ಇಮ್ರಾನ್ ಖಾನ್ ಬೆಂಬಲಿಗರ ಪ್ರತಿಭಟನೆ ನಿಯಂತ್ರಿಸಲಾಗದೇ ಹೈರಾಣಾದ ಪಾಕ್ ಸೇನೆ

Nov 29, 2024, 6:32 PM IST

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಮಾಜಿ ಪ್ರಧಾನಿ ಪ್ರಸ್ತುತ ಜೈಲಿನಲ್ಲಿರುವ ಇಮ್ರಾನ್ ಖಾನ್ ಬಿಡುಗಡೆಗೆ ಆಗ್ರಹಿಸಿ ಬೆಂಬಲಿಗರು ನಡೆಸುತ್ತಿರುವ ಪ್ರತಿಭಟನೆಯಿಂದಾಗಿ ಆತಂಕ ಸೃಷ್ಟಿಯಾಗಿದೆ. ಎರಡೆರಡು ಕಡೆ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಇದನ್ನು ನಿಯಂತ್ರಿಸಲು ಸಾಧ್ಯವಾಗದೇ ಪಾಕಿಸ್ತಾನ ಸೇನೆ ಹೈರಾಣಾಗಿದೆ ಎಂದು ವರದಿಯಾಗಿದೆ. ರಾಜಧಾನಿ ಇಸ್ಲಾಮಾಬಾದ್​ನಲ್ಲಿ ತೀವ್ರ ಹಿಂಸಾಚಾರ ನಡೆದಿದ್ದು, ಪ್ರತಿಭಟನೆಯಲ್ಲಿ ಈಗಾಗಲೇ ಹತ್ತಾರು ಮಂದಿ ಸಾವನ್ನಪ್ಪಿರುವ ವರದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಈಗಾಗಲೇ ಕಂಡಲ್ಲಿ ಗುಂಡಿಕ್ಕುವ ಆದೇಶ ನೀಡಿದೆ. ಅಲ್ಲದೇ ಸಾವಿರಾರು ಜನರನ್ನು ಬಂಧಿಸಿದೆ. ಇಮ್ರಾನ್ ಖಾನ್ ಪತ್ನಿ ಬುಷ್ರಾ ಬಿಬಿ ಈ ಬೃಹತ್ ಪ್ರತಿಭಟನೆಯ ಹೊಣೆ ಹೊತ್ತಿದ್ದು, ಇಮ್ರಾನ್ ಖಾನ್ ಬಿಡುಗಡೆವರೆಗೂ ಪ್ರತಿಭಟನೆ ಕೈಬಿಡದಿರುವ ನಿರ್ಧಾರ ಮಾಡಿದ್ದಾರೆ. 

ಮತ್ತೊಂದೆಡೆ ಜನಾಂಗೀಯ ಹಿಂಸಾಚಾರಕ್ಕೆ ಪಾಕಿಸ್ತಾನ  ನಲುಗಿದ್ದು, ವಾಯವ್ಯ ಪಾಕಿಸ್ತಾನದ ಖೈಬರ್ ಪಕ್ತುಂಖ್ವಾದದಲ್ಲಿ ಅಲಿಜೈ ಮತ್ತು ಬಗಾನ್ ಬುಡಕಟ್ಟುಗಳ ನಡುವೆ ಹಿಂಸಾಚಾರ ನಡೆದಿದ್ದು, ನಿನ್ನೆ ಒಂದೇ ದಿನ 10 ಮಂದಿ ಸಾವಿಗೀಡಾಗಿದ್ದಾರೆ 21ಕ್ಕೂ ಹೆಚ್ಚು ಮಂದಿಗೆ ಗಾಯಗೊಂಡಿದ್ದಾರೆ. 180ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಂತೀಯ ನಿಯೋಗ ರಚನೆ ಮಾಡಿದ್ದು, ಎರಡೂ ಪಂಗಡದೊಂದಿಗೆ ಸಭೆ ನಡೆಸಿ ಏಳು ದಿನಗಳವರೆಗೆ ಸಂಘರ್ಷಕ್ಕೆ ವಿರಾಮ ಘೋಷಣೆ ಮಾಡಲಾಗಿದೆ. ಆದರೂ ಅಲ್ಲಲ್ಲಿ ಹಿಂಸಾಚಾರ ಮುಂದುವರೆದಿದೆ.