ಮಂತ್ರಾಲಯದಲ್ಲಿ ಕಳೆಗಟ್ಟಿದ ಮಧ್ಯಾರಾಧನೆ ಸಂಭ್ರಮ: ಆರಾಧನಾ ಮಹೋತ್ಸವಕ್ಕೆ ಹರಿದು ಬರ್ತಿದೆ ಭಕ್ತಸಾಗರ

Sep 2, 2023, 11:46 AM IST

ಆಗಸ್ಟ್ 29ರಿಂದ ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವ ನಡೆಯುತ್ತಿದೆ.ಶುಕ್ರವಾರ ಮಧ್ಯಾರಾಧನೆ ಸಂಭ್ರಮ ಜೋರಾಗಿತ್ತು. ಗುರು ರಾಘವೇಂದ್ರ ಸ್ವಾಮಿ ಸಶರೀರರಾಗಿ ಬೃಂದಾವನ ಪ್ರವೇಶಿಸಿದ ದಿನವನ್ನ ಮಧ್ಯಾರಾಧನೆಯಾಗಿ ಆಚರಿಸಲಾಯ್ತು.‌ ಬೆಳಗ್ಗೆಯಿಂದ ಶ್ರೀಮಠದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಮಧ್ಯಾರಾಧನೆಗೆ ತಿರುಪತಿ ತಿಮ್ಮಪ್ಪನಿಂದ ಬಂದ ಶೇಷ ವಸ್ತ್ರವನ್ನು ಶ್ರೀಮಠದ ಪೀಠಾಧಿಪತಿಗಳು ಅದ್ಧೂರಿ ಸ್ವಾಗತಿಸಿದ್ರು. ಬಳಿಕ ರಾಯರ ಬೃಂದಾವನಕ್ಕೆ ಮಹಾ ಪಂಚಾಮೃತ ಅಭಿಷೇಕ ನಡೆಯಿತು. ಹಾಲು,ಮೊಸರು,ತುಪ್ಪ,ಜೇನು ತುಪ್ಪ, ಹಣ್ಣು, ಗೋಡಂಬಿ, ಒಣದ್ರಾಕ್ಷಿ ಸೇರಿ ವಿವಿಧ ಪದಾರ್ಥಗಳಿಂದ ಶ್ರೀಗಳು ಬೃಂದಾವನದ ನಾಲ್ಕುದಿಕ್ಕಿಗೂ ಅಭಿಷೇಕ ಮಾಡಿ ಅಲಂಕಾರ ಮಾಡಿದ್ರು. ಬಳಿಕ ಚಿನ್ನದ ಕವಚದೊಂದಿಗೆ ಅಲಂಕಾರ ಪೂಜೆ ನಡೆಯಿತು. ಮಧ್ಯಾರಾಧನೆ ವಿಶೇಷವಾಗಿ ಮಠದ ಪ್ರಾಕಾರದಲ್ಲಿ ಗಜ ,ರಜತ , ಸ್ವರ್ಣ ರಥೋತ್ಸವಗಳು ನಡೆದವು. ರಾಜ್ಯಸಭಾ ಸದಸ್ಯ ಜಗ್ಗೇಶ್, ನಟ ಕೋಮಲ್ ಕೂಡ ಚಿನ್ನದ ರಥೋತ್ಸವದಲ್ಲಿ ಭಾಗವಹಿಸಿದರು. ರಾಯರ ಆರಾಧನೆ ಹಿನ್ನೆಲೆ ದಿನದಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಶ್ರೀಮಠಕ್ಕೆ ಆಗಮಿಸುತ್ತಿದ್ದಾರೆ. ವಿವಿಧ ಸೇವೆಗಳ ಮೂಲಕ ಭಕ್ತಿ ಸಮರ್ಪಿಸುತ್ತಿದ್ದಾರೆ. ಇಂದು ಉತ್ತರಾಧನೆ ಹಾಗೂ ಶ್ರೀಮಠದ ಹೊರಭಾಗದಲ್ಲಿ ರಥೋತ್ಸವ ನಡೆಯಲಿದೆ. ಸಪ್ತರಾತ್ರೋತ್ಸವ ಹಿನ್ನೆಲೆ ಪ್ರತಿನಿತ್ಯ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಆರಾಧನಾ ಮಹೋತ್ಸವದ ಸಂಭ್ರಮ ಹೆಚ್ಚಿಸುತ್ತಿವೆ.

ಇದನ್ನೂ ವೀಕ್ಷಿಸಿ: ಮದುವೆ ಸಂದರ್ಭದಲ್ಲಿ ಆದರ್ಶ ಮೆರೆದಿದ್ದ ಪೊಲೀಸಪ್ಪ: ಬಳಿಕ ಶುರುವಾಯ್ತು ವರದಕ್ಷಿಣೆ ಕಾಟ !