Jan 9, 2022, 4:00 PM IST
ಉತ್ತರಕನ್ನಡ (ಜ. 09): ಜಿಲ್ಲೆಯ ಜೊಯಿಡಾದಲ್ಲಿ (Joida) ಬೆಳೆಯುವ ಅತೀ ವಿಶಿಷ್ಟ ರೀತಿಯ ಔಷಧೀಯ ಗುಣಗಳುಳ್ಳ ಗೆಡ್ಡೆ- ಗೆಣಸುಗಳು, ಕುಮಟಾದ ಮೇದಿನಿ ಅಕ್ಕಿ ಸೇರಿದಂತೆ ವಿವಿಧ ಬಗೆಯ ಅಕ್ಕಿಗಳು ಹಾಗೂ ಅಂಕೋಲಾದ ಕರಿ ಇಷಾಡ್ ಮಾವು ಬೆಳೆ ಇನ್ಮುಂದೆ ಜಿಯೋಲಾಜಿಕಲ್ ಇಂಡಿಕೇಷನ್ ಟ್ಯಾಗ್ (Geological Indication Tag) ಪಡೆದುಕೊಳ್ಳಲಿವೆ.
ಉತ್ತರಕನ್ನಡ ಜಿಲ್ಲಾಡಳಿತ ಪೂರಕ ಮಾಹಿತಿಯೊಂದಿಗೆ ರಾಜ್ಯ ಸರಕಾರ ಕುಮಟಾದ ವಿವಿಧ ಬಗೆಯ ಅಕ್ಕಿ ಹಾಗೂ ಅಂಕೋಲಾದ ಮಾವುಗಳ ಸಂಬಂಧಿಸಿ ಈಗಾಗಲೇ ಚೆನ್ನೈ ಬಯೋ ಡೈವರ್ಸಿಟಿ ಬೋರ್ಡ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದು, ಜೊಯಿಡಾದ ಗೆಡ್ಡೆ ಗೆಣಸುಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಅದರ ವಿಶಿಷ್ಟತೆಯನ್ನು ಕೂಡಾ ಬೋರ್ಡ್‌ಗೆ ಪರಿಚಯಿಸುವ ಮೂಲಕ ಟ್ಯಾಗ್ ಪಡೆಯಲು ಪ್ರಕ್ರಿಯೆಗಳು ಮುಂದುವರಿದಿವೆ. ಗೆಡ್ಡೆ- ಗೆಣಸುಗಳು ಬಗ್ಗೆ ಧಾರವಾಡ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದು, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಕೂಡಾ ಮಾಹಿತಿ ಸಂಗ್ರಹ ನಡೆಸುತ್ತಿದ್ದಾರೆ.
Karwar: ವೆನಿಲ್ಲಾಗೆ ಮತ್ತೆ ಭಾರೀ ಬೇಡಿಕೆ, ಬೆಳೆಯಿಲ್ಲದೇ ರೈತರ ಗೋಳು
ಉತ್ತರಕನ್ನಡ ಜಿಲ್ಲೆಯ ಹೊರತಾಗಿ ಈ ಬೆಳೆಗಳು ದೇಶದ ಬೇರೆಲ್ಲೂ ದೊರೆಯದ ಕಾರಣ ಜಿಯೋಲಾಜಿಕಲ್ ಇಂಡಿಕೇಷನ್ ಟ್ಯಾಗ್‌ಗಾಗಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಟ್ಯಾಗ್ ಪಡೆದಲ್ಲಿ ರೈತರಿಗೆ ಹೆಚ್ಚು ಲಾಭ ದೊರೆಯಲಿದೆ. ಇನ್ನು ಪ್ರತೀ ವರ್ಷದಂತೆ ಈ ಬಾರಿಯೂ ಜಿಲ್ಲೆಯ ಜೊಯಿಡಾದಲ್ಲಿ 8ನೇ ಗೆಡ್ಡೆ ಗೆಣಸು ಮೇಳ ನಡೆದಿದೆ. ಜೊಯಿಡಾ ತಾಲೂಕು ಕುಡುಬಿ ಸಮಾಜ ಅಭಿವೃದ್ಧಿ ಸಂಘ ಹಾಗೂ ಕಾಳಿ ಫಾರ್ಮರ್ಸ್, ಪ್ರೆಡ್ಯೂಸರ್ಸ್ ಕಂಪೆನಿ ನೇತೃತ್ವದಲ್ಲಿ ಈ ಗೆಡ್ಡೆ ಗೆಣಸು ಮೇಳ ನಡೆದಿದ್ದು, ಈ ವರ್ಷ 235ಕ್ಕೂ ಮಿಕ್ಕಿ ಬೆಳೆಗಾರರು ಈ ಮೇಳದಲ್ಲಿ ಭಾಗವಹಿಸಿದ್ದಾರೆ.
