ರಾಜ್ಯೋತ್ಸವಕ್ಕೂ ಮುನ್ನ ಕನ್ನಡ ಡಿಂಡಿಮ ಮಾರ್ದನಿಸಿದೆ. ಕನ್ನಡ-ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ನನ್ನ ನಾಡು, ನನ್ನ ಹಾಡು ಅಭಿಯಾನದ ಭಾಗವಾಗಿ ನಡೆದ ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ಶುಕ್ರವಾರ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾದವು.
ಬೆಂಗಳೂರು (ಅ. 28): ನೆಲ, ಜಲ, ಆಗಸದಲ್ಲೂ ಮೊಳಗಿತು ಕನ್ನಡ ಡಿಂಡಿಮ. ಎಲ್ಲೆಡೆ ಮೊಳಗಿದ ಕೋಟಿ ಕಂಠಗಳ ಕನ್ನಡ ಗಾಯನ. ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ವತಿಯಿಂದ ರಾಜ್ಯೋತ್ಸವಕ್ಕೂ ಮುನ್ನ ನಡೆದ ಕೋಟಿ ಕಂಠ ಗಾಯನ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಂಡಿದೆ.
ಅಂದಾಜು 1.20 ಕೋಟಿ ಜನರು ಏಕಕಾಲದಲ್ಲಿ ಕನ್ನಡದ 6 ಪ್ರಸಿದ್ಧ ಕವಿಗಳು ಬರೆದ ಹಾಡುಗಳನ್ನು ಹಾಡಿದರು. ಆ ಮೂಲಕ ವಿಶ್ವದಾಖಲೆಯನ್ನು ನಿರ್ಮಾಣ ಮಾಡಲಾಯಿತು. ವಿಶ್ವದಾಖಲೆಯ ಪತ್ರವನ್ನು ಸಿಎಂ ಬೊಮ್ಮಾಯಿ ಅವರಿಗೆ ಹಸ್ತಾಂತರ ಮಾಡಲಾಯಿತು. ಕನ್ನಡ ಅಸ್ಮಿತೆಯನ್ನ ಸಾರುವ ವಿನೂತನ ಕಾರ್ಯಕ್ರಮಕ್ಕೆ ಬೆಂಗಳೂರು ಸೇರಿ ರಾಜ್ಯಾದ್ಯಂತ ಕಂಠಗಳು ಮೊಳಗಿದವು.
Kannada Rajyotsava: ಬೀದರ್ ಕೋಟೆಯಲ್ಲಿ ಮೊಳಗಿದ ಕೋಟಿ ಕಂಠ ಗಾಯನ
ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಇದಕ್ಕಾಗಿಯೇ ಬೃಹತ್ ವೇದಿಕೆ ನಿರ್ಮಾಣವಾಗಿತ್ತು. 50 ಕ್ಕೂ ಹೆಚ್ಚು ಮೈಕ್, ಸ್ಪೀಕರ್, ಎಲ್ಇಡಿ ಅಳವಡಿಸಲಾಗಿತ್ತು. ಜಯ ಭಾರತ ಜನನಿಯ ತನುಜಾತೆ ಹಾಗೂ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ಸಿಎಂ ದನಿಗೂಡಿಸಿದರು. ಮಾಜಿ ಸಿಎಂ ಬಿಎಸ್‌ವೈ, ಸಚಿವ ಅಶೋಕ್, ಸುನೀಲ್ ಕುಮಾರ್, ಸದಾನಂದ ಗೌಡ, ಸಂಸದ ತೇಜಸ್ವಿ ಸೂರ್ಯ, ಪಿಸಿ ಮೋಹನ್, ಜಗ್ಗೇಶ್ ಭಾಗಿಯಾಗಿದ್ದರು.