ಕಲಬುರಗಿಯಲ್ಲಿ ನಡೆದ ಆಣಕು ಕೊಲೆ ಪ್ರಕರಣದ ರೀಲ್ಸ್ ವೈರಲ್ ಆಗಿದ್ದು, ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಭಯಾನಕ ದೃಶ್ಯಗಳನ್ನು ಸೃಷ್ಟಿಸಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಇಂತಹ ಕೃತ್ಯಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.
ಕಲಬುರಗಿಯಲ್ಲಿ ಆಣಕು ಮರ್ಡರ್ ರೀಲ್ಸ್ ಪೋಸ್ಟ್ ವೈರಲ್ ಆಗಿದೆ. ನಡು ರಸ್ತೆಯಲ್ಲಿ ಸುತ್ತಿಗೆಯಿಂದ ಹೊಡೆದು ಯುವಕನನ್ನು ಹಲ್ಲೆ ಮಾಡಿ ಕೊಲೆ ಮಾಡಿ, ಆತನ ಎದೆಯ ಮೇಲೆ ಕುಳಿತು ವಿಕೃತವಾಗಿ ಸಂಭ್ರಮಿಸುವ ದೃಶ್ಯ ಭಾರೀ ವೈರಲ್ ಆಗಿದೆ. ಇದನ್ನು ನೋಡಿದ ಪೊಲೀಸರು ಕೂಡ ಬೆಚ್ಚಿ ಬಿದ್ದಿದ್ದಾರೆ.
ರೀಲ್ಸ್ ಮಾಡುವ ನೆಪದಲ್ಲಿ ಮಚ್ಚು, ಲಾಂಗು ಹಾಗೂ ಗನ್ ತೋರಿಸುವುದು ಕಂಡುಬಂದರೆ ಹಾಗೂ ಸಮಾಜಬಾಹಿರ ಚಟುವಟಿಕೆಯಲ್ಲಿ ತೊಡಗುವ ದೃಶ್ಯಗಳನ್ನು ರೀಲ್ಸ್ ಮಾಡಿದರೆ ಅದು ಕಾನೂನು ಬಾಹಿರವಾಗಿರುತ್ತದೆ. ಹೀಗಾಗಿ, ಇಂತಹ ಸಮಾಜ ಬಾಹಿರ ಕೃತ್ಯಗಳ ರೀಲ್ಸ್ ಮಾಡುವಂಥವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಈ ಘಟನೆ ಕಲಬುರಗಿ ರಿಂಗ್ ರಸ್ತೆಯಲ್ಲಿ ನಡೆದಿದೆ. ಇದರ ಮೂಲವನ್ನು ಪೊಲೀಸರು ಹುಡುಕಿಕೊಂಡು ಹೋಗಿದ್ದಾರೆ. ಭಯ ಹುಟ್ಟಿಸುವ ರೀಲ್ಸ್ ಮಾಡಿದ ಸಾಬಣ್ಣ ಹಾಗೂ ಸಚಿನ್ ಇಬ್ಬರನ್ನೂ ಬಂಧನ ಮಾಡಲಾಗಿದೆ. ಜೊತೆಗೆ, ರೀಲ್ಸ್‌ಗಾಗಿ ಭಯ ಹುಟ್ಟಿಸುವ ದೃಶ್ಯಗಳನ್ನು ಸೃಜಿಸಿದರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧೀಕಾರಿ ಶರಣಪ್ಪ ಎಚ್ಚರಿಕೆ ನಿಡಿದ್ದಾರೆ.