
ಮನಸ್ಸೊಂದಿದ್ದರೆ ಮಾರ್ಗವು ಉಂಟು... ಎನ್ನುವುದು ಎಲ್ಲರಿಗೂ ಗೊತ್ತಿರುವಂಥ ಮಾತೇ ಅಲ್ಲವೆ? ಮನಸ್ಸಿದ್ದರೆ ವಯಸ್ಸೂ ಅಡ್ಡಿಯಾಗಲ್ಲ, ಗುರಿ ಸ್ಪಷ್ಟವಾಗಿದ್ದರೆ ಎಂಥ ಸಾಧನೆಯನ್ನಾದರೂ ಮಾಡಬಹುದು ಎಂಬ ಮಾತಿಗೆ ಸಾಕ್ಷಿಯಾಗಿದ್ದಾರೆ ಈ 70ರ ಸೋಷಿಯಲ್ ಮೀಡಿಯಾ ಸ್ಟಾರ್ ಸುಮನ್ ಧಾಮನೆ. ಹೆಚ್ಚೆಚ್ಚು ಲೈಕ್ಸ್,, ಶೇರ್ ಪಡೆಯಲು ಇಂದಿನ ಯುವಕ-ಯುವತಿಯರು ಜೀವ ಪಣಕ್ಕಿಟ್ಟು ರೀಲ್ಸ್ ಮಾಡುತ್ತಾರೆ, ಮತ್ತು ಕೆಲವರು ಬಟ್ಟೆ ಬಿಚ್ಚುವ ವಿಡಿಯೋಗಳಿಂದೇ ರಾತ್ರೋರಾತ್ರಿ ಸ್ಟಾರ್ ಆಗುತ್ತಾರೆ ಎನ್ನುವುದು ಎಲ್ಲವೂ ಸತ್ಯವೇ. ಆದರೆ ನೋಡುವ ಪ್ರತಿಯೊಬ್ಬರ ಹೃದಯವನ್ನು ಗೆಲ್ಲುವ ಮೂಲಕ, ಸೋಷಿಯಲ್ ಮೀಡಿಯಾ ಸ್ಟಾರ್ ಎನ್ನಿಸಿಕೊಳ್ಳುವುದು ಸುಲಭದ ಮಾತಲ್ಲ. ಅದೂ ಮೊಬೈಲ್, ಡಿಜಿಟಲ್ ಇದರ ಬಗ್ಗೆ ಯಾವುದೂ ಗೊತ್ತಿಲ್ಲದ ಅಜ್ಜಿಯೊಬ್ಬರು ಈ ಪರಿಯಲ್ಲಿ ಯಶಸ್ಸು ಗಲಿಸುತ್ತಾರೆ, ತಿಂಗಳಿಗೆ ಏನಿಲ್ಲವೆಂದರೂ ಆರು ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಾರೆ ಎಂದರೆ ನಂಬುವುದು ಸ್ವಲ್ಪ ಕಷ್ಟ ಎನ್ನಿಸುತ್ತದೆ ಅಲ್ಲವೆ? ಡಿಜಿಟಲ್ ಜಗತ್ತಿನ ಯಾವುದೇ ಅನುಭವವಿಲ್ಲದ, ಶಾಲೆಗೆ ಹೋಗದ ಅಥವಾ ಔಪಚಾರಿಕ ಶಿಕ್ಷಣವನ್ನು ಪಡೆಯದ ಈ ಅಜ್ಜಿಯ ಕಥೆಯೇ ರೋಚಕವಾದದ್ದು.
ಮಹಾರಾಷ್ಟ್ರದ ಗ್ರಾಮೀಣ ಪ್ರದೇಶದ ಅಹ್ಮದ್‌ನಗರದ 70 ವರ್ಷದ ಈ ಅಜ್ಜಿಯ ಲಾಕ್ಡೌನ್ ಸಮಯದಿಂದ ಶುರುವಾದ ಪಾಕ ವಿಧಾನ ಈಗ ಇಡೀ ದೇಶದ ಮೂಲೆಮೂಲೆಗಳಲ್ಲಿ ಪ್ರಚಲಿತವಾಗಿದೆ. 1.76 ಮಿಲಿಯನ್ ಚಂದಾದಾರರನ್ನು ಹೊಂದಿರುವ ಈ ಅಜ್ಜಿಯ ಕಥೆಯೂ ಅಷ್ಟೇ ರೋಚಕ. ಆಪ್ಲಿ ಆಜಿ (ನಮ್ಮ ಅಜ್ಜಿ) ಎಂಬ ಪಾಕಶಾಲೆಯ ಚಾನೆಲ್ ಪ್ರಾರಂಭಿಸಿರುವ ಅಜ್ಜಿಗೆ 19 ವರ್ಷದ ಮೊಮ್ಮಗನೇ ಗುರು. ಇವರು ಯೂಟ್ಯೂಬ್ ಪ್ರಾರಂಭಿಸಿ ಆರು ತಿಂಗಳೊಳಗೆ ಸಂಚಲನ ಮೂಡಿಸಿದರು. ಅವರ ಮಹಾರಾಷ್ಟ್ರದ ಪಾಕವಿಧಾನಗಳು, ಮಣ್ಣಿನ, ಗ್ರಾಮೀಣ ಮತ್ತು ತುಂಬಾ ದೇಸಿ ಮತ್ತು ರುಚಿಕರವಾದವು, ಆನ್‌ಲೈನ್‌ನಲ್ಲಿ ಅನೇಕ ಹೃದಯಗಳು ಮತ್ತು ಆಹಾರಪ್ರಿಯರನ್ನು ಆಕರ್ಷಿಸುತ್ತಿವೆ. ಅವರು ಯೂಟ್ಯೂಬ್ ಸೃಷ್ಟಿಕರ್ತರ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ಇವರು ತಮ್ಮ ಚಾನೆಲ್‌ನಲ್ಲಿ 140 ಕ್ಕೂ ಹೆಚ್ಚು ಪಾಕವಿಧಾನಗಳನ್ನು ಹೊಂದಿದ್ದಾರೆ. ಅವರ ವಿಡಿಯೋಗಳು ಪ್ರಸ್ತುತ ಆರು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿವೆ.
ಅಮ್ಮನೆಂದರೆ ಸುಮ್ಮನೆಯೆ? ಮಕ್ಕಳಿಗಾಗಿ ಈಕೆಯದ್ದು ಬಲು ರೋಚಕ ದಿನಚರಿ! ಅವರ ಬಾಯಲ್ಲೇ ಕೇಳಿ
ಅಹ್ಮದ್‌ನಗರದಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಸರೋಲಾ ಕಸರ್ ಗ್ರಾಮದ ಸುಮನ್, ಸಾಂಪ್ರದಾಯಿಕ ಸುವಾಸನೆಗಳಿಂದ ತುಂಬಿರುವ ಅಧಿಕೃತ ಮಹಾರಾಷ್ಟ್ರ ಪಾಕವಿಧಾನಗಳನ್ನು ಅಡುಗೆ ಮಾಡಲು ಮನೆಯಲ್ಲಿ ತಯಾರಿಸಿದ ಮಸಾಲೆಗಳು, ಮನೆಯಲ್ಲಿ ಬೆಳೆದ ತರಕಾರಿಗಳನ್ನು ಮಾತ್ರ ಬಳಸುತ್ತಾರೆ. "ಯೂಟ್ಯೂಬ್ ಎಂದರೇನು ಎಂದು ನನಗೆ ತಿಳಿದಿರಲಿಲ್ಲ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಪಾಕವಿಧಾನಗಳನ್ನು ಹಾಕುವ ಬಗ್ಗೆ ಎಂದಿಗೂ ಯೋಚಿಸಿರಲಿಲ್ಲ. ಆದರೆ ಈಗ ನಾನು ಯಾವುದೇ ಪಾಕವಿಧಾನವನ್ನು ಚಾನೆಲ್‌ನಲ್ಲಿ ಹಂಚಿಕೊಳ್ಳದಿದ್ದರೆ ನನಗೆ ಆತಂಕವಾಗುತ್ತದೆ" ಎಂದು ಅವರು ಈಗ ಸಂದರ್ಶನದಲ್ಲಿ ಹೇಳುತ್ತಾರೆ. ಆರಂಭದಲ್ಲಿ ಕ್ಯಾಮೆರಾದಿಂದ ಶೂಟಿಂಗ್ ಪ್ರಾರಂಭಿಸಿದಾಗ ತುಂಬಾ ಹೆದರುತ್ತಿದ್ದರಂತೆ. ಅವರ 17 ವರ್ಷದ ಮೊಮ್ಮಗ ಯಶ್ ಧಮಾನೆ ಎಲ್ಲವನ್ನೂ ಹ್ಯಾಂಡಲ್ ಮಾಡುತ್ತಾನೆ. ಶೂಟಿಂಗ್ನಿಂದ ಹಿಡಿದು, ವಿಡಿಯೋ ಅಪ್ಲೋಡ್ ಎಲ್ಲವೂ ಆತನದ್ದೇ ಕೆಲಸ.
ಅಷ್ಟಕ್ಕೂ ಇವರ ಜರ್ನಿ ಶುರುವಾಗಿದ್ದು, COVID-19 ಲಾಕ್ಡೌನ್ ಸಮಯದಿಂದ. ಯಶ್ ತನ್ನ ಅಜ್ಜಿಗೆ ಪಾವ್ ಭಾಜಿ ಪಾಕವಿಧಾನದ ವಿಡಿಯೋ ತೋರಿಸಿದಾಗ ಅಜ್ಜಿಗೂ ಆಸೆ ಉಂಟಾಗಿದೆ. ಅದರ ಬಗ್ಗೆ ತಿಳಿದುಕೊಂಡಿದ್ದಾರೆ. ಆ ದಿನ ಹಬ್ಬಕ್ಕಾಗಿ ಆಕೆ ರುಚಿಕರವಾದ ಪಾವ್ ಭಾಜಿಯನ್ನು ತಯಾರಿಸಿದಾಗ ಎಲ್ಲರಿಗೂ ಇಷ್ಟವಾಗಿದೆ. ಆಗ ಮೊಮ್ಮಗನೇ ಈ ಐಡಿಯಾವನ್ನು ಅಜ್ಜಿಗೆ ಹೇಳಿದ್ದಾನೆ. ಮೊದಲಿಗೆ ಇದೆಲ್ಲಾ ನನಗ್ಯಾಕಪ್ಪಾ ಎಂದ ಅಜ್ಜಿಗೆ ಧೈರ್ಯ ತುಂಬಿ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದಾನೆ. ಅಲ್ಲಿಂದ ಶುರುವಾದ ಜರ್ನಿ ಇಂದು ಈ ಮಟ್ಟಕ್ಕೆ ಬಂದು ನಿಂತಿದೆ. ಕಳೆದ ಅಕ್ಟೋಬರ್ನಲ್ಲಿ ಇವರ ಯೂಟ್ಯೂಬ್ ಚಾನೆಲ್ ಹ್ಯಾಕ್ ಆಗಿ, ನಷ್ಟ ಉಂಟಾಗಿತ್ತಂತೆ. ಇಲ್ಲ ಎಲ್ಲಾ ಸಮಸ್ಯೆಗಳನ್ನೂ ಮೆಟ್ಟಿ ನಿಂತಿದ್ದಾರೆ.
ಡಿವೋರ್ಸ್ ಬಗ್ಗೆ ಮಾಳವಿಕಾ ಅವಿನಾಶ್ ಓಪನ್ ಮಾತು: 25 ವರ್ಷಗಳ ದಾಂಪತ್ಯ ಜೀವನದ ಬಗ್ಗೆ ನಟಿ ಹೇಳಿದ್ದೇನು?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.