ರ‌್ಯಾಸ್ಕಲ್ ಎಂದಿದ್ದಕ್ಕೆ ರೈತ ಮಹಿಳೆಯ ಕ್ಷಮೆ ಕೇಳಿದ ಸಚಿವ ಮಾಧುಸ್ವಾಮಿ!

May 21, 2020, 1:01 PM IST

ಕೋಲಾರ(ಮೇ.21): ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ರೈತ ಮಹಿಳೆಯೊಬ್ಬರಿಗೆ ‘ರಾಸ್ಕಲ್‌’ ಎಂದು ಅವಾಚ್ಯವಾಗಿ ನಿಂದಿಸಿದ ಘಟನೆಗೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸದ್ಯ ಸಚಿವರು ರೈತ ಮಹಿಳೆ ಬಳಿ ಕ್ಷಮೆ ಯಾಚಿಸಿದ್ದಾರೆ.

ಸಚಿವ ಮಾಧುಸ್ವಾಮಿ ಅವರು ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿ ಕೆ.ಸಿ ವ್ಯಾಲಿ ಯೋಜನೆ ವ್ಯಾಪ್ತಿಯ ಕೆರೆಗಳ ಪರಿಶೀಲನೆ ನಡೆಸುತ್ತಿದ್ದರು. ಕೋಲಾರದಲ್ಲಿ ಎಸ್‌. ಅಗ್ರಹಾರ ಗ್ರಾಮದ ಕೆರೆ ಪರಿಶೀಲನೆ ವೇಳೆ ಕೆರೆಕಟ್ಟೆಒಡೆಯದಂತೆ ರೈತ ಸಂಘಟನೆಯ ಮಹಿಳಾ ಕಾರ್ಯಕರ್ತರು ಸಚಿವರಿಗೆ ಮನವಿ ಪತ್ರ ಸಲ್ಲಿಸಲು ಸೇರಿದ್ದರು. ಈ ವೇಳೆ ಕೆರೆ ಒತ್ತುವರಿ ತೆರವು ಮಾಡುವಂತೆಯೂ ಅವರು ಆಗ್ರಹಿಸಿದರು.

ಮಾಧುಸ್ವಾಮಿ ವಿವಾದ: ಆ ಘಟನೆಯನ್ನು ಮಹಿಳೆ ವಿವರಿಸಿದ್ದು ಹೀಗೆ

ಪದೇ ಪದೆ ಅದೇ ವಿಚಾರ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಒಂದು ಹಂತದಲ್ಲಿ ಸಚಿವರು ರೈತ ಮಹಿಳೆಯರನ್ನು ನಿರ್ಲಕ್ಷಿಸಲು ಯತ್ನಿಸಿದರು. ಆದರೂ ಮಹಿಳೆಯರು ಒತ್ತುವರಿ ಕುರಿತು ವಿರೋಧ ವ್ಯಕ್ತಪಡಿಸಿದಾಗ, ಆ ವಿಚಾರವನ್ನು ನನ್ನ ಮುಂದೆ ಯಾಕೆ ಹೇಳುತ್ತೀರಿ, ಸಂಬಂಧಪಟ್ಟವರಿಗೆ(ಸ್ಥಳೀಯ ಜನಪ್ರತಿನಿಧಿಗಳಿಗೆ) ತಿಳಿಸಿ ಎಂದು ಸಿಡಿಮಿಡಿಗೊಳ್ಳುತ್ತಲೇ ಮಾಧುಸ್ವಾಮಿ ಪ್ರತಿಕ್ರಿಯಿಸಿದರು. ಇದರಿಂದ ಆಕ್ರೋಶಗೊಂಡ ಮಹಿಳೆಯರು ನೀವು ಸಂಬಂಧಪಟ್ಟವರಲ್ವಾ? ಸಣ್ಣ ನೀರಾವರಿ ಸಚಿವರಲ್ವಾ ಎಂದು ಕಿಡಿಕಾರಿದಾಗ, ‘ನಾನು ಭಾರೀ ಕೆಟ್ಟಮನುಷ್ಯ ಇದ್ದೀನಿ, ಏಯ್‌ ರಾಸ್ಕಲ್‌, ಮುಚ್ಚು ಬಾಯಿ’ ಎಂದು ಮಹಿಳಾ ಸದಸ್ಯೆಯೊಬ್ಬರನ್ನು ಸಚಿವ ತರಾಟೆಗೆ ತೆಗೆದುಕೊಂಡರು.

"

ಸಚಿವರ ಈ ಮಾತಿಗೆ ರಾಜ್ಯವ್ಯಾಪಿ ತೀವ್ರ ಆಕ್ರೊಶ ವ್ಯಕ್ತವಾಗಿದ್ದು, ಅವರು ಮಹಿಳೆ ಬಳಿ ಕ್ಷಮೆ ಯಾಚಿಸುವಂತೆ ಒತ್ತಾಯ ಮಾಡಲಗಿತ್ತು. ಈ ಸಂಬಂಧ ಸುರ್ಣ ನ್ಯುಸ್ ನಡೆಸಿದ್ದ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು ಮಹಿಳೆ ಬಳಿ ಕ್ಷಮೆ ಯಾಚಿಸಿದ್ದಾರೆ.