
ಬೆಂಗಳೂರು (ಆ.21): ಧರ್ಮಸ್ಥಳ ಷಡ್ಯಂತ್ರದ ಹಿಂದಿನ ಮಾಸ್ಟರ್ ಮೈಂಡ್ ಸಸಿಕಾಂತ್ ಸೆಂಥಿಲ್ ಎಂದು ಶಾಸಕ ಜನಾರ್ದನ ರೆಡ್ಡಿ ಮಾಡಿದ್ದ ಆರೋಪಕ್ಕೆ ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್ ತಿರುಗೇಟು ನೀಡಿದ್ದರು. ಇದೀಗ ಸೆಂಥಿಲ್ ಅವರ ಹೇಳಿಕೆಗೆ ಜನಾರ್ದನ ರೆಡ್ಡಿ ಮತ್ತೊಮ್ಮೆ ಪ್ರತ್ಯುತ್ತರ ನೀಡಿದ್ದು, 'ಸೆಂಥಿಲ್ ಹೇಳಿರುವುದು ಸಂಪೂರ್ಣ ಸುಳ್ಳು, ಅವರು ಹಿಂದೂ ವಿರೋಧಿ' ಎಂದು ಕಿಡಿಕಾರಿದ್ದಾರೆ.
ಗಣಿ ಹಗರಣದ ಬಗ್ಗೆ ರೆಡ್ಡಿ-ಸೆಂಥಿಲ್ ನಡುವೆ ವಾಕ್ಸಮರ
ನಾನು ಬಳ್ಳಾರಿ ಸಹಾಯಕ ಆಯುಕ್ತನಾಗಿದ್ದಾಗ ಜನಾರ್ದನ ರೆಡ್ಡಿ ಅವರ ಅಕ್ರಮಗಳನ್ನು ಬಯಲಿಗೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೆ. ಬಹುಶಃ ಇದೇ ಕಾರಣಕ್ಕೆ ಅವರು ಹತಾಶೆಯಿಂದ ಆರೋಪ ಮಾಡುತ್ತಿದ್ದಾರೆ' ಎಂದು ಸಸಿಕಾಂತ್ ಸೆಂಥಿಲ್ ಹೇಳಿಕೆ ನೀಡಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಜನಾರ್ದನ ರೆಡ್ಡಿ, 'ನನ್ನ ಮೇಲೆ ಸಿಬಿಐ ಪ್ರಕರಣ ದಾಖಲಾದಾಗ ಸೆಂಥಿಲ್ ಬಳ್ಳಾರಿಯಲ್ಲಿ ಎ.ಸಿ. ಆಗಿರಲಿಲ್ಲ. ನನ್ನ ಬಂಧನವಾದ ನಂತರ ಅವರು ಅಲ್ಲಿ ಕರ್ತವ್ಯಕ್ಕೆ ಸೇರಿಕೊಂಡರು. ಹಾಗಾಗಿ, ನನ್ನ ಪ್ರಕರಣಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ. ಸೆಂಥಿಲ್ ಮತ್ತೊಮ್ಮೆ ಸುಳ್ಳು ಹೇಳಿದ್ದಾರೆ' ಎಂದು ಸ್ಪಷ್ಟಪಡಿಸಿದರು.
ಸೆಂಥಿಲ್ ಹಿಂದೂ ವಿರೋಧಿ
ಸಸಿಕಾಂತ್ ಸೆಂಥಿಲ್ ಅವರನ್ನು 'ಹಿಂದೂ ವಿರೋಧಿ' ಎಂದು ಹೇಳಿದ ಜನಾರ್ದನ ರೆಡ್ಡಿ, ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿದ್ದಾಗಲೇ ಅವರು ಈ ಬಗ್ಗೆ ಯೋಜನೆ ರೂಪಿಸಿದ್ದರು. 'ಜಿಲ್ಲಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡುವಾಗಲೂ ಅವರು ಆರ್ಟಿಕಲ್ 370, ಎನ್‌ಆರ್‌ಸಿ ಮತ್ತು ಸಿಎಎಗೆ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಎಸ್‌ಡಿಪಿಐ ಸಂಘಟನೆಗಳ ಸಮಾವೇಶಗಳಲ್ಲಿ ಪಾಲ್ಗೊಂಡು ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡಿರುವ ವಿಡಿಯೋಗಳು ಇವೆ. ಕಾಂಗ್ರೆಸ್ ಹೈಕಮಾಂಡ್‌ನೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡು ಧರ್ಮಸ್ಥಳದಂತಹ ಪುಣ್ಯಕ್ಷೇತ್ರಕ್ಕೆ ಕಳಂಕ ತಂದ ವ್ಯಕ್ತಿ ಸಸಿಕಾಂತ್ ಸೆಂಥಿಲ್' ಎಂದು ರೆಡ್ಡಿ ಗಂಭೀರ ಆರೋಪ ಮಾಡಿದರು.
ಧೈರ್ಯವಿದ್ದರೆ ತನಿಖೆಗೆ ನಿಲ್ಲಲಿ
ನನ್ನ ಬಂಧನಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಒದಗಿಸಿದ್ದರಿಂದ ನಾನು ಈ ಕುರಿತು ಮಾತನಾಡುತ್ತಿದ್ದೇನೆ ಎಂದು ಸೆಂಥಿಲ್ ಹೇಳಿರುವುದು ಸುಳ್ಳು. ಅವರಿಗೆ ಧೈರ್ಯ ಇದ್ದರೆ ಯಾವುದೇ ತನಿಖೆಗೆ ಮುಂದೆ ಬಂದು ನಿಲ್ಲುತ್ತೇನೆ ಎಂದು ಹೇಳಬೇಕಿತ್ತು' ಎಂದು ರೆಡ್ಡಿ ಸವಾಲೆಸೆದರು. ಸೆಂಥಿಲ್ ಅವರು ದೊಡ್ಡ ಮಟ್ಟದ ವಿಚಾರಣೆಗೆ ಒಳಪಡಬೇಕು. ಆಗ ಮಾತ್ರ ಈ ಧರ್ಮಸ್ಥಳ ಷಡ್ಯಂತ್ರದ ಹಿಂದಿನ 'ಮಾಸ್ಟರ್ ಮೈಂಡ್' ಯಾರು ಎಂಬುದು ಹೊರಬರುತ್ತದೆ ಎಂದು ಜನಾರ್ದನ ರೆಡ್ಡಿ ಪುನರುಚ್ಚರಿಸಿದ್ದಾರೆ. ಈ ಇಬ್ಬರು ರಾಜಕಾರಣಿಗಳ ನಡುವಿನ ವಾಕ್ಸಮರ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.