ್ಲ, ಅಲ್ಲಿಂದ ಆಕೆ, ಕಾಲು ಕೈ ಸರಿಯಿದ್ದವರೂ ಏನೇನ್ ಕೆಲಸ ಮಾಡುತ್ತಾರೋ ಆ ಎಲ್ಲ ಕೆಲಸಗಳನ್ನು ತನ್ನ ಕಾಲಿಂದಲೇ ಮಾಡಲಾರಂಭಿಸಿದಳು. ಜತೆಗೆ ವಿಶೇಷ ಸಂಗತಿಗಳನ್ನೂ ಕಲಿಯಲು ಆರಂಭಿಸಿದಳು. ಟೇಕ್ವಾಂಡೋ (Tekwando) ಕಲಿಯಲು ಆರಂಭಿಸಿದಳು. ಇದು ಕರಾಟೆಯಂತೆ. ಇದರಲ್ಲಿ ಕೈಗಳೇ ಮುಖ್ಯ. ಆದರೆ ಈಕೆ ಕೈಗಳಿಲ್ಲದೇ ಈ ಯುದ್ಧಕಲೆಯನ್ನು ಕರಗತ ಮಾಡಿಕೊಂಡಳು. ಟೇಕ್ವಾಂಡೋದಲ್ಲಿ ಎರಡು ಬೆಲ್ಟ್ ಪಡೆದಿದ್ದಾಳೆ. ನಂತರ ಡ್ಯಾನ್ಸ್ (Dance) ಕಲಿತಳು. ಸತತ 12 ವರ್ಷಗಳ ಕಾಲ ನೃತ್ಯ ಅಭ್ಯಾಸ ಮಾಡಿದ್ದಾಳೆ. ಜೊತೆಗೆ ಸ್ಟೇಜ್ ಮೇಲೆ ಮಾತನಾಡಿದಳು. ಅತ್ಯುತ್ತಮ ಭಾಷಣಗಾರ್ತಿ, ಮೋಟಿವಿಷನಲ್ ಸ್ಪೀಕರ್ (Motivational speaker), ಕಾರು ಓಡಿಸಲು (Car driving) ಕಲಿತಳು. ಸ್ಕೂಬಾ ಡೈವ್ (scuba diving) ಮಾಡಿದಳು. ತನ್ನ ಕಾಂಟಾಕ್ಟ್ ಲೆನ್ಸ್ ತಾನೇ ಹಾಕಿಕೊಳ್ಳುತ್ತಾಳೆ. ಕಂಪ್ಯೂಟರ್‌ನಲ್ಲಿ ಬರೆಯಬಲ್ಲಳು. ಪ್ರತಿ ನಿಮಿಷಕ್ಕೆ 25 ಶಬ್ದಗಳ ವೇಗದಲ್ಲಿ ಟೈಪ್ ಮಾಡ್ತಾಳೆ ಕೂಡ. ಹೀಗೆ ತನಗೆ ಏನು ಮಾಡಬೇಕು ಅನ್ನಿಸುತ್ತದೆಯೋ ಅದೆಲ್ಲವನ್ನೂ ಮಾಡುತ್ತಾಳೆ.
undefined
ಇದೆಲ್ಲದರ ಜೊತೆಗೆ ವಿಮಾನ ಓಡಿಸಲು ಕಲಿಯತ್ತೇನೆ ಎಂದಳು. ಮೊದಲು ಎಲ್ಲರೂ ನಕ್ಕರು. ನಂತರ ಈಕೆಯ ಹಠ ನೋಡಿ ಕಲಿಸಿದರು. ಕಲಿತಳು, ಕಲಿತಳು- ತನ್ನ 28ನೇ ವಯಸ್ಸಿನಲ್ಲಿ ಪೈಲೆಟ್ (Pilot) ಲೈಸೆನ್ಸ್ ಪಡೆದೇ ಬಿಟ್ಟಳು! ಈಗ ಈಕೆ ಕೈಕಾಲು ಗಟ್ಟಿ ಇರುವ ಪುರುಷರಿಗೂ ಮಹಿಳೆಯರಿಗೂ ಸಮಾನವಾಗಿ ವಿಮಾನ ಹಾರಿಸಬಲ್ಲಳು. ಎರಡೂ ಕೈಗಳು ಇರದಿದ್ದರೂ ವಿಮಾನ ಚಾಲನೆ ಮಾಡಿದ ಜಗತ್ತಿನ ಮೊದಲ ಮಹಿಳೆ ಎಂಬ ಕೀರ್ತಿಗೆ ಆಕೆ ಪಾತ್ರವಾಗಿದ್ದು, 2008 ಅಕ್ಟೋಬರ್ 10ರಂದು ಲಘು ಕ್ರೀಡಾ ವಿಮಾನವನ್ನು 10 ಸಾವಿರ ಅಡಿ ಎತ್ತರದಲ್ಲಿ ಚಲಾಯಿಸಿ, ಪೈಲಟ್ ಲೈಸೆನ್ಸ್ ಪಡೆದ ಚಾಲಾಕಿ. ಆಕೆಯ ಈ ಸಾಧನೆಗೆ ನೆರವಾಗಿದ್ದು ಆಕೆಗೆ ದೊರೆತ ಎಬೆಲ್ ಫೈಟ್ ಸ್ಕಾಲರ್‌ಶಿಪ್.
ಅಂಗವಿಕಲತೆ (Disability) ಎಂಬುದು ಮನಸ್ಸಿಗೆ ಹೊರತು ದೇಹಕ್ಕಲ್ಲ ಎಂಬುದನ್ನು ತನ್ನೆಲ್ಲ ಸಾಹಸಗಳಿಂದ ತೋರಿಸಿದಳು. ಕಾಕ್ಸ್ ಕಲಿಕೆಗೆ ಮಿತಿಯೇ ಇರಲಿಲ್ಲ. ಮನಸ್ಸಿಗೆ ಬಂದಿದ್ದನ್ನು ಯಾವುದೇ ಮುಲಾಜಿಲ್ಲದೆ, ತಾನೊಬ್ಬಳು ಅಂಗವಿಕಲೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳದೆ ಮಾಡಿ ಸೈ ಎನ್ನಿಸಿಕೊಂಡಳು.
National Girl Child Day: ಪ್ರತಿ ಹೆಣ್ಣಿಗೂ ಸ್ಫೂರ್ತಿಯ ಸೆಲೆ ಉದ್ಯಮ ರಂಗದ ಈ 7 ಮಹಿಳಾ ಸಾಧಕಿಯರು
''ಅಂಗವಿಕಲತೆ ಎನ್ನುವುದು ನಮ್ಮ ಮನೋಧರ್ಮ ಅಷ್ಟೇ. ಅದನ್ನು ತೊಡೆದು ಹಾಕಿದರೆ ನೀವು ಅಂದುಕೊಂಡಿದ್ದನ್ನು ಯಾವುದೇ ವಿಘ್ನವಿಲ್ಲದೆ ಮಾಡಬಹುದು. ಇದಕ್ಕೆ ನಾನು ಬದುಕುತ್ತಿರುವ ರೀತಿಯೇ ಸಾಕ್ಷಿ. ಸಾಧನೆಗೆ ಅಂಗವಿಕಲತೆ ಎಂಬುದು ಕೇವಲ ಒಂದು ಅಡ್ಡಿ ಎಂದು ಭಾವಿಸದೆ ಅದನ್ನು ನಿವಾರಿಸಿಕೊಂಡೇ ಮುನ್ನಡೆಯುತ್ತಿದ್ದೇನೆ'' ಎಂದು ಜೆಸ್ಸಿಕಾ ಕಾಕ್ಸ್ ಆತ್ಮವಿಶ್ವಾಸದಿಂದ ನುಡಿಯುತ್ತಾಳೆ. ನಾವು ಕೆಲವೊಮ್ಮೆ ನಮಗೆಲ್ಲಾ ಸರಿ ಇದ್ದರೂ ಕೈಲಾಗದವರ ತರಹ ಬಾಳುತ್ತೇವೆ. ಆಕೆಗೆ ಕೈಗಳೇ ಇಲ್ಲದಿದ್ದರೂ ಎಲ್ಲವನ್ನೂ ಸಾಧಿಸಿ ತೋರಿಸಿದ್ದಾಳೆ. 'ಅಯ್ಯೋ ನನಗೆ ಅಂಗವಿಕಲತೆ' ಎಂದು ಕೊರಗುವವರು ಕೂಡಾ ಈಕೆಯ ಜೀವನವನ್ನೊಮ್ಮೆ ನೋಡಿದರೆ, ಉತ್ಸಾಹದ ಬುಗ್ಗೆಯಾಗಬಲ್ಲರು. ಬದುಕನ್ನು ಎಲ್ಲ ರೀತಿಯಿಂದ ಎಂಜಾಯ್ ಮಾಡುತ್ತಿರುವ ಜೆಸ್ಸಿಕಾಳಿಗೆ ಹ್ಯಾಟ್ಸಾಫ್ ಹೇಳೋಣ.
Work From Home: ಗರ್ಭಿಣಿಯಾದಳು, ಮಗು ಹೆತ್ತಳು, ಕಚೇರಿಯಲ್ಲಿ ಗೊತ್ತೇ ಇಲ್ಲ!