ರಾಮನಗರದಲ್ಲಿ ಹಿಡಿತ ಕಳೆದುಕೊಳ್ತಾ ಜೆಡಿಎಸ್..?
ದಳಪತಿಗಳ ಸಾಮ್ರಾಜ್ಯಕ್ಕೆ ಲಗ್ಗೆ ಇಟ್ಟ ಕಾಂಗ್ರೆಸ್..!
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕೈ ಮೇಲುಗೈ!
ರಾಮನಗರದಲ್ಲಿ ಏನೇ ಚುನಾವಣೆಗಳು ನಡೆದ್ರೂ ಕೂಡ ಅಲ್ಲಿ ಜೆಡಿಎಸ್ ಬಿಟ್ಟು ಇನ್ನೊಂದು ಪಕ್ಷ ಗೆಲುವಿನ ಕನಸು ಕಾಣೋದು ಕೂಡ ಕಷ್ಟವೇ ಆಗಿತ್ತು. ದಳಪತಿಗಳ ಭದ್ರವಾದ ಹಿಡಿತ ಕಾಂಗ್ರೆಸ್(Congress) ಹಾಗೂ ಬಿಜೆಪಿಗೆ (BJP) ಅಲ್ಲಿ ತಮ್ಮ ಬಾವುಟ ಹಾರಿಸದಂತೆ ನೋಡಿಕೊಂಡಿತ್ತು. ಆದ್ರೆ ಬದಲಾದ ರಾಜಕೀಯ ವಾತಾವರಣದಲ್ಲಿ ಜೆಡಿಎಸ್(JDS) ಹಂತ ಹಂತವಾಗಿ ತಮ್ಮ ಹಿಡಿತವನ್ನ ಕಳೆದುಕೊಳ್ತ ಇದೆ. ಇದಕ್ಕೆ ಸಾಕ್ಷಿಯಾಗಿದ್ದು ಗ್ರಾಮ ಪಂಚಾಯಿತಿ ಚುನಾವಣೆ. ರಾಮನಗರ ಜಿಲ್ಲೆಯಾದಾಗಿನಿಂದ ಜೆಡಿಎಸ್ ಭದ್ರಕೋಟೆ ಅಂತಲೇ ಹೆಸರುವಾಸಿಯಾಗಿತ್ತು. ಹೆಸರಿಗೆ ತಕ್ಕಂತೆ ಯಾರೂ ಭೇದಿಸದ ಬಲಿಷ್ಟವಾದ ಕೋಟೆಯೇ ಹೌದು. ದೊಡ್ಡ ಗೌಡರ ಕುಟುಂಬ ತಮ್ಮ ಪಾರುಪತ್ಯ ಮೆರೆದ ಜಿಲ್ಲೆ. ಯಾವುದೇ ಚುನಾವಣೆ ಆಗಲಿ, ರಾಮನಗರ ಅಂದ್ರೆ ಜಾತ್ಯಾತೀತ ಜನತಾದಳದ ಪಾಲಿಗೆ ಯಾವಾಗಲೂ ಸಿಹಿ ಸುದ್ದಿಯನ್ನೇ ಕೊಡ್ತಾ ಇತ್ತು. ವಿಧಾನಸಭಾ ರಾಜಕೀಯ ಇತಿಹಾಸವನ್ನ ನೋಡೋದಾದ್ರೆ, 1994ರ ತನಕ ರಾಮನಗರದಲ್ಲಿ(Ramanagar) ಕಾಂಗ್ರೆಸ್ ಪ್ರಾಬಲ್ಯವಿತ್ತು. ಆದ್ರೆ ಯಾವಾಗ ರಾಮನಗರದಿಂದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು 1994ರಲ್ಲಿ ಸ್ಪರ್ಧೆ ಮಾಡಿದ್ರೋ ಅಲ್ಲಿಂದ ರಾಮನಗರ ತೆನೆ ಹೊತ್ತ ಮಹಿಳೆಯ ಮಹಲ್ ಆಗಿ ಬಿಡ್ತು. 1999ರನ್ನ ಹೊರತು ಪಡೆಸಿ, 2004,2008,2013ರಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸತತವಾಗಿ ಗೆಲ್ಲುತ್ತಲೇ ಬಂದರು. ಅದಾದ ಮೇಲೆ 2018ರಲ್ಲಿ ಕುಮಾರಸ್ವಾಮಿಯವರ ಪತ್ನಿ ಅನಿತಾ ಕುಮಾರಸ್ವಾಮಿ ಕೂಡ ವಿಜೇತರಾಗಿ ಶಾಸಕಿಯಾದರು.
ಇದನ್ನೂ ವೀಕ್ಷಿಸಿ: ಅನ್ನದಾತನಿಗೆ ಮತ್ತೊಂದು ಸಂಕಷ್ಟ: ಏಕಾಏಕಿ ಸಾವಿರಾರು ಎಕರೆ ಭತ್ತದ ಗದ್ದೆಯಲ್ಲಿ ಬಿರುಕು !