ಅಂದಹಾಗೆ, ಜೊಯಿಡಾದಲ್ಲಿ ನಡೆದ ಗೆಡ್ಡೆ ಗೆಣಸು ಮೇಳದಲ್ಲಿ ಪಶ್ಚಿಮಘಟ್ಟ ಪ್ರದೇಶದಲ್ಲಿ ಬೆಳೆಯುವ ವಿಶಿಷ್ಟ ಜಾತಿಯ, ಔಷಧೀಯ ಗುಣಗಳನ್ನು ಹೊಂದಿರುವ ಹಲವು ಬಗೆಯ ಗೆಡ್ಡೆ, ಗೆಣಸುಗಳನ್ನು ತಂದು ಮಾರಾಟ ಮಾಡಲಾಗಿದೆ. ಕೊನ್ನಾ, ಮಡ್ಲಿ, ಕೋಟೆಗಣಗಾ, ಕಸರಾಳು, ದವಚಾಳು, ಕೆಸು, ಬರಗಾಲ ಗೆಣಸು, ನಾಗರಕೋನ, ಅರಶಿನ, ಪಂಜರ್ ಗಡ್ಡೆ ಹೀಗೆ 50ಕ್ಕೂ ಹೆಚ್ಚು ಜಾತಿಯ ಗೆಡ್ಡೆ ಮತ್ತು ಗೆಣಸುಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಹತ್ತು ಗ್ರಾಂನಿಂದ ಹಿಡಿದು 100 ಕೆಜಿ ವರೆಗೆ ತೂಕವಿರುವ ಗಡ್ಡೆಯನ್ನು ಇಲ್ಲಿ ಕಾಣಬಹುದಾಗಿತ್ತು. ಕೇವಲ ಪ್ರದರ್ಶನ, ಮಾರಾಟ ಮಾತ್ರವಲ್ಲದೇ, ಅವುಗಳನ್ನು ಬೆಳೆಸಲು ಮೊಳಕೆ, ಸಸಿಗಳೂ ಕೂಡಾ ಲಭ್ಯವಿತ್ತು. ಇನ್ನು ಗೆಡ್ಡೆ-ಗೆಣಸುಗಳ ಮೇಳದಲ್ಲಿ ಅವುಗಳಿಂದ ಮಾಡಲಾದ ತಿಂಡಿಗಳ ಪ್ರದರ್ಶನ ಕೂಡಾ ಮಾಡಲಾಗಿದ್ದು, ಈ ಮೂಲಕ ಅವುಗಳ ಬಳಕೆ ಬಗ್ಗೆಯೂ ಮಾಹಿತಿ ಒದಗಿಸಲಾಗಿತ್ತು. ಅಲ್ಲದೇ, ಈ ಮೇಳದಲ್ಲಿ ಕಾಡಿನ ಮಸಾಲೆ ಕೂಡಾ ಮಾರಾಟಕ್ಕಿತ್ತು. ಪ್ರತೀ ವರ್ಷ ಕಾಡುಗಳು ಹಾಗೂ ಬೆಟ್ಟ ಗುಡ್ಡಗಳ ತಪ್ಪಲಿನಿಂದ ತಂದು ಗೆಡ್ಡೆ ಗೆಣಸುಗಳನ್ನು ಮಾರಾಟ ಮಾಡುವ ಕುಡುಬಿ ಜನಾಂಗವೂ ಜಿಯೋಲಾಜಿಕಲ್ ಇಂಡಿಕೇಷನ್ ಟ್ಯಾಗ್‌ನಿಂದಾಗಿ ಅಭಿವೃದ್ಧಿಗೊಳ್ಳುವ ಸಾಧ್ಯತೆಗಳಿವೆ.
Fascinating Indian Wedding: ಪುರಾತನ ರೀತಿ, ಗ್ರಾಮೀಣ ಸೊಗಡು, ಮಾದರಿಯಾಯ್ತು ವಿಶೇಷ ವಿವಾಹ
ಒಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯ ವಿಶೇಷ ಉತ್ಪನ್ನಗಳಾದ ಗೆಡ್ಡೆ ಗೆಣಸುಗಳು, ಅಕ್ಕಿ ಹಾಗೂ ಮಾವು ಇನ್ಮುಂದೆ ವಿಶ್ವಪ್ರಸಿದ್ಧಿ ಪಡೆದುಕೊಳ್ಳಲಿದ್ದು, ಈ ಮೂಲಕ ರೈತರ ಬೆಳೆ ಚಿನ್ನದ ಬೆಲೆಯನ್ನು ಪಡೆಯುವ ಸಾಧ್ಯತೆಗಳಿವೆ